ಗಾಜು... ಟಿಂಟ್ ಗೋಜು

7

ಗಾಜು... ಟಿಂಟ್ ಗೋಜು

Published:
Updated:
ಗಾಜು... ಟಿಂಟ್ ಗೋಜು

ವಾಹನಗಳ ಗಾಜು ಪಾರದರ್ಶಕವಾಗಿದ್ದಿದ್ದರೆ ಬಿಪಿಒ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣ ನಡೆಯುತ್ತಿರಲಿಲ್ಲವೇನೋ ಎಂದು 2005ರಲ್ಲಿ ಬೆಂಗಳೂರು ಅಲವತ್ತುಕೊಂಡಿತ್ತು.ಕಳೆದ ತಿಂಗಳು ಪೈಶಾಚಿಕ ಕೈಗಳಿಗೆ ಸಿಕ್ಕಿ, ದೆಹಲಿ ಯುವತಿಯ ಪ್ರಾಣಪಕ್ಷಿ ಹಾರಿಹೋಗುತ್ತಲೇ ಸುಪ್ರೀಂಕೋರ್ಟ್ ಮತ್ತೊಮ್ಮೆ ತನ್ನ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಿಳಿಸಿದೆ. ಮಾತ್ರವಲ್ಲ, `ಯಾವುದೇ ವಾಹನಗಳ ಗಾಜಿನ ಮೇಲೆ ದಟ್ಟ ಕಪ್ಪು ಬಣ್ಣದ ಸನ್‌ಸ್ಕ್ರೀನ್ ಆಗಲಿ, ಗಾಜು ಆಗಲಿ, ಯಾವುದೇ ರೀತಿಯ ಸಾಮಗ್ರಿಯ ಬಳಕೆಗೆ ಬಿಲ್‌ಕುಲ್ ಅವಕಾಶವಿಲ್ಲ' ಎಂದೂ ಸ್ಪಷ್ಟಪಡಿಸಿದೆ.ಮೊದಲ ಆದೇಶ ಹೊರಬಿದ್ದ ಸಂದರ್ಭದಲ್ಲಿ ಯಾವ ವಾಹನಕ್ಕೆ ಟಿಂಟ್ ಇರಬಹುದು, ಇರಕೂಡದು, ಇದ್ದರೂ ಶೇಕಡಾ ಎಷ್ಟು ಟಿಂಟ್ ಇದ್ದರೆ ಓಕೆ? ಎಂಬ ಗೊಂದಲ ಎದುರಾಗಿತ್ತು. ವಾಹನ ಮಾಲೀಕರೂ ಪೊಲೀಸರಲ್ಲಿ ಇದೇ ಪ್ರಶ್ನೆ ಕೇಳುತ್ತಿದ್ದರು.`ಈ ಬಾರಿಯ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತೆ ಟಿಂಟ್‌ನ ಪ್ರಮಾಣದ ಬಗ್ಗೆ ತಕರಾರು ಎತ್ತುತ್ತಿದ್ದಾರೆ. ನಮ್ಮ ವಾಹನದ ಒಳಭಾಗ ಹೊರಗಿನಿಂದಲೆ ಸ್ಪಷ್ಟವಾಗಿ ಕಾಣಿಸುತ್ತದೆ, ನಾವು ದಂಡಕ್ಕೆ ಅರ್ಹರಲ್ಲ ಎಂದು ವಾದಿಸುತ್ತಾರೆ' ಎನ್ನುತ್ತಾರೆ, ಕೆಂಪೇಗೌಡ ರಸ್ತೆಯಲ್ಲಿ ಕರ್ತವ್ಯನಿರತರಾಗಿದ್ದ ಸಂಚಾರ ಪೊಲೀಸ್ ಸಿಬ್ಬಂದಿಯೊಬ್ಬರು.ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಲೋಕಾಭಿರಾಮದಲ್ಲಿ ನಿರತರಾಗಿದ್ದ ಚಾಲಕರು ಮಾಡುವ ಆರೋಪವೇ ಬೇರೆ.

`ಒಂದು ಜಂಕ್ಷನ್‌ನಲ್ಲಿ ಪೊಲೀಸರು ಯಾವುದೇ ಕ್ರಮ (ದಂಡ) ವಿಧಿಸದೆ ಪಾಸ್ ಮಾಡ್ತಾರೆ, ಮುಂದಿನ ಜಂಕ್ಷನ್‌ನಲ್ಲಿ ಪೊಲೀಸರು ಅಡ್ಡಹಾಕಿ ದಂಡ ವಿಧಿಸುತ್ತಾರೆ. ಅಂದರೆ, ಎಷ್ಟು ಪರ್ಸೆಂಟ್ ಟಿಂಟ್ ಇರಬೇಕು ಎಂಬ ಬಗ್ಗೆ ಪೊಲೀಸರಲ್ಲೇ ಗೊಂದಲವಿದೆ' ಎಂಬುದು ಅವರ ದೂರು.

ನಮ್ಮಲ್ಲಿ ಗೊಂದಲವಿಲ್ಲ ಎಂಬುದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಅವರ ಸ್ಪಷ್ಟ ನುಡಿ.`ಖಾಸಗಿ ವಾಹನವೇ ಇರಲಿ, ಸರ್ಕಾರಿಯೇ ಆಗಲಿ, ಸಚಿವರದ್ದೇ ಆಗಿರಲಿ ಅಥವಾ ಇನ್ಯಾವುದೇ ರೀತಿಯ ವಾಹನಗಳಿರಲಿ ಮುಂಭಾಗ ಮತ್ತು ಹಿಂಭಾಗದ ಗಾಜು ಶೇ 70ರಷ್ಟು ಪಾರದರ್ಶಕವಾಗಿರಬೇಕು. ಎರಡೂ ಬದಿಯವು ಶೇ 50ರಷ್ಟು ಕಾಣುವಂತಿರಬೇಕು. ಇದರಲ್ಲಿ ಗೊಂದಲದ ಪ್ರಶ್ನೆಯೇ ಇಲ್ಲ. ವಾಹನದ ಗಾಜುಗಳು ಶೇ ನೂರು ಅಪಾರದರ್ಶಕ (ಕಪ್ಪು)ವಾಗಿರಕೂಡದು. ಇದು ಸುಪ್ರೀಂಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿ ನಮೂದಾಗಿದೆ. ಇಷ್ಟೇ ಅಲ್ಲ, `ಯಾವುದೇ ರೀತಿಯ ವಸ್ತು ಗಾಜನ್ನು ಮುಚ್ಚುವಂತಿರಕೂಡದು' ಎಂಬ ಅಂಶವನ್ನು ಪ್ರತ್ಯೇಕವಾಗಿ ಆದೇಶದಲ್ಲಿ ಬರೆಯಲಾಗಿದೆ.`ಆದೇಶ ಮತ್ತು ಕಾನೂನುಗಳ ಪಾಲನೆಯನ್ನು ನಮ್ಮಷ್ಟು ವೇಗ ಮತ್ತು ಚುರುಕಾಗಿ ಯಾವುದೇ ನಗರದಲ್ಲೂ ಮಾಡುತ್ತಿಲ್ಲ. ಟಿಂಟ್ ತೆಗೆಸುವ ಆದೇಶ ಹೊರಬೀಳುತ್ತಲೇ ದೇಶದಲ್ಲೇ ಮೊದಲ ಬಾರಿಗೆ ಅಭಿಯಾನವನ್ನು ಕೈಗೆತ್ತಿಕೊಂಡು ಟಿಂಟೆಡ್ ಪೇಪರ್ ತೆಗೆಸಿದ್ದು ಮತ್ತು ಅಭೂತ ಯಶಸ್ಸು ಕಂಡದ್ದು ನಮ್ಮ ಹೆಗ್ಗಳಿಕೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಲೀಂ ಅವರು, `2012 ಜೂನ್ ಹೊತ್ತಿಗಾಗಲೇ ್ಙ 77.16 ಲಕ್ಷ ದಂಡ  ಸಂಗ್ರಹವಾಗಿದೆ' ಎಂದು ಮಾಹಿತಿ ನೀಡುತ್ತಾರೆ.ಬಸ್‌ಗಳ ಟಿಂಟ್ ಹೋಯ್ತು!

ಹಗಲು ಮಾತ್ರವಲ್ಲ, ರಾತ್ರಿ ಸಂಚರಿಸುವ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಬಳಸಿರುವುದು ಗಾಢ ಕಪ್ಪು ಬಣ್ಣದ ಗಾಜುಗಳನ್ನು. ಖಾಸಗಿ ಬಸ್ಸುಗಳ ಮಾಲೀಕರಿಗೆ ನೋಟಿಸ್ ಕಳುಹಿಸಿ, ದಂಡ ವಿಧಿಸಿ ಗಾಜು/ ಟಿಂಟ್ ಬದಲಾಯಿಸುವಂತೆ  ಕ್ರಮ ಕೈಗೊಂಡಿದ್ದಾರೆ ಸಂಚಾರ ಪೊಲೀಸರು.

ಆದರೆ ಕೆಎಸ್‌ಆರ್‌ಟಿಸಿಗೆ ದಂಡ ವಿಧಿಸುವ ಬದಲು ರಸ್ತೆ ಸಾರಿಗೆ ನಿಗಮದ ಉನ್ನತಾಧಿಕಾರಿಗಳಿಗೆ ಪತ್ರ ಬರೆದು ಶೀಘ್ರ ಕಪ್ಪು ಗಾಜುಗಳನ್ನು ಬದಲಾಯಿಸುವಂತೆ ಸೂಚನೆ ಕೊಡಲಾಗಿದೆ. ಗಾಜಿನ ಮೇಲಿನ ಟಿಂಟೆಡ್ ಗಾಜು ತೆಗೆಯುವುದಕ್ಕೂ ವ್ಯತ್ಯಾಸವಿದೆ. ಯಾಕೋ ಕೆಎಸ್‌ಆರ್‌ಟಿಸಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲಿವರೆಗೂ ಬಂದಿಲ್ಲ. ಇನ್ನೂ ಸ್ವಲ್ಪ ದಿನ ಕಾದು ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಡಾ.ಎಂ.ಎ. ಸಲೀಂ ವಿವರಿಸುತ್ತಾರೆ.ಬಿಎಂಟಿಸಿಯ ವೋಲ್ವೊ ಬಸ್ಸುಗಳಲ್ಲಿ ಜಾಹೀರಾತು ಬಳಸಲು ಶುರುಮಾಡಿದ ಮೇಲೆ ಅದು ಯಾವ ಬಸ್ಸು ಎಂಬುದೇ ಗೊತ್ತಾಗದಂತಹ ಪರಿಸ್ಥಿತಿಯಿತ್ತು. ಮುಂಭಾಗವನ್ನು ಹೊರತುಪಡಿಸಿ ಇಡೀ ಬಸ್ಸನ್ನೇ ಜಾಹೀರಾತು ಆಕ್ರಮಿಸಿಕೊಂಡಿತ್ತು. ಹವಾನಿಯಂತ್ರಿತವಾದ ಈ ಬಸ್ಸುಗಳ ಒಳಗೆ ಸೂರ್ಯನ ಬೆಳಕು ಸಮರ್ಪಕವಾಗಿ ಪ್ರವೇಶಿಸಲೂ ಅವಕಾಶವಿರಲಿಲ್ಲ. ಸೆಮಿ ವೋಲ್ವೊ ಹಾಗೂ ಜೆ-ನರ್ಮ್ ಬಸ್ಸುಗಳಿಗೆ ಇದ್ದುದು ದಟ್ಟ ಕಪ್ಪು ಗಾಜುಗಳು. ಸುಪ್ರೀಂ ಆದೇಶದ ಬೆನ್ನಲ್ಲಿ ಸಂಚಾರ ಪೊಲೀಸ್ ವಿಭಾಗದಿಂದ ಕೆಎಸ್‌ಆರ್‌ಟಿಸಿಯಂತೆ ಬಿಎಂಟಿಸಿಗೂ ಕಳುಹಿಸಿದ ನೋಟಿಸ್‌ಗೆ ಬಿಎಂಟಿಸಿ ತಕ್ಷಣ ಸ್ಪಂದಿಸಿತು. ಈಗ ವೋಲ್ವೊ ಬಸ್‌ಗಳು ಅರೆಪಾರದರ್ಶಕವಾಗಿವೆ.ಒಟ್ಟಿನಲ್ಲಿ, ಪಾರದರ್ಶಕ, ಅರೆಪಾರದರ್ಶಕ ಗಾಜುಗಳ ಒಳಗೆ ನಾವು ನೀವು ಸುರಕ್ಷಿತವಾಗಿರಲಿ ಎಂಬುದು ಪೊಲೀಸರ ಕಾಳಜಿ. ಆದರೂ... ಮನಸ್ಸುಗಳನ್ನು ಪಾರದರ್ಶಕವಾಗಿಸುವ ತಂತ್ರವೇನಾದರೂ ತಿಳಿದಿದ್ದರೆ ಗಾಜುಗಳ ಗೊಡವೆ ಯಾರಿಗೆ ಬೇಕಿತ್ತು, ಅಲ್ಲವೇ?ವಿನಾಯಿತಿ ಯಾಕೆ?

ಕಾನೂನಿಗೆ ತಲೆಬಾಗಿಯೋ, ದಂಡಕ್ಕೆ ಹೆದರಿಯೋ ಜನಸಾಮಾನ್ಯರು ತಾವಾಗಿಯೇ ಟಿಂಟ್ ತೆಗೆದುದು ಎಲ್ಲರಿಗೂ ಗೊತ್ತಿದೆ. ಆದರೆ ಅದೇ ಜನ `ಸರ್ಕಾರಿ ವಾಹನಗಳಿಗೆ, ವಿಐಪಿಗಳಿಗೆ ಯಾಕೆ ವಿನಾಯಿತಿ ಕೊಡಬೇಕು' ಎಂದು ಕೇಳಿದ್ದರು. `ಈ ಬಾರಿ ಅಂತಹ ಅವಕಾಶ ಕೊಟ್ಟಿಲ್ಲ. ಸರ್ಕಾರಿ, ವಿಐಪಿ ಎಂಬ ಭೇದವಿಲ್ಲದೆ ರಸ್ತೆಯಲ್ಲಿ ತಪ್ಪಿದರೆ ಅವರವರ ಮನೆಗಳಿಗೆ ನೋಟಿಸ್ ತಲುಪಿಸುವ ಮೂಲಕ ಕ್ರಮ ಕೈಗೊಂಡಿದ್ದೇವೆ. ಕಾನೂನಿನ ಕೈಯಲ್ಲಿ ಎಲ್ಲರೂ ಒಂದೇ. ಅವರ ಪ್ರತಿಷ್ಠೆಯಾಗಲಿ, ಶ್ರೀಮಂತಿಕೆ, ಬಡತನವಾಗಲಿ ಕಾನೂನಿಗೆ ಗೊತ್ತಾಗುವುದಿಲ್ಲ' ಎಂದು ನಗುತ್ತಾರೆ ಸಲೀಂ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry