ಗುರುವಾರ , ಫೆಬ್ರವರಿ 25, 2021
19 °C

ಗಾಳಿ ವಿದ್ಯುತ್‌: ಹೂಡಿಕೆಗೆ ವಿಪುಲ ಅವಕಾಶ

ವಿಶ್ವನಾಥ ಎಸ್‌. Updated:

ಅಕ್ಷರ ಗಾತ್ರ : | |

ಗಾಳಿ ವಿದ್ಯುತ್‌: ಹೂಡಿಕೆಗೆ ವಿಪುಲ ಅವಕಾಶ

ರಾಜ್ಯದಲ್ಲಿ ಗಾಳಿ ವಿದ್ಯುತ್‌ ಉತ್ಪಾದನೆಗೆ ವಿಪುಲ ಅವಕಾಶವಿದೆ. ಈ ನಿಟ್ಟನಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳು  ಶ್ಲಾಘನೀಯ. ಆದರೆ, ಭೂ ಸ್ವಾಧೀನ, ಭೂ ಪರಿವರ್ತನೆಗೆ ಇರುವ ಸಮಸ್ಯೆಗಳನ್ನು ನಿವಾರಿಸುವ ಅಗತ್ಯವಿದೆ ಎನ್ನುವುದು ಭಾರತೀಯ ಗಾಳಿ ಯಂತ್ರ ತಯಾರಕರ ಒಕ್ಕೂಟದ (ಐಡಬ್ಲ್ಯುಟಿಎಂಎ) ಪ್ರಧಾನ ಕಾರ್ಯದರ್ಶಿ ಡಿ.ವಿ. ಗಿರಿ ಅವರ   ಅಭಿಪ್ರಾಯವಾಗಿದೆ.ನವೀಕರಿಸಬಲ್ಲ ಇಂಧನಗಳ ಬಳಕೆಯಿಂದ  ವಿದ್ಯುತ್‌ ಕೊರತೆ ನೀಗಿಸುವುದು ಮಾತ್ರವಲ್ಲದೆ ಪರಿಸರ ರಕ್ಷಣೆಯೂ ಸಾಧ್ಯ. ಸೌರಶಕ್ತಿಯ ಜತೆಗೆ  ಗಾಳಿ ಶಕ್ತಿಯನ್ನೂ ಬಳಸಿಕೊಂಡು ರಾಜ್ಯದಲ್ಲಿ ವಿದ್ಯುತ್‌ ಸಮಸ್ಯೆ ನೀಗಿಸಬಹುದು ಎನ್ನುತ್ತಾರೆ ಅವರು.ರಾಜ್ಯದಲ್ಲಿ ವಿದ್ಯುತ್ ಕೊರತೆ ಬಹುದೊಡ್ಡ ಸಮಸ್ಯೆಯಾಗಿದೆ. ಕಡಿಮೆ ಮಳೆಯಾಗಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗುವುದು ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಪ್ರತಿ ವರ್ಷವೂ ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಇದರಿಂದ  ಅನಿಯಮಿತ ವಿದ್ಯುತ್‌ ಕಡಿತದ ಸಮಸ್ಯೆ ಎದುರಿಸಬೇಕಾಗಿ ಬರುತ್ತಿದೆ. ನವೀಕರಿಸಬಲ್ಲ ಇಂಧನಗಳ ಸಮರ್ಪಕ ಬಳಕೆಯೇ ಈ ಸಮಸ್ಯೆಗಳಿಗಿರುವ ಏಕೈಕ ಪರಿಹಾರವಾಗಿದೆ.ಸೌರಶಕ್ತಿ ಉತ್ಪಾದನೆ  ರಾಜ್ಯದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಮನೆಯ ಚಾವಣಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆ ಮಾಡಿ ಅದನ್ನು ಸರ್ಕಾರಕ್ಕೆ ಮಾರಾಟ ಮಾಡುವ ಯೋಜನೆಯೂ ಜಾರಿಗೆ ಬಂದಿದೆ. ಇದನ್ನು ಉತ್ತೇಜಿಸಲು  ಸರ್ಕಾರ ಸಬ್ಸಿಡಿಯನ್ನೂ ನೀಡುತ್ತಿದೆ.ಇನ್ನು, ಗಾಳಿ ಶಕ್ತಿಯಿಂದ ವಿದ್ಯುತ್‌ ಉತ್ಪಾದನೆಗೆ ಸಂಬಂಧಿಸಿದಂತೆ ರಾಜ್ಯ ಬಹಳಷ್ಟು ಹಿಂದೆ ಬಿದ್ದಿದೆ. ಸಾಮರ್ಥ್ಯಕ್ಕೆ ತಕ್ಕಂತೆ ಉತ್ಪಾದನೆ ಆಗುತ್ತಿಲ್ಲ ಎನ್ನುವುದು ‘ಐಡಬ್ಲ್ಯುಟಿಎಂಎ’ ಪ್ರತಿಪಾದನೆಯಾಗಿದೆ.ರಾಜ್ಯದಲ್ಲಿ ಗಾಳಿ ವಿದ್ಯುತ್‌ ಉತ್ಪಾದನೆಗೆ ಸರ್ಕಾರ ಹೆಚ್ಚು ಗಮನ ನೀಡಬೇಕಿದೆ. ಸದ್ಯ, ಗಾಳಿ ವಿದ್ಯುತ್‌ ಕ್ಷೇತ್ರದಲ್ಲಿ ಖಾಸಗಿಯವರ ಪಾಲು ಶೇ 95ರಷ್ಟಿದೆ. ನವೀಕರಿಸಬಲ್ಲ ವಿದ್ಯುತ್‌ ಯೋಜನೆಗಳನ್ನು ಜಾರಿಗೆ ತರುವ ಜತೆ ಜತೆಗೆ ಉತ್ಪಾದನೆಯ ಕಡೆಗೂ ಸರ್ಕಾರ ಗಮನ ನೀಡುವ ಅಗತ್ಯವಿದೆ.55,817 ಮೆಗಾವಾಟ್‌ ಉತ್ಪಾದನೆ ಸಾಮರ್ಥ್ಯವಿದೆ. ಆದರೆ ಈವರೆಗೆ ಕೇವಲ 2,918 ಮೆಗಾವಾಟ್‌ ಮಾತ್ರವೇ ಉತ್ಪಾದನೆಯಾಗಿದೆ. 2015–16ರಲ್ಲಿ ಗರಿಷ್ಠ 330 ಮೆಗಾವಾಟ್ ಸಾಮರ್ಥ್ಯದ ಘಟಕ ಸ್ಥಾಪಿಸಲಾಗಿದೆ.ಗ್ರಾಮೀಣ ಆರ್ಥಿಕತೆಗೆ ಬೆಂಬಲ

ರಾಜ್ಯದ ಮಟ್ಟಿಗೇ ಹೇಳುವುದಾದರೆ ಬಹುತೇಕ ಎಲ್ಲಾ ಗಾಳಿ ವಿದ್ಯುತ್‌ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿಯೇ ಇವೆ.  ವಿದ್ಯುತ್‌ ಉತ್ಪಾದನೆ ಪ್ರಮುಖ ಉದ್ದೇಶವಾದರೂ ಅದರ ಜತೆ ಜತೆಗೆ ಆ ಭಾಗಗಳಲ್ಲಿ ಸಣ್ಣ ಪ್ರಮಾಣದ ಉದ್ಯಮಗಳು ತಲೆ ಎತ್ತಿ, ಉದ್ಯೋಗ ಸೃಷ್ಟಿಯೂ ಸಾಧ್ಯವಾಗುತ್ತಿದೆ. ಆ ಮೂಲಕ ಗ್ರಾಮೀಣ  ಅರ್ಥವ್ಯವಸ್ಥೆಯ ಅಭಿವೃದ್ಧಿಗೂ ನೆರವಾಗುತ್ತಿದೆ.ವಿಜಯಪುರ, ಕಲಬುರ್ಗಿ, ಚಿತ್ರದುರ್ಗ, ಹುಬ್ಬಳ್ಳಿ ಮತ್ತು ಬೆಳಗಾವಿ ಗಾಳಿ ವಿದ್ಯುತ್‌ ಉತ್ಪಾದನೆಯಾಗುತ್ತಿರುವ ಪ್ರಮುಖ ಸ್ಥಳಗಳಾಗಿವೆ.ಸಮಸ್ಯೆ ಮತ್ತು ಸವಾಲುಗಳು

ದರ ಕಡಿಮೆ: ಖಾಸಗಿ ಕಂಪೆನಿಗಳಿಂದ ಖರೀದಿಸುವ ಗಾಳಿ ವಿದ್ಯುತ್‌ಗೆ ಪ್ರತಿ ಯುನಿಟ್‌ಗೆ ₹4.40ರಷ್ಟು ನೀಡಲಾಗುತ್ತಿದೆ. ಇದು ಬಹಳ ಕಡಿಮೆ. ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಅಗತ್ಯವಿದೆ.ಭೂಸ್ವಾಧೀನ: ಖಾಸಗಿ ಜಮೀನನ್ನು ಖರೀದಿಸಲು ಕಂಪೆನಿಗಳಿಗೆ ಅವಕಾಶವಿಲ್ಲ. ಇದರಿಂದ ಹೆಚ್ಚಿನ ಹೂಡಿಕೆ ಸಾಧ್ಯವಾಗದೆ, ಉತ್ಪಾದನೆಗೆ ಅಡ್ಡಿಯಾಗುತ್ತಿದೆ. ತಮಿಳುನಾಡಿನಲ್ಲಿ ಖಾಸಗಿ ಭೂಮಿ ಖರೀದಿಸಲು ಕಂಪೆನಿಗಳಿಗೆ ಮುಕ್ತ ಅವಕಾಶವಿದೆ. ಇದೇ ರೀತಿ ರಾಜ್ಯದಲ್ಲಿಯೂ ಅನುಮತಿ ಸಿಗುವಂತಾಗಬೇಕು.ಭೂಪರಿವರ್ತನೆ: ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವುದು ಸಮಸ್ಯೆಯಾಗಿದೆ. ಇದನ್ನು ಸುಲಭಗೊಳಿಸಬೇಕಿದೆ. ಗಾಳಿ ವಿದ್ಯುತ್ ಘಟಕಗಳಿರುವಲ್ಲಿ ಕೃಷಿ ಚಟುವಟಿಕೆ ನಡೆಸಲು, ಜಾನುವಾರು ಮೇಯಿಸಲು ಯಾವುದೇ ಸಮಸ್ಯೆಯಾಗದು.ರಾಜ್ಯದಿಂದ ನಿರೀಕ್ಷಿಸುವುದೇನು?

* ರಾಜ್ಯದಲ್ಲಿ ಗಾಳಿ ವಿದ್ಯುತ್‌ ಉತ್ಪಾದನೆ, ಬಳಕೆ ಮತ್ತು ಶೇಖರಣೆಗೆ ಸರ್ಕಾರ ಅನುಮತಿ ನೀಡಿದೆ. ಅದರೆ ಶೇಖರಣೆಗೆ ಅಧಿಕ ಸಬ್ಸಿಡಿ ವಿಧಿಸಿರುವುದನ್ನು ತೆಗೆದುಹಾಕಬೇಕು.* ಮೇಲ್ದರ್ಜೆಗೆ ಸಂಬಂಧಿಸಿದ ಕರಡು ಜಾರಿಗೊಳಿಸುವುದು: ರಾಜ್ಯದಲ್ಲಿ ಬಹಳಷ್ಟು ಹಳೆಯ ಗ್ರಿಡ್‌ಗಳಿವೆ. ಇದನ್ನು ತೆಗೆದು ಆ ಜಾಗದಲ್ಲಿ ಹೊಸ ಗ್ರಿಡ್‌ಗಳ ಅಳವಡಿಕೆ ಮಾಡಿದರೆ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗುತ್ತದೆ.* ವಿಂಡ್‌–ಸೋಲಾರ್‌ (ಗಾಳಿ ವಿದ್ಯುತ್‌ ಮತ್ತು ಸೌರಶಕ್ತಿ) ಹೈಬ್ರಿಡ್‌ ಯೋಜನೆ ಜಾರಿಗೊಳಿಸಿದರೆ, ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಸೌರಶಕ್ತಿ, ಆ ನಂತರ ಗಾಳಿ ಶಕ್ತಿಯಿಂದ ವಿದ್ಯುತ್‌ ಉತ್ಪಾದನೆ ಮಾಡಬಹುದು. ಇದರಿಂದ ರಾಜ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ.* ಗ್ರಿಡ್‌ ಸಂಪರ್ಕ ಹೆಚ್ಚಿಸುವುದು: ಚಿತ್ರದುರ್ಗದಲ್ಲಿ ಹೆಚ್ಚು ಗಾಳಿ ವಿದ್ಯುತ್‌ ಉತ್ಪಾದನೆ ಸಾಧ್ಯವಿದೆ. ಆದರೆ ಅಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಬೇರೆಡೆ ಸಾಗಿಸಲು ಸೂಕ್ತ ಗ್ರಿಡ್‌ ವ್ಯವಸ್ಥೆ ಇಲ್ಲ.* ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಿಂದ ಹೊರಗಿಡುವುದು. ವಿಂಡ್‌ ಟರ್ಬೈನ್‌ಗಳಿಗೆ ಜಿಎಸ್‌ಟಿ ತೆರಿಗೆ ವಿಧಿಸಿದರೆ ಅದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ.ಚೀನಾಕ್ಕಿಂತ ಹಿಂದಿರುವ ಭಾರತ

ಚೀನಾಕ್ಕಿಂತಲೂ ಬಹಳ ಮುಂಚೆಯೇ ಭಾರತದಲ್ಲಿ ಗಾಳಿ ವಿದ್ಯುತ್‌ ಉತ್ಪಾದನೆ ಆರಂಭವಾಗಿದೆ. ಹೀಗಿದ್ದರೂ ಉತ್ಪಾದನೆ ವಿಷಯದಲ್ಲಿ ಹಿಂದೆ ಬಿದ್ದಿದೆ.

25 ವರ್ಷದಲ್ಲಿ ಭಾರತ ಕೇವಲ 20 ಸಾವಿರ ಮೆಗಾವಾಟ್‌ ಉತ್ಪಾದನೆ ಮಾಡಿದೆ. ಆದರೆ ಚೀನಾ ಕೇವಲ ಒಂದೇ ವರ್ಷದಲ್ಲಿ 27 ಸಾವಿರ ಮೆಗಾವಾಟ್‌ ಉತ್ಪಾದಿಸಿದೆ. ಇದಕ್ಕೆ ಕಾರಣ ಚೀನಾ ಸರ್ಕಾರ. ಶೇ 100ರಷ್ಟು ಗಾಳಿ ವಿದ್ಯುತ್‌ ಉತ್ಪಾದನೆಯನ್ನು ಸರ್ಕಾರವೇ ಮಾಡುತ್ತಿದೆ. ಆದರೆ ಭಾರತದಲ್ಲಿ ಶೇ 95ರಷ್ಟು ಉತ್ಪಾದನೆ ಖಾಸಗಿ ಕ್ಷೇತ್ರದ್ದಾಗಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತ್ಯೇಕ ನೀತಿಗಳು, ಭೂಸ್ವಾಧೀನ ಮತ್ತು ಭೂ ಪರಿವರ್ತನೆಗೆ ಇರುವ ಸವಾಲುಗಳು ಸೇರಿದಂತೆ ಇನ್ನೂ ಹಲವು ಕಾರಣಗಳಿಂದಾಗಿ ಭಾರತದಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಗಾಳಿ ವಿದ್ಯುತ್‌ ಉತ್ಪಾದನೆ ಆಗುತ್ತಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.