ಗಾಳಿ ಗಾಥೆ
ಬುಲೆಟ್ ಎಲೆಕ್ಟ್ರಾ ಬೈಕಿನ ಹಿಂಬದಿಯ ಟೈರ್ಗೆ ಮೊಳೆ ಚುಚ್ಚಿ ಆಗಿದ್ದ ಪಂಕ್ಚರ್. ವರ್ಕ್ಶಾಪ್ ಹುಡುಗ ಒಲ್ಲದ ಮನಸ್ಸಿನಿಂದಲೇ ಟೈರ್ ಬಿಚ್ಚಿ, ಪಂಕ್ಚರ್ ಹಾಕಿ ಮತ್ತೆ ಟೈರ್ ಹಾಕಿ ಹೋಗಿದ್ದಾಗಿತ್ತು. ಹೀಗಾದ ಮೇಲೆ ನಲವತ್ತು ಕಿ.ಲೋ. ಮೀಟರ್ ಕೂಡ ಓಡಿಸಿ ಆಗಿರಲಿಲ್ಲ, ಹಿಂಬದಿ ಚಕ್ರದಲ್ಲಿ ವಿಚಿತ್ರವಾದ ಸದ್ದು. ಮತ್ತೊಬ್ಬ ಮೆಕ್ಯಾನಿಕ್ ಸ್ಪಾನರ್ನಿಂದ ನಟ್ ಟೈಟ್ ಮಾಡಿ, `ಏನೂ ಸಮಸ್ಯೆ ಇಲ್ಲ~ ಎಂದರು. ಮತ್ತೆ ಕೆಲವು ಕಿ.ಮೀ. ಸಾಗಿದ ಮೇಲೆ ಅದೇ ಸದ್ದು. ಅಧಿಕೃತ ಸರ್ವಿಸ್ ಸೆಂಟರ್ನಲ್ಲಿ ಬಿಚ್ಚಿಸಿದಾಗ ಗೊತ್ತಾದದ್ದು ಹಬ್ನ ಆಕಾರ ಬದಲಾಗಿದೆ ಎಂದು.
ವಾಹನವನ್ನು ಓಡಿಸದೇ ಇರುವಾಗ ಟೈರ್ನ ಟ್ಯೂಬ್ ಒಳಗಿನ ಗಾಳಿ ಹಾಗೆಯೇ ಇರುತ್ತದೆ ಎಂಬ ತಪ್ಪು ಕಲ್ಪನೆ ದ್ವಿಚಕ್ರ ವಾಹನಗಳನ್ನು ಉಪಯೋಗಿಸುವ ಕೆಲವರಲ್ಲಿ ಇದೆ. ಆದರೆ, ವಾಹನ ನಿಂತಲ್ಲಿಯೇ ದೀರ್ಘ ಕಾಲ ನಿಂತರೆ ಟ್ಯೂಬ್ನ ಗಾಳಿಯ ಪ್ರಮಾಣ ಕಡಿಮೆಯಾಗುತ್ತದೆ. ಬುಲೆಟ್ನ ಟೈರ್ ಪಂಕ್ಚರ್ ಆಗಲು ಅದೇ ಕಾರಣ.
ವಾಹನವನ್ನು ನಿಯಮಿತವಾಗಿ ಸರ್ವಿಸ್ಗೆ ಬಿಡುವ ಬಹುತೇಕರು ಟ್ಯೂಬ್ಗೆ ಆಗಾಗ ಗಾಳಿ ತುಂಬಿಸುವ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ಎಷ್ಟು ದಿನಕ್ಕೊಮ್ಮೆ ಗಾಳಿ ಚೆಕ್ ಮಾಡಿಸಿ, ತುಂಬಿಸಿಕೊಳ್ಳಬೇಕು? ಮುಂದಿನ ಚಕ್ರಕ್ಕೆಷ್ಟು, ಹಿಂದಿನದಕ್ಕೆಷ್ಟು? ಗಾಳಿ ಕಡಿಮೆ ಇದ್ದರೆ ಮಾತ್ರ ಪಂಕ್ಚರ್ ಆಗುತ್ತದೋ ಹೆಚ್ಚಾದರೂ ಪಂಕ್ಚರ್ ಆಗುತ್ತದೋ? ಮೊದಲಾದ ಪ್ರಶ್ನೆಗಳನ್ನು ಕೇಳಿಕೊಳ್ಳುವವರ ಸಂಖ್ಯೆ ಎಂದಿಗೂ ಕಡಿಮೆ. ಕೆಲವರು ಪೆಟ್ರೋಲ್ ಹಾಕಿಸಿಕೊಂಡ ಮೇಲೆ ಸೀದಾ ಗಾಳಿ ಗಾಥೆಹೋಗಿ ಗಾಳಿ ತುಂಬಿಸುವವರ ಬಳಿ ನಿಲ್ಲಿಸುತ್ತಾರೆ. ಎಷ್ಟು ಗಾಳಿ ತುಂಬಬೇಕು ಎಂಬುದನ್ನೂ ಹಾಕುವವರ ಆಯ್ಕೆಗೇ ಬಿಡುತ್ತಾರೆ. ಗಾಳಿ ಎಷ್ಟಿದ್ದರೇನು, ಗಾಡಿ ಓಡುತ್ತಿರಬೇಕಷ್ಟೆ ಎಂಬುದು ಅವರ ನಂಬಿಕೆ.
ಈ ಕುರುಡು ನಂಬಿಕೆಯಿಂದಲೇ ಟೈರ್ ಒಂದೇ ಬದಿ ಸವೆಯುವ ಅಪಾಯವಿದೆ. ಹಾಗಾದಲ್ಲಿ ಟೈರ್ನ ತಾಳಿಕೆಯ ಅವಧಿ ಕಡಿಮೆಯಾಗುತ್ತದೆ. ಬಹುತೇಕ ದ್ವಿಚಕ್ರ ವಾಹನಗಳ ಟ್ಯೂಬ್ಗೆ ತುಂಬಿಸುವ ಗಾಳಿಯ ಪ್ರಮಾಣದಲ್ಲಿ ಸಾಮ್ಯತೆ ಇದ್ದರೂ ಈಗೀಗ ಬೈಕ್ಗಳ ವೈವಿಧ್ಯ ಹೆಚ್ಚಾಗಿರುವುದರಿಂದ ತುಸು ವ್ಯತ್ಯಾಸ ಶುರುವಾಗಿದೆ. ಯಮಹಾ `ಆರ್1~ ಬೈಕಿನ ಗಾಳಿಯ ಪ್ರಮಾಣಕ್ಕೂ ಪಲ್ಸರ್ ಬೈಕ್ನ ಗಾಳಿಯ ಪ್ರಮಾಣಕ್ಕೂ ಸ್ವಲ್ಪ ವ್ಯತ್ಯಾಸ ಇರುತ್ತದೆ. ಯಾವುದಕ್ಕೂ ತಂತಮ್ಮ ವಾಹನದ `ಪರಿಚಯ ಪುಸ್ತಕ~ (ಮ್ಯಾನ್ಯುಯಲ್) ಓದಿಕೊಂಡೇ ಗಾಳಿಯ ಪ್ರಮಾಣ ಎಷ್ಟಿರಬೇಕು ಎಂಬುದನ್ನು ತಿಳಿಯುವುದು ಒಳ್ಳೆಯದು.
ನಿರ್ವಹಣೆಯ ವಿಷಯದಲ್ಲಿ ಕೊನೆಯ ಆದ್ಯತೆಯಾದ ಟೈರ್ಗಳ ಕುರಿತಂತೆ ಇನ್ನೊಂದು ಸೂಕ್ಷ್ಮವಿದೆ. ಪಾರ್ಕಿಂಗ್ನಲ್ಲಿ ನಿಲ್ಲಿಸಿದ ನಂತರ ತೆಗೆಯುವಾಗಲೋ ಮನೆಯ ಒಳಗೆ ನಿಲ್ಲಿಸುವಾಗಲೋ ಗೋಡೆ ಅಥವಾ ಡಿವೈಡರ್ಗೆ ಮುಂದಿನ ಚಕ್ರ ತಗಲುವುದು ಮಾಮೂಲು. ತುಸು ಜೋರಾಗಿ ಚಕ್ರವನ್ನು ತಗಲಿಸಿದರೆ ಚಕ್ರದ ರಿಮ್ ಬೆಂಡ್ ಆಗುತ್ತದೆ. ಕಾರ್ಗಳಿಗೆ ಇರುವಂತೆ ಚಕ್ರಗಳನ್ನು ಸಮತೋಲಿತ ರೀತಿಯಲ್ಲಿ `ಅಲೈನ್~ ಮಾಡುವ ಯೋಚನೆ ಎಷ್ಟೋ ದ್ವಿಚಕ್ರ ವಾಹನ ಸವಾರರಿಗೆ ಬರುವುದೇ ಇಲ್ಲ. ಯಾಕೆಂದರೆ, ಹಳೆಯ ಮೆಕ್ಯಾನಿಕ್ಗಳನ್ನು ಹೊರತುಪಡಿಸಿ ಮಿಕ್ಕವರಿಗೆ ದ್ವಿಚಹ್ರ ವಾಹನ ಚಕ್ರಗಳ `ಬೆಂಡ್ ತೆಗೆಯುವ ಪ್ರಕ್ರಿಯೆ~ ಈಗ ಮುಖ್ಯವೇ ಅಲ್ಲ. ಮೊದಲೇ ಬೆಂಡ್ ಬಂದಿರುವ ಚಕ್ರದ ಟೈರ್ ಪಂಕ್ಚರ್ ಆದರಂತೂ ರಿಮ್ನ ಆಕಾರ ಇನ್ನಷ್ಟು ಹದಗೆಡುವ ಅಪಾಯವಿರುತ್ತದೆ. ಇವೆಲ್ಲದರ ಮೊತ್ತ ಮೈಲೇಜ್ನಲ್ಲಿ ಇಳಿಕೆ.
ಕೆಲವು ವಾಹನ ತಜ್ಞರ ಪ್ರಕಾರ ಪ್ರತಿನಿತ್ಯವೂ ದ್ವಿಚಕ್ರ ವಾಹನ ಓಡಿಸುವವರು ಹತ್ತು ದಿನಕ್ಕೊಮ್ಮೆಯಾದರೂ ಗಾಳಿಯ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು. ವಾರಕ್ಕೊಮ್ಮೆ ಗಾಡಿ ತೆಗೆಯುವವರಾದರೆ ಪ್ರತಿ ಸವಾರಿಗೂ ಗಾಳಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರಮಾಣ ಖಾತರಿಪಡಿಸಿಕೊಳ್ಳದೆ ಪಂಕ್ಚರ್ ಅಂಗಡಿಗಳಲ್ಲಿ ಸುಮ್ಮನೆ ತುಂಬಿಸುವ ರೀತಿಯಲ್ಲಿ ಗಾಳಿಯನ್ನು ಹಾಕಿಸಿಕೊಳ್ಳುವುದು ತರವಲ್ಲ.
`ಡಬ್ಬಲ್ಸ್~ ಹೋಗುವಿರೋ, ಒಬ್ಬರೇ ವಾಹನ ಸವಾರಿ ಮಾಡುವಿರೋ ಎಂಬ ಪರಿಜ್ಞಾನವೂ ಚಾಲಕರಿಗೆ ಇರಬೇಕಾಗುತ್ತದೆ. ಗಾಳಿಯ ಮೇಲೆಯೇ ಗಾಡಿ ಓಡುತ್ತದೆಂಬುದಂತೂ ಸತ್ಯ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.