ಭಾನುವಾರ, ಆಗಸ್ಟ್ 25, 2019
21 °C

ಗಾಳಿ ಒತ್ತಡ: ದಡಕ್ಕೆ ಮರಳಿದ ದೋಣಿ

Published:
Updated:

ಕಾರವಾರ: ಮೀನುಗಾರಿಕೆ ನಿಷೇಧದ ಅವಧಿ ಬುದುವಾರ ಮುಗಿದ ಹಿನ್ನೆಲೆಯಲ್ಲಿ ಗುರವಾರ ಮೀನುಗಾರಿಕೆಗೆ ತೆರಳಿದ ಯಾಂತ್ರಿಕ ದೋಣಿಗಳು ಸಮುದ್ರದಲ್ಲಿ ಗಾಳಿಯ ಒತ್ತಡ ಹೆಚ್ಚಾಗಿದ್ದರಿಂದ ಮೀನುಗಾರಿಕೆ ನಡೆಸದೇ ದಡಕ್ಕೆ ಹಿಂದಿರುಗಿವೆ. ಇದರಿಂದ ಮೊದಲ ದಿನವೇ ಮೀನುಗಾರರಿಗೆ ನಿರಾಶೆ ಉಂಟಾಗಿದೆ.ಜಿಲ್ಲೆಯ ಭಟ್ಕಳ, ಹೊನ್ನಾವರ, ತದಡಿ, ಬೆಲೇಕೇರಿ, ಅಮದಳ್ಳಿ ಹಾಗೂ ಬೈತಖೋಲ್ ಮೀನುಗಾರಿಕೆ ಬಂದರ್‌ನಿಂದ ಬೆಳಗ್ಗಿನಿಂದಲೇ ಟ್ರಾಲರ್ ದೋಣಿಗಳು ಮೀನು ಬೇಟೆಗೆ ಹೊರಟಿದ್ದವು. ಅರಬ್ಬಿ ಸಮುದ್ರದಲ್ಲಿ ಗಾಳಿಯ ಒತ್ತಡ ಹಾಗೂ ಅಲೆಗಳ ಅಬ್ಬರ ಜೋರಾಗಿದ್ದರಿಂದ ಮೀನುಗಾರಿಕೆ ನಡೆಸಲಾಗದೇ ದಡಕ್ಕೆ ವಾಪಸ್ ಆಗಿವೆ. 45 ದಿನಗಳ ಬಿಡುವಿನ ಬಳಿಕ ಹೊಸ ಹುಮ್ಮಸ್ಸಿನೊಂದಿಗೆ ಕಡಲಿಗಿಳಿದ ಮೀನುಗಾರರಿಗೆ ಆರಂಭದಲ್ಲೇ ನಷ್ಟ ಉಂಟಾಗಿದೆ.ಮೊದಲ ದಿನವಾದ್ದರಿಂದ ಕೆಲವೇ ಟ್ರಾಲರ್ ದೋಣಿಗಳು ಮಾತ್ರ ಮೀನುಗಾರಿಕೆಗೆ ತೆರಳಿದ್ದವು. ಬೆಳಿಗ್ಗೆಯಿಂದಲೇ ಮೀನುಗಾರಿಕೆಗೆ ಹೊರಟ ದೋಣಿಗಳು ಮಧ್ಯಾಹ್ನದ ಹೊತ್ತಿಗೆ ಬಂದರ್‌ನಲ್ಲಿ ಲಂಗರು ಹಾಕಿದ್ದವು. ಬಂದರುಗಳಲ್ಲಿ ಮೀನು ವ್ಯವಹಾರ ಇಲ್ಲದೇ ಬಿಕೋ ಎನ್ನುತ್ತಿತ್ತು. ಮೀನುಗಾರರು ಕೆಲಸ ಇಲ್ಲದೇ ಕುಳಿತಿರುವ ದೃಶ್ಯ ಇಲ್ಲಿನ ಬೈತಖೋಲ್ ಬಂದರ್‌ನಲ್ಲಿ ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ'ಗೆ ಕಂಡು ಬಂತು.`45 ದಿನದ ನಂತರ ಮೀನು ಹಿಡಿಯಲು ಹೋಗುತ್ತಿರುವುದರಿಂದ, ತುಂಬಾ ಉತ್ಸಾಹದಿಂದ ಮೀನುಗಾರಿಕೆಗೆ ತೆರಳಿದ್ದೆವು. ಆದರೆ ಸಮುದ್ರದಲ್ಲಿ ಗಾಳಿ ಹಾಗೂ ಅಲೆಯ ಅಬ್ಬರ ಜೋರಾಗಿದ್ದರಿಂದ ನೀರಿಗೆ ಬಲೆ ಬಿಡಲು ಆಗಲಿಲ್ಲ. ದೋಣಿ ಎರಡು ದಿಕ್ಕಿನಲ್ಲಿಯೂ ವಾಲುತ್ತಿದ್ದರಿಂದ ಅದರಲ್ಲಿ ನಿಲ್ಲುವುದು ಕಷ್ಟವಾಯಿತು.ಹೀಗಾಗಿ ವಾಪಸ್ ಬರಬೇಕಾಯಿತು. ಮೊದಲ ದಿನವೇ ಸುಮಾರು 60ರಿಂದ 70 ಲೀಟರ್ ಡೀಸೆಲ್ ನಷ್ಟವಾಯಿತು' ಎನ್ನುತ್ತಾರೆ ಮೀನುಗಾರ ಗೋಪಾಲ ಹರಿಕಂತ್ರ.

Post Comments (+)