ಗಾಂಧಿ ಸ್ಮರಣೆಗೆ ಜತೆಯಾದ ಪಾಕ್

7

ಗಾಂಧಿ ಸ್ಮರಣೆಗೆ ಜತೆಯಾದ ಪಾಕ್

Published:
Updated:

ವಿಶ್ವಸಂಸ್ಥೆ (ಪಿಟಿಐ): ಕಾಶ್ಮೀರ ವಿಷಯವಾಗಿ ಸೋಮವಾರವಷ್ಟೇ ಭಾರತದ ವಿರುದ್ಧ ಆಪಾದನೆ ಮಾಡಿದ್ದ ಪಾಕಿಸ್ತಾನವು ಇಲ್ಲಿ ಮಂಗಳವಾರ ಭಾರತದ ಜತೆ ಸೇರಿ `ಗಾಂಧಿ ಜಯಂತಿ~ಯನ್ನು ಆಚರಿಸಿತು. ಗಾಂಧಿ ಜನ್ಮದಿನವನ್ನು ವಿಶ್ವಸಂಸ್ಥೆಯು `ಅಂತರರಾಷ್ಟ್ರೀಯ ಅಹಿಂಸಾ ದಿನ~ವನ್ನಾಗಿ ಆಚರಿಸುತ್ತಿದೆ.ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಹರ್‌ದೀಪ್ ಸಿಂಗ್ ಪುರಿ ಈ ಕಾರ್ಯಕ್ರಮದ ಆತಿಥ್ಯ ವಹಿಸಿದ್ದರು. ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪುರಿ ಅವರ ಪಾಕಿಸ್ತಾನದ ಸಹವರ್ತಿ ಅಬ್ದುಲ್ಲಾ ಹುಸೇನ್ ಹರೂನ್ ಅವರೂ ಭಾಗವಹಿಸಿದ್ದರು.ಗಾಂಧಿ ಅವರ ಆದರ್ಶಗಳು ಸಮಕಾಲೀನ ಜಗತ್ತಿನಲ್ಲಿ ಹೆಚ್ಚು ಪ್ರಸ್ತುತವಾಗುತ್ತಿವೆ. ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ವಿವಿಧ ರಾಷ್ಟ್ರಗಳ ನಾಯಕರು ಗಾಂಧಿ ಅವರನ್ನು ಉಲ್ಲೇಖಿಸಿ ಮಾಡಿರುವ ಭಾಷಣಗಳೇ ಅದಕ್ಕೆ ನಿದರ್ಶನ ಎಂದು ಹರ್‌ದೀಪ್ ಸಿಂಗ್ ಪುರಿ ಹೇಳಿದರು.ಗಾಂಧಿ ಅವರು ಏಕಕಾಲಕ್ಕೆ ಭಾರತ ಮತ್ತು ಪಾಕಿಸ್ತಾನ, ಈ ಎರಡೂ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ.ಗಾಂಧಿ ಅವರದ್ದು ಅಸಾಧಾರಣ ವ್ಯಕ್ತಿತ್ವ ಎಂದ ಹರೂನ್, ಕರಾಚಿಯಲ್ಲಿನ ತಮ್ಮ ನಿವಾಸಕ್ಕೆ ಗಾಂಧಿ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. ತಮ್ಮ ಅಜ್ಜ ನಿಧನರಾದಾಗ, ಗಾಂಧಿ ಅವರು ಒಂದು ಸುಂದರ ಪತ್ರ ಬರೆದಿದ್ದನ್ನು ಅವರು ಇದೇ ವೇಳೆ ಸ್ಮರಿಸಿದರು.ಪಾಕಿಸ್ತಾನವು ಭಾರತದಿಂದ ಬೇರ್ಪಟ್ಟ ಸಂದರ್ಭದಲ್ಲಿ, ಪಾಕಿಸ್ತಾನಕ್ಕೆ ಅದರ ಹಣಕಾಸು ಪಾಲನ್ನು ಲಭ್ಯವಾಗಿಸಲು ಗಾಂಧಿ ಪಟ್ಟ ಪರಿಶ್ರಮವನ್ನು ಕೂಡ ಈ ಸಂದರ್ಭದಲ್ಲಿ ಹರೂನ್ ಮೆಲುಕು ಹಾಕಿದರು.`ಪ್ರತಿಯೊಂದು ವಿಷಯದಲ್ಲೂ ಯುಕ್ತ ನಿರ್ಧಾರವನ್ನೇ ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿದು, ಅದಕ್ಕಾಗಿ ಸಾಕಷ್ಟು ಆಪತ್ತುಗಳನ್ನು ಎದುರಿಸುತ್ತಿದ್ದ ಗಾಂಧಿ ಅವರೆಡೆಗೆ ಪಾಕಿಸ್ತಾನ ಋಣಭಾರ ಹೊಂದಿದೆ. ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ನಾವೆಲ್ಲರೂ ಒಂದೇ ಮೂಲಕ್ಕೆ ಸೇರಿದವರು ಎಂಬುದನ್ನು ಯಾರೂ ಮರೆಯಬಾರದು~  ಎಂದು ಹರೂನ್ ಹೇಳಿದರು.ಗಾಂಧಿ ತಮ್ಮ ಕೊನೆಯುಸಿರಿರುವವರೆಗೂ ವಿಶ್ವ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಬೇಕೆಂದು ಬಯಸಿದ್ದರು. ಅಂತಹ ಮಹಾನ್ ಚೇತನವನ್ನು ಒಂದು ಸಮುದಾಯಕ್ಕೆ ಅಥವಾ ಒಂದು ರಾಷ್ಟ್ರಕ್ಕೆ ಸೀಮಿತಗೊಳಿಸಿದರೆ, ಅದು ಆ ವ್ಯಕ್ತಿಯ ದಿವ್ಯ ದೂರದೃಷ್ಟಿಯನ್ನು ಸಂಕುಚಿತಗೊಳಿಸಿದಂತಾಗುತ್ತದೆ ಎಂದರು.ಗಾಂಧಿ ಪ್ರಜಾಪ್ರಭುತ್ವವನ್ನು, ಸರ್ಕಾರದ ವ್ಯವಸ್ಥೆಯನ್ನು ಮೀರಿದ ಪರಿಕಲ್ಪನೆಯಾಗಿ ಪರಿಭಾವಿಸಿಕೊಂಡಿದ್ದರು. ಗಾಂಧಿ ಅವರಿಗೆ ಪ್ರಜಾಪ್ರಭುತ್ವವೆಂದರೆ, ಅಧಿಕಾರವನ್ನು ವಿಕೇಂದ್ರೀಕರಿಸುವ ಮೂಲಕ ಸಮಾಜದ ಪ್ರತಿಯೊಂದು ಸ್ತರಕ್ಕೂ ಒತ್ತಾಸೆ ನೀಡುವ ನೈತಿಕ ವ್ಯವಸ್ಥೆಯಾಗಿತ್ತು ಎಂದು ವಿವರಿಸಿದರು.ಗಾಂಧಿ ಅವರು ಬದುಕಿದ್ದ ಕಾಲದ ಮೌಲ್ಯಗಳಿಗೂ ಈಗಿನ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಸಂಘರ್ಷ ಮತ್ತು ಅಸಮಾನತೆಗಳು ಈಗ ಜನಜೀವನದ ಅನಿವಾರ್ಯ ಭಾಗಗಳಾಗಿವೆ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹೇಳಿದರು.ಸಂಘರ್ಷಗಳನ್ನು ತಿಳಿಗೊಳಿಸಿಕೊಳ್ಳಲು ಗಾಂಧಿ ತೋರಿದ ಮಾರ್ಗ ಪ್ರಾಯೋಗಿಕ ಹಾಗೂ ಚೇತೋಹಾರಿ ಆದದ್ದಾಗಿದೆ. ಅವರ ಮಾರ್ಗದಲ್ಲಿ ಮುನ್ನಡೆಯಲು ಅಪಾರ ಧೈರ್ಯ ಮತ್ತು ದೃಢ ಚಿತ್ತ ಅಗತ್ಯ ಎಂದೂ ಅವರು ಅಭಿಪ್ರಾಯಪಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry