ಗಾಂಧಿ ವಿಚಾರಧಾರೆ ಅರಿತುಕೊಳ್ಳಿ: ಸಚಿವ ಪಾಟೀಲ್‌

7

ಗಾಂಧಿ ವಿಚಾರಧಾರೆ ಅರಿತುಕೊಳ್ಳಿ: ಸಚಿವ ಪಾಟೀಲ್‌

Published:
Updated:

ಮಂಡ್ಯ: ‘ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ವಿಚಾರಧಾರೆಗಳನ್ನು ಯುವಜನರಿಗೆ ತಿಳಿಸಿ, ಸನ್ಮಾರ್ಗದಲ್ಲಿ ಒಯ್ಯುವ ಮೂಲಕ ರಾಷ್ಟ್ರವನ್ನು ಸದೃಢವಾಗಿ ಕಟ್ಟುವ ಕೆಲಸವಾಗಬೇಕಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ್ ಅಭಿಪ್ರಾಯಪಟ್ಟರು.ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಚೌದ್ರಿಕೊಪ್ಪಲು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಸಹಯೋಗದಲ್ಲಿ ಶನಿವಾರ ನಾಗಮಂಗಲ ತಾಲ್ಲೂಕಿನ ಚೌದ್ರಿಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಷ್ಟ್ರೀಯ ಸೇವಾ ಯೋಜನಾ ಅಂತರ ಕಾಲೇಜು ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.ಗಾಂಧೀಜಿ ಅವರ ಬದುಕಿನ ಕ್ರಮವೇ ಒಂದು ಸಂದೇಶ. ಅಂಥ ಸಂದೇಶಗಳನ್ನು ಯುವಜನರಿಗೆ ತಿಳಿಸುವ ಕೆಲಸ ಆಗಬೇಕು. ಯುವಜನರೂ ಮೌಲ್ಯಗಳನ್ನು ಅಳವಡಿಸಿಕೊಂಡು ಸತ್ಯ– ಪ್ರಾಮಾಣಿಕತೆ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.ನಮ್ಮ ಯುವಜನರಿಗೆ ಪಾಶ್ಚಾತ್ಯದ ಬಗೆಗೆ ಒಲವು, ಗೌರವ ಬಂದಿರುವುದು ದುರ್ದೈವ ಎಂದು ಹೇಳಿದ ಅವರು, ಗ್ರಾಮೀಣ ಸೊಗಡು, ಈ ನೆಲ ಸಂಸ್ಕೃತಿಯೇ ದೇಶದ ಜೀವಾಳ ಎಂದರು.ಎನ್‌ಎಸ್‌ಎಸ್‌ ಚಟುವಟಿಕೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ರಚನಾತ್ಮಕ ಕೆಲಸಗಳನ್ನು ಕೈಗೊಳ್ಳಬೇಕು. ಉತ್ತಮ ಉದ್ದೇಶ ಇಟ್ಟುಕೊಂಡು ಮುನ್ನಡೆಯಬೇಕು, ಹಳ್ಳಿಗಳೆಡೆಗೆ ಕಾಳಜಿ ಇಟ್ಟುಕೊಳ್ಳಬೇಕು ಎಂದರು.ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೊ. ಶ್ರೀನಿವಾಸಯ್ಯ ಮಾತನಾಡಿ, ‘ವಿದ್ಯಾರ್ಥಿಗಳು ಕೋಪ, ಹತಾಶೆ, ಅಸತ್ಯ, ಆತ್ಮಹತ್ಯೆಯಂತಹ ಮಾರ್ಗಗಳಲ್ಲಿ ಹೋಗದೆ, ಸತ್ಯ, ಪ್ರಾಮಾಣಿಕತೆ, ಅಹಿಂಸೆ, ಪ್ರೀತಿಯಂತಹ ಗಾಂಧಿ ಮಾರ್ಗದಲ್ಲಿ ಸಾಗಬೇಕು’ ಎಂದು ಕಿವಿಮಾತು ಹೇಳಿದರು.ಶಾಸಕ ಎನ್‌.ಚಲುವರಾಯಸ್ವಾಮಿ, ಜಿಪಂ ಅಧ್ಯಕ್ಷೆ ಭಾರತಿ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಬಿ.ಎನ್‌. ಕೃಷ್ಣಯ್ಯ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಸಿ. ಜಯಣ್ಣ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಎಚ್‌.ಬಿ. ದಿನೇಶ್‌ ಸೇರಿದಂತೆ ಹಲವರು ಇದ್ದರು.10 ಕಾರ್ಯಕ್ರಮಗಳ ಜಾರಿ

ವೈಯಕ್ತಿಕ ಶೌಚಾಲಯ, ಆಟದ ಮೈದಾನ, ಒಕ್ಕಣೆ ಕಣ ನಿರ್ಮಾಣ, ಕುಡಿಯುವ ನೀರು ಪೂರೈಕೆ, ಕೆರೆ ಹೂಳು ತೆಗೆಸುವುದು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು, ತಮ್ಮ ಇಲಾಖಾ ವ್ಯಾಪ್ತಿಗೆ ಬರುವ ಒಟ್ಟು 10 ಕಾರ್ಯಕ್ರಮಗಳನ್ನು ನಾಗಮಂಗಲ ತಾಲ್ಲೂಕಿನ ಚೌದ್ರಿಕೊಪ್ಪಲು ಗ್ರಾಮದಲ್ಲಿ ಜಾರಿ ಮಾಡುವಂತೆ ಅಧಿಕಾರಿಗಳಿಗೆ  ಸಚಿವ ಎಚ್‌.ಕೆ. ಪಾಟೀಲ್ ಸೂಚಿಸಿದರು.ಶನಿವಾರ ನಾಗಮಂಗಲ ತಾಲ್ಲೂಕಿನ ಚೌದ್ರಿಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಷ್ಟ್ರೀಯ ಸೇವಾ ಯೋಜನಾ ಅಂತರ ಕಾಲೇಜು ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.ಗ್ರಾಮದ ಯುವಜನರು ತಮ್ಮ ಊರಿಗೆ ಕೆಲವು ಕಾರ್ಯಕ್ರಮಗಳನ್ನು ಜಾರಿ ಮಾಡುವಂತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಇದನ್ನು ಪ್ರಸ್ತಾಪಿಸದ ಸಚಿವರು, ಗ್ರಾಮಕ್ಕೆ ಬೇಕಿರುವಂಥ ಸೌಲಭ್ಯಗಳಿಗಿಂತ ಗುತ್ತಿಗೆದಾರರಿಗೆ ಪೂರಕವಾಗಿರುವ ಅಭಿವೃದ್ಧಿ ಕೆಲಸಗಳೇ ಮನವಿ ಪತ್ರದಲ್ಲಿ ಇದೆಯೆಲ್ಲಾ ಎಂದು ಪ್ರಶ್ನಿಸಿದರು.ಗ್ರಾಮೀಣ ಜನರ ಬದುಕಿನ ಗುಣಮಟ್ಟ ಎತ್ತರಕ್ಕೆ ಬರಬೇಕೆಂದರೇ, ವೈಯಕ್ತಿಕ ಶೌಚಾಲಯ, ಆಟದ ಮೈದಾನ, ಶುದ್ಧ ಕುಡಿಯುವ ನೀರು, ರುದ್ರಭೂಮಿ ಸೇರಿದಂತೆ ಮೂಲ ಸೌಕರ್ಯಗಳು ಗ್ರಾಮದಲ್ಲಿರಬೇಕು. ಇಲ್ಲಿ ನೋಡಿದರೇ, ಅಂಥ ಸೌಲಭ್ಯಗಳಿಲ್ಲ ಅನ್ನಿಸುತ್ತದೆ. ಈ ಎಲ್ಲ ಸೌಲಭ್ಯಗಳು ನಿಮಗೆ ಸಿಗಬೇಕು ಎಂದು ಹೇಳಿ ಸ್ಥಳದಲ್ಲಿದ್ದ ಜಿಪಂ ಸಿಇಓ ಪಿ.ಸಿ.ಜಯಣ್ಣ ಅವರಿಗೆ ಗ್ರಾಮಕ್ಕೆ ಅವಶ್ಯವಿರುವಂಥ 10 ಕಾರ್ಯಕ್ರಮಗಳನ್ನು ಜಾರಿ ಮಾಡುವಂತೆ ಸೂಚಿಸಿದರು.

ಈ ಎಲ್ಲ ಕಾರ್ಯಕ್ರಮಗಳಿಗೆ ಹಣಕಾಸಿನ ತೊಂದರೆಯಿಲ್ಲ. ಎನ್‌ಎಸ್‌ಎಸ್‌ ಚಟುವಟಿಕೆ ಮೂಲಕವೇ, ಈ ಎಲ್ಲ ಕಾರ್ಯಕ್ರಮಗಳಿಗೆ ಚಾಲನೆ ಸಿಗಬೇಕು ಎಂದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳು ತೆಗೆಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.ಶಾಸಕ ಎನ್‌.ಚಲುವರಾಯಸ್ವಾಮಿ ಮಾತನಾಡಿ, ‘ಕೇವಲ ಪದವಿ, ಅಂಕಪಟ್ಟಿ ಗಳಿಸುವುದಷ್ಟೇ ವಿದ್ಯಾರ್ಥಿಗಳಿಗೆ ಮುಖ್ಯ ವಾಗಬಾರದು. ಸಮಾಜದ ಬಗೆಗೆ ಒಳ್ಳೆಯ ಭಾವನೆಗಳನ್ನು ಬೆಳಸಿಕೊಳ್ಳಬೇಕು’ ಎಂದು ಹೇಳಿದರು.ಇದಕ್ಕೂ ಮುನ್ನ ಗಾಂಧಿ ಪುತ್ಥಳಿ ಮತ್ತು ಸೂಕ್ತಿ ಸ್ತಂಭವನ್ನು ಸಚಿವ ಎಚ್‌,ಕೆ.ಪಾಟೀಲ್‌ ಅನಾವರಣ ಮಾಡಿದರು. ಶಾಸಕ ಎನ್‌.ಚಲುವರಾಯಸ್ವಾಮಿ ಅವರು, ಡಾ. ಹೊ.ಶ್ರೀನಿವಾಸಯ್ಯ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.ಜಿ.ಪಂ. ಅಧ್ಯಕ್ಷೆ ಭಾರತಿ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಬಿ.ಎನ್‌.ಕೃಷ್ಣಯ್ಯ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಎಚ್‌.ಬಿ.ದಿನೇಶ್‌, ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ವೂಡೋ ಪಿ.ಕೃಷ್ಣ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಿ.ಆರ್‌.ಮಮತಾ, ಎನ್‌ಎಸ್‌ಎಸ್‌ ಕೋಶ ರಾಜ್ಯ ಸಂಪರ್ಕಾಧಿಕಾರಿ ಡಾ.ಕೆ.ಬಿ.ಧನಂಜಯ, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ರುದ್ರಯ್ಯ ಸೇರಿದಂತೆ ಹಲವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry