ಗುರುವಾರ , ನವೆಂಬರ್ 21, 2019
21 °C

ಗಾಳಿಪಟವಾದ ಮಕ್ಕಳ ಮನಸ್ಸು...

Published:
Updated:

ಮೈಸೂರು: ಹೊತ್ತು ಇಳಿಯುವ ಹೊತ್ತು. ಮೆಲ್ಲನೆ ಬಿರುಸು ಪಡೆ ಯುತ್ತಿದ್ದ ತಂಗಾಳಿ. ಪುಟ್ಟ ಹೆಜ್ಜೆಗಳೊಂದಿಗೆ ಮೈದಾನದ ತುಂಬ ಸಂಚರಿಸುತ್ತಿದ್ದ ಚಿಣ್ಣರ ಕಲರವ. ಅವರ ಕೈಯಲ್ಲಿ ಬಣ್ಣ ಬಣ್ಣದ ಗಾಳಿಪಟ. ಗಾಳಿ ತುಸು ಜೋರಾದರೆ ಸಾಕು ಕೇಕೆ ಹಾಕುವ ಅವರ ಉತ್ಸಾಹ. ಪಟ ಮುಗಿಲಿಗೆ ಏರಿದಂತೆ ಮಕ್ಕಳ ಉತ್ಸಾಹವೂ ಮೇರೆ ಮೀರಿತ್ತು.ನಗರದ ಮಹಾರಾಜ ಮೈದಾನದ ಹಾಕಿ ಅಂಗಳದಲ್ಲಿ ಗುರುವಾರ ಕಂಡು ಬಂದ ದೃಶ್ಯವಿದು. ಇಲ್ಲಿ ಮಕ್ಕಳು ಅಕ್ಷರಶಃ ಪಟಗಳ ಚಿತ್ತಾರ ಬಿಡಿಸಿದ್ದರು. 200ಕ್ಕೂ ಹೆಚ್ಚು ಮಕ್ಕಳು ನಾ ಮುಂದು ತಾ ಮುಂದು ಎಂದು ಪಟ ಹಾರಿಸಿ ಖುಷಿ ಪಟ್ಟರು. ಕೆಲವರು ಸೂತ್ರ ಸರಿಹೊಂದದ ಪಟವನ್ನು ಹಾರಿಸಲು ಕೊನೆಯ ಕ್ಷಣದ ವರೆಗೂ ಸಾಹಸಪಟ್ಟರು.ರಂಗಾಯಣದ ಚಿಣ್ಣರ ಮೇಳದ ಬೇಸಿಗೆ ಶಿಬಿರದ ಅಂಗವಾಗಿ ಗಾಳಿ ಪಟ ಹಾರಿಸುವ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು. ಇದಕ್ಕಾಗಿ ಮೂರು ದಿನಗಳಿಂದ ತರಬೇತಿ ನೀಡಲಾಗಿತ್ತು. ಗಾಳಿಪಟದ ಅರ್ಥ, ಪಟ ತಯಾರಿಸುವ ಬಗೆ, ಮಹತ್ವ, ಸೂತ್ರ- ಸೂತ್ರಧಾರ, ಮೇಲೇರಿದ ಪಟದ ನಿಯಂತ್ರಿಸುವ ತಂತ್ರ, ಬಹಳ ಹೊತ್ತು ಪಟ ಹಾರುವಂತೆ ಏನು ಮಾಡಬೇಕು. ಯಾವ ಮಾಸದಲ್ಲಿ ಗಾಳಿಪಟ ಹಾರಿಸಿದರೆ ಉತ್ತಮ. ಇತ್ಯಾದಿ ಅಂಶಗಳನ್ನು ಚಿಣ್ಣರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ತಜ್ಞರು ರಂಗಾಯಣಕ್ಕೆ ಆಗಮಿಸಿ ಮಕ್ಕಳಿಗೆ ಮಾಠ ಮಾಡಿದ್ದರು.ಇದನ್ನೆಲ್ಲ ಗಮನಿಸಿದ ಮಕ್ಕಳು ಸಾಕಷ್ಟು ತಯಾರಿ ನಡೆಸಿದ್ದರು. ಮನೆ ಯಲ್ಲಿ ಪಟಕ್ಕೆ ಸೂತ್ರ ಹಾಕಿಕೊಂಡೇ ಮೈದಾನಕ್ಕೆ ಆಗಮಿಸಿದ್ದರು `ನಾನು ಪ್ರತಿ ವರ್ಷ ಗಾಳಿಪಟ ಹಾರಿಸುತ್ತೇನೆ. ಶಿಬಿರದಲ್ಲಿ ಮತ್ತಷ್ಟು ತಂತ್ರಗಳನ್ನು ಕಲಿಸಿದರು. ಅಪ್ಪನೊಂದಿಗೆ ಸೇರಿ ಪಟ ಸಿದ್ಧಪಡಿಸಿದ್ದೇನೆ' ಎಂದು ಪುಟಾಣಿ ಪ್ರಧ್ಯುಮ್ನ ತಿಳಿಸಿದ.ಮಧ್ಯಾಹ್ನ 3 ಗಂಟೆಗೆ ಮಕ್ಕಳು ಮಹಾರಾಜ ಮೈದಾನಕ್ಕೆ ಆಗಮಿಸಿದ್ದರು. ಬಿಸಿಲ ಕಾವು ಕಡಿಮೆಯಾಗುತ್ತಿದ್ದಂತೆ ಗಾಳಿ ಪಟ ಹಾರಿಸುವಂತೆ ಸೂಚನೆ ನೀಡಲಾಯಿತು. ಮಾರ್ಗದರ್ಶಕರ ಅಪ್ಪಣೆ ಸಿಕ್ಕಿದ್ದೇ ತಡ ಮೈದಾನದ ತುಂಬಾ ಮಕ್ಕಳ ಚಿನ್ನಾಟ ಶುರುವಾಯಿತು. ನಾಲ್ಕು ಗುಂಪುಗಳಲ್ಲಿ ಆಗಮಿಸಿದ್ದ ಮಕ್ಕಳು ಚದುರಿ ಮೈದಾನ ಆಕ್ರಮಿಸಿಕೊಂಡರು.ಕೆಲವೇ ಕ್ಷಣದಲ್ಲಿ ಗಾಳಿಪಟಗಳು ಗರಿ ಬಿಚ್ಚಿದ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಿದವು. ಗಾಳಿ ವೇಗ ಪದೇಪದೇ ಕಡಿಮೆಯಾಗಿ ಕೆಲವರಲ್ಲಿ ನಿರಾಸೆ ಮೂಡಿಸಿತು. ಮತ್ತೆ ಕೆಲವರು ಸೂತ್ರ ಸರಿಹೊಂದದ ಪಟವನ್ನು ಮುಗಿಲಿಗೇರಿಸಲು ಸಾಕಷ್ಟು ಶ್ರಮ ವಹಿಸಿದರು. ಗಾಳಿ ಜೋರಾದಾಗ ಪೋಷಕರು, ಶಿಬಿರದ ಮಾರ್ಗದರ್ಶಕರು ಮಕ್ಕಳ ನೆರವಿಗೆ ಬಂದರು. ಸುಮಾರು ಒಂದೂವರೆ ಗಂಟೆ ಕಾಲ ಮಕ್ಕಳ ಮೊಗದಲ್ಲಿ ಮಂದಹಾಸ ಮನೆ ಮಾಡಿತು.`ಮಕ್ಕಳಿಗೆ ಪಟ ಹಾರಿಸುವಿಕೆಯ ಪ್ರಾಥಮಿಕ ಜ್ಞಾನ ಮಾತ್ರ ನೀಡಿದ್ದೇವೆ. ಸೂತ್ರ ಹಾಕುವುದು, ಗಾಳಿಪಟ ತಯಾರಿಸುವ ಬಗ್ಗೆ ಮೂರು ದಿನಗಳಿಂದ ಮಾರ್ಗದರ್ಶನ ನೀಡಲಾಗಿತ್ತು. ಬಹುತೇಕ ಮಕ್ಕಳು ಮನೆಯಲ್ಲೇ ಪಟ ಸಿದ್ಧಪಡಿಸಿ ತಂದಿದ್ದಾರೆ. ಇಲ್ಲಿನ ಚಟುವಟಿಕೆ ಮಕ್ಕಳಲ್ಲಿ ಹುರುಪು ತುಂಬಿದೆ. ಉಳಿದ ಕಾರ್ಯಕ್ರಮಗಳಿಗೆ ಇದು ಪ್ರೇರಣೆ' ಎಂದು ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ `ಪ್ರಜಾವಾಣಿ'ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)