ಸೋಮವಾರ, ಜೂನ್ 14, 2021
27 °C

ಗಾಯದ ಸಂಕಷ್ಟ!

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

     ಘಟನೆ-1

ಕೇವಲ 12 ಗಂಟೆ ಮಾತ್ರ ಬಾಕಿ. ಟೆನಿಸ್ ಪ್ರಿಯರು ಕಾತರದಿಂದ ಕಾಯುತ್ತಿದ್ದ ಚೆನ್ನೈ ಓಪನ್ ಟೂರ್ನಿ ಆರಂಭವಾಗಲಿತ್ತು. ಅಲ್ಲಿ ಕಾದಿತ್ತು ನಿರಾಸೆ!ಸ್ಥಳೀಯ ಅಭಿಮಾನಿಗಳ ಎದುರು ಪ್ರತಿಭೆ ಪ್ರದರ್ಶಿಸಬೇಕು ಎನ್ನುವ ಕನಸು ಆ ಆಟಗಾರನದ್ದಾಗಿತ್ತು. ಅದಕ್ಕಾಗಿ ಹಲವು ದಿನಗಳಿಂದ ಹಗಲಿರುಳು ಎನ್ನದೆ ಅಭ್ಯಾಸವನ್ನೂ ನಡೆಸಿದ್ದರು. ತವರು ನೆಲದಲ್ಲಿ ನೀಡಬೇಕಾದ ಪ್ರದರ್ಶನದ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆಯನ್ನು ಆ ಆಟಗಾರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾಧ್ಯಮದವರ ಎದುರು ಹಂಚಿಕೊಂಡಿದ್ದರು.ಆತ ಸೋಮದೇವ್ ದೇವವರ್ಮನ್. ಸೋಮ್ ಈ ವೇಳೆ ಘೋಷಣೆಯೊಂದನ್ನು ಪ್ರಕಟಿಸಿದರು. `ಭುಜದ ನೋವಿನ ಕಾರಣ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದೇನೆ. ಆಡಲು ಆಗುತ್ತಿಲ್ಲ ಎನ್ನುವ ಬೇಸರವೂ ನನಗಿದೆ~ ಎಂದು ಹೇಳಿದ್ದರು. ಆವತ್ತಿನಿಂದ ಇಂದಿನವರೆಗೂ ಅವರು ಕಣಕ್ಕಿಳಿದಿಲ್ಲ. ಏಕೆಂದರೆ, ಅವರ ಗಾಯದ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.   ಘಟನೆ-2

ಇದು ಭಾರತದ ಇನ್ನೊಬ್ಬ ಟೆನಿಸ್ ತಾರೆ ಲಿಯಾಂಡರ್ ಪೇಸ್ ಕಥೆ. ಪೇಸ್ ಕಳೆದ ಸಲದ ಅಮೆರಿಕ ಓಪನ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಭಾರತದ ಆಟಗಾರನ ಜೊತೆಗಿದ್ದವರು ರಷ್ಯಾದ ಎಲೆನಾ ವೆಸ್ನಿನಾ.ಇಬ್ಬರೂ ಉತ್ತಮವಾಗಿ ಆಡುತ್ತಿದ್ದರು. ಪ್ರಶಸ್ತಿ ಜಯಿಸುವ ವಿಶ್ವಾಸವನ್ನೂ ಹೊಂದಿದ್ದರು.

ಆದರೆ, ನಾಲ್ಕರ ಘಟ್ಟದ ಪಂದ್ಯ ಕೆಲ ಹೊತ್ತಿನಲ್ಲಿ ಆರಂಭವಾಗಬೇಕು ಎನ್ನುವಾಗ ಗಾಯದ ಸಮಸ್ಯೆ ಅನುಭವಿಸಿದರು. ಈ ಕಾರಣದಿಂದ ಆಡದೇ ತವರಿಗೆ ಹಿಂತಿರುಗಿದರು.  ಆರು ಸಲ ಮಿಶ್ರ ಡಬಲ್ಸ್‌ನಲ್ಲಿ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಆಗಿರುವ ಪೇಸ್‌ಗೆ ಟೂರ್ನಿಯುದ್ದಕ್ಕೂ ಕಾಡಿದ್ದು ಗಾಯದ ಸಮಸ್ಯೆ. ಇದರಿಂದ ಡೇವಿಸ್ ಕಪ್‌ಗೆ ಆಡುವ ಅವಕಾಶದಿಂದ ವಂಚಿತರಾದರು.-ಹೀಗೆ ಗಾಯದ ಸಂಕಷ್ಟ ಕೇವಲ ಟೆನಿಸ್ ಆಟಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರಿಕೆಟ್, ಹಾಕಿ, ಬ್ಯಾಡ್ಮಿಂಟನ್ ಹೀಗೆ ಎಲ್ಲಾ ಕ್ರೀಡೆಗಳಲ್ಲಿ ಆಟಗಾರರನ್ನು ಬೆನ್ನು ಹತ್ತಿದೆ.

ಆರಂಭಕ್ಕೂ ಮುನ್ನ ಸಾಕಷ್ಟು ವಿವಾದ ಹುಟ್ಟು ಹಾಕಿದ ವಿಶ್ವ ಹಾಕಿ ಸರಣಿಯಲ್ಲಿ ಪಾಲ್ಗೊಂಡ ಆಟಗಾರರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.ಇಂದು ದೆಹಲಿ, ನಾಳೆ ಜಲಂಧರ್, ಮತ್ತೊಂದು ದಿನ ಬೆಂಗಳೂರು. ಹೀಗೆ ನಿರಂತರ ಊರು ಸುತ್ತುವ ಹಾಕಿ ಆಟಗಾರರಿಗೆ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಒಂದು ಪಂದ್ಯದಲ್ಲಿ ಕೆಲವರು ಹೊರಗಿದ್ದರೆ, ಇನ್ನೂ ಕೆಲವರು ಗಾಯದ ಮಧ್ಯೆಯೂ ಆಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ.ಕರ್ನಾಟಕ ಲಯನ್ಸ್ ತಂಡದ ಸ್ಥಿತಿ ನೋಡಿದರೆ, ಈ ಸಮಸ್ಯೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಸರಣಿಯಲ್ಲಿ ನೀಡಿರುವ ಕಳಪೆ ಪ್ರದರ್ಶನವೂ ಇದಕ್ಕೆ ಸಾಕ್ಷಿ ಒದಗಿಸುತ್ತದೆ. ನಿರಂತರ ಪ್ರವಾಸ, ಬಿಡುವಿಲ್ಲದ ವೇಳಾಪಟ್ಟಿ ಇದಕ್ಕೆ ಕಾರಣ. ಈ ಮಾತನ್ನು ಕರ್ನಾಟಕ ತಂಡದ ನಾಯಕ ಅರ್ಜುನ್ ಹಾಲಪ್ಪ ಸಹ ಒಪ್ಪುತ್ತಾರೆ.`ಆಟ ಮುಗಿಯುತ್ತಿದ್ದಂತೆ ಇನ್ನೊಂದು ಊರಿಗೆ ಗಂಟುಮೂಟೆ ಕಟ್ಟಬೇಕು. ಆಟಗಾರರಿಗೆ ಕನಿಷ್ಠ ಏಳರಿಂದ-ಎಂಟು ಗಂಟೆ ನಿದ್ದೆಯಾದರೂ ಬೇಕು. ಆದರೆ, ಸರಿಯಾಗಿ ಐದು ಗಂಟೆ ನಿದ್ದೆ ಮಾಡಲು ಸಹ ಆಗುತ್ತಿಲ್ಲ~ ಎಂದು ಕೊಡಗಿನ ಆಟಗಾರ ಬೇಸರ ವ್ಯಕ್ತಪಡಿಸುತ್ತಾರೆ. ಕೆಲ ವರ್ಷಗಳಿಂದ ಸಾನಿಯಾ ಮಿರ್ಜಾ ಸಹ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಸಿಂಗಲ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಆಗುತ್ತಿಲ್ಲ. ಆದರೆ, ಡಬಲ್ಸ್‌ನಲ್ಲಿ ಈ ಸಮಸ್ಯೆ ಇಲ್ಲ.ನಿರಂತರವಾಗಿ ಆಡುವುದು, ಪ್ರಯಾಣ ಮಾಡುವುದು, ಆಟಗಾರರಿಗೆ ಬಳಲಿಕೆ ಉಂಟು ಮಾಡುತ್ತದೆ. ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರ ಪ್ರಭಾವ ಆಟದ ಮೇಲೂ ಆಗುತ್ತದೆ. ಇದರಿಂದ ತಮ್ಮ ವೃತ್ತಿ ಜೀವನಕ್ಕೂ ತೆರೆ ಏಳೆಯಬೇಕಾದ ಅನಿವಾರ್ಯತೆ ಉಂಟಾಗಬಹುದು!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.