ಗಾಳಿ ವಿದ್ಯುತ್ ಘಟಕದ ಗುತ್ತಿಗೆ ರದ್ದು

7

ಗಾಳಿ ವಿದ್ಯುತ್ ಘಟಕದ ಗುತ್ತಿಗೆ ರದ್ದು

Published:
Updated:
ಗಾಳಿ ವಿದ್ಯುತ್ ಘಟಕದ ಗುತ್ತಿಗೆ ರದ್ದು

ಬೆಂಗಳೂರು: ಜೀವವೈವಿಧ್ಯ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿ ಬೆಟ್ಟಶ್ರೇಣಿಗಳಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಚೆನ್ನೈ ಮೂಲದ ಬಿ.ಬಿ.ಹಿಲ್ಸ್ ವಿಂಡ್ ಫಾರಂ ಕಂಪೆನಿಗೆ, 30 ವರ್ಷಗಳವರೆಗೆ ನೀಡಿದ್ದ ಗುತ್ತಿಗೆಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.ರಾಜ್ಯ ಸರ್ಕಾರವು `ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ~ವು (ಕೆಆರ್‌ಡಿಎಲ್) 124 ಗಾಳಿಯಂತ್ರಗಳನ್ನು ಸ್ಥಾಪಿಸಲು 305.37 ಎಕರೆಗಳಷ್ಟು ಜಮೀನನ್ನು (ಆದೇಶ ಸಂಖ್ಯೆ ಎಂ 4 ಎಲ್‌ಎನ್‌ಡಿ ಸಿರ್ 251:2001-02, ಜೂನ್ 21, 2002, ಜೂನ್ 26, 2003 ಮತ್ತು ಏಪ್ರಿಲ್ 2003) 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿತ್ತು.ಈ ಜಮೀನು ಚಿಕ್ಕಮಗಳೂರು ತಾಲ್ಲೂಕಿನ ಐ.ಡಿ.ಪೀಠ, ಮುತ್ತಿನಪುರ, ಎಸ್.ಡಿ.ಪೀಠ, ಕೊಳಗಾಮೆ ಮತ್ತು ಇತರ ಗ್ರಾಮಗಳ ವಿವಿಧ ಸರ್ವೆ ನಂಬರುಗಳನ್ನು ಒಳಗೊಂಡಿತ್ತು. ಕೆಆರ್‌ಡಿಎಲ್ ನಂತರ ಈ ಗುತ್ತಿಗೆಯನ್ನು ಚೆನ್ನೈನ ಬಿ.ಬಿ.ಹಿಲ್ಸ್ ವಿಂಡ್ ಫಾರಂ ಕಂಪೆನಿಗೆ ಉಪಗುತ್ತಿಗೆ ನೀಡಿತ್ತು.ಚಿಕ್ಕಮಗಳೂರಿನ `ವೈಲ್ಡ್‌ಸ್ಯಾಟ್-ಸಿ ಸಂಸ್ಥೆಯ ಮನೀಶ್‌ಕುಮಾರ್, ಶ್ರೀದೇವ್ ಹುಲಿಕೆರೆ ಅವರು ಪಶ್ಚಿಮ ಘಟ್ಟಗಳ ಶೋಲಾ ಕಾಡುಗಳು ಮತ್ತು ನೈಸರ್ಗಿಕ ಹುಲ್ಲುಗಾವಲುಗಳಿರುವ ಈ ಪ್ರದೇಶದಲ್ಲಿ ಗಾಳಿ ವಿದ್ಯುತ್ ಉತ್ಪಾದನೆಗೆ ಜಮೀನು ಮಂಜೂರು ಮಾಡಿರುವುದರ ಬಗ್ಗೆ ಸ್ಥಳೀಯ ನ್ಯಾಯಾಲಯದಲ್ಲಿ ಈಗಾಗಲೇ ಪ್ರಶ್ನಿಸಿದ್ದಾರೆ.ಗುತ್ತಿಗೆ ನೀಡಲ್ಪಟ್ಟಿದ್ದ ಪ್ರದೇಶವು ಶೋಲಾ ಕಾಡುಗಳೆಂದು ಗುರುತಿಸಲ್ಪಟ್ಟಿರ‌್ದುವುದು.ಕರ್ನಾಟಕ ಅರಣ್ಯ ಕಾಯ್ದೆ 1963ರ, ಕಲಂ 4ರ ಅಡಿಯಲ್ಲಿ, ಮೀಸಲು ಅರಣ್ಯಗಳಾಗಿ ಘೋಷಿಸುವ ಪ್ರಕ್ರಿಯೆಯು ನಡೆಯುತ್ತಿದ್ದ ಭೂಮಿಯಾಗಿರುವುದರಿಂದ ಈ ಗುತ್ತಿಗೆಯು ಅರಣ್ಯ ಸಂರಕ್ಷಣಾ ಕಾಯ್ದೆ 1980, ಕಲಂ 2ರ ಸ್ಪಷ್ಟ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.ಈ ಪ್ರದೇಶದಲ್ಲಿ ಹುಲಿ, ಕಾಡೆಮ್ಮೆ, ಕಡವೆ, ಕೆನ್ನಾಯಿ ಮತ್ತು ಇನ್ನಿತರ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳು ವಾಸವಾಗಿರುವುದನ್ನು ಪತ್ತೆ ಹಚ್ಚಲಾಗಿತ್ತು. ಗಾಳಿ ಯಂತ್ರಗಳ ಸ್ಥಾಪನೆಯು ದೊಡ್ಡ ದಾಸಮಂಗಟ್ಟೆ, ಮಲೆ ದಾಸ ಮಂಗಟ್ಟೆ, ಕಪ್ಪೆಬಾಯಿ, ಕಂದುಹೊಟ್ಟೆಯ ಗಿಡುಗ, ಜೊಂಡು ಉಲಿಯಕ್ಕಿ, ಕಂದುಹೊಟ್ಟೆಯ ಕಿರುರೆಕ್ಕೆ ಮುಂತಾದ ಪಕ್ಷಿಸಂಕುಲಕ್ಕೆ ಮುಳುವಾಗಬಹುದು.ಪಕ್ಷಿಗಳ ವಲಸೆಯ ಮಾರ್ಗದಲ್ಲಿರುವ ಗಾಳಿಯಂತ್ರ ಸ್ಥಾಪನಾ ಸ್ಥಳವು ಸಾವಿರಾರು ಪಕ್ಷಿಗಳ ಸಾವಿಗೆ ಕಾರಣವಾಗಬಹುದು ಎಂದು ವನ್ಯಜೀವಿ ತಜ್ಞರು ಶಂಕೆ ವ್ಯಕ್ತಪಡಿಸಿದ್ದರು.ಗುತ್ತಿಗೆ ನೀಡಲಾದ ಪ್ರದೇಶವು ನೈಸರ್ಗಿಕ ಕಾಡುಗಳನ್ನು ಹೊಂದಿರುವುದರಿಂದ, ಅರಣ್ಯಗಳನ್ನು ಒಳಗೊಂಡ ಜಮೀನುಗಳು, ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆಯದೇ ಯಾವುದೇ ರೀತಿಯ ಅರಣ್ಯೇತರ ಚಟುವಟಿಕೆಗಳಿಗೆ ಎರವಾಗಬಾರದೆಂದು ಸುಪ್ರೀಂಕೋರ್ಟ್ 1996ರ ಡಿಸೆಂಬರ್ 12ರಂದು ಆದೇಶಿಸಿತ್ತು. ಅಲ್ಲದೇ ಈ ಸ್ಥಳವು `ಭದ್ರಾ ಹುಲಿ ಯೋಜನೆ~ ಪ್ರದೇಶದ ಪರಿಸರ ಸೂಕ್ಷ್ಮ ವಲಯದೊಳಗಿತ್ತು.

ಈ ಎಲ್ಲ ನಿಯಮ ಉಲ್ಲಂಘನೆಗಳನ್ನು ಗಮನಿಸಿ ಕಳೆದ ಮಾರ್ಚ್ 24ರಂದು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಗುತ್ತಿಗೆ ಮಂಜೂರಾತಿ ರದ್ದುಪಡಿಸಲು ಶಿಫಾರಸು ಮಾಡಲಾಗಿತ್ತು. ಇದರ ಆಧಾರದ ಮೇಲೆ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಸೆ.6ರಂದು ಗುತ್ತಿಗೆಯನ್ನು ರದ್ದುಪಡಿಸಿ ಆದೇಶ (ಸಂಖ್ಯೆ ಎಂ 4 ಎಲ್‌ಎನ್‌ಡಿ ಸಿರ್ 291/2001-02) ಹೊರಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry