ಗಾಂಧಿ ಸ್ಮರಣಾರ್ಥ ವಿಶ್ವಸಂಸ್ಥೆ ಪ್ರಶಸ್ತಿ

7

ಗಾಂಧಿ ಸ್ಮರಣಾರ್ಥ ವಿಶ್ವಸಂಸ್ಥೆ ಪ್ರಶಸ್ತಿ

Published:
Updated:
ಗಾಂಧಿ ಸ್ಮರಣಾರ್ಥ ವಿಶ್ವಸಂಸ್ಥೆ ಪ್ರಶಸ್ತಿ

ವಿಶ್ವಸಂಸ್ಥೆ (ಪಿಟಿಐ): ಸಹಿಷ್ಣುತೆ ಹಾಗೂ ಅಹಿಂಸೆಗಾಗಿ ವಿಶ್ವಸಂಸ್ಥೆಯು ಮಹಾತ್ಮ ಗಾಂಧಿ ಅವರ ಸ್ಮರಣಾರ್ಥವಾಗಿ ಕೊಡಮಾಡುವ ಪ್ರಶಸ್ತಿಗೆ  (ಯುನೆಸ್ಕೊ ಮದನ್‌ಜೀತ್ ಸಿಂಗ್ ಪ್ರಶಸ್ತಿ) ಆಫ್ಘಾನಿಸ್ತಾನದ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅನಾರ್ಕಲಿ ಹೊನರ್ಯಾರ್ ಮತ್ತು ಪ್ಯಾಲೆಸ್ಟೈನ್‌ನ ಶಾಂತಿ ಪ್ರತಿಪಾದಕ ಖಲೀದ್ ಅಬು ಅವದ್ ಅವರನ್ನು ಆಯ್ಕೆ ಮಾಡಲಾಗಿದೆ.ಗಾಂಧೀಜಿ ಅವರ 125ನೇ ಜಯಂತಿ ಪ್ರಯುಕ್ತ, 1995ರಲ್ಲಿ ಹೆಸರಾಂತ ಲೇಖಕ ಹಾಗೂ ರಾಯಭಾರಿ ಮದನ್‌ಜೀತ್ ಸಿಂಗ್ ಅವರು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.  ಪ್ರತಿ ಎರಡು ವರ್ಷಗಳಿಗೊಮ್ಮೆ ನೀಡಲಾಗುವ ಪ್ರಶಸ್ತಿಯ ಮೊತ್ತ 1 ಲಕ್ಷ ಅಮೆರಿಕನ್ ಡಾಲರ್. ಆಫ್ಘಾನಿಸ್ತಾನದಲ್ಲಿ ಮಹಿಳೆಯರು ಹಾಗೂ ಅಲ್ಪಸಂಖ್ಯಾತ ಸಮುದಾಯದವರ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಅನಾರ್ಕಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ.ಮಾನವೀಯ ಘನತೆ, ಹಕ್ಕು, ಸಹಿಷ್ಣುತೆ, ಪರಸ್ಪರ ಗೌರವ ಇವೇ ಮುಂತಾದ ಆದರ್ಶಗಳನ್ನು ಎತ್ತಿ ಹಿಡಿಯುವಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಕೌಟುಂಬಿಕ ದೌರ್ಜನ್ಯ, ಬಲವಂತದ ಮದುವೆ, ಲಿಂಗ ತಾರತಮ್ಯ ಮತ್ತಿತರ ಶೋಷಣೆಗೆ ಒಳಗಾದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಅನಾರ್ಕಲಿ ಅವರ ಪ್ರಯತ್ನ ಶ್ಲಾಘನೀಯ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ. 2010ರ ಚುನಾವಣೆಯಲ್ಲಿ ಆಯ್ಕೆಯಾಗಿರುವ ಅನಾರ್ಕಲಿ, ಆಫ್ಘಾನಿಸ್ತಾನ ಸಂಸತ್‌ನ ಕೆಳಮನೆಯಲ್ಲಿ ಮುಸ್ಲಿಮೇತರ ಮೊದಲ ಸದಸ್ಯೆಯಾಗಿದ್ದಾರೆ.ಇನ್ನು ಅವದ್ ಅವರು, ಪ್ಯಾಲೆಸ್ಟೈನ್ ಹಾಗೂ ಇಸ್ರೇಲ್ ನಡುವೆ ಸಮನ್ವಯ ಪ್ರಕ್ರಿಯೆ ಮೂಲಕ ಸಹಿಷ್ಣುತೆ, ಶಾಂತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಪ್ರಶಸ್ತಿಯ ಮೊತ್ತವನ್ನು ಇಬ್ಬರಿಗೂ ಸಮನಾಗಿ ಹಂಚಲಾಗುತ್ತದೆ.

ಪ್ಯಾರಿಸ್‌ನಲ್ಲಿರುವ ಯುನೆಸ್ಕೊ ಪ್ರಧಾನ ಕಚೇರಿಯಲ್ಲಿ ಡಿಸೆಂಬರ್ 9ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry