ಗಾಂಧೀಜಿ ಚುನಾವಣೆಗೆ ನಿಂತರೂ ಗೆಲ್ಲುವುದಿಲ್ಲ

7

ಗಾಂಧೀಜಿ ಚುನಾವಣೆಗೆ ನಿಂತರೂ ಗೆಲ್ಲುವುದಿಲ್ಲ

Published:
Updated:

ಉಡುಪಿ: ‘ಜಾತಿಯ ಬಲ, ಧನ ಬಲವಿಲ್ಲದೇ ನಮ್ಮ ಯಾವ ಚುನಾವಣೆಯನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಯಾರೂ ರಾಜಕೀಯಕ್ಕೆ ಬರಬೇಡಿ. ಒಂದು ವೇಳೆ ಮಹಾತ್ಮ ಗಾಂಧೀಜಿಯೇ ಬಂದು ಚುನಾವಣೆಗೆ ನಿಂತರೂ ನಮ್ಮ ದೇಶದಲ್ಲಿ ಗೆಲ್ಲುವುದಿಲ್ಲ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಇಲ್ಲಿ ಲೇವಡಿ ಮಾಡಿದರು.ಜನಜಾಗೃತಿ ವೇದಿಕೆ ಒಕ್ಕೂಟದ ವತಿಯಿಂದ ಶನಿವಾರ ಉಡುಪಿಯಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದ ‘ವಿದ್ಯಾರ್ಥಿ ಸಂಚಲನ’ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಕಳುಹಿಸಿದ ‘ನಾನು ರಾಜಕೀಯಕ್ಕೆ ಬರಬಹುದೇ?’ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.‘ನಿಮ್ಮ ಬಳಿ ಧನಬಲ, ಜಾತಿಯ ಬಲವಿಲ್ಲದೇ ಚುನಾವಣೆಯಲ್ಲಿ ಗೆಲ್ಲಲಾರಿರಿ. ರಾಜಕೀಯ ಸಾಕಷ್ಟು ಕಲುಷಿತಗೊಂಡಿದೆ, ಅತ್ತ ಯಾರೂ ಮನಸ್ಸು ಮಾಡುವುದು ಬೇಡ. ಚುನಾವಣೆ ಎನ್ನುವುದು ಕೇವಲ ಹುದ್ದೆಯಾಗುತ್ತಿದೆ, ಅದು ವೃತ್ತಿಯಾಗಿಲ್ಲ. ರಾಜಕಾರಣವೆಂದರೆ ಚುನಾವಣೆಗಾಗಿ ಲಕ್ಷಾಂತರ ಖರ್ಚು ಮಾಡಿ ನಂತರ ಕೋಟ್ಯಂತರ ಗಳಿಕೆ ಮಾಡುವಂತಾಗಿದೆ’ ಎಂದರು.‘ಸರ್ಕಾರದ ಆಡಳಿತ ನ್ಯೂನತೆ ಎತ್ತಿತೋರಿಸುವುದೇ ನನ್ನ ಕರ್ತವ್ಯ’: ‘ನೀವು ವಿರೋಧ ಪಕ್ಷದವರಂತೆ ಸರ್ಕಾರವನ್ನು ಟೀಕೆ ಮಾಡುತ್ತಿದ್ದೀರಿ ಎನ್ನುವ ಆರೋಪವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನಿಮ್ಮ ವಿರುದ್ಧ ಮಾಡಿದ್ದಾರಲ್ಲ?’ ಎನ್ನುವ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಶ್ವರಪ್ಪ ಮಾತ್ರವಲ್ಲ, ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರೂ ಅದೇ ಆರೋಪ ಮಾಡಿದ್ದಾರೆ. ಕಳೆದ ವರ್ಷ ನಾನು ರಾಜೀನಾಮೆ ನೀಡಿದಾಗ ಮನೆಗೆ ಬಂದು ಬೇಡಿಕೊಳ್ಳುವಾಗ ಅವರಿಗೆ ಇದೆಲ್ಲ ಗೊತ್ತಿರಲಿಲ್ಲವೇ? ಸರ್ಕಾರವನ್ನು ಹೊಗಳುತ್ತ ಕುಳಿತುಕೊಳ್ಳುವುದು ನನ್ನ ಕೆಲಸವಲ್ಲ, ಮಾತ್ರವಲ್ಲ ಸರ್ಕಾರದ ನ್ಯೂನತೆ ಜನರಿಗೆ ತಿಳಿಸುವುದ ಕೂಡ ನನ್ನ ಕರ್ತವ್ಯ’ ಎಂದರು.‘ಯಾವುದೇ ಲೋಕಾಯುಕ್ತ ತನ್ನ ಆತ್ಮಸಾಕ್ಷಿಯಾಗಿ ಕೆಲಸ ಮಾಡುತ್ತಿದ್ದರೆ ಆತ ಸರ್ಕಾರವನ್ನು ಹೊಗಳಿಕೊಂಡು ಇರಲಿಕ್ಕೆ ಆಗುವುದಿಲ್ಲ. ಸರ್ಕಾರದಲ್ಲಿನ, ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಎತ್ತಿತೋರಿಸುವುದು ಲೋಕಾಯುಕ್ತನಾಗಿ ನನ್ನ ಕರ್ತವ್ಯ. ಸರ್ಕಾರವನ್ನು ಹೊಗಳಿಕೊಂಡು ಇರುವುದು ನನ್ನ ಕೆಲಸವಲ್ಲ’ ಎಂದರು.ವಿದ್ಯಾರ್ಥಿಗಳ ಒಂದಿಷ್ಟು ಪ್ರಶ್ನೆ ಅದಕ್ಕೆ ಲೋಕಾಯುಕ್ತರ ಉತ್ತರ ಹೀಗಿದೆ:

* ಭ್ರಷ್ಟಾಚಾರ ಹುಟ್ಟಿದ್ದು ಯಾವಾಗ?

-ನಮ್ಮ ಸಮಾಜ ಹುಟ್ಟಿದಾಗಿನಿಂದಲೇ ಭ್ರಷ್ಟಾಚಾರವೂ ಬೆಳೆಯುತ್ತ ಬಂದಿದೆ. ಆದರೆ ನಮ್ಮ ದೇಶದಲ್ಲಿ ಸುಮಾರು 1970ರ ನಂತರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಬೆಳೆಯುತ್ತ ಬಂದಿದೆ.

*  ಭ್ರಷ್ಟಾಚಾರ ಮುಕ್ತವಾದ ಯಾವುದಾದರೂ ಸ್ಥಳವಿದೆಯೇ?

-ಇದು ಸಾವಿಲ್ಲದ ಮನೆಯಿಂದ ಸಾವಿವೆಯನ್ನು ತನ್ನಿ ಎಂದು ಹೇಳಿದಂತೆ. ಭ್ರಷ್ಟಾಚಾರವಿಲ್ಲದ ಒಂದೇ ಒಂದು ಸಂಸ್ಥೆಯಾದರೂ ನನಗೆ ತೋರಿಸಿಕೊಡಿ, ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.

* ಭ್ರಷ್ಟಾಚಾರ ತಡೆಗೆ ವಕೀಲರ ಅಗತ್ಯವೇ?

-ಇಲ್ಲ. ಪ್ರತಿಯೊಬ್ಬ ಜನರಿಗೆ ಮೊದಲು ತಿಳಿವಳಿಕೆ ಬೇಕು. ನಾನು ಲಂಚ ಕೊಡುವುದಿಲ್ಲ, ಹಾಗೂ ತೆಗೆದುಕೊಳ್ಳುವುದಿಲ್ಲ ಎನ್ನುವ ಪ್ರಜ್ಞೆ ಅಗತ್ಯ.

* ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನದಲ್ಲಿದೆಯೇ?

-ಹಾಗೇನಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರವಿದೆ. ಮೊದಲು 1000 ಇದ್ದದ್ದು ಈಗ ಕೋಟಿಗೆ ಮುಟ್ಟಿದೆ ಅಷ್ಟೆ.

* ರಾಜಕೀಯ ವ್ಯವಸ್ಥೆ ಸುಧಾರಣೆ ಹೇಗೆ?

-ತಾನು ಜನ–ಸೇವಕ ಎನ್ನುವ ಭಾವನೆ ಮೊದಲು ರಾಜಕಾರಣಿ ಬೆಳೆಸಿಕೊಳ್ಳಬೇಕು. ಸರ್ಕಾರಿ ಸೌಲಭ್ಯ ಬಳಸಿಕೊಂಡು ಜನರ ಬಳಿಗೆ ಬರುವ ಬದಲು ಸಾಮಾನ್ಯನಾಗಿ ಜನರ ಬಳಿಗೆ ಹೋಗಿ ಅವರ ಸಮಸ್ಯೆ ಪರಿಹರಿಸಲು ಕೆಲಸ ಮಾಡಬೇಕು.

* ಪಂಚಾಯಿತಿ ವ್ಯವಸ್ಥೆಗಳಲ್ಲಿ ಭ್ರಷ್ಟಾಚಾರ ಹೇಗಿದೆ?

-ಗ್ರಾಮ ಪಂಚಾಯಿತಿಗಳಿಗೆ ನಿಜವಾದ ಅಧಿಕಾರ ಈಗಲೂ ತಲುಪಿಲ್ಲ. ಪಂಚಾಯಿತಿಗಳು ಕೇವಲ ಭ್ರಷ್ಟಾಚಾರ, ರಾಜಕೀಯದಲ್ಲಿ ಮುಳುಗಿವೆಯೇ ಹೊರತೂ ಅಲ್ಲಿ ಆಡಳಿತ ವ್ಯವಸ್ಥೆ ಇನ್ನೂ ಬಂದಿಲ್ಲ. ಗ್ರಾಮಗಳಿಗೆ ಶೌಚಾಲಯ ಕಟ್ಟಿಸಿ ಎಂದು ಅನುದಾನ ಬಿಡುಗಡೆ ಮಾಡಿದರೆ ಗ್ರಾ,ಪಂ. ಅಧ್ಯಕ್ಷ ತನ್ನ ಮನೆಗೆ, ಕಾರ್ಯದರ್ಶಿ ತನ್ನ ಮನೆಗೆ ಕಟ್ಟಿಸಿಕೊಂಡು ಕೆಲಸ ಮುಗಿಸುತ್ತಾರೆ.

* ಭ್ರಷ್ಟರನ್ನು ಹಿಡಿದಾಗ 1-2 ದಿನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ನಂತರ ಅವರೆಲ್ಲ ಏನಾಗುತ್ತಾರೆ? ಶಿಕ್ಷೆಯಾಗುತ್ತದೆಯೇ?

-ಒಬ್ಬ ಭ್ರಷ್ಟ ಅಧಿಕಾರಿಯನ್ನು ಹಿಡಿದು ಆತನ ವಿರುದ್ಧ ಚಾರ್ಜ್‌ಶೀಟ್ ಹಾಕಿ ನ್ಯಾಯಾ–ಲಯಕ್ಕೆ ಒಪ್ಪಿಸಿದರೆ ನಮ್ಮ ಕೆಲಸ ಮುಗಿಯುತ್ತದೆ. ಆತನಿಗೆ ಶಿಕ್ಷೆ ನೀಡುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ. ಅಷ್ಟಕ್ಕೂ ಆ ಅಧಿಕಾರಿಯನ್ನು ನ್ಯಾಯಾಲಯದಲ್ಲಿ ವಿಚಾರಣೆ ಮಾಡಲು ಸರ್ಕಾರದ ಅನುಮತಿ ಬೇಕು. ಸದ್ಯಕ್ಕೆ 1999-2000ದಲ್ಲಿ ನಡೆದ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈಗ 2010ರಲ್ಲಿ ಹಿಡಿದ ಭ್ರಷ್ಟರ ವಿಚಾರಣೆ 2025ರಲ್ಲಿ ನಡೆಯಬಹುದೇನೋ? ಗೊತ್ತಿಲ್ಲ.

* ನೀವು ನಮ್ಮ ರಾಜ್ಯದ ಮುಖ್ಯಮಂತ್ರಿ ಯಾಕೆ ಆಗಬಾರದು?

-ನಾನು ಯಾವತ್ತಿಗೂ ರಾಜಕೀಯಕ್ಕೆ ಇಳಿಯುವುದಿಲ್ಲ. ಹೀಗಾಗಿ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗುವ ಕನಸು ಕಂಡಿಲ್ಲ.

* ಲೋಕಾಯುಕ್ತರಾಗಿ ನಿಮ್ಮ ಅಧಿಕಾರಾವಧಿ ಮುಗಿದ ಬಳಿಕ 2ನೇ ಬಾರಿಗೆ ಲೋಕಾಯುಕ್ತರಾಗಿ ಸೇವೆ ಸಲ್ಲಿಸುವಿರಾ?

- ಖಂಡಿತವಾಗಿಯೂ ನಾನು ದೇವರೇ ಕೇಳಿದರೂ 2ನೇ ಬಾರಿಗೆ ಲೋಕಾಯುಕ್ತನಾಗಿ ಮುಂದುವರಿಯುವುದಿಲ್ಲ. ನಾನು ನಿವೃತ್ತನಾದ ಬಳಿಕ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮುಂದುವರಿಯುತ್ತದೆ ಹಾಗೂ ಇದರ ವಿರುದ್ಧ ಹೋರಾಟ ಮಾಡುವ ಯಾವುದೇ ಸಂಘ ಸಂಸ್ಥೆಗಳ ಕೆಲಸಗಳಿಗೆ ಬೆಂಬಲ ನೀಡುತ್ತೇನೆ.

* ಧರ್ಮಗುರುಗಳು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆಯೇ?

- ಧರ್ಮಗುರುಗಳು ಭ್ರಷ್ಟಾಚಾರವನ್ನು ಕಮ್ಮಿ ಮಾಡಲು ಪ್ರಯತ್ನ ಪಡಬಹುದು. ಆದರೆ ಧರ್ಮಗುರುಗಳು ಭ್ರಷ್ಟರನ್ನು ರಕ್ಷಿಸುತ್ತಿದ್ದಾರೆ ಎಂದು ಅನ್ನಿಸುತ್ತಿದೆ.

* ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕಲು ಸಾಧ್ಯವಿಲ್ಲವೇ?

-ಬೇರು ಸಮೇತವಲ್ಲ, ಕನಿಷ್ಠ ಬುಡ ಕತ್ತರಿಸಿದರೂ ಸಾಕಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry