ಗುರುವಾರ , ಮೇ 13, 2021
39 °C

ಗಾಳಿ ಮಳೆ, ಬಾಳೆ ತೋಟ ನಾಶ: ಆತ್ಮಹತ್ಯೆಗೆ ರೈತ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ವ್ಯಾಪಕ ಹಾನಿ ಸಂಭವಿಸಿದೆ. ಸುಮಾರು 170 ಎಕರೆ ಬೆಳೆ ನಷ್ಟ ಹಾಗೂ 21 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬೆಳೆ ನಷ್ಟದಿಂದ ಆಘಾತಕ್ಕೊಳಗಾದ ರೈತರೊಬ್ಬರು ಶುಕ್ರವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ದಾವಣಗೆರೆ ಹಾಗೂ ಜಗಳೂರು ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿದೆ. ದಾವಣಗೆರೆ ತಾಲ್ಲೂಕಿನಲ್ಲಿ 100 ಎಕರೆ, ಜಗಳೂರಿನಲ್ಲಿ ಸುಮಾರು 70 ಎಕರೆಯಷ್ಟು ಬೆಳೆ ಹಾನಿ ಉಂಟಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 8 ಮನೆಗಳ ಛಾವಣಿಗಳು ಗಾಳಿಗೆ ಹಾರಿ ಹೋಗಿವೆ. ಜಗಳೂರು ತಾಲ್ಲೂಕಿನಲ್ಲಿ 10 ಮನೆಗಳ ಗೋಡೆಗಳು ಕುಸಿದಿವೆ. ಮೂರು ಮನೆಗಳಿಗೆ ನೀರು ನುಗ್ಗಿದ್ದು, ಆಹಾರ ಧಾನ್ಯಗಳು ನಷ್ಟವಾಗಿವೆ.ದಾವಣಗೆರೆ ತಾಲ್ಲೂಕಿನ ಹೆಮ್ಮನಬೇತೂರು, ದ್ಯಾಮೇನಹಳ್ಳಿ, ಚಿಕ್ಕನಾಗ್ತಿಹಳ್ಳಿ, ಜಗಳೂರು ತಾಲ್ಲೂಕಿನ ಬಿಳಿಚೋಡು, ಮುಗ್ಗಿದರಾಗಿಹಳ್ಳಿ, ಬೆಂಚಿಕಟ್ಟೆ, ಪಲ್ಲಾಗಟ್ಟೆ, ಅಸಗೋಡು, ಚಿಕ್ಕಅರಕೆರೆ ಮುಂತಾದ ಗ್ರಾಮಗಳಲ್ಲಿ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. 20 ಮನೆಗಳು ಕುಸಿದಿದ್ದು, ಅಪಾರ ಹಾನಿ ಸಂಭವಿಸಿದೆ.ಒಟ್ಟು ಜಿಲ್ಲೆಯಲ್ಲಿ ಸುಮಾರು 1.70 ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ತಿಳಿಸಿದರು. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ  ಬಾಳೆ ತೋಟಗಳು ರಾತ್ರಿ ಬೆಳಗಾಗುವುದರೊಳಗೆ ನೆಲಕಚ್ಚಿವೆ. ಸಮೃದ್ಧವಾಗಿ ಬೆಳೆದು ನಿಂತಿದ್ದ ಬಾಳೆಗೊನೆಯ ದಿಂಡುಗಳು ಸಾಲುಸಾಲಾಗಿ ಬುಡಸಮೇತ ಉರುಳಿ ಬಿದ್ದದ್ದನ್ನು ಕಂಡು ಆಘಾತಕ್ಕೊಳಗಾದ ರೈತರ ಆಕ್ರಂದನ ಮುಗಿಲು ಮುಟ್ಟಿತ್ತು.ಜಗಳೂರು ತಾಲ್ಲೂಕಿನ ಮುಗ್ಗಿದರಾಗಿ ಹಳ್ಳಿಯಲ್ಲಿ ಅಂಜಿನಪ್ಪ ಎಂಬ ರೈತ 4 ಎಕರೆ ಬಾಳೆ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.