ಶನಿವಾರ, ಜೂನ್ 12, 2021
28 °C

ಗಾಲ್ಫ್: ಫೈನಲ್‌ನಲ್ಲಿ ಎಡವಿದ ಬೆಂಗಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಲ್ಫ್: ಫೈನಲ್‌ನಲ್ಲಿ ಎಡವಿದ ಬೆಂಗಳೂರು

ಬೆಂಗಳೂರು: ನವರತ್ನ ಅಹಮದಾಬಾದ್ ತಂಡ ಇಲ್ಲಿ ಕೊನೆಗೊಂಡ ಲೂಯಿಸ್ ಫಿಲಿಪ್ ಕಪ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತನ್ನದಾಗಿಸಿಕೊಂಡಿತು.ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ವಿನೋದ್ ಕುಮಾರ್, ಮಿಥುನ್ ಪೆರೇರಾ ಮತ್ತು ವಿಕ್ರಾಂತ್ ಚೋಪ್ರಾ ಅವರನ್ನೊಳಗೊಂಡ ಅಹಮದಾಬಾದ್ ತಂಡ 3-0 ರಲ್ಲಿ ಪುರವಂಕರ ಬೆಂಗಳೂರು ತಂಡವನ್ನು ಮಣಿಸಿತು. ಭಾರತದ ಎಲ್ಲ ಪ್ರಮುಖ ಗಾಲ್ಫರ್‌ಗಳು ಕಣಕ್ಕಿಳಿದ ಈ ಚಾಂಪಿಯನ್‌ಷಿಪ್‌ನಲ್ಲಿ ಅಹಮದಾಬಾದ್ ಅಚ್ಚರಿಯ ಪ್ರದರ್ಶನ ನೀಡಿದೆ.ಫೈನಲ್‌ನ ಮೊದಲ ಪಂದ್ಯದಲ್ಲಿ ವಿನೋದ್ ಕುಮಾರ್ ಆತಿಥೇಯ ತಂಡದ ಮಾನವ್ ಜೈನ್ ವಿರುದ್ಧ ಗೆದ್ದರು. ಆ ಬಳಿಕ ಮಿಥುನ್ ಪೆರೇರಾ ಬೆಂಗಳೂರು ತಂಡದ ಅಭಿಷೇಕ್ ಜಾ ಅವರನ್ನು ಮಣಿಸಿ ನವರತ್ನ ತಂಡದ ಪ್ರಶಸ್ತಿಯನ್ನು ಖಚಿತಪಡಿಸಿಕೊಂಡರು. ಯಾವುದೇ ಮಹತ್ವವಿಲ್ಲದ ಅಂತಿಮ ಸ್ಪರ್ಧೆಯಲ್ಲಿ ಅನಿರ್ಬನ್ ಲಾಹಿರಿ ಅವರು ವಿಕ್ರಾಂತ್ ಚೋಪ್ರಾ ಎದುರು ಹಿನ್ನಡೆ ಸಾಧಿಸಿದ್ದ ಸಂದರ್ಭ ಹಿಂದೆ ಸರಿದರು.ಚಾಂಪಿಯನ್ ತಂಡ ಮಿರುಗುವ ಟ್ರೋಫಿಯೊಂದಿಗೆ 36 ಲಕ್ಷ ರೂ. ನಗದು ಬಹುಮಾನ ಪಡೆಯಿತು.`ಚಾಂಪಿಯನ್‌ಷಿಪ್‌ಗೆ ಮುನ್ನ ನಮಗೆ ಅಂಡರ್‌ಡಾಗ್ ಎಂಬ ಹಣೆಪಟ್ಟಿ ಹಚ್ಚಲಾಗಿತ್ತು. ಆದರೆ ಟ್ರೋಫಿ ಜಯಿಸುವ ವಿಶ್ವಾಸ ನಮಗಿತ್ತು~ ಎಂದು ಚೋಪ್ರಾ ನುಡಿದರು.ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 3-0 ರಲ್ಲಿ ಚಂಡೀಗಡ ವಿರುದ್ಧ ಜಯ ಪಡೆಯಿತು. ಚೆನ್ನೈ ತಂಡದ ಎಸ್‌ಎಸ್‌ಪಿ ಚೌರಾಸಿಯ, ಗೌರವ್ ಘಾಯ್ ಮತ್ತು ಅನುರಾ ರೋಹನ ತಮ್ಮ ಪಂದ್ಯಗಳಲ್ಲಿ ಗೆಲುವು ಸಾಧಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.