ಗಾಂಧಿ ಗ್ರಾಮದ ಕನಸಿಗೆ ಚಾಲನೆ

7

ಗಾಂಧಿ ಗ್ರಾಮದ ಕನಸಿಗೆ ಚಾಲನೆ

Published:
Updated:

ಹುಬ್ಬಳ್ಳಿ:  ನಗರದಲ್ಲಿ ಗಾಂಧಿ ಗ್ರಾಮ ನಿರ್ಮಾಣದ ಕನಸಿಗೆ ರೆಕ್ಕೆ ಮೂಡತೊಡಗಿದೆ. ಮಹಾತ್ಮ ಗಾಂಧೀ ಜಯಂತಿ ದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿರ್ಮಾಣದ ಘೋಷಣೆ ಮಾಡಿದ ಮೇಲೆ ಸ್ಥಳ ಪರಿಶೀಲನೆ ಆರಂಭವಾಗಿದೆ.ಗಾಂಧಿ ಗ್ರಾಮ ಆಗಬೇಕು ಎಂದು ಕನಸು ಕಂಡು, ಸರ್ಕಾರವನ್ನು ಒತ್ತಾಯಿಸಿದವರು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ. ತಮ್ಮ ಕನಸು ನನಸಾಗುತ್ತಿರುವುದಕ್ಕೆ ಖುಷಿಯಾಗಿರುವ ಅವರು ಮುಂದಿನ ವರ್ಷದ ಮಹಾತ್ಮ ಗಾಂಧಿ ಜಯಂತಿಯಂದು ಗ್ರಾಮ ಉದ್ಘಾಟನೆ ಆಗಬೇಕೆಂಬ ಹಂಬಲದಲ್ಲಿದ್ದಾರೆ.ಅಹ್ಮದಾಬಾದ್‌ನಲ್ಲಿಯ ಸಾಬರಮತಿ ಆಶ್ರಮ ಹಾಗೂ ನಾಗಪುರ ಹತ್ತಿರ ವಾರ್ಧಾದಲ್ಲಿಯ ಗಾಂಧಿ ಸೇವಾಶ್ರಮ ಮಾದರಿಯಲ್ಲಿ ನಗರದಲ್ಲಿ ಗಾಂಧೀ ಗ್ರಾಮ ಕಟ್ಟಬೇಕು ಎನ್ನುವುದು ಪಾಪು ಅವರ  ಬೇಡಿಕೆಯಾಗಿತ್ತು.ಗಾಂಧೀ ಕಾಯಕವನ್ನು ಅಂದರೆ ನೂಲುವುದು, ನೇಯುವ ಪ್ರಾತ್ಯಕ್ಷಿಕೆ ಜೊತೆಗೆ ತರಬೇತಿ ಕೇಂದ್ರ, ಗ್ರಂಥಾಲಯ, ಸ್ವಾತಂತ್ರ್ಯ ಹೋರಾಟಗಾರರು ಉಳಿದು ಕೊಳ್ಳಲು ಗಾಂಧಿ ಕುಟೀರ, ತಜ್ಞರಿಂದ ಉಪನ್ಯಾಸ, ಚರ್ಚೆ ನಡೆಸಲು ಸಭಾಂಗಣ, ಗಾಂಧಿ ಅವರ ಬಾಲ್ಯದಿಂದ ಹಿಡಿದು ಅಂತಿಮ ಯಾತ್ರೆಯವರೆಗಿನ ಛಾಯಾಚಿತ್ರಗಳ ಗ್ಯಾಲರಿ ಜೊತೆಗೆ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಛಾಯಾಚಿತ್ರಗಳ ಸಂಗ್ರಹ, ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಗಾಂಧಿ ಗ್ರಾಮ ಒಳಗೊಂಡಿರುತ್ತದೆ. ಈ ಸಂಬಂಧ ಪಾಟೀಲ ಪುಟ್ಟಪ್ಪ ನೇತೃತ್ವದ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿದೆ.  ಕಾನೂನು ವಿಶ್ವವಿದ್ಯಾಲಯ ಕುಲಪತಿ ಜೆ.ಎಸ್. ಪಾಟೀಲ ಕಾರ್ಯಾಧ್ಯಕ್ಷರಾಗಿ ಹಾಗೂ ಉಮೇಶ ಬಳಿಗಾರ ಸಂಚಾಲಕರಾಗಿದ್ದಾರೆ.`ಗಾಂಧಿ ಗ್ರಾಮವನ್ನು ನಿರ್ಮಿಸುವುದಾಗಿ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ತಾತ್ವಿಕವಾಗಿ ಒಪ್ಪಿಕೊಂಡಿದ್ದರು. ಈಗ ಜಗದೀಶ ಶೆಟ್ಟರ್ ಘೋಷಿಸಿದ್ದಾರೆ. ಒಟ್ಟು 10 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮವನ್ನು ಕಟ್ಟಲಾ ಗುತ್ತದೆ. ಸದ್ಯಕ್ಕೆ 50 ಲಕ್ಷ ರೂಪಾಯಿ ಬಿಡುಗಡೆ ಯಾಗಲಿದೆ~ ಎಂದು ಪಾಪು `ಪ್ರಜಾವಾಣಿ~ಗೆ ತಿಳಿಸಿದರು.`ದೇಶದಲ್ಲಿ ಗಾಂಧಿ ಪಾರ್ಕ್, ವಸ್ತುಸಂಗ್ರಹಾಲಯ ಇವೆ. ಆದರೆ ಸಮಗ್ರವಾಗಿ ಗಾಂಧೀ ಮತ್ತು ಇತರ ಪ್ರಮುಖ ನಾಯಕರ ಕುರಿತು ಮಾಹಿತಿ ನೀಡುವ ಕೇಂದ್ರ ಇದಾಗಬೇಕು. ಗಾಂಧೀಯೊಂದಿಗೆ ಒಡನಾಡಿದ ಕನ್ನಡಿಗರ ಕುರಿತು ಮಾಹಿತಿ ಇರಬೇಕು. ಗಾಂಧೀ ಗ್ರಾಮವನ್ನು ನೋಡಿದಾಗ ದೇಶಾಭಿಮಾನ ಮೂಡಬೇಕು, ಮಕ್ಕಳಿಂದ ಹಿಡಿದು ದೊಡ್ಡವರನ್ನೂ ಆಕರ್ಷಿಸುವ ಸ್ಥಳವಾಗಬೇಕು.`ಜೊತೆಗೆ ಹಳ್ಳಿಗಳಲ್ಲಿ ಭಾರತವಿದೆ ಎನ್ನುವ ಗಾಂಧಿ ಮಾತನ್ನು ಮನದಟ್ಟು ಮಾಡಿಕೊಡುವ ಉದ್ದೇಶವಿದೆ. ಮುಖ್ಯವಾಗಿ ಗಾಂಧಿ ಪ್ರಸ್ತುತತೆ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿ ಕೊಡಲಾಗುತ್ತದೆ. ಅಲ್ಲದೇ ಗಾಂಧಿ ಗ್ರಾಮದಿಂದ ಹುಬ್ಬಳ್ಳಿ ಪ್ರೇಕ್ಷಣೀಯ ತಾಣವಾಗಬೇಕು ಎನ್ನುವ ಹಂಬಲವಿದೆ~ ಎಂದು ಪಾಪು ವಿವರಿಸಿದರು.`ಗಾಂಧಿ ಅಲ್ಲದೇ ದೇಶದ ಪ್ರಮುಖ ನಾಯಕರ ಮೂರ್ತಿಗಳನ್ನು ಗೊಟಗೋಡಿಯಲ್ಲಿ ಉತ್ಸವ ರಾಕ್ ಗಾರ್ಡನ್ ರೂಪಿಸಿದ ಕಲಾವಿದ ತಿಪ್ಪಣ್ಣ ಸೊಲಬಕ್ಕನವರ ಸಿದ್ಧಗೊಳಿಸುತ್ತಾರೆ. ಇದೆಲ್ಲ ನನ್ನ ನೇತೃತ್ವದ ಸಮಿತಿಯಿದ್ದರೂ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರ ಉಸ್ತುವಾರಿಯಲ್ಲಿ ಗ್ರಾಮ ನಿರ್ಮಾಣ ಗೊಳ್ಳುತ್ತದೆ. ಸಿದ್ಧಗೊಂಡ ನಂತರ ಸಮಿತಿ ನೇತೃತ್ವ ದಲ್ಲಿಯೇ ಮುನ್ನಡೆಯಲಿದೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry