ಶನಿವಾರ, ಮೇ 8, 2021
19 °C

ಗಾನಯೋಗಿಗೆ ಶಿಷ್ಯರ ಸ್ವರ ನಮನ

ಆರ್.ವೀರೇಂದ್ರಪ್ರಸಾದ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಸದ್ದು ಮಾಡುವ ಮಠವೆಂದೇ ಹೆಸರುವಾಸಿಯಾಗಿರುವ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಇನ್ನೆರಡು ದಿನ ಅಹೋರಾತ್ರಿ ಗಾನಗಂಗೆ ಸಾವಿರ ತೊರೆಯಾಗಿ ಹರಿಯಲಿದ್ದಾಳೆ.ಗಾನಯೋಗಿ, ನಡೆದಾಡುವ ದೇವರು, ಪದ್ಮಭೂಷಣ, ಉಭಯಗಾನ ವಿಶಾರದ ಡಾ.ಪಂಡಿತ ಪುಟ್ಟರಾಜ ಗವಾಯಿಯವರು ಲಿಂಗೈಕ್ಯರಾಗಿ ಇದೇ ತಿಂಗಳ 17ಕ್ಕೆ ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಸೆ.6 ಮತ್ತು 7ರಂದು ವೀರೇಶ್ವರ ಪುಣ್ಯಾಶ್ರಮದಲ್ಲಿ ಸ್ವರ ಸಮಾರಾಧನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.ನಾಡಿನ ಹೆಸರಾಂತ ಗಾಯಕರು, ವಾದಕರು ಅಲ್ಲದೇ ದೇಶದ ಬೇರೆ-ಬೇರೆ ಭಾಗಗಳಿಂದ ಸಂಗೀತಗಾರರು ಆಗಮಿಸಿ ಗುರುವಿಗೆ ಗಾಯನ ನಮನವನ್ನು ಸಲ್ಲಿಸಲಿದ್ದಾರೆ. ಬಾನ್ಸುರಿ ವಾದಕ ಪ್ರವೀಣ ಗೋಡ್ಖಿಂಡಿ, ತಬಲ ವಾದಕರಾದ ಪಂಡಿತ ರಘುನಾಥ ನಾಕೋಡ, ಪಂಡಿತ ರವೀಂದ್ರ ಯಾವಗಲ್, ಶಹನಾಯಿ ವಾದಕ ಚೆನ್ನೈನ ಬಿ.ಬಾಳೇಶ್, ಕ್ಲಾರಿಯೊನೇಟ್ ವಾದಕ ನರಸಿಂಹಲು ವಡವಾಟಿ, ವಯಲಿನ್ ವಾದಕ ಚೆನ್ನೈನ ವೀರೇಶ್ವರ ಮದ್ರಿ ಸೇರಿದಂತೆ  200ಕ್ಕೂ ಹೆಚ್ಚು ಕಲಾವಿದರು ಸ್ವರ ಸಮಾರಾಧನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಖ್ಯಾತ ಗಾಯಕರಾದ ಭೂಪಾಲ್‌ನ ಶ್ರದ್ಧಾ ಜೈನ್, ಉತ್ತಮಕುಮಾರ ಲಾತೂರ್, ಎಂ. ವೆಂಕಟೇಶ ಕುಮಾರ್, ಪುಣೆಯ ಕುಮಾರ ಮರಡೂರ, ಮುಂಬಯಿನ ಚಂದ್ರಶೇಖರ ಪೂಲಚಂತಿ, ಸಂಗೀತಾ ಕಟ್ಟಿ ಮತ್ತಿತರರು ತಮ್ಮ ತಾಳ, ಲಯ, ಶೃತಿಯ ಮೂಲಕ ಬಹುವಾದ್ಯ ಪ್ರವೀಣರಾಗಿದ್ದ ಪುಟ್ಟರಾಜರನ್ನು ಸ್ಮರಿಸಲಿದ್ದಾರೆ.ಸ್ಥಳೀಯ ಕಲಾವಿದರು, ಗಾಯಕರಿಗೂ ಇಲ್ಲಿ ಅವಕಾಶ ನೀಡಲಾಗಿದೆ. ಎಲ್ಲರಿಗೂ ವೇದಿಕೆ ಸಿಗುತ್ತದೆ. ಇದರಿಂದಾಗಿ ವೀರೇಶ್ವರ ಪುಣ್ಯಾಶ್ರಮದಲ್ಲಿ ಎರಡು ದಿನಗಳ ಕಾಲ ಸ್ವರ ಲಹರಿ ನಿರಂತರ. ಅಂತಿಮವಾಗಿ ಪುಟ್ಟರಾಜ ಗವಾಯಿಗಳ ಧ್ವನಿಮುದ್ರಿತ ಮಂಗಲಗೀತೆಯೊಂದಿಗೆ ಪುಣ್ಯಸ್ಮರಣೋತ್ಸವ ಸಂಪನ್ನಗೊಳ್ಳುತ್ತದೆ. ಅಲ್ಲಿಯವರೆಗೆ ಬೆಳಕು ಹರಿದು ಗುರುವಾರ ಮಧ್ಯಾಹ್ನವಾಗಿರುತ್ತದೆ.ಸ್ಮರಣೋತ್ಸವದ ಅಂಗವಾಗಿ ಎಪಿಎಂಸಿ ಪ್ರಾಂಗಣದಲ್ಲಿ ಇರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸೆ.6 ರಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಧರ್ಮಸಭೆ ಉದ್ಘಾಟಿಸಲಿದ್ದಾರೆ. ಸೆ.7 ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭಾಗವಹಿಸಲಿದ್ದಾರೆ. 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಿರುವ ಪುಟ್ಟರಾಜ ಸ್ಮಾರಕ ಭವನಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.`ಎರಡು ದಿನದ ಪುಣ್ಯಸ್ಮರಣೆಗೆ ಗದಗ ಸುತ್ತಲಿನ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. 50 ಸಾವಿರಕ್ಕೂ ಹೆಚ್ಚು ಜನರು ಬರಬಹುದು ಎಂದು ಅಂದಾಜಿಸಲಾಗಿದೆ. ಬಂದಂತಹ ಎಲ್ಲ ಭಕ್ತರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ~ ಎಂದು ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.