ಬುಧವಾರ, ಸೆಪ್ಟೆಂಬರ್ 18, 2019
26 °C

ಗಾಂಧಿ ತತ್ವಕ್ಕೆ ರಾಜ್ಯೋತ್ಸವ ಪ್ರಶಸ್ತಿ ಕಿರೀಟ

Published:
Updated:
ಗಾಂಧಿ ತತ್ವಕ್ಕೆ ರಾಜ್ಯೋತ್ಸವ ಪ್ರಶಸ್ತಿ ಕಿರೀಟ

ಬೆಳಗಾವಿ: ಮಹಾತ್ಮ ಗಾಂಧೀಜಿ ಏಳು ದಿನಗಳ ಕಾಲ ತಂಗಿದ್ದ ತಾಲ್ಲೂಕಿನ ಹುದಲಿಯ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕರ ಸಂಘಕ್ಕೆ 2011ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಜಿಲ್ಲೆಯ `ಖಾದಿ ಪ್ರೀಯ~ರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.ರಾಜ್ಯ ಸರ್ಕಾರ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಬೆಂಗಳೂರಿನಲ್ಲಿ ಭಾನುವಾರ ಪ್ರಕಟಿಸಿದಾಗ ಸಂಘ-ಸಂಸ್ಥೆಗಳ ವಿಭಾಗದಲ್ಲಿ ಹುದಲಿಯ ಖಾದಿ ಗ್ರಾಮೋದ್ಯೋಗ ಸಹಕಾರಿ ಉತ್ಪಾದಕರ ಸಂಘದ ಹೆಸರು ಇರುವುದು ಜಿಲ್ಲೆಯ ಖಾದಿ ಪ್ರೀಯರಲ್ಲಿ, ಗಾಂಧಿವಾದಿಗಳಲ್ಲಿ ಸಂಚಲನ ಮೂಡಿಸಿತು. ಖಾದಿ ಸಹಕಾರಿ ಸಂಘದಡಿ ನಿತ್ಯ ದುಡಿಯುವ ಸಾವಿರಕ್ಕೂ ಹೆಚ್ಚು `ಖಾದಿ ಬಂಧು~ಗಳು, ಸಂಘದ ಅಧ್ಯಕ್ಷ, ಸ್ವಾತಂತ್ರ್ಯಯೋಧ ಗಂಗಪ್ಪ ಮುದ್ದಪ್ಪ ಮಾಳಗಿ ಅವರು ಖುಷಿಯಿಂದ ಹಿಗ್ಗುತ್ತಿದ್ದಾರೆ.ದೇಶಭಕ್ತ, ಕರ್ನಾಟಕ ಸಿಂಹ ಗಂಗಾಧರರಾವ್ ದೇಶಪಾಂಡೆ ಅವರು ಬೆಳಗಾವಿ ತಾಲ್ಲೂಕಿನ ಹುದಲಿಯಲ್ಲಿ 1923ರಲ್ಲಿ ಖಾದಿ ಕೆಲಸ ಆರಂಭಿಸುವ ಮೂಲಕ ಕರ್ನಾಟಕದಲ್ಲೇ ಮೊದಲಿಗರು ಎನ್ನಿಸಿಕೊಂಡರು. ಅವರು 1933ರವರೆಗೂ ಗಂಗಾಧರರಾವ್ ದೇಶಪಾಂಡೆ ಅವರು ಖಾದಿ ಕೆಲಸವನ್ನು ಕೈಗೊಳ್ಳುವ ಮೂಲಕ ಸಂಘಕ್ಕೆ ಪ್ರಬಲ ಅಡಿಪಾಯ ಹಾಕಿದರು. ನಂತರ 1934ರಿಂದ  1944 ರವರೆಗೆ ಅಖಿಲ ಭಾರತ ಚರಕ ಸಂಘದ ಸಹಾಯಧನದಲ್ಲಿ ಹುದಲಿಯಲ್ಲಿ ಖಾದಿ ಕೆಲಸ ನಡೆಯಿತು.ಸ್ವಾತಂತ್ರ್ಯ ಸೇನಾನಿ ಪುಂಡಲೀಕಜಿ ಖಾತಗಡೆ ಅವರು ಮಹಾತ್ಮ ಗಾಂಧೀಜಿ ಅವರನ್ನು 1937, ಏಪ್ರಿಲ್ 16ರಂದು ಹುದಲಿಗೆ ಕರೆ ತಂದರು. ಏಳು ದಿನಗಳ ಕಾಲ ಹುದಲಿಯಲ್ಲೇ ತಂಗಿದ್ದ ರಾಷ್ಟ್ರಪಿತ ಇಲ್ಲಿನ ಖಾದಿ ಕೆಲಸವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗಾಂಧೀಜಿ ಭೇಟಿ ನೀಡಿದ ಹಿನ್ನೆಲೆಯಲ್ಲಿ ಇಲ್ಲಿ ಗಾಂಧಿ ಸ್ಮಾರಕ ಭವನ ನಿರ್ಮಿಸಿರುವುದನ್ನು ನಾವು ಕಾಣಬಹುದು. 1945ರಿಂದ 1954ರವರೆಗೆ ಪುಂಡಲೀಕಜಿ ಖಾತಗಡೆ ಅವರು ಖಾದಿ ಸಂಘವನ್ನು ಮುನ್ನಡೆಸಿದರು.“ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಹಕಾರಿ ಆಂದೋಲನದಿಂದ ಪ್ರಭಾವಗೊಂಡು 1954ರಲ್ಲಿ `ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘ ನಿಯಮಿತ~ ಎಂದು ಮರು ನಾಮಕರಣಗೊಂಡಿತು.ಆಗ 11 ಸದಸ್ಯರು ತಲಾ 500 ರೂಪಾಯಿ ಷೇರು ಬಂಡವಾಳ ಹಾಕಿದ್ದರು. ಇದರಲ್ಲಿ 10 ಜನ ಕೆಲಸವನ್ನು ಆರಂಭಿಸಿದ್ದರು. ಸದ್ಯ ಜಿಲ್ಲೆಯ 20 ಹಳ್ಳಿಗಳ 1050 ಬಡವರು ಸಂಘದಲ್ಲಿ ಖಾದಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇವುಗಳಲ್ಲಿ 920 ಮಹಿಳೆಯರು ಇದ್ದಾರೆ. ಬಡ ಮಹಿಳೆಯರಿಗೆ ಸ್ವಾವಲಂಬಿ ಬದುಕು ಸಾಗಿಸಲು ಸಂಘವು ಒತ್ತು ನೀಡುತ್ತಿದೆ” ಎಂದು ಸಂಘದ ಕಾರ್ಯದರ್ಶಿ ವಿರೂಪಾಕ್ಷಪ್ಪ ಅಮರಪ್ಪ ಬಲಕುಂದಿ ಹೇಳುತ್ತಾರೆ.ಅಹಿಂಸಾ ಚಪ್ಪಲಿ: ಹುದಲಿಯ ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ಸಿದ್ಧಗೊಳ್ಳುತ್ತಿದ್ದ ಉತ್ಪನ್ನಗಳೆಂದರೆ ಮಹಾತ್ಮ ಗಾಂಧೀಜಿ ಸೇರಿದಂತೆ ಹಲವು ಗಣ್ಯರಿಗೆ ಅಚ್ಚುಮೆಚ್ಚಾಗಿತ್ತು. ಸತ್ತ ಹಸುಗಳ ಚರ್ಮದಿಂದ ಮಾತ್ರ ಹುದಲಿಯಲ್ಲಿ ಚಪ್ಪಲಿ ತಯಾರಿಸಲಾಗುತ್ತಿತ್ತು. ಹೀಗಾಗಿ ಇಲ್ಲಿನ `ಅಹಿಂಸಾ ಚಪ್ಪಲಿ~ ಖ್ಯಾತಿ ಪಡೆದಿತ್ತು.1923 ರಿಂದ 1948ರವರೆಗೂ ಮಹಾತ್ಮ ಗಾಂಧೀಜಿ ಅವರಿಗೆ ಹುದಲಿಯಿಂದಲೇ `ಅಹಿಂಸಾ ಚಪ್ಪಲಿ~ ಹೋಗುತ್ತಿರುವುದು ವಿಶೇಷವಾಗಿತ್ತು. ತೆಳು ನೂಲಿನಿಂದ ಬಟ್ಟೆ ತಯಾರಿಸುತ್ತಿದ್ದರಿಂದ 1950ರಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸೀರೆಯನ್ನು ಇಲ್ಲಿಂದಲೇ ತರಿಸಿಕೊಳ್ಳುತ್ತಿದ್ದರು. ಅಲ್ಲದೇ ಮೊರಾರ್ಜಿ ದೇಸಾಯಿ ಸಹ ಸುಮಾರು ಇಪ್ಪತ್ತು ವರ್ಷಗಳ ಕಾಲ ಇಲ್ಲಿಯ ದೋತ್ರ ಖರೀದಿಸಿರುವುದು ಹುದಲಿಯ ಹಿರಿಮೆಗೆ ಹಿಡಿದ ಕೈಗನ್ನಡಿಯಾಗಿತ್ತು.ಗೋಬರ್ ಗ್ಯಾಸ್: “ಹುದಲಿ ಖಾದಿ ಗ್ರಾಮೋದ್ಯೋಗ ಸಂಘದ ಇನ್ನೊಂದು ಮಹತ್ವದ ಸಾಧನೆ ಎಂದರೆ, ಇದುವರೆಗೆ ಸುಮಾರು 30 ಸಾವಿರ ಗೋಬರ್ ಗ್ಯಾಸ್ ನಿರ್ಮಿಸಿರುವುದು. ಅರಣ್ಯ ನಾಶವಾಗುತ್ತಿರುವುದನ್ನು ತಡೆಯುವ ಉದ್ದೇಶದಿಂದ ಖಾದಿ ಗ್ರಾಮೋದ್ಯೋಗ ಸಂಘವು ಸುಮಾರು 40 ವರ್ಷಗಳಿಂದ ಗೋಬರ್ ಗ್ಯಾಸ್ ಘಟಕವನ್ನು ನಿರ್ಮಿಸಿಕೊಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಖಾದಿ ಬಟ್ಟೆಗಳ ಜೊತೆಗೆ, ರಾಷ್ಟ್ರಧ್ವಜ, ಉಪ್ಪಿನಕಾಯಿ, ಸಾಬೂನು, ಅಗರಬತ್ತಿ ಸೇರಿದಂತೆ ಹಲವು ಉತ್ಪನ್ನಗಳನ್ನು ಇಲ್ಲಿ ತಯಾರಿಸಲಾಗುತ್ತಿದೆ. ರೈಲ್ವೆ ಇಲಾಖೆಗೆ ಬಟ್ಟೆಯನ್ನು ಪೂರೈಸುತ್ತಿದೆ. ಪ್ರತಿ ವರ್ಷ ಸುಮಾರು 3.80 ಕೋಟಿ ರೂಪಾಯಿ ಮೌಲ್ಯದ ಖಾದಿ ಉತ್ಪನ್ನಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತಿದೆ.ಇದೀಗ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ನಮಗೆ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೋತ್ಸಾಹಿಸಿದಂತಾಗಿದೆ” ಎಂದು ವಿರೂಪಾಕ್ಷಪ್ಪ ಹೆಮ್ಮೆಯಿಂದ `ಪ್ರಜಾವಾಣಿ~ಗೆ ತಿಳಿಸಿದರು.

Post Comments (+)