ಬುಧವಾರ, ನವೆಂಬರ್ 13, 2019
28 °C

ಗಾಳಿ ಮಳೆ, ಮನೆ ಮೇಲೆ ಬಿದ್ದ ಮರ

Published:
Updated:

ಕೋಲಾರ: ನಗರದಲ್ಲಿ ಬುಧವಾರ ಮಧ್ಯಾಹ್ನ ಸುರಿದ ಜೋರು ಗಾಳಿ ಸಹಿತ ಮಳೆಗೆ ಗೌರಿಪೇಟೆ ಮೂರನೇ ಕ್ರಾಸ್‌ನಲ್ಲಿರುವ ಸಿಲ್ವರ್‌ಓಕ್ ಮರವೊಂದು ಮನೆಯೊಂದರ ಮೇಲೆ ವಾಲಿಬಿದ್ದ ಘಟನೆ ನಡೆಯಿತು.ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಜನ ಮತ್ತು ವಾಹನ ಸಂಚಾರ ನಿಂತಿದ್ದ ಪರಿಣಾಮ ಯಾವುದೇ ಅನಾಹುತ ಸಂಭವಿಸಲಿಲ್ಲ.

ಮಧ್ಯಾಹ್ನ 1.15ರ ವೇಳೆಯಲ್ಲಿ ಶುರುವಾದ ಮಳೆ-ಗಾಳಿ ಜೋರಾಗುತ್ತಿದ್ದಂತೆ, ಚರಂಡಿಗೆ ಅಂಟಿಕೊಂಡು ನಿಂತಿದ್ದ ಮರದ ಬೇರುಗಳು ಸಡಿಲವಾಗಿ ಮರವು ನಿಧಾನವಾಗಿ ರಸ್ತೆಯ ಇನ್ನೊಂದು ಬದಿಯ ಮನೆಯ ಮೇಲೆ ಬಿತ್ತು. ಮರ ಬಿದ್ದ ರಭಸಕ್ಕೆ ಮನೆಯ ಮುಖ್ಯ ಗೋಡೆ ಜಖಂಗೊಂಡಿದೆ.ನಗರವಷ್ಟೇ ಅಲ್ಲದೆ ತಾಲ್ಲೂಕಿನ ಸುತ್ತಮುತ್ತಲೂ ಮಧ್ಯಾಹ್ನ ಕೆಲ ಹೊತ್ತು ಜೋರುಗಾಳಿ ಸಹಿತ ಮಳೆ ಬಿದ್ದಿದೆ. ತಾಲ್ಲೂಕಿನ ಹೋಳೂರು, ಸುಗಟೂರು ಹೋಬಳಿಯ ಹಲವು ಗ್ರಾಮಗಳಲ್ಲಿ, ಶ್ರೀನಿವಾಸಪುರ ಪಟ್ಟಣ ಮತ್ತು ತಾಲ್ಲೂಕಿನ ಹಲವು ಗ್ರಾಮಗಳಲ್ಲೂ ಮಧ್ಯಾಹ್ನ ಮಳೆ ಸುರಿದಿದೆ.ಮಳೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸುರಿದು ನಿಂತ ಬಳಿಕವೂ ಈ ಎರಡೂ ತಾಲ್ಲೂಕುಗಳಲ್ಲಿ ರಾತ್ರಿಯಾದರೂ ಮೋಡ ಕವಿದ ವಾತಾವರಣವಿತ್ತು. ಅಲ್ಲಲ್ಲಿ ತುಂತುರು ಮಳೆ ಹನಿಯೂ ಬೀಳುತ್ತಿತ್ತು. ಮಾಲೂರಿನಲ್ಲೂ ಮಧ್ಯಾಹ್ನ 2ರ ವೇಳೆಗೆ ಸುಮಾರು 10 ನಿಮಿಷಗಳ ಕಾಲ ಆಲಿಕಲ್ಲು ಮಳೆ ಸುರಿಯಿತು. ಪುರಸಭೆ ಆವರಣದ ಮರದ ಕೊಂಬೆಯೊಂದು ಉರುಳಿ ಬಿದ್ದ ಘಟನೆಯನ್ನು ಬಿಟ್ಟರೆ  ಯಾವುದೇ ಹಾನಿಯಾಗಲಿಲ್ಲ.ಮುಳಬಾಗಲು ಮತ್ತು ಬಂಗಾರಪೇಟೆಯಲ್ಲಿ ಮಂಗಳವಾರ ರಾತ್ರಿ ಮಳೆ ಸುರಿದಿತ್ತು. ಬುಧವಾರ ಈ ತಾಲ್ಲೂಕುಗಳಲ್ಲಿ ಮಳೆ ಕಾಣಿಸಿಕೊಳ್ಳಲಿಲ್ಲ.

ಪ್ರತಿಕ್ರಿಯಿಸಿ (+)