ಗುರುವಾರ , ಮೇ 6, 2021
21 °C
108 ಅಂಬ್ಯುಲೆನ್ಸ್ ಚಾಲಕನ ಅವಾಂತರ

ಗಾಬರಿಯಾದ ವಸತಿ ನಿಲಯ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: 108 ಅಂಬ್ಯುಲೆನ್ಸ್ ವಾಹನದ ಚಾಲಕನೊಬ್ಬ ರಾತ್ರಿ ಸಮಯದಲ್ಲಿ ತಾಲ್ಲೂಕಿನ ಮಳಗಿಯ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ.ಇದೇ 17ರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಚಾಲಕ ಶ್ರೀನಿವಾಸ ಎಂಬಾತ ಬಾಲಕಿಯರ ವಸತಿ ನಿಲಯದ ಗೇಟ್ ಹಾರಿ ಒಳಗೆ ಹೋಗಿ ವಸತಿ ನಿಲಯದ ಕೋಣೆಯ ಬಾಗಿಲು ಬಡಿದಿದ್ದಾನೆ. ಹಾಸ್ಟೆಲ್ ಮೇಲ್ವಿಚಾರಕಿ ಹಾಗೂ ರಾತ್ರಿ ಕಾವಲು ಕಾಯುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಹೆದರಿ ಬಾಗಿಲನ್ನು ತೆರೆದಿಲ್ಲ. `ಅಧಿಕಾರಿಗಳು ಬಂದಿದ್ದಾರೆ. ಬಾಗಿಲು ತೆರೆಯದಿದ್ದರೆ ನಿಮ್ಮನ್ನು ಅಮಾನತು ಮಾಡಲು ಹೇಳುತ್ತೇನೆ' ಎಂದು ಹೆದರಿಸಿದಾಗ ಬಾಗಿಲು ತೆರೆದ ಸಿಬ್ಬಂದಿ ಇಷ್ಟು ರಾತ್ರಿಯಲ್ಲಿ ಬಂದಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.`ಗೇಟ್ ಜಿಗಿದು ಬಂದಿದ್ದೇನೆ. ಹೊರಗಡೆ ಅಧಿಕಾರಿ ಬಂದಿದ್ದಾರೆ. ಗೇಟ್ ತೆರೆಯಬೇಕು' ಎಂದು ಒತ್ತಾಯಿಸಿದ.  ಇದರಿಂದ ಹೆದರಿದ ಮಹಿಳಾ ಸಿಬ್ಬಂದಿ ಗೇಟ್ ಬಳಿ ಬಂದು ನೋಡಿದಾಗ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಅವರ ಜೊತೆ ಮಾತನಾಡಿ `ವಸತಿನಿಲಯದ ಗೇಟ್ ಭದ್ರಪಡಿಸಿಕೊಳ್ಳಿ; ಏನಾದರೂ ತೊಂದರೆ ಇದ್ದರೆ ತಿಳಿಸಿ' ಎಂದು ಹೇಳಿ ಹೋಗಿದ್ದಾರೆ ಎನ್ನಲಾಗಿದೆ.ಆಯುಕ್ತರ ಸೂಚನೆ: ಈ ಘಟನೆಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಆಯುಕ್ತರು ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯಿಂದ ಮಾಹಿತಿ ಪಡೆದುಕೊಂಡಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ವರದಿ ನೀಡುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಬಾಲಕಿಯರ ವಸತಿ ನಿಲಯಕ್ಕೆ ತಹಶೀಲ್ದಾರ್ ಬಿ.ಆರ್.ಪಾಟೀಲ ಗುರುವಾರ ಭೇಟಿ ನೀಡಿ ಮಾಹಿತಿ ಪಡೆದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಮೇಟಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವರದಿ ಕಳಿಸಿದ್ದು ಅದರಲ್ಲಿ ಇದೇ 17ರಂದು ಕಚೇರಿಯ ವಾಹನಕ್ಕೆ ಚಾಲಕ ಇಲ್ಲದ್ದರಿಂದ 108 ಅಂಬ್ಯುಲೆನ್ಸ್ ಚಾಲಕ ಶ್ರೀನಿವಾಸನನ್ನು ಮಳಗಿ ಆಸ್ಪತ್ರೆಗೆ ಭೇಟಿ ನೀಡಲು ಕರೆದುಕೊಂಡು ಹೋಗಿದ್ದೆ. ರಸ್ತೆ ಸನಿಹದಲ್ಲಿದ್ದ ಬಾಲಕಿಯರ ವಸತಿ ನಿಲಯದ ಗೇಟ್‌ಗೆ ಬೀಗ ಹಾಕಲಾಗಿರುವುದನ್ನು ಖಚಿತಪಡಿಸಿಕೊಂಡು ಬಾ ಎಂದು ಹೇಳಿ ವಸತಿನಿಲಯದ ನೂರು ಮೀಟರ್ ಅಂತರದಲ್ಲಿ ಕಾರಲ್ಲಿ ಕುಳಿತಿದ್ದೆ. ಆದರೆ ಶ್ರೀನಿವಾಸ ನನ್ನ ಗಮನಕ್ಕೆ ತರದೇ ವಸತಿನಿಲಯದ ಗೇಟ ಹಾರಿ ಒಳಗೆ ಹೋಗಿ ಅಲ್ಲಿನ ಮಹಿಳಾ ಸಿಬ್ಬಂದಿ ವಿಚಾರಿಸಿ ರಾತ್ರಿ ಸಮಯದಲ್ಲಿ ವಿನಾಕಾರಣ ತೊಂದರೆ ಕೊಟ್ಟಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.ಮೂರು ತಿಂಗಳ ಹಿಂದೆ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಬ್ಬರು ಮಧ್ಯರಾತ್ರಿ ಸಮಯದಲ್ಲಿ ಮರ ಹತ್ತಿ ಗಿಳಿ ಹಿಡಿಯಲು ಹೋಗಿ ಒಬ್ಬ ಮೃತಪಟ್ಟು ಇನ್ನೊಬ್ಬ ಗಾಯಗೊಂಡಿದ್ದ ಘಟನೆ ನಡೆದಿದ್ದ ಹಿನ್ನೆಲೆಯಲ್ಲಿ ರಾತ್ರಿ ಸಮಯದಲ್ಲಿ ವಸತಿನಿಲಯದ ಗೇಟಗೆ ಬೀಗ ಹಾಕಿರುವುದನ್ನು ಖಚಿತಪಡಿಸಿಕೊಂಡು ಬಾ ಎಂದು ಹೇಳಿದರೆ ಚಾಲಕ ಶ್ರೀನಿವಾಸ ವಸತಿ ನಿಲಯದ ಸಿಬ್ಬಂದಿಗೆ ತೊಂದರೆ ನೀಡಿ ಕರ್ತವ್ಯಲೋಪ ಎಸಗಿದ್ದಾನೆ ಎಂದು ವರದಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.