ಗುರುವಾರ , ಅಕ್ಟೋಬರ್ 17, 2019
21 °C

ಗಾಂಧಿ ನಕ್ಕರೂ...

Published:
Updated:

ನಿರ್ಮಾಪಕ ರಾಘವೇಂದ್ರ ಕಾಮತ್ ಮುಖದಲ್ಲಿ ನೋವು-ಬೇಸರದ ಛಾಯೆಯಿತ್ತು. ಇತ್ತೀಚೆಗೆ ಮುಗಿದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಕನ್ನಡ ವಿಭಾಗದಲ್ಲಿ `ಪುಟ್ಟಕ್ಕನ ಹೈವೇ~ ಚಿತ್ರದೊಂದಿಗೆ ಪ್ರಶಸ್ತಿ ಹಂಚಿಕೊಂಡಿದ್ದು ಇದೇ ಕಾಮತರ `ಗಾಂಧಿ ಸ್ಮೈಲ್ಸ್~ ಚಿತ್ರ. ಪ್ರಶಸ್ತಿ ಬಂದರೂ ನಿರ್ಮಾಣದ ಹಿಂದಿನ ಸಂಕಷ್ಟದ ಕಹಿ ನೆನಪು ಅವರ ಸಂಭ್ರಮವನ್ನು ಮರೆಮಾಚಿತ್ತು.2007ರಲ್ಲೇ ಚಿತ್ರ ಶುರುವಾದರೂ ಚಿತ್ರ ತಯಾರಾಗಿದ್ದು ಮೂರು ವರ್ಷದ ಬಳಿಕ. ಏಳು ವರ್ಷದ ಪರಿಕಲ್ಪನೆ ಕೊನೆಗೂ ಚಿತ್ರರೂಪ ತಳೆದು ಈಗ ಬಿಡುಗಡೆಗೆ ಸಿದ್ಧವಾಗಿದೆ.ಒಂದೆಡೆ ಹಣಕಾಸಿನ ತೊಂದರೆ, ಇನ್ನೊಂದೆಡೆ ನಿರ್ದೇಶಕ ಕ್ರಿಶ್ ಜೋಶಿ ಸಾಕಷ್ಟು ತೊಂದರೆಗಳನ್ನು ಕೊಟ್ಟರು ಎಂಬುದು ಕಾಮತರ ಆರೋಪ. ಸಂಕಷ್ಟದಲ್ಲಿದ್ದ ತಮಗೆ ಸಹಾಯಹಸ್ತ ಚಾಚಿದ ಕರಿಸುಬ್ಬು, ಯಶವಂತ ಸರದೇಶಪಾಂಡೆ, ರಾಧಾಕೃಷ್ಣಯ್ಯ, ಶ್ರೀಧರ್ ಅವರಿಗೆ ಕಾಮತರು ಕೃತಜ್ಞತೆ ಸಲ್ಲಿಸಿದರು. `ಇದೊಂದು ಉತ್ತಮ ಚಿತ್ರ.  ಈ ಚಿತ್ರಕ್ಕೆ ಪ್ರಚಾರದ ಅಗತ್ಯವಿದ್ದು, ಇದು ಜನರನ್ನು ತಲುಪುವಂತಾಗಬೇಕು~ ಎಂದು ಹಿರಿಯ ನಟ ದತ್ತಣ್ಣ ಆಶಿಸಿದರು.  

`ಎನ್‌ಓಸಿ ಕೊಟ್ಟಿಲ್ಲ~

`ಗಾಂಧಿ ಸ್ಮೈಲ್ಸ್~ ಚಿತ್ರದ ನಿರ್ಮಾಪಕ ರಾಘವೇಂದ್ರ ಕಾಮತ್ ತಮ್ಮ ಮೇಲೆ ಮಾಡಿರುವ ಆರೋಪಗಳು ಸುಳ್ಳು ಎಂದು ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಕ್ರಿಶ್ ಜೋಷಿ, ತಮ್ಮ ಹೆಸರನ್ನು ಶೀರ್ಷಿಕಾ ಪಟ್ಟಿಯಿಂದ ತೆಗೆಯಲು ನಿರಾಕ್ಷೇಪಣಾ ಪತ್ರ ನೀಡಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ತಾವು ಅರ್ಧದಲ್ಲೇ ಬಿಟ್ಟುಹೋದ ಚಿತ್ರವನ್ನು ಕಾಮತ್ ಮುಗಿಸಿದ್ದಾರೆ ಎನ್ನುವುದು ಸುಳ್ಳು. ಚಿತ್ರದ ಕೊನೆವರೆಗೂ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಆದರೆ ಇದ್ದಕ್ಕಿದ್ದಂತೆ ತಮ್ಮನ್ನು ಚಿತ್ರದಿಂದ ಹೊರ ಹಾಕಲಾಯಿತು. ಸಿನಿಮೋತ್ಸವದಲ್ಲಿ ಚಿತ್ರಮಂದಿರಕ್ಕೆ ಬಾರದಂತೆ ಕಾಮತ್  ಬೆದರಿಕೆ ಒಡ್ಡಿದ್ದರು ಎಂದು ಜೋಷಿ ಹೇಳಿಕೆ ನೀಡಿದ್ದಾರೆ.

Post Comments (+)