ಭಾನುವಾರ, ಏಪ್ರಿಲ್ 18, 2021
24 °C

ಗಾಂಧಿ ಸೀಟು ಖಾಲಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧಿ ಸೀಟು ಖಾಲಿ!

ಅದು `ಹೊಸ ಪ್ರೇಮ ಪುರಾಣ' ಚಿತ್ರ ಇದೇ ಮೂವತ್ತರಂದು ಬಿಡುಗಡೆಯಾಗಲಿದೆ ಎಂದು ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿ. ದೂರದ ಮುಂಬೈನಿಂದ ನಟಿ ಶ್ರದ್ಧಾದಾಸ್ ಆಗಮಿಸಿದ್ದರು.

ನಟ ನಿತಿನ್ ಗೌಡ, ನಿರ್ದೇಶಕ ಅಂಚೆಹಳ್ಳಿ ಶಿವಕುಮಾರ್, ನಿರ್ಮಾಪಕ ಪ್ರಸಾದ್ ಸಾಲುಮರ ವೇದಿಕೆ ಮೇಲೆ ಆಸೀನರಾಗಿದ್ದರು. ಆದರೆ ಬರಬೇಕಾದವರೇ ಬಂದಿರಲಿಲ್ಲ. ಅರ್ಥಾತ್ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿರುವ ನಟಿಯರಾದ ಪೂಜಾಗಾಂಧಿ ಹಾಗೂ ರಾಧಿಕಾ ಗಾಂಧಿ ಅವರ ಸುಳಿವಿರಲಿಲ್ಲ.

ಏಕೆ ಹೀಗೆ ಎಂಬ ಪ್ರಶ್ನೆಗೆ ನಿರ್ದೇಶಕರು, ನಿರ್ಮಾಪಕರ ಬಳಿಯೂ ಉತ್ತರವಿರಲಿಲ್ಲ. ಸಂಭಾವನೆ ಪಾವತಿಸಿದ್ದರೂ ಅವರು ಗೈರಾದದ್ದು ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಸಾಲ ಕೊಡುವವರ ಮನೆ ಬಾಗಿಲು ತಟ್ಟಿ ಚಿತ್ರ ನಿರ್ಮಿಸಿದ ಸಂಕಟ ಒಂದೆಡೆಯಾದರೆ, ಪ್ರಚಾರದ ಸಮಯದಲ್ಲಿ ಕೈಕೊಡುವ ಕಲಾವಿದರ ತೊಂದರೆ ಮತ್ತೊಂದೆಡೆ. ಸುಮಾರು 1.45 ಕೋಟಿ ರೂಪಾಯಿ ನೀರಿನಲ್ಲಿ ಹಾಕಿದ ಆತಂಕ ಅವರಲ್ಲಿತ್ತು. ಮಾತನಾಡುತ್ತಲೇ ಗದ್ಗದಿತರಾದರು, ಕಡೆಗೆ ವೇದಿಕೆಯಿಂದಲೇ ನಿರ್ಗಮಿಸಿದರು.

ನಟ ನಿತಿನ್ ಅವರದ್ದೂ ಅದೇ ತೊಳಲಾಟ. ಚಿತ್ರಕ್ಕೆ ಗಾಂಧಿ ಸೋದರಿಯರು ಇರಲಿ ಎಂದು ಒತ್ತಾಯಿಸಿದ್ದು ಇದೇ ನಿತಿನ್. ಆದರೆ ಈಗ ಆ ಬಗ್ಗೆ ಅವರಿಗೆ ಪಶ್ಚಾತ್ತಾಪ ಉಂಟಾಗಿದೆ. ಪ್ರಚಾರಕ್ಕೆ ಬರುವಂತೆ ಕೋರಿದವರಲ್ಲಿ ಅವರೂ ಸೇರಿದ್ದರು. ಇಬ್ಬರಿಗೂ ಸಂದೇಶ ರವಾನಿಸಿದ್ದಾಯಿತು. ಕಾದದ್ದೂ ಮುಗಿಯಿತು.ಅತ್ತಲಿಂದ ಮಾತ್ರ ಸೂಕ್ತ ಉತ್ತರ ಬರಲಿಲ್ಲ. ಚಿತ್ರವನ್ನು ತೋರಿಸಿದರಷ್ಟೇ ಪ್ರಚಾರಕ್ಕೆ ಸಿದ್ಧ ಎಂಬುದು ನಟಿಯೊಬ್ಬರ ಪ್ರತಿಕ್ರಿಯೆ. ಮತ್ತೊಬ್ಬರು ಉತ್ತರಿಸಲೂ ಸಿದ್ಧವಿಲ್ಲ. ಚಿತ್ರವನ್ನು ಮೊದಲೇ ತೋರಿಸಲು ನಿರ್ದೇಶಕರಿಗೆ ಮನಸ್ಸಿಲ್ಲ.

ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲೂ ಇದೇ ರೀತಿ ಕಲಾವಿದರು ಗೈರಾದದ್ದು ನಿರ್ದೇಶಕರ ಅಸಮಾಧಾನಕ್ಕೆ ಕಾರಣ. ಇದೆಲ್ಲಾ ಪ್ರಚಾರದ ಪ್ರಹಸನವೇ? ಈ ಪ್ರಶ್ನೆ ಅಲ್ಲಿದ್ದ ಅನೇಕರನ್ನು ಕಾಡಿತ್ತು. ಆದರೆ ವೇದಿಕೆಯಲ್ಲಿ ಆ ಬಗ್ಗೆ ಉತ್ತರವಿರಲಿಲ್ಲ.

ವಿವಾಹ ಪೂರ್ವ ಸಂಬಂಧಗಳಿಂದ ನ್ಯಾಯ ಸಿಗದು ಎಂಬ ಸಂದೇಶ ಚಿತ್ರದಲ್ಲಿದೆ.

ಮದುವೆ ಬೇಡ ಕೂಡಿ ಬಾಳೋಣ ಎನ್ನುತ್ತ ಹೊರಟವರು ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾರೆ ಎಂಬುದನ್ನು ಚಿತ್ರ ಹೇಳುತ್ತದೆ. ನಟಿ ಪೂಜಾಗಾಂಧಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಅವರೇ  ನಾಯಕ ನಟಿಯಂತೆ.

ಜಯಂತ ಕಾಯ್ಕಿಣಿ. ವಿ. ಮನೋಹರ್, ಕೆ. ಕಲ್ಯಾಣ್, ವಿ. ನಾಗೇಂದ್ರ ಪ್ರಸಾದ್ ಬರೆದ ಗೀತೆಗಳಿಗೆ ರಾಜೇಶ್ ರಾಮನಾಥ್ ಸಂಗೀತ ಒದಗಿಸಿದ್ದಾರೆ. ಕ್ಯಾಮೆರಾ ಕೈಚಳಕ ವೆಂಕಟೇಶ್ ಅವರದ್ದು. ಶ್ರದ್ಧಾ ಹಾಜರಿದ್ದರೂ ಅವರ ಪಾತ್ರದ ಕುರಿತಂತೆ ಮಾತನಾಡಿ ಮೌನಕ್ಕೆ ಸರಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.