ಗಾಳಿಬೆಟ್ಟದಲ್ಲಿ ಗಣಿಗಾರಿಕೆ ತಡೆಗೆ ಆಗ್ರಹ

7

ಗಾಳಿಬೆಟ್ಟದಲ್ಲಿ ಗಣಿಗಾರಿಕೆ ತಡೆಗೆ ಆಗ್ರಹ

Published:
Updated:

ಸೋಮವಾರಪೇಟೆ: ತೋಳೂರುಶೆಟ್ಟಳ್ಳಿ ಬಳಿಯ ಮೂಕ್ರಿಗುಡ್ಡದ ಗಾಳಿಬೆಟ್ಟದಲ್ಲಿನ ಗಣಿಗಾರಿಕೆಯು ಪರಿಸರಕ್ಕೆ ಮಾರಕವಾಗಿದ್ದು, ಕಾನೂನು ಬಾಹಿರವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ಕೂಡಲೆ ನಿಲ್ಲಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕು ಕಾವೇರಿ ಸೇನೆ ಹಾಗೂ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಎಚ್ಚರಿಸಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿ ಪರಿಸರಕ್ಕೆ ಮಾರಕವಾದ ಗಣಿಗಾರಿಕೆಗೆ ಹೇಗೆ ಪರವಾನಿಗೆ ನೀಡಿದರು? ಎಂಬುದೇ ಗ್ರಾಮಸ್ಥರಿಗೆ ಸಂಶಯಕ್ಕೆ ಮೂಲ ಕಾರಣ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರಾದ ವಕೀಲ ಎಂ.ಬಿ.ಅಭಿಮನ್ಯುಕುಮಾರ್ ಹೇಳಿದರು. ಬೆಟ್ಟದಲ್ಲಿರುವ ಪೈಸಾರಿ ಜಾಗವನ್ನು ಅಕ್ರಮ ಸಕ್ರಮ ಸಮಿತಿಯ ಮೂಲಕ ಕೃಷಿ ಭೂಮಿಯೆಂದು ನಮೂದಿಸಿ ಸಕ್ರಮ ಮಾಡಿಸಿಕೊಂಡು ಇದೀಗ ಕೃಷಿಭೂಮಿಯಲ್ಲಿ ಗಣಿಗಾರಿಕೆ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ. ಜಾಗದ ಮಾಲೀಕರು ಸಕ್ರಮ ಮಾಡಿಸಿಕೊಂಡ ಭೂಮಿಯನ್ನು 15 ವರ್ಷಗಳ ತನಕ ಯಾರಿಗೂ ಪರಭಾರೆ ಮಾಡುವಂತಿಲ್ಲ. ಆದರೆ ಬೆಂಗಳೂರಿನ ವ್ಯಕ್ತಿಯೊಬ್ಬರು ಇಲ್ಲಿ ಗಣಿಗಾರಿಕೆ ನಡೆಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.ಜಿಲ್ಲಾಧಿಕಾರಿಗಳು ಕೂಡಲೆ ಪೈಸಾರಿ ಜಾಗ ಮತ್ತು ಗಣಿಗಾರಿಕೆ ನಡೆಯುತ್ತಿರುವ ಸ್ಥಳವನ್ನು ಸರ್ವೆ ಮಾಡಿಸಬೇಕು. ಕೃಷಿ ಜಾಗದಲ್ಲಿ ಕಾನೂನಿಗೆ ವಿರುದ್ಧವಾಗಿ ಗಣಿಗಾರಿಕೆ ನಡೆಯುತ್ತಿದ್ದರೆ ಆ ಜಾಗವನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದರು. ಗಣಿಗಾರಿಕೆ ನಡೆಯುವ ಸ್ಥಳಕ್ಕೆ ವಾಹನಗಳು ಹೋಗಲು ದೊಡ್ಡ ರಸ್ತೆಯೊಂದನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ಮಾಡಲಾಗುತ್ತಿದೆ.ದೊಡ್ಡ ಮರಗಳನ್ನು ಕಡಿದು ಉರುಳಿಸಲಾಗುತ್ತಿದೆ. ಕೂಡಲೆ ಅರಣ್ಯ ಇಲಾಖೆಯವರು ಗಣಿಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಲಕ್ಷಾಂತರ ರೂ. ಖರ್ಚುಮಾಡಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಗೊಳಿಸಿದೆ. 12 ರಿಂದ 20 ಸಾವಿರ ಟನ್ ಹೊತ್ತ ಕಲ್ಲುಲಾರಿಗಳು ರಸ್ತೆಗಳನ್ನು ಹಾಳುಮಾಡುತ್ತವೆ. ತಕ್ಷಣವೇ ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆಯವರು ಇದರ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದರು.ಕೆಲವು ಢೋಂಗಿ ರೈತ ನಾಯಕರು ಗಣಿ ಮಾಲೀಕರೊಂದಿಗೆ ಕೈಜೋಡಿಸಿದ್ದಾರೆ. ಕೊಡಗನ್ನು ಮತ್ತೊಂದು ಬಳ್ಳಾರಿಯಾಗದಂತೆ ತಡೆಯಲು ಕಾನೂನು ರೀತಿಯಲ್ಲಿ ಹೋರಾಟ ನಡೆಸಲು ಮುಂದಾಗಿದ್ದೇವೆ ಎಂದು ನುಡಿದರು. ಕಾವೇರಿ ಸೇನೆಯ ತಾಲ್ಲೂಕು ಅಧ್ಯಕ್ಷ ಹೊಸಬೀಡು ಶಶಿ ಮಾತನಾಡಿ, 4 ವರ್ಷಗಳ ಹಿಂದೆ ಇದೇ ಜಾಗದಲ್ಲಿ ಆರಂಭಗೊಂಡ ಗಣಿಗಾರಿಕೆಯನ್ನು ಹೋರಾಟದ ಮೂಲಕವೇ ನಿಲ್ಲಿಸಿದ್ದೇವೆ.ಪ್ರತಿಭಟನಾಕಾರರ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿ ಕಿರುಕುಳ ನೀಡಿದ್ದರು. ಆದರೆ ಯಾವುದೇ ಬೆದರಿಕೆಗೆ ಬಗ್ಗದೆ ಹೋರಾಟವನ್ನು ನಡೆಸುವುದಾಗಿ ಹೇಳಿದರು. ತೋಳೂರುಶೆಟ್ಟಳ್ಳಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಡಿ.ಎಸ್.ಕುಶಾಲಪ್ಪ ಮಾತನಾಡಿ, ಗಣಿಗಾರಿಕೆಗೆ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ನಿರಪೇಕ್ಷಣಾ ಪತ್ರ ನೀಡಿಲ್ಲ ಎಂದರು. ಪಂಚಾಯಿತಿಯೂ ಗಣಿಗಾರಿಕೆಗೆ ವಿರುದ್ಧವಾಗಿದೆ.ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿದ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಣಿಗಾರಿಕೆ ವಿರುದ್ಧದ ಹೋರಾಟದಲ್ಲಿ ಅನಾಹುತಗಳು ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದರು. ಗಣಿಗಾರಿಕೆ ಮಾಲೀಕರು ಹಣದ ಆಮಿಷವೊಡ್ಡಿ ಗ್ರಾಮಸ್ಥರಲ್ಲಿಯೇ ಕಲಹ ಮೂಡಿಸಲು ಯತ್ನಿಸುತ್ತಿದ್ದಾರೆ. ಆದರೆ ಗಣಿಗಾರಿಕೆ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ಹೊಸಬೀಡು ಗ್ರಾಮಸ್ಥರು ಸಮ್ಮತಿಸಿದ್ದಾರೆಂದು ಗ್ರಾಮದ ಪ್ರಮುಖ ಧನುಕುಮಾರ್ ಹೇಳಿದರು. ಗೋಷ್ಠಿಯಲ್ಲಿ ಮೂಕ್ರಿಗುಡ್ಡ ಹಿತರಕ್ಷಣಾ ಸಮಿತಿ ಸದಸ್ಯರು ಹಾಗೂ ಸುತ್ತಲಿನ ಗ್ರಾಮಗಳ ಪ್ರಮುಖರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry