ಶುಕ್ರವಾರ, ಆಗಸ್ಟ್ 7, 2020
26 °C

ಗಾಲಿ ಸೋಮಶೇಖರ ರೆಡ್ಡಿ ಸುರೇಶ್‌ಬಾಬು ಶೀಘ್ರ ಸೆರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಲಿ ಸೋಮಶೇಖರ ರೆಡ್ಡಿ ಸುರೇಶ್‌ಬಾಬು ಶೀಘ್ರ ಸೆರೆ?

ಹೈದರಾಬಾದ್: `ಜಾಮೀನಿಗಾಗಿ ಲಂಚ~ ಪ್ರಕರಣದ ತನಿಖೆ ನಡೆಸುತ್ತಿರುವ ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಕರ್ನಾಟಕದ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ ಮತ್ತು ಟಿ.ಎಚ್. ಸುರೇಶ್ ಬಾಬು ಅವರ ಮೇಲೆ ನಿಗಾ ನೋಟಿಸ್ ಹೊರಡಿಸಿದ್ದು, ಇವರು ಬಂಧನ ಸನ್ನಿಹಿತವೆಂಬಂತೆ ತೋರುತ್ತಿದೆ. `ಜಾಮೀನಿಗಾಗಿ ಲಂಚ~ ಕುರಿತಂತೆ ಎಸಿಬಿ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಮೊದಲ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರ ಸೋದರ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸೋಮಶೇಖರ ರೆಡ್ಡಿ ಮತ್ತು ರೆಡ್ಡಿ ಸೋದರರ ಆಪ್ತರಾದ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎಚ್. ಸುರೇಶ್ ಬಾಬು ಅವರ ಹೆಸರೂ ಇದೆ.ಈ ಪ್ರಕರಣದ ಇತರ ಆರೋಪಿಗಳನ್ನು ಎಸಿಬಿ ಬಂಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಈ ಶಾಸಕದ್ವಯರು ದೇಶದಿಂದ ಹೊರಹೋಗದಂತೆ ತಡೆಯುವ ಉದ್ದೇಶದಿಂದ ಈ ನೋಟಿಸ್ ಜಾರಿ ಮಾಡಲಾಗಿದೆ.`ಕರ್ನಾಟಕದ ಶಾಸಕರು ದೇಶದಿಂದ ಹೊರಹೋಗದಂತೆ ನಿಗಾ ಇರಿಸಲು ಎಲ್ಲಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ನೋಟಿಸ್ ಪ್ರತಿ ರವಾನಿಸಲಾಗಿದೆ. ಇದೊಂದು ಸಹಜ ಪ್ರಕ್ರಿಯೆ~ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.ಈ ಇಬ್ಬರು ಶಾಸಕರನ್ನು ಬಂಧಿಸಲು ಎಸಿಬಿ ವಿಳಂಬ ಮಾಡುತ್ತಿದೆ ಎನ್ನಲಾಗಿದೆ. ಜೊತೆಗೆ ಈ ಶಾಸಕರು ಬೇರೆ ರಾಜ್ಯದವರಾದ ಕಾರಣ ಅವರನ್ನು ಬಂಧಿಸಲು ತಾಂತ್ರಿಕ ಸಮಸ್ಯೆಯೂ ಇದೆ ಎಂದು ಹೇಳಲಾಗುತ್ತಿದೆ.ಆದರೆ, ಇದನ್ನು ತಳ್ಳಿಹಾಕಿರುವ ಎಸಿಬಿ ಅಧಿಕಾರಿಗಳು, `ಯಾವುದೇ ತನಿಖಾ ಸಂಸ್ಥೆಗಳಂತೆ ಎಸಿಬಿಕೂಡ ಆರೋಪಿಗಳನ್ನು ದೇಶದ ಯಾವ ಭಾಗದಲ್ಲಿ ಬೇಕಾದರೂ ಬಂಧಿಸಬಹುದು. ಶಾಸಕರನ್ನು ಬಂಧಿಸುವ ಸಂದರ್ಭದಲ್ಲಿ ಅಧಿವೇಶನ ನಡೆಯುತ್ತಿದ್ದರೆ ಸಂಬಂಧಿಸಿದ ಶಾಸನಸಭೆಯ ಸ್ವೀಕರ್ ಅವರಿಗೆ ಈ ಬಗ್ಗೆ ಮಾಹಿತಿ ಕೊಡಬೇಕಾಗುತ್ತದೆ~ ಎಂದಿದ್ದಾರೆ.`ಈ ಪ್ರಕರಣದಲ್ಲಿ ಶಾಸಕರ ಬಗ್ಗೆ ಕೆಲವು ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದೇವೆ. ಲಂಚ ಹಣದ ಮೂಲ ಕುರಿತೂ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ~ ಎಂದೂ ಅವರು ಹೇಳಿದ್ದಾರೆ.ಈ ಮಧ್ಯೆ, ಈ ಶಾಸಕರ ನಿಕಟವರ್ತಿಯಾದ ಮತ್ತು ರೆಡ್ಡಿ ಸೋದರರ ಸಂಬಂಧಿ ದಶರಥರಾಮಿ ರೆಡ್ಡಿ ಅವರನ್ನು ಎಸಿಬಿ ಶುಕ್ರವಾರ ಬಂಧಿಸಿದೆ. ಪ್ರಕರಣದ ಮತ್ತೊಬ್ಬ ಆರೋಪಿ ವಕೀಲ ಆದಿತ್ಯ, ಗುರುವಾರ ಕೋರ್ಟ್‌ಗೆ ಶರಣಾದರು.ಎಸಿಬಿ ದಾಖಲಿಸಿಕೊಂಡಿರುವ ಮೊದಲ ಪ್ರಕರಣದಲ್ಲಿ ಅಮಾನತುಗೊಂಡಿರುವ ಸಿಬಿಐ ನ್ಯಾಯಾಧೀಶ ಟಿ. ಪಟ್ಟಾಭಿರಾಮ ರಾವ್ ಮತ್ತು ಅವರ ಪುತ್ರ ರವಿ ಚಂದ್ರ, ನಿವೃತ್ತ ನ್ಯಾಯಾಧೀಶ ಟಿ.ವಿ. ಚಲಪತಿ ರಾವ್, ರೌಡಿ ಪಟ್ಟಿಯಲ್ಲಿರುವ ಯಾದಗಿರಿ ರಾವ್, ವಕೀಲ ಆದಿತ್ಯ, ರೆಡ್ಡಿ ಸೋದರರ ಸಂಬಂಧಿ ದಶರಥರಾಮಿ ರೆಡ್ಡಿ ಹಾಗೂ ಕರ್ನಾಟಕದ ಇಬ್ಬರು ಶಾಸಕರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ. ಇವರ ವಿರುದ್ಧ ಜನಾರ್ದನ ರೆಡ್ಡಿಗೆ ಜಾಮೀನು ದೊರಕಿಸಿಕೊಡಲು ಅಕ್ರಮ ಮಾರ್ಗ ಅನುಸರಿಸಿದ್ದು ಮತ್ತು ಇದಕ್ಕೆ ಸಂಚು ರೂಪಿಸಿದ ಆಪಾದನೆ ಹೊರಿಸಲಾಗಿದೆ.ಎರಡನೇ ಪ್ರಕರಣದಲ್ಲಿ ಅಮಾನತುಗೊಂಡಿರುವ ನ್ಯಾಯಾಧೀಶರಾದ ಪ್ರಭಾಕರ ರಾವ್, ಲಕ್ಷ್ಮೀನರಸಿಂಹ ರಾವ್, ಅವರ ಆಪ್ತ ಸೂರ್ಯಪ್ರಕಾಶ ರಾವ್ ಅವರ ಹೆಸರಿದೆ. ಇವರು ರೆಡ್ಡಿ ಬಳಗದ ಪರವಾಗಿ ಸಿಬಿಐ ನ್ಯಾಯಾಧೀಶರಿಗೆ ಲಂಚದ ಆಮಿಷ ಒಡ್ಡಲು ಮಧ್ಯವರ್ತಿಗಳಾಗಿದ್ದರು. ಇವರ ಪ್ರಯತ್ನ ವಿಫಲವಾಗಿದ್ದರೂ ಜಾಮೀನಿಗಾಗಿ ಅಕ್ರಮ ಮಾರ್ಗ ಹಿಡಿದಿದ್ದು ಮತ್ತು ಅದಕ್ಕೆ ಸಂಚು ನಡೆಸಿದ ಆರೋಪ ಹೊರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.