ಮಂಗಳವಾರ, ಮೇ 11, 2021
28 °C

ಗಾಳಿ-ಮಳೆ: ಒಬ್ಬ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಹಲವಡೆ ಶನಿವಾರವೂ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿ ಹಾಗೂ ಶನಿವಾರ ಭಾರಿ ಗಾಳಿ ಮಳೆಯಾಗಿದೆ. ಮಂಗಳೂರು ತಾಲ್ಲೂಕಿನಲ್ಲಿ 30ಕ್ಕೂ ಹೆಚ್ಚು  ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಸುಳ್ಯ ತಾಲ್ಲೂಕಿನಲ್ಲಿ ಹಳ್ಳ ದಾಟುತ್ತಿದ ವೃದ್ಧರೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ.ಸುಳ್ಯ ತಾಲ್ಲೂಕಿನ ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲು ದಲಿತ ಕಾಲೊನಿ ನಿವಾಸಿ ಐತ (60) ಮೃತರು. ಅವರು ಶನಿವಾರ ಬೆಳಿಗ್ಗೆ ಕಾಲುಸಂಕ ದಾಟುತ್ತಿದ್ದಾಗ ಜಾರಿ ಹಳ್ಳಕ್ಕೆ ಬಿದ್ದು ಕೊಚ್ಚಿ ಹೋಗಿದ್ದರು.ಮಂಗಳೂರು ತಾಲ್ಲೂಕಿನ ಅಂಬ್ಲಮೊಗರುವಿನ 28 ಮನೆಗಳು, ಮಂಜನಾಡಿ ಗ್ರಾಮದಲ್ಲಿ 2 ಮನೆಗಳು ಹಾಗೂ ಪೆರ್ಮನ್ನೂರು ಗ್ರಾಮದಲ್ಲಿ ಒಂದು ಮನೆ ಭಾಗಶಃ ಹಾನಿಗೊಳಗಾಗಿದೆ.ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗಗಳಲ್ಲಿ ಸಾಧಾರಣೆ ಮಳೆಯಾಗಿದೆ. ಕರಾವಳಿಯಲ್ಲಿ ಕಡಲ್ಕೊರೆತದ ಭೀತಿ ಹೆಚ್ಚಾಗಿದೆ.ಕೊಡಗಿನಲ್ಲಿ ಉತ್ತಮ ಮಳೆ: ಕೊಡಗು ಜಿಲ್ಲೆಯ ಮಡಿಕೇರಿ, ಸಂಪಾಜೆ, ಭಾಗಮಂಡಲ, ಶ್ರೀಮಂಗಲ, ನಾಪೋಕ್ಲು, ಸೋಮವಾರಪೇಟೆ, ಶನಿವಾರಸಂತೆ ಇತರೆಡೆ ಉತ್ತಮ ಮಳೆಯಾಗಿದೆ.ಸಂಪಾಜೆ ಹೋಬಳಿಯ ಅರವತ್ತೋಕ್ಲು ಗ್ರಾಮ, ಸೋಮವಾರಪೇಟೆಯ ಐಗೂರು ಗ್ರಾಮ, ಸೋಮವಾರಪೇಟೆಯ ತಾಕೇರಿ, ಸೋಮವಾರಪೇಟೆ ಪಟ್ಟಣ ಹಾಗೂ ವಿರಾಜಪೇಟೆಯ ಹುದಿಕೇರಿ ಮತ್ತು ಶ್ರೀಮಂಗಲದಲ್ಲಿ ಮನೆಗಳ ಮೇಲೆ ಮರಗಳ ಕೊಂಬೆ ಬಿದ್ದು  ಹಾನಿ ಉಂಟಾಗಿದೆ. ಕೆಲವು ಭಾಗಗಳಲ್ಲಿ ಬರೆ ಕುಸಿತ, ವಿದ್ಯುತ್ ಕಂಬಗಳು ಧರೆಗುರುಳಿರುವುದು, ಮರಗಳು ರಸ್ತೆ, ಮನೆ ಹಾಗೂ ವಾಹನಗಳ ಮೇಲೆ ಬಿದ್ದಿರುವ ಬಗ್ಗೆಯೂ ವರದಿಯಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.ಶನಿವಾರಸಂತೆ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆಯಿಂದ ಧಾರಾಕಾರ ಮಳೆ ಸುರಿಯಿತು. ಮಧ್ಯಾಹ್ನದ ಹೊತ್ತಿಗೆ ಮಳೆ, ಗಾಳಿಯ ಆರ್ಭಟ ತೀವ್ರಗೊಂಡಿದ್ದರಿಂದ ಇಡೀ ಪಟ್ಟಣದ ಜನಜೀವನ ಅಸ್ತವ್ಯಸ್ತವಾಯಿತು. ಸಂತೆಮಾರುಕಟ್ಟೆಯಲ್ಲಿ ಅಪಾರ ನೀರು ಸಂಗ್ರಹವಾಗಿ ವ್ಯಾಪಾರ, ವಹಿವಾಟಿಗೆ ತೊಂದರೆಯಾಯಿತು. ಇದರಿಂದ ಪಟ್ಟಣದ ಬಹುಪಾಲು ಚಟುವಟಿಕೆಗಳು ಅರ್ಧ ದಿನಕ್ಕೇ ನಿಂತುಹೋದವು.ನೀರಿನಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2810.65 ಅಡಿಗಳು. ಕಳೆದ ವರ್ಷ ಇದೇ ದಿನ 2802.35 ಅಡಿ ನೀರಿತ್ತು.ಹಾರಂಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 5.80 ಮಿ.ಮೀ. ಮಳೆಯಾಗಿದೆ. ಒಳಹರಿವು ಶನಿವಾರ 1,836 ಕ್ಯೂಸೆಕ್ ಇದ್ದು, ಕಳೆದ ವರ್ಷ ಇದೇ ದಿನ 70 ಕ್ಯೂಸೆಕ್ ಇತ್ತು.ಉತ್ತರ ಕರ್ನಾಟಕ ಭಾಗದ ಹಾವೇರಿ, ಗದಗ, ಧಾರವಾಡ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಸಾಧಾರಣ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರದಲ್ಲಿ ಸಾಧಾರಣ ಮಳೆಯಾಗಿದೆ. ಹಳಿಯಾಳ, ಜೋಯಿಡಾ, ಶಿರಸಿ, ಮುಂಡಗೋಡ, ಯಲ್ಲಾಪುರ ಮತ್ತು ಸಿದ್ದಾಪುರದಲ್ಲಿ ಆಗಾಗ ಬಿರುಸಿನಿಂದ ಕೂಡಿದ ಮಳೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.