ಭಾನುವಾರ, ಮೇ 22, 2022
21 °C

ಗಾಂಧೀಜಿ ಚಿಂತನೆ ಇಂದಿಗೂ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧೀಜಿ ಚಿಂತನೆ ಇಂದಿಗೂ ಪ್ರಸ್ತುತ

ಕಡೂರು: ರಾಷ್ಟ್ರದ ಶ್ರೇಯಸ್ಸು ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕರಾದ ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಆದರ್ಶ, ವ್ಯಕ್ತಿತ್ವಗಳನ್ನು ಯುವ ಪೀಳಿಗೆ ಅಳವಡಿಸಿ ಕೊಳ್ಳಬೇಕು. ಗಾಂಧಿ ಚಿಂತನೆ ಇಂದಿಗೂ ಪ್ರಸ್ತತ ಎಂದು ಶಾಸಕ ಡಾ.ವೈ.ಸಿ.ವಿಶ್ವನಾಥ್ ತಿಳಿಸಿದರು.ತಾಲ್ಲೂಕು ಆಡಳಿತ, ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನು ವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ವೈ.ಎಸ್.ವಿ.ದತ್ತ ಮಾತನಾಡಿ ಗಾಂಧಿ ಮತ್ತು ಶಾಸ್ತ್ರೀಜಿ ಆದರ್ಶ ಗಳು ಇಂದಿಗೂ ಪ್ರಸ್ತುತ ಎಂದರು. 

 

ಸರ್ವಧರ್ಮ ಪ್ರಾರ್ಥನೆ ಅಂಗವಾಗಿ ಕೆ.ಆರ್.ಶೇಷಾದ್ರಿ ಭಗವದ್ಗೀತೆ ಪಠಿಸಿದರೆ ಎಲಿಯಸ್ ಸಿಕ್ವೇರಾ ಬೈಬಲ್ ವಾಚನ ಮಾಡಿದರು. ಮೌಲ್ವಿ ಜಿಯಾ ವುಲ್ಲಾ ಕುರಾನ್ ಪಠಣ ಮಾಡಿದರು. ಮಹಾತ್ಮಾಗಾಂಧಿ ಜೀವನ ಸಾಧನೆ ಕುರಿತು ಬಿಜಿಎಸ್ ಕಾಲೇಜು ಉಪ ನ್ಯಾಸಕಿ ರೇಖಾ ನಾಗರಾಜರಾವ್ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎ.ಈ.ರತ್ನ, ಪುರಸಭಾಧ್ಯಕ್ಷೆ ರುಕ್ಸಾನಾ ಪರ್ವೀನ್, ತಾ.ಪಂ.ಸದಸ್ಯ ಬಸಪ್ಪ, ಕಾರ್ಯನಿರ್ವಹಣಾಧಿಕಾರಿ ಟಿ.ಎನ್.ಮೂರ್ತಿ , ತಾಲ್ಲೂಕಿನ ವಿವಿಧ ಇಲಾಖೆ ಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಂಡರು.    ಲಿಂಗಾಪುರ: ಗಾಂಧಿಜಯಂತಿ 

ಲಿಂಗಾಪುರ (ನರಸಿಂಹರಾಜಪುರ): ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ  ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯ ಹಾಗೂ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ಮಾತನಾಡಿದರು.  ಲಿಂಗಾಪುರ ಒಕ್ಕೂಟದ ಅಧ್ಯಕ್ಷ ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮೇಲ್ವಿಚಾರಕ ಬಾಲಕೃಷ್ಣ, ರಮೇಶ್ ಶೆಟ್ಟಿ, ಡೇವಿಸ್, ಸುಜಾತ, ಕಾಶಿ, ಸುಪ್ರೀತಾ, ಜ್ಯೋತಿ, ಶುಭ ಇದ್ದರು.  

ಪಟ್ಟಣದ ಇಲ್ಲಿನ ಆದರ್ಶ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಗಾಂಧಿಜಯಂತಿ ಆಚರಿಸಲಾಯಿತು.ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎ.ಅಬುಬ್ಕರ್ ವಹಿಸಿದ್ದರು. ಶ್ರೇಯ, ಅನ್ನಪೂರ್ಣ,ಯಾಸ್ಮೀನ್ ಇದ್ದರು.ಮತದಾರರ ಮುಖಾಮುಖಿ

ತರೀಕೆರೆ:
ತಾಲ್ಲೂಕಿನ ಲಕ್ಕವಳ್ಳಿ ಹೋಬಳಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಪಕ್ಷದ ಕಾರ್ಯಕರ್ತರ ಮತ್ತು ಈ ಭಾಗದ ಜನತೆಯ ಮತ್ತು ಮತದಾರರ ನೆರವಿಗೆ ಪಕ್ಷದ ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕು ಎಂದು ಮಾಜಿ ಶಾಸಕ ಎಸ್.ಎಂ.ನಾಗರಾಜ್ ತಿಳಿದರು.ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ಕರಕುಚ್ಚಿ ತಾಂಡ್ಯದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಗಾಂಧಿ ಜಯಂತಿ ಮತ್ತು ಮತದಾರರೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಸತ್ತು ಹೋಗಿದೆ ಎಂದು ಬಿಂಬಿಸುತ್ತಿರುವ ವಿರೋಧ ಪಕ್ಷಗಳಿಗೆ ಮುಂಬರುವ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಾಗುವುದು ಎಂದರು.ಕೆಪಿಸಿಸಿ ಸದಸ್ಯ ಟಿ.ಎಚ್.ಶಿವಶಂಕರಪ್ಪ ಮಾತನಾಡಿ,ಲಕ್ಕವಳ್ಳಿ ಹೋಬಳಿಯ ಕರಕುಚ್ಚಿ ಗ್ರಾಮದಲ್ಲಿ ಹರಿಯುವ ಭದ್ರಾ ನದಿಯಿಂದ ಮರಳನ್ನು ತೆಗೆಯುವ ಕೂಲಿಕಾರ್ಮಿಕರ ದೋಣಿಗಳನ್ನು ತಾಲ್ಲೂಕು ಆಡಳಿತ ಸುಟ್ಟುಹಾಕುತ್ತಿರುವುದನ್ನು ಈ ಸಂದರ್ಭದಲ್ಲಿ ಇಲ್ಲಿನ ಜನತೆ ಕಾಂಗ್ರೆಸ್ ಮುಂಖಂಡರ ಗಮನಕ್ಕೆ ತಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಾರ್ವತಿಬಾಯಿ, ಎಪಿಎಂಸಿ ಸದಸ್ಯರಾದ ರೇವಣ್ಣ, ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ ಅನ್ವರ್, ಅಜ್ಜಂಪುರ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ದ್ರುವಕುಮಾರ್, ಮುಖಂಡರಾದ ಜಿ.ಎಚ್.ಶ್ರೀನಿವಾಸ್, ಆರ್.ಮಂಜುನಾಥ್, ನಂದಕುಮಾರ್, ಎಲ್.ಟಿ.ಹೇಮಣ್ಣ, ಟಿ.ಬಿ.ಶಿವಣ್ಣ ಇದ್ದರು.ಬೀರೂರು: ಮಾಂಸ ಮಾರಾಟ

ಬೀರೂರು: ಗಾಂಧಿ ಜಯಂತಿ ಅಂಗವಾಗಿ ಪ್ರಾಣಿಬಲಿ ಮತ್ತು ಮಾಂಸ ಮಾರಾಟ ನಿಷೇಧಿಸಿದ್ದರೂ ಪಟ್ಟಣದ ಮಾರುಕಟ್ಟೆ ಆವರಣದಲ್ಲಿರುವ ಪುರಸಭಾ ಮಾಂಸಮಾರಾಟ ಮಳಿಗೆಯಲ್ಲಿ ಭಾನುವಾರ ಎಗ್ಗಿಲ್ಲದೆ ವ್ಯಾಪಾರ ನಡೆದಿತ್ತು.

 

ಪರವಾನಗಿ ನೀಡುವ ಸಮಯದಲ್ಲಿ ನಿಗದಿತ ದಿನಗಳಂದು ಮಾಂಸ ಮಾರಾಟ ಮಾಡಲು ನಿರ್ಬಂಧವಿರುವುದನ್ನು ಸೂಚಿಸಿದ್ದರೂ ಇದಕ್ಕೆ ಬೆಲೆ ಕೊಡದೆ ಗಾಂಧೀಜಿ ಮೌಲ್ಯಗಳಿಗೆ ಅಗೌರವ ಸೂಚಿಸುವ ರೀತಿಯಲ್ಲಿ ಮಾರಾಟ ನಡೆದಿರುವುದು ಅಧಿಕಾರಿಗಳು ಕೇವಲ ಕಾಟಾ ಚಾರಕ್ಕೆ ಮಹಾತ್ಮಾರ ಜಯಂತಿ ಆಚರಿಸುತ್ತಾರೆ ಎನ್ನುವುದನ್ನು ತೋರಿಸುತ್ತದೆ ಎಂದು ಗಾಂಧಿ ವಾದಿಗಳು ಮತ್ತು ಸಾರ್ವಜನಿಕರು ದೂರಿದ್ದಾರೆ.

 

ಗಾಂಧಿಜಯಂತಿ ಆಚರಣೆಗೆ ಮುನ್ನ ಪುರಸಭೆ ಆಡಳಿತ ಇವರಿಗೆ ಅಂಗಡಿ ಮುಚ್ಚಲು ಸೂಚಿಸಿರಲಿಲ್ಲವೇ? ಸೂಚಿಸಿದ್ದರೂ ವ್ಯಾಪಾರ ನಡೆಯಲು ಕಾರಣವೇನು? ಇದಕ್ಕೆ ಕಾರಣರಾದ ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮಾಂಸ ಮಾರಾಟ ಪರವಾನಗಿ ಹೊಂದಿರುವ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಿ ಪರವಾನಗಿ ರದ್ದುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ರಾಷ್ಟ್ರಪಿತನಿಗೆ ಅವಮಾನ: ಆರೋಪಕೊಪ್ಪ:
ಗಾಂಧಿ ಜಯಂತಿಯಂದು ಮದ್ಯ ಹಾಗೂ ಮಾಂಸ ಮಾರಾಟ ನಿರ್ಬಂಧವಿದ್ದರೂ ಇಲ್ಲಿನ ಮಾರುಕಟ್ಟೆಯಲ್ಲಿರುವ ಮಾಂಸ ಮಾರಾಟದ ಪುರಸಭಾ ಮಳಿಗೆಗಳಲ್ಲಿ ಮಾಂಸ ಮಾರಾಟ ನಡೆದ ಬಗ್ಗೆ ಬ್ಲಾಕ್ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

 

ಮಾಜಿ ಸಚಿವ ಡಿ.ಬಿ. ಚಂದ್ರೇಗೌಡರು ಈ ಹಿಂದೆ ಗಾಂಧಿ ಜಯಂತಿಯಂದು ತಮ್ಮ ಬೆಂಬಲಿಗರ ಮನೆಯಲ್ಲಿ ಬಾಡೂಟ ಮಾಡಿದರೆಂದು ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಪಟ್ಟಣದಲ್ಲಿ ಶುದ್ಧ ಪುಣ್ಯಾಯ ಮಾಡುವ ಮೂಲಕ ಪ್ರತಿಭಟಿಸಿದ್ದನ್ನು ನೆನಪಿಸಿರುವ ಕಾಂಗ್ರೆಸ್ ಕಾರ್ಯದರ್ಶಿ ಎಂ.ಸಿ ಅಶೋಕ್, ಬಿಜೆಪಿ ಅಧಿಕಾರದಲ್ಲಿರುವ ಪಟ್ಟಣ ಪಂಚಾಯಿತಿ ಗಾಂಧಿ ಜಯಂತಿಯಂದು ಮಾಂಸ ಮಾರಾಟಕ್ಕೆ ಮುಕ್ತ ಅವಕಾಶ ನೀಡಿ ರಾಷ್ಟ್ರಪಿತನಿಗೆ ಅವಮಾನ ಮಾಡಿದೆ ಎಂದು ದೂರಿದ್ದಾರೆ.ಮುನ್ನಾದಿನವೇ ಜಯಂತಿ

ಬೀರೂರು: ಪಟ್ಟಣದ ಖಾಸಗಿ ಶಾಲೆಯೊಂದು ಮಹಾತ್ಮಾ ಗಾಂಧಿ ಜಯಂತಿಯನ್ನು ಭಾನುವಾರ ಆಚರಿಸುವ ಬದಲು ಶನಿವಾರವೇ ಆಚರಿಸಿದ ಘಟನೆ ನಡೆದಿದೆ.ರೈಲ್ವೆ ಸ್ಟೇಷನ್ ಬಳಿ ಇರುವ ಕ್ರಿಸ್ತಶರಣ ಶಾಲೆಯಲ್ಲಿ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಮತ್ತು ಕೆಲ ಶಿಕ್ಷಕರ ಉಪಸ್ಥಿತಿಯಲ್ಲಿ ಶನಿ ವಾರವೇ ಗಾಂಧಿಜಯಂತಿ ಆಚರಿಸಿದೆ.ಈ ಕುರಿತು ಕ್ಷೇತ್ರಶಿಕ್ಷಣಾಧಿಕಾರಿಯವರನ್ನು ಸಂಪರ್ಕಿಸಿ ಕೆಲ ಸಮುದಾಯಗಳಿಗೆ ವಿಶೇಷ ಅನುಮತಿ ಇದೆಯೇ ಅಥವಾ ಈ ಶಾಲೆಯವರು ತಮ್ಮಿಂದ ಮುಂಚಿತವಾಗಿ ಆಚರಣೆ ಕುರಿತು ಅನುಮತಿ ಪಡೆದಿದ್ದರೇ ಎಂಬ ಪ್ರಶ್ನೆಗೆ ಈ ರೀತಿ ಯಾವುದೇ ಅನುಮತಿ ನೀಡಿಲ್ಲ. ಅಲ್ಲದೇ ಹಿಂದಿನ ದಿನವೇ ಆಚರಣೆ ಮಾಡಲು ಬರುವುದಿಲ್ಲ. ಕಾರಣಗಳಿದ್ದಲ್ಲಿ ಮುಂದಿನ ದಿನ ಆಚರಿಸಬಹು ದಾದ ಅವಕಾಶ ಇದೆಯಷ್ಟೇ ಎಂದರು.

`

ವಿಶ್ವಕ್ಕೆ ಕೈಗನ್ನಡಿಗಳು~

ಮೂಡಿಗೆರೆ:
ರಾಷ್ಟ್ರಪಿತ ಗಾಂಧಿಜೀ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಈ ದೇಶದ ಕಣ್ಮಣಿಗಳು. ಅವರ ಆದರ್ಶಗಳು ವಿಶ್ವಕ್ಕೆ  ಕೈಗನ್ನಡಿಗಳಾಗಿವೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 142ನೇ ಗಾಂಧಿ ಜಯಂತಿ ಕಾರ್ಯಕ್ರಮ  ಅಧ್ಯಕ್ಷತೆ ವಹಿಸಿ ಮಾತ ನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ತಾಪಂ,ಅಧ್ಯಕ್ಷ ರಂಜನ್ ಅಜಿತ್‌ಕುಮಾರ್ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಯುವ ಜನತೆ ಅಣ್ಣಾ ಹಜಾರೆಯವರ ಮಾರ್ಗದರ್ಶನದಲ್ಲಿ ನಡೆದು, ಭ್ರಷ್ಟಾಚಾರ ನಿಯಂತ್ರಣಕ್ಕೆ ಗಾಂಧಿ ಮಾರ್ಗ ಅನುಸುವಂತೆ ಮನವಿ ಮಾಡಿದರು.ಜಿಪಂ, ಸದಸ್ಯ ಅರೆಕೊಡಿಗೆ ಶಿವಣ್ಣ ಮಾತ ನಾಡಿ, ಪ್ರತಿನಿತ್ಯ ಗ್ರಾಂಧಿ-ಶಾಸ್ತ್ರಿ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ದೇಶ ಪ್ರೇಮ ಬೆಳೆಸುವುದು ಅಗತ್ಯ ಎಂದರು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಸರೋಜಾ ಸುರೇಂದ್ರ, ಲತಾ ಲಕ್ಷ್ಮಣ್, ತಹಸೀಲ್ದಾರ್ ಚಿನ್ನರಾಜ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶಿವಾನಂದ್, ಕಾರ್ಯ ದರ್ಶಿ ವೀರೇಗೌಡ, ರವಿಪ್ರಕಾಶ್, ಶ್ರೀನಿವಾಸ್,ಮಂಜುನಾಥ್, ಮುನೀರ್ ಅಹಮದ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.