ಗಾಯಗೊಂಡ ಕಾಡುಕೋಣ ಉಳಿಸಲು ಯತ್ನ

7

ಗಾಯಗೊಂಡ ಕಾಡುಕೋಣ ಉಳಿಸಲು ಯತ್ನ

Published:
Updated:
ಗಾಯಗೊಂಡ ಕಾಡುಕೋಣ ಉಳಿಸಲು ಯತ್ನ

ಕಳಸ: ಸಮೀಪದ ಎಸ್.ಕೆ.ಮೇಗಲ್ ಗ್ರಾಮದ ಕಾಫಿ ತೋಟವೊಂದರಲ್ಲಿ ಗಾಯಗೊಂಡು ನರಳುತ್ತಿರುವ ಕಾಡುಕೋಣದ ಜೀವ ಉಳಿಸಲು ಪ್ರಯತ್ನ ನಡೆದಿದೆ.



ಮೂರು ದಿನಗಳ ಹಿಂದೆ ಸಂಸೆ ಗ್ರಾಮದ ಎಸ್.ಕೆ.ಮೇಗಲ್‌ನ ಹಡ್ಲು ಯುವರಾಜ ಅವರ ಕಾಫಿ ತೋಟದಲ್ಲಿ ಪತ್ತೆಯಾದ ಕಾಡುಕೋಣ, ಎಡ ಹಿಂಗಾಲು ಗಾಯಗೊಂಡು ನಿಲ್ಲಲಾರದೆ ನೋವಿನಿಂದ ಹೊರಳಾಡುತ್ತಿತ್ತು. ಮೂರು ದಿನಗಳಿಂದ ಆಹಾರವನ್ನೂ ಸೇವಿಸದೆ ನಿತ್ರಾಣಗೊಂಡಿತ್ತು.



ಸೋಮವಾರ ಮಧ್ಯಾಹ್ನ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದಾಗ ಅವರು ಸ್ಥಳಕ್ಕೆ ಧಾವಿಸಿ ಪ್ರಾಣ ಉಳಿಸಲು ಕ್ರಮ ಕೈಗೊಂಡರು. ತೋಟದ ಮಾಲೀಕ ಯುವರಾಜ ಮತ್ತು ಸ್ಥಳೀಯರು ಕಾಡುಕೋಣಕ್ಕೆ ನೀರು ಕುಡಿಸುವ ಯತ್ನಿಸಿದರು.



ಸಂಜೆ ಸ್ಥಳಕ್ಕಾಗಮಿಸಿದ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರದೀಪ್ ಕಾಡುಕೋಣಕ್ಕೆ ನೋವು ನಿವಾರಕ ಔಷಧಿ ನೀಡಿದರು. ಒಂದು ಹಿಂಗಾಲಿನಲ್ಲಿ ಬಲ ಇಲ್ಲದಿದ್ದರೂ ಏಳುವ ಯತ್ನ ಮಾಡಿದ ಕಾಡುಕೋಣ ಒಂದೆರಡು ಹೆಜ್ಜೆ ಹಾಕುವಷ್ಟರಲ್ಲೇ ಕುಸಿದು ಬಿದ್ದಿತು.



ನೀರಿನ ಸೆಲೆ ಇರುವ ಜಾಗದಲ್ಲಿರುವ ಕಾಡುಕೋಣವನ್ನು ಸ್ಥಳಾಂತರಿಸಲು ರಸ್ತೆ ಇಲ್ಲ. ಕಾಡುಕೋಣದ ಗಾಯ ಗುಣಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಉಪ ವಲಯ ಅರಣ್ಯಾಧಿಕಾರಿ ಸೀನಪ್ಪ ಬೋವಿ ಅವರನ್ನು ಸ್ಥಳೀಯರು ಒತ್ತಾಯಿಸಿದರು.



ಮಂಗಳವಾರ ಬೆಳಿಗ್ಗೆ ಮತ್ತೆ ಸ್ಥಳಕ್ಕೆ ತೆರಳಲಿರುವ ಪಶು ವೈದ್ಯರು ಕೋಣದ ಸ್ಥಿತಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು. ಕುದುರೆಮುಖದ ಭದ್ರಾ ನೇಚರ್ ಕ್ಯಾಂಪ್‌ಗೆ ಕೋಣವನ್ನು ಕೊಂಡೊಯ್ದು ಶುಶ್ರೂಷೆ ನೀಡುವುದು ಅಥವಾ ಸ್ಥಳದಲ್ಲೇ ಕೋಣ ಮುಂದಕ್ಕೆ ಸರಿಯದಂತೆ ಸೂಕ್ತ ತಡೆ ನಿರ್ಮಿಸಿ ಚಿಕಿತ್ಸೆ ನೀಡಿದಲ್ಲಿ ಕೋಣ ಬದುಕುವ ಸಾಧ್ಯತೆ ಇದೆ ಎಂದು ಡಾ. ಪ್ರದೀಪ್ `ಪ್ರಜಾವಾಣಿ~ಗೆ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry