ಶನಿವಾರ, ನವೆಂಬರ್ 23, 2019
18 °C
ಲಯ - ಲಾಸ್ಯ

ಗಾಯನನೃತ್ಯದ ಗುಂಗು

Published:
Updated:

ಇದೀಗ ಎಲ್ಲೆಡೆಯೂ ಶ್ರೀರಾಮನವಮಿ ಸಂಗೀತೋತ್ಸವದ ಗುಂಗು. ರಾಮಸೇವಾ ಮಂಡಳಿಗಳು ಹಾಗೂ ಮಂದಿರಗಳಲ್ಲೆಲ್ಲಾ ಸಂಗೀತದ ನಿನಾದ. ವರ್ಣರಂಜಿತವಾಗಿ ಸಿಂಗಾರಗೊಂಡ ಚಪ್ಪರದ ಅಡಿಯಲ್ಲಿ ಸಡಗರದಿಂದ ನಡೆವ ಕಛೇರಿಗಳ ನಾದ ಸಂಭ್ರಮದಲ್ಲಿ ಸಂಗೀತಪ್ರಿಯರು ತಮ್ಮನ್ನು ತಾವೇ ಮರೆಯುತ್ತಿದ್ದಾರೆ. ಸಂಗೀತೋತ್ಸವಗಳು ಕೆಲವೆಡೆ ಯುಗಾದಿಯಿಂದಲೇ ಆರಂಭವಾದರೆ, ಬಹಳಷ್ಟು ಕಡೆ ಶ್ರೀರಾಮನವಮಿ (ಏ.19)ಯಂದೇ ಆರಂಭವಾಗುವುದು ವಾಡಿಕೆ. ಮಲ್ಲೇಶ್ವರದ ಎಂಟನೇ ಅಡ್ಡರಸ್ತೆಯ ಶ್ರೀ ರಾಘವೇಂದ್ರ ಮತ್ತು ಶ್ರೀ ಆಂಜನೇಯಸ್ವಾಮಿ ದೇವಾಲಯ ಹಾಗೂ ಶ್ರೀಕಾಂತಂ ಸಂಗೀತ ಸಭೆ ಮತ್ತು ಸಪ್ತಗಿರಿ ಭಜನಾ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ `ಹದಿಮೂರನೆ ಶ್ರೀರಾಮನವಮಿ ಸಂಗೀತೋತ್ಸವ' ಯುಗಾದಿ ಹಬ್ಬದಂದು ಆರಂಭವಾಯಿತು.ಹಿರಿಯ ಗಾಯಕಿ ವಾರುಣಿ ಜಯತೀರ್ಥಾಚಾರ್ ಇದರ ನೇತೃತ್ವ ವಹಿಸಿದ್ದರು. ಎರಡನೆಯ ದಿನ ಹಿರಿಯ ಗಾಯಕಿಯರಾದ ಪಿ.ರಮಾ ಮತ್ತು ಆರ್.ಚಂದ್ರಿಕಾ ಅವರ ದ್ವಂದ್ವ ಗಾಯನ ಕಛೇರಿ ನಡೆಯಿತು. ಸಂಕ್ಷಿಪ್ತತೆ ಮತ್ತು ಸಾರಪೂರ್ಣತೆ ಅವರ ಕಛೇರಿಯ ಪ್ರಧಾನ ಅಂಶಗಳಾಗಿದ್ದವು. ಇಬ್ಬರೂ ಪ್ರಾವೀಣ್ಯವುಳ್ಳ ಗಾಯಕಿಯರು. ಪರಸ್ಪರ ಪೂರಕ ಕಂಠಗಳು ಶ್ರವಣ ಸುಖ ನೀಡಿದವು. ಉತ್ತೇಜಿಸುವ ವಿನಿಕೆ ಮತ್ತು ಗೊಂದಲ ರಹಿತ ಲಯ ಸೊಬಗು ಸಾಮಾನ್ಯ ಕೇಳುಗರನ್ನು ಪ್ರಭಾವಿಸಿತು.ತಮ್ಮ ಗುರುಗಳಾದ ಗಾಯಕಿ ಪ್ರೊ.ನಾಗಮಣಿ ಶ್ರೀನಾಥ್ ಅವರ ಅಪೂರ್ವ `ಆಂದೋಳಿಕಾ ವರ್ಣ'ದ (ಹರಿಭಕ್ತಿ ಸಾರ) ಚಲನಾತ್ಮಕ ನಿರೂಪಣೆಯ ನಂತರ `ಪಾಪನಾಶಂಶಿವನ್' ಅವರ  `ಗಜವದನ (ಶ್ರೀರಂಜಿನಿ) ಕತಿ' ಲಘು ಸ್ವರಪ್ರಸ್ತಾರದಿಂದ ಶೋಭಿಸಿತು. ಭಾವೋತ್ಕರ್ಷದ `ನೀದಯರಾ'ದ (ವಸಂತಭೈರವಿ, ತ್ಯಾಗರಾಜ) ನಂತರ ಚಂದ್ರಿಕಾ ಅವರು ಶುದ್ಧ ಧನ್ಯಾಸಿ ರಾಗವನ್ನು ಆಲಾಪಿಸಿದರು.`ಭಜಿಸಿ ಬದುಕೆಲೋ ಮಾನವ' ಪದದ ಗಾಯನ ಆಪ್ತವಾಗಿತ್ತು. ದ್ರುತಗತಿಯಲ್ಲಿ ಕಲ್ಪನಾಸ್ವರಗಳನ್ನು `ಬಂಟು ರೀತಿ' (ಹಂಸನಾದ) ಕತಿಗೆ `ಹಾಡಿ ಕರೆದರೆ ಬರಬಾರದೇ' ಎಂದು ಗುರುವನ್ನು ಅವರು ಕೇಳಿಕೊಂಡ ಪರಿ ಇಷ್ಟವಾಯಿತು. ರಮಾ ಅವರು ಹಂಸಾನಂದಿ ರಾಗದ ಸೂಕ್ಷ್ಮತೆಗಳನ್ನು ನವಿರಾಗಿ ತಮ್ಮ ಲಘು ವಿಸ್ತಾರದಲ್ಲಿ ತೋರಿದರು. ಸಹಜ ಪ್ರವಾಹ, ರೂಪ ಮತ್ತು ವಿನ್ಯಾಸಗಳಲ್ಲಿ ಇಬ್ಬರ ಕಂಠಗಳು ಐಕ್ಯವಾಗಿ `ಈ ಪರಿಯ ಸೊಬಗು' ರಚನೆಯನ್ನು ನೆರವಲ್ (ಪಲ್ಲವಿಯ ಸಾಲನ್ನೇ ನಾನಾ ಮಾದರಿಗಳಲ್ಲಿ ಇಬ್ಬರೂ ಹಾಡಿದುದು ರೋಚಕವೆನಿಸಿತು) ಮತ್ತು ಸ್ವರಗಳೊಂದಿಗೆ ಸುಂದರಗೊಳಿಸಿದರು.ಜಿಎನ್‌ಬಿ ಅವರ  `ಶ್ರೀಚಕ್ರರಾಜನಿಲಯೆ' (ಶಿವಶಕ್ತಿ)ಯನ್ನು ಸ್ತುತಿಸಿ ಖರಹರಪ್ರಿಯರಾಗವನ್ನು ಹಂಚಿಕೊಂಡು ಹರಡಿ `ರಾರಾ ರಾಎನಿ' ಕತಿಯನ್ನು ನೆರವಲ್ ಹಾಗೂ ಸ್ವರವಿಸ್ತಾರದಿಂದ ಅಂದಗಾಣಿಸಿದರು. ಮತ್ತೂರು ಶ್ರೀನಿಧಿ (ಪಿಟೀಲು), ಎಚ್.ಎಸ್. ಸುಧೀಂದ್ರ (ಮೃದಂಗ) ಮತ್ತು ಸುಕನ್ಯಾ ರಾಂಗೋಪಾಲ್ (ಘಟ) ಅವರ ಪಕ್ಕವಾದ್ಯ ಮುತುವರ್ಜಿ ಶ್ಲಾಘನೀಯ.ಪ್ರವಾಹೀ ಚಲನೆಗಳು

ಮಲ್ಲೇಶ್ವರದ ಸೇವಾ ಸದನದಲ್ಲಿ ನಡೆದ ಯುವ ಸಂಭ್ರಮದಲ್ಲಿ ನೃತ್ಯ ನಾಟಕ ಮನ ರಂಜಿಸಿತು. ಶಿವಪ್ರಿಯ ನೃತ್ಯ ಶಾಲೆಯ ಗುರು ಡಾ. ಸಂಜಯ್ ಶಾಂತಾರಾಂ ಅವರ ಸಂಯೋಜನೆ ಮತ್ತು ನಿರ್ದೇಶನದಲ್ಲಿ ಚಿಕ್ಕ ಹುಡುಗಿಯರಿಂದ ಹಿಡಿದು ಯುವ ಕಲಾವಿದರು ನವರಸ ಕೃಷ್ಣನ ಬೆಡಗನ್ನು ಪ್ರದರ್ಶಿಸಿದರು.ನವರಸಗಳ ನವಿರು ನಾಜೂಕುಗಳು, ಕಲಾಮಯತೆ, ಸೌಂದರ್ಯ ಮತ್ತು ತಾಂತ್ರಿಕತೆಗಳನ್ನು ಕೃಷ್ಣನ ಜೀವನಗಾಥೆಯ ವಿವಿಧ ಪ್ರಸಂಗಗಳ ಮೂಲಕ ತಮ್ಮ ನೃತ್ಯ, ನೃತ್ತ ಮತ್ತು ಅಭಿನಯದ ಮೂಲಕ ಕಲಾವಿದರು ರೇಖಾಂಕಿತಗೊಳಿಸಿದರು. ನಿರರ್ಗಳವಾಗಿ ಹರಿದಾಡಿದ ಅವರ ಚಲನೆಗಳು, ಪ್ರವಾಹೀ ಲಯ, ಕುಂದದ ಉತ್ಸಾಹ ಮತ್ತು ಪರವಶದ ಅಭಿನಯ ರಸಪ್ರವಾಹಕ್ಕೆ ಅನುಕೂಲಕರವಾಗಿದ್ದವು.ಹಾಗಾಗಿ ಡಾ. ಸಂಜಯ್ ಶಿಷ್ಯರಾದ ಗೋಪಾಲಕೃಷ್ಣ (ಕೃಷ್ಣ), ರೂಪೇಶ್ (ಕಂಸ ಮತ್ತು ಅರ್ಜುನ), ಅಂಜಲಿ ಶ್ರೀಕಾಂತ್ (ರಾಧಾ ಮತ್ತು ಕಾಳಿಂಗ), ಸ್ನೇಹಾ ಭಾಗವತ್ (ಕುಬ್ಜೆ), ಸುಶನ್ಯ ಪ್ರಕಾಶ್ (ಯಶೋದಾ), ಸ್ಟೆಲ್ಲಾ ಮತ್ತು ನಮಿತಾ (ಪೂತನಿ) ಅವರು ಆಯಾ ಪಾತ್ರಗಳಿಗೆ ತಮ್ಮ ಸೊಗಸಾದ ಅಭಿನಯದ ಮೂಲಕ ಜೀವ ತುಂಬಿದರು.ಶೃಂಗಾರ (ಗೋಪಿಯರೊಡನೆ ರಾಸಲೀಲೆ), ಭಯಾನಕ (ವಸುದೇವ-ದೇವಕಿಯರ ಮಕ್ಕಳನ್ನು ಕಂಸನು ಕೊಲ್ಲುವುದು), ಭೀಭತ್ಸ (ಪೂತನಿಯ ಕರಾಳರೂಪ), ಅದ್ಭುತ (ಗೋವರ್ಧನಗಿರಿಯ ಉದ್ಧರಣ), ವೀರ (ಕಾಳಿಂಗ ಮರ್ದನ), ಹಾಸ್ಯ (ಗೋಪಿಕಾ ವಸ್ತ್ರಾಪಹರಣ), ಕರುಣ (ಕುಬ್ಜೆಯ ಉದ್ಧಾರ) ಮತ್ತು ಶಾಂತ (ವಿಶ್ವರೂಪದರ್ಶನ) ರಸಗಳ ವಿಶದೀಕರಣ ಆಕರ್ಷಕ ವೇಷ ಭೂಷಣಗಳು, ರಂಗ ಪರಿಕರಗಳು, ಸಮುಚಿತ ಸಂಗೀತ ಸಹಕಾರ, ಭರತನಾಟ್ಯ ಪ್ರಧಾನ ಚಲನೆಗಳು, ರಸ ಭಾವಕ್ಕೆ ತಕ್ಕಂತೆ ಲಯದ ನಿರ್ವಹಣೆ ಮುಂತಾದ ವಿಶೇಷತೆಗಳ ಸಮನ್ವಯವೆನಿಸಿತು.ತಾಯಿಗೆ ತಕ್ಕ ಮಗಳು

ತಾಯಿಗೆ ತಕ್ಕ ಮಗಳು ತಾನೆಂಬುದನ್ನು ಗಾಯಕಿ ದೀಪ್ತಿ ಶ್ರೀನಾಥ್ ತಮ್ಮ ಗಾಯನದ ಮೂಲಕ ಪ್ರಮಾಣೀಕರಿಸಿದರು. ಅವರ ತಾಯಿ ಪಿ.ರಮಾ ಸಂಗೀತ, ನೃತ್ಯ ಕ್ಷೇತ್ರಗಳಲ್ಲಿ ಬಹು ಬೇಡಿಕೆಯುಳ್ಳ ಗಾಯಕಿ ಹಾಗೂ ಸಂಗೀತ ಸಂಭ್ರಮದ ರೂವಾರಿ. ಯುವ ಸಂಭ್ರಮದ ಸುವ್ಯವಸ್ಥಿತ ಆಯೋಜನೆಯ ಮೂಲಕ ತಾನೊಬ್ಬ ಸಮರ್ಥ ಸಂಘಟಕಿ ಎಂಬುದನ್ನೂ ತೋರಿದ ದೀಪ್ತಿ ಪಕ್ಕವಾದ್ಯಗಾರರ ಸಮೂಹವೊಂದನ್ನೇ ಕಲೆ ಹಾಕಿ ಅವರೊಂದಿಗೆ ಮಾಧುರ್ಯ, ಲಯ ಮತ್ತು ಕಲಾತ್ಮಕವಾಗಿ ಹಾಡಿ ಗಮನ ಸೆಳೆದರು.ಹಿರಿಯ ಮೃದಂಗ ವಾದಕ ಎಸ್.ವಿ. ಬಾಲಕೃಷ್ಣ ನಿರ್ದೇಶನದಲ್ಲಿ ವೆಂಕಟೇಶ್ ಜೋಸ್ಯರ್ (ಪಿಟೀಲು), ಅಮಿತ್ ಕುಮಾರ್, ವಿನೋದ್‌ಶಾಂ (ಮೃದಂಗ), ಸುನಾದ್ (ಖಂಜರಿ), ರಮೇಶ್ (ಘಟ), ಲಕ್ಷ್ಮೀನಾರಾಯಣ (ಮೋರ್ಚಿಂಗ್), ಆದರ್ಶ ಶೆಣೈ, ಕಾರ್ತಿಕ್ (ತಬಲಾ), ಗೋಪೀಶ್ರವಣ್ (ಡ್ರಮ್ಸ), ಕಾರ್ತಿಕ್ ವೈಧಾತ್ರಿ (ರಿದಂಪ್ಯಾಡ್ಸ್), ಭಾಸ್ಕರ್ (ತಾಳ) ಮತ್ತು ವಿನಯ್ ನಾಗರಾಜ್ (ಢೋಲಕ್) ಅವರನ್ನೊಳಗೊಂಡಿದ್ದ ಯುವ ಪಕ್ಕವಾದ್ಯಗಾರರ ತಂಡ ವಿಜೃಂಭಿಸಿತು. ದೀಪ್ತಿ ಅವರ ಕಂಠ, ಪಲುಕುಗಳು ಹಾಗೂ ಗಾಯನ ಶೈಲಿ ಅವರ ತಾಯಿಯನ್ನೇ ನೆನಪಿಸಿತು.ಸಾವೇರಿ ವರ್ಣದ ಶುಭಾರಂಭ. ಅಪರೂಪವಾಗಿ ಕೇಳಿ ಬಂದ ಜಯಚಾಮರಾಜೇಂದ್ರ ಒಡೆಯರ್ ಅವರ ಶ್ರೀ ಜಾಲಂಧರ (ಗಂಭೀರನಾಟ) ರಚನೆ `ಗಂಭೀರನಾಟ ಮರಕತಮಣಿ ಶೋಭಿತ ಲಿಂಗಂ' ಎಂಬಲ್ಲಿ ಸಾಹಿತ್ಯ ಮತ್ತು ಸ್ವರಗಾಯನದಿಂದ ನಾದಮಯ ವಾತಾವರಣವನ್ನು ಸೃಷ್ಟಿಸಿದರು. ನಿರೀಕ್ಷೆಯಂತೆ ಕೀರ್ವಾಣಿ ರಾಗದಲ್ಲಿ ಸ್ವರಪಲ್ಲವಿಯನ್ನು ದೀಪ್ತಿ ಪಲ್ಲವಿಸಿದರು.ಕೌಶಲ್ಯಯುತ ರಾಗ ಮತ್ತು ತಾನಗಳನ್ನು ಹಾಡಿ ಸ್ವರಪಲ್ಲವಿಯನ್ನು ವಿವಿಧ ಲಯ ಮತ್ತು ವೇಗಮಾದರಿಗಳಲ್ಲಿ ನಿರೂಪಿಸಿ ಕಲ್ಯಾಣಿ, ಹಿಂದೋಳ ಮತ್ತು ಮಧ್ಯಮಾವತಿ ರಾಗಗಳ ಮಾಲಿಕೆಯನ್ನು ಅದಕ್ಕೆ ತೊಡಿಸಿದರು. ಲಯ ಪಕ್ಕವಾದ್ಯಗಾರರು ತಮಗೆ ದೊರೆತ ಲಯ ವಿನ್ಯಾಸದ ಸರದಿಯಲ್ಲಿ ಜೋಶ್‌ನಿಂದ ಪಾಲ್ಗೊಂಡು ಪೂರ್ವಾಭ್ಯಾಸದಂತೆ ಅನುರಣಿಸಿದ ಗಟ್ಟಿ ಲಯ ಮಾದರಿಗಳನ್ನು ಸೃಷ್ಟಿಸಿದರು.

-

ಪ್ರತಿಕ್ರಿಯಿಸಿ (+)