ಗಾಜೆಂದರೆ ಬರಿ ಗಾಜಲ್ಲ..!

7

ಗಾಜೆಂದರೆ ಬರಿ ಗಾಜಲ್ಲ..!

Published:
Updated:
ಗಾಜೆಂದರೆ ಬರಿ ಗಾಜಲ್ಲ..!

ಗೀತಾ ಮೈನಿ ನಗರದ ಲ್ಯಾವೆಲ್ಲೆ ರಸ್ತೆಯಲ್ಲಿರುವ `ಗ್ಯಾಲರಿ ಜಿ~ ಆರ್ಟ್ ಸಂಸ್ಥೆಯ ಪ್ರವರ್ತಕರು. 2003ರಲ್ಲಿ ಪ್ರಾರಂಭವಾದ ಈ ಆರ್ಟ್ ಗ್ಯಾಲರಿ ಸದ್ಯ ದಶಕ ಸಂಭ್ರಮದ ಹೊಸ್ತಿಲಲ್ಲಿದೆ. ಭಾರತೀಯ ಕಲಾ ರಂಗದಲ್ಲಿ ಹಲವು ಮಹತ್ತರಬೆಳವಣಿಗೆಗಳು ನಡೆಯುತ್ತಿದ್ದ ಕಾಲಘಟ್ಟದಲ್ಲೇ ಮೈನಿ ಈ ಸಂಸ್ಥೆ ಪ್ರಾರಂಭಿಸಿದರು. ಕಳೆದ 10 ವರ್ಷಗಳ ಕಲಾ ಪಯಣ ಹೇಗಿತ್ತು ಎಂದರೆ, `ಸವಾಲಿನದು ಆದರೆ ಸಂತೃಪ್ತಿ ಇದೆ~ ಎನ್ನುವುದು ಮೈನಿ ಅವರ ಮಾತು.

`ಗ್ಯಾಲರಿ ಜಿ~ಗೆ 10 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ವಿಶೇಷ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ವೆಸ್ಟ್ ಎಂಡ್ ತುದಿಯಲ್ಲಿರುವ `ಆರ್ಟ್ ಕಾರಿಡಾರ್~ನಲ್ಲಿ  `ಗ್ಯಾಲರಿ ಜಿ~ಯ ಮೂರನೇ ಕಲಾ ಸಂಗ್ರಹಾಲಯ ಇತ್ತೀಚೆಗೆ ಉದ್ಘಾಟನೆಗೊಂಡಿದೆ. ಬರೋಡಾ ಫೈನ್ ಆರ್ಟ್ಸ್‌ನ ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ಹೆಸರಾಂತ ಕಲಾವಿದ ಗಾಜಿ ಮೊನ್‌ಪಾರೊ ಅವರ ಗಾಜಿನ ಬಾಟಲಿ ಕಲಾಕೃತಿಗಳ ಪ್ರದರ್ಶನ ಈ ಬಾರಿಯ ವಿಶೇಷ. ಗಾಜಿ ಅವರೊಂದಿಗೆ ಇನ್ನೂ 5 ಕಲಾವಿದರ 38ಕ್ಕೂ ಹೆಚ್ಚು `ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಗಾಜಿನ ಬಾಟಲಿ ಕಲಾಕೃತಿಗಳ ಬೆಲೆ 50 ಸಾವಿರ ರೂಪಾಯಿಂದ 80 ಸಾವಿರದವರೆಗೆ ಇದೆ~ ಎನ್ನುತ್ತಾರೆ ಮೈನಿ.

ತಾಜ್ ವೆಸ್ಟೆಂಡ್ ಸಹ ಈ ವರ್ಷ 125ನೇ ವರ್ಷದ ಸಂಭ್ರಮದಲ್ಲಿರುವುದರಿಂದ ಈ ಸಹಯೋಗದ ವಿಶೇಷತೆ ಹೆಚ್ಚಿದೆ. ವೈಟ್‌ಫೀಲ್ಡ್‌ನ ಇಂಟರ್‌ನ್ಯಾಷನಲ್ ಟೆಕ್ ಪಾರ್ಕ್ (ಐಟಿಪಿಬಿ) ಬಳಿ ಇರುವ ತಾಜ್ ವಿವಂತಾದಲ್ಲಿ 2009ರಲ್ಲಿ ನಮ್ಮ ಮೊದಲ ಕಲಾ ಗ್ಯಾಲರಿ ಪ್ರಾರಂಭಿಸಿದ್ದೇವೆ. ಇದಕ್ಕೆ ಅತ್ಯುತ್ತಮ ಸ್ಪಂದನೆ ಲಭಿಸಿದೆ ಎನ್ನುವ ಅವರು ಕಲೆಯೆಂದರೆ ದೃಶ್ಯಕಾವ್ಯ ಎಂದು ಬಣ್ಣಿಸುತ್ತಾರೆ.

`ಇದೇ ಮೊದಲ ಬಾರಿಗೆ ಗಾಜಿನ ಕಲಾಕೃತಿಗಳ ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಗಾಜೆಂದರೆ ಇವು ಬರಿ ಗಾಜಲ್ಲ. ಮೃದು ಗಾಜಿನ ಬಾಟಲಿಗಳು ಕಲಾವಿದನ ಕೈಚಳಕದಲ್ಲಿ ಶ್ರೇಷ್ಠ ಕಲಾಕೃತಿಗಳಾಗಿ ಅರಳಿವೆ. ಬಾಗಿರುವ ಈ ಆಕೃತಿ ಮೇಲಿನ ವಕ್ರರೇಖೆಗಳು ಕೂಡ ಏನನ್ನೋ ಹೇಳಲು ಹೊರಟಂತಿವೆ...~ ಹೀಗೆ ಸಾಗುತ್ತದೆ ಮೈನಿ ಅವರ ವಿವರಣೆ. 

ಈ ವರ್ಷ ನಾಲ್ಕಕ್ಕೂ ಹೆಚ್ಚು ಕಲಾ ಪ್ರದರ್ಶನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಗೋವಾ, ಮುಂಬೈ, ಬೆಂಗಳೂರು, ಕೋಲ್ಕತ್ತಗಳಿಂದ ಹೆಸರಾಂತ ಕಲಾವಿದರು ಭಾಗವಹಿಸಲಿದ್ದಾರೆ. ದೇಶೀಯ ಮತ್ತು ಅನಿವಾಸಿ ಭಾರತೀಯರ (ಎನ್‌ಆರ್‌ಐ) ಕಲಾಕೃತಿ ಖರೀದಿ ಸಾಮರ್ಥ್ಯ ಹೆಚ್ಚಿದೆ. ಆದರೆ, ಪ್ರಾಯೋಜಕರ ಕೊರತೆಯೇ ಮುಖ್ಯ ಸವಾಲು. ಬ್ಯಾಂಕುಗಳು, ಕಾರ್ಪೊರೇಟ್ ಸಂಸ್ಥೆಗಳು ಪ್ರಾಯೋಜಕತ್ವ ನೀಡಲು ಮುಂದೆ ಬಂದರೆ ಕಲೆಗೆ ವಾಣಿಜ್ಯ ಉತ್ತೇಜನ ಮತ್ತು ಪ್ರೋತ್ಸಾಹ ಲಭಿಸುತ್ತದೆ ಎನ್ನುವುದು ಅವರ ಮಾತು.

“ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ (2008) ಅಮೆರಿಕದಲ್ಲಿ ಕಲಾ ಪ್ರದರ್ಶನ ಆಯೋಜಿಸಿದ್ದೆವು. ನಮ್ಮ ಊಹೆಗೂ ಮೀರಿ ಪ್ರತಿಕ್ರಿಯೆ ಬಂತು. ಭಾರತೀಯ ಕಲೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಉತ್ತಮ ಮನ್ನಣೆ ಇದೆ. ಅದೇ ವರ್ಷ ಕಲಾವಿದ ಮಹಮ್ಮದ್ ಉಸ್ಮಾನ್ ಅವರ `ಕೋಲೆ ಬಸವ ಕಲಾ ಬಸವ~ ಕಲಾಕೃತಿಗೆ ದೇಶೀಯ ಮಾರುಕಟ್ಟೆಯಲ್ಲೂ ಉತ್ತಮ ಪ್ರತಿಕ್ರಿಯೆ ಲಭಿಸಿತು” ಎಂದು ಸ್ಮರಿಸುತ್ತಾರೆ.

ಲ್ಯಾವೆಲ್ಲೆ ರಸ್ತೆಯಲ್ಲಿರುವ `ಗ್ಯಾಲರಿ ಜಿ~ ಕೇವಲ ಕಲಾ ಪ್ರದರ್ಶನಕ್ಕೆ ಮಾತ್ರ ಸೀಮಿತ. ಕಲಾಕೃತಿಗಳ ಮಾರಾಟ, ಕಲಾ ಪ್ರದರ್ಶನಗಳು, ಕಲಾ ಸಲಹೆ ಮತ್ತು ಮೌಲ್ಯಮಾಪನ ಇತ್ಯಾದಿ ರಂಗಗಳಲ್ಲೂ ಸಂಸ್ಥೆ ತೊಡಗಿಸಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ www.­gallerygbangalore.com  ಶೋಧಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry