ಶುಕ್ರವಾರ, ಜೂನ್ 18, 2021
29 °C

ಗಾಂಧಿ ವೃತ್ತದಲ್ಲಿ ರಸ್ತೆಗೆ ಹರಿದ ಚರಂಡಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ನಗರದ ಹೃದಯ ಭಾಗವಾಗಿರುವ ಗಾಂಧಿ ವೃತ್ತದಲ್ಲಿ ಹೋಳಿ ಹುಣ್ಣಿಮೆಯ ಬಣ್ಣ, ಪಿಚಕಾರಿಗಳ ಖರೀದಿಗೆ ಆಗಮಿಸಿದ್ದ ಜನರಿಗೆ ರಸ್ತೆಯಲ್ಲಿ ಕಾಲಿಡಲೂ ಆಗದಂತಹ ವಾತಾವರಣ ಬುಧವಾರ ಸೃಷ್ಟಿಯಾಗಿತ್ತು. ಚರಂಡಿಯ ಕೊಳಚೆ ನೀರೆಲ್ಲ ರಸ್ತೆಯ ಮೇಲೆ ಹಳ್ಳದಂತೆ ಹರಿಯುತ್ತಿರುವುದರಿಂದ ಜನ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.ಹೂಳು ತುಂಬಿದ ಚರಂಡಿಯಲ್ಲಿ ನೀರು ಸರಾಗವಾಗಿ ಮುಂದೆ ಹರಿದು ಹೋಗಲು ಆಗದೇ, ಕೆಸರು ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಪಾದಚಾರಿಗಳು ರಸ್ತೆ ಬದಿಯಲ್ಲಿ ಕೆಸರು ನೀರಿಲ್ಲದ ಜಾಗೆ ನೋಡಿ ಹೆಜ್ಜೆ ಹಾಕುತ್ತಿದ್ದರೆ, ಅಟೋಗಳು ನೀರನ್ನು ಸಿಡಿಸುತ್ತ ಮುಂದೆ ಸಾಗುತ್ತಿದ್ದವು. ಇದರಿಂದಾಗಿ ಅಕ್ಕಪಕ್ಕದ ಅಂಗಡಿಗಳ ವರ್ತಕರೂ ಸಾಕಷ್ಟು ಕಿರಿಕಿರಿ ಅನುಭವಿಸಬೇಕಾಯಿತು.ನಿರಂತರವಾಗಿ ರಸ್ತೆಯ ಮೇಲೆ ಹರಿಯುತ್ತಿದ್ದ ಚರಂಡಿ ನೀರಿನಿಂದಾಗಿ ದುರ್ವಾಸನೆಯೂ ಹರಡಿತ್ತು. ಇದರಿಂದ ಹಬ್ಬದ ಖರೀದಿಗೆ ಬಂದಿದ್ದ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು. ಈ ಬಗ್ಗೆ ಜನರು ಅಧಿಕಾರಿಗಳಿಗೆ ತಿಳಿಸಿದರೂ, ಯಾವುದೇ ಪ್ರಯೋಜನ ಆಗಲಿಲ್ಲ. ಕೂಡಲೇ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರರಿಗೆ ವಿಷಯ ತಿಳಿಸಲಾಯಿತು.ತಕ್ಷಣ ಸ್ಥಳಕ್ಕೆ ಆಗಮಿಸಿದ ಲಲಿತಾ ಅನಪೂರ, ನಗರಸಭೆಯ ಸಿಬ್ಬಂದಿಯನ್ನು ಕರೆಯಿಸಿ, ಚರಂಡಿಯಲ್ಲಿ ತುಂಬಿದ್ದ ಹೂಳನ್ನು ತೆಗೆಸಿದರು. ನಗರಸಭೆ ಸಿಬ್ಬಂದಿ ಹೂಳು ತೆಗೆಯುವವರೆಗೆ ಸ್ಥಳದಲ್ಲಿಯೇ ಇದ್ದು, ರಸ್ತೆಯ ಮೇಲೆ ನೀರು ಹರಿಯುವುದು ನಿಲ್ಲುವಂತೆ ಮಾಡಿದರು. ಇದರಿಂದಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ನಗರದ ವಿವಿಧ ಬಡಾವಣೆಗಳಲ್ಲಿ ಚರಂಡಿಗಳಲ್ಲಿ ಹೂಳು ತುಂಬಿದ್ದು, ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಈ ಬಗ್ಗೆ ಕೂಡಲೇ ಅಧಿಕಾರಿಗಳ ಸಭೆ ಕರೆದು, ಮಳೆಗಾಲ ಆರಂಭವಾಗುವ ಪೂರ್ವದಲ್ಲಿಯೇ ಎಲ್ಲ ಚರಂಡಿಗಳ ಹೂಳು ತೆಗೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಕಸ ವಿಲೇವಾರಿ, ಚರಂಡಿ ಸ್ವಚ್ಛತೆ ಸೇರಿದಂತೆ ನೈರ್ಮಲ್ಯ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಯಾವುದೇ ಸಮಸ್ಯೆಗಳ ಬಗ್ಗೆ ಗಮನ ಸೆಳೆದಲ್ಲಿ, ಅದನ್ನು ಪರಿಹರಿಸಲು ತಾವು ಆದ್ಯತೆ ನೀಡುವುದಾಗಿ ತಿಳಿಸಿದರು.

ಹೋಳಿಹುಣ್ಣಿಮೆ ಇದ್ದರೂ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ, ಚರಂಡಿಯ ಹೂಳು ತೆಗೆಸಿದ್ದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ರೀತಿ ಜಿಲ್ಲೆಯ ಜನಪ್ರತಿನಿಧಿಗಳು ಜನರ ಸಮಸ್ಯೆಗಳ ಬಗ್ಗೆ ತುರ್ತು ಕ್ರಮ ಕೈಗೊಂಡಲ್ಲಿ ಗ್ರಾಮ, ನಗರಗಳ, ಹೊಬಳಿಗಳ, ತಾಲ್ಲೂಕುಗಳ ಜನರ ಸಮಸ್ಯೆಗಳು ಸುಲಭವಾಗಿ ಬಗೆಹರಿಯಲಿದ್ದು, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಲು ಸಾಧ್ಯವಿದೆ ಎಂದು ಸಾಯಿಶ್ರೀ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿಜಯ ಗುತ್ತೇದಾರ, ನಿಜಶರಣ ಅಂಬಿಗರ ಚೌಡಯ್ಯನ ಸಂಘದ ಬನ್ನಪ್ಪ ನಾಲ್ವಡಗಿ ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.