ಮಂಗಳವಾರ, ಡಿಸೆಂಬರ್ 10, 2019
26 °C

ಗಾನ ಗಾರುಡಿಗ ಪಂಚಭೂತಗಳಲ್ಲಿ ಲೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾನ ಗಾರುಡಿಗ ಪಂಚಭೂತಗಳಲ್ಲಿ ಲೀನ

ಪುಣೆ: ಹಿಂದೂಸ್ತಾನಿ ಸಂಗೀತ ಲೋಕದ ಸಾಮ್ರಾಟ ಪಂಡಿತ್ ಭೀಮ್‌ಸೇನ್ ಜೋಷಿ ಅವರು ಹಾಡಿದ ‘ಮಿಲೇ ಸುರ್ ಮೇರಾ ತುಮ್ಹಾರಾ...’ ಗಾನ ಮುಗಿಲು ಮುಟ್ಟುತ್ತಿದ್ದಂತೆಯೇ ಸಾವಿರಾರು ಕಂಗಳು ಒದ್ದೆಯಾಗಿದ್ದವು. ಆ ಭಾಷ್ಪಾಂಜಲಿ ಮತ್ತು ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಗೀತ ಗಾರುಡಿಗನ ಪಾರ್ಥಿವ ಶರೀರ ಇಲ್ಲಿನ ‘ವೈಕುಂಠ’ ವಿದ್ಯುತ್ ಚಿತಾಗಾರದಲ್ಲಿ ಸೋಮವಾರ ಸಂಜೆ ಪಂಚಭೂತಗಳಲ್ಲಿ ಲೀನವಾಯಿತು.ಪಂಡಿತ್ ಜೋಷಿ ಅವರು ಹುಟ್ಟಿದ್ದು, ಬೆಳೆದುದು ಕರ್ನಾಟಕದಲ್ಲಿ. ಹೀಗಾಗಿ ಅವರಿಗೆ ವಿಶೇಷ ಗೌರವ ಸಲ್ಲಿಸುವ ಸಲುವಾಗಿ ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಗಳೂರಿನಿಂದ ಇಲ್ಲಿಗೆ ಬಂದು ಅಂತಿಮ ನಮನ ಸಲ್ಲಿಸಿದರು. ಕೇಂದ್ರ ಸರ್ಕಾರದ ಪರವಾಗಿ ವಿದೇಶಾಂಗ ವ್ಯವಹಾರ ಸಚಿವ ಎಸ್. ಎಂ. ಕೃಷ್ಣ ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರೂ ಹಾಜರಿದ್ದರು. ಆರ್‌ಎಸ್‌ಎಸ್ ಮಾಜಿ ಮುಖ್ಯಸ್ಥ ಕೆ. ಎಸ್. ಸುದರ್ಶನ್ ಅವರೂ ಜೋಷಿ ಅವರ ಅಂತಿಮ ದರ್ಶನ ಪಡೆದ ಗಣ್ಯರಲ್ಲಿ ಒಬ್ಬರಾಗಿದ್ದರು.ಜೋಷಿ ಅವರ ಹುಟ್ಟೂರಲ್ಲಿ ಪಂಡಿತ್ ಅವರ ನೆನಪನ್ನು ಶಾಶ್ವತಗೊಳಿಸುವುದಕ್ಕಾಗಿ 10 ಕೋಟಿ ರೂಪಾಯಿಗಳ ಯೋಜನೆಯೊಂದನ್ನು ಹಮ್ಮಿಕೊಳ್ಳುವುದಾಗಿ ಯಡಿಯೂರಪ್ಪ ಅವರು ಪ್ರಕಟಿಸಿದರು. ಯಡಿಯೂರಪ್ಪ ಜತೆಗೆ ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಅವರೂ ಇದ್ದು ಅಗಲಿದ ಗಾಯಕನಿಗೆ ಅಂತಿಮ ನಮನ ಸಲ್ಲಿಸಿದರು.ರಾಮ್‌ಬಾಗ್ ಕಾಲೋನಿಯ ‘ಕಲಾಶ್ರೀ’ಯಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಜನರು ಸರದಿಯಲ್ಲಿ ನಿಂತು ಪಂಡಿತ್ ಭೀಮ್‌ಸೇನ್ ಜೋಷಿ ಅವರ ಅಂತಿಮ ದರ್ಶನ ಪಡೆದರು.ಹಲವು ಗಣ್ಯರು ಸಹ ಅದರಲ್ಲಿ ಸೇರಿದ್ದರು. ಸಂಜೆ 3 ಗಂಟೆಗೆ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾದಾಗ ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಂಡರು. ಜೋಷಿ ಅವರ ಹಿರಿಯ ಪುತ್ರ ರಾಘವೇಂದ್ರ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ವಿದ್ಯುತ್ ಚಿತಾಗಾರದತ್ತ ಪಾರ್ಥಿವ ಶರೀರವನ್ನು ಸಾಗಿಸಲಾಯಿತು. ಆಗ ಸುತ್ತಮುತ್ತಲೆಲ್ಲ ಪಂಡಿತ್ ಜೋಷಿ ಅವರು ಹಾಡಿದ ಭಜನೆಗಳು ಮತ್ತು ಸಂಗೀತದ ಲಹರಿ ಅನುರಣಿಸುತ್ತಿತ್ತು. ಸಾವಿರಾರು ಮಂದಿ ಮೌನವಾಗಿ ಗಾನಗಾರುಡಿಗನಿಗೆ ವಿದಾಯ ಹೇಳಿದರು.

ಪ್ರತಿಕ್ರಿಯಿಸಿ (+)