ಗಾಳಿ ಸಹಿತ ಮಳೆ: ಅಪಾರ ಹಾನಿ

ಗೋಕಾಕ: ಗೋಕಾಕ ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ಮಧ್ಯರಾತ್ರಿ ಸುರಿದ ಭಾರೀ ಗಾಳಿಮಳೆ ಯಿಂದಾಗಿ ಅಪಾರ ಪ್ರಮಾಣದ ಆಸ್ತಿಗೆ ಹಾನಿ ಉಂಟಾಗಿದೆ.
ತಾಲ್ಲೂಕಿನ ಮೇಲ್ಮಟ್ಟಿ ಗ್ರಾಮದಲ್ಲಿ 15ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಹನುಮಂತ ದೇವರ ಗುಡಿ ಎದುರು ವಿದ್ಯುತ್ ಕಂಬ ಮುರಿದುಕೊಂಡು ರಸ್ತೆಗೆ ಅಡ್ಡಲಾಗಿ ಬಿದ್ದಿದೆ.
ಲಕ್ಷ್ಮೀದೇವಿ ಗುಡಿಯ ಆವರಣದಲ್ಲಿ ನಿರ್ಮಿಸಲಾಗಿದ್ದ ಬಯಲು ರಂಗ ಮಂಪಟದ ಮೇಲ್ಛಾವಣಿ ಸಂಪೂರ್ಣ ವಾಗಿ ಕಿತ್ತು ಹೋಗಿದ್ದರೆ, ಅದೇ ಆವರಣದಲ್ಲಿರುವ ಅಡುಗೆ ಕೋಣೆಯ ಗೋಡೆಯೊಂದು ಕುಸಿದಿದೆ.
ಘಟನೆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಾನಿಯ ಅಂದಾಜು ಪಟ್ಟಿಯನ್ನು ತಹಶೀಲ್ದಾರ ಎಸ್.ಆರ್. ಶಿರಕೋಳ ಅವರಿಗೆ ಸಲ್ಲಿಸಿದ್ದಾರೆ.
ಆಗ್ರಹ: ಅನಿರೀಕ್ಷತ ಮಳೆಯಿಂದ ಗ್ರಾಮದಲ್ಲಿ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಹೊಲಕ್ಕೆ ನುಗ್ಗಿದ ನೀರು
ಹೊಸೂರ (ತಾ.ಸವದತ್ತಿ): ಗ್ರಾಮ ದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಮನೆಗಳು ಕುಸಿದು ಬಿದ್ದಿದ್ದು, ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ. ಹೊಲ–ಗದ್ದೆಗಳಿಗೆ ನೀರು ನುಗ್ಗಿದ್ದು, ಕೊಯ್ಲಿಗೆ ಬಂದ ಮೆಣಸಿನಕಾಯಿ ಬೆಳೆಯೂ ನೀರು ಪಾಲಾಗಿದೆ.
ಮದುವೆ ಸಮಾರಂಭ ಮುಗಿಸಿ ಕೊಂಡು ಮಾಟೊಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ವೊಂದು ಗ್ರಾಮದ ಹೊರವಲಯ ದಲ್ಲಿ ಹಾಳಾಗಿರುವ ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಇದರಿಂದಾಗಿ ಮಧ್ಯರಾತ್ರಿಯಿಂದ ಬೆಳಗಿನ ಜಾವ 7 ಗಂಟೆಯವರೆಗೂ ಪ್ರಯಾಣಿಕರು ಬಸ್ನಲ್ಲೇ ಇರಬೇಕಾಯಿತು. ಬಳಿಕ ಜೆಸಿಬಿಯಿಂದ ರಸ್ತೆಯಲ್ಲಿ ಸಿಲುಕಿಕೊಂಡಿ ದ್ದ ಬಸ್ ಹೊರತೆಗೆಯಲಾಯಿತು.
ಕತ್ತಲಲ್ಲಿ ಜನತೆ
ರಾಮದುರ್ಗ: ಪಟ್ಟಣದಲ್ಲಿ ಸೋಮ ವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಜನತೆ ಕತ್ತಲಿನಲ್ಲಿ ಕಾಲಕಳೆಯುವಂತಾಯಿತು.
ಸೋಮವಾರ ರಾತ್ರಿಯಿಂದಲೇ ವಿದ್ಯುತ್ ಕಡಿತಗೊಂಡಿದ್ದರಿಂದ ಕುಡಿಯುವ ನೀರಿಗೆ ಸೇರಿದಂತೆ ದೈನಂದಿನ ಅಗತ್ಯತೆಗೆ ತೀವ್ರ ತೊಂದರೆಯುಂಟಾಯಿತು.
ವಿದ್ಯುತ್ ವ್ಯತ್ಯಯ ನಾಳೆ
ಬೆಳಗಾವಿ: ಮಳೆಗಾಲ ಆರಂಭಗೊ ಳ್ಳುವ ಹಿನ್ನೆಲೆಯಲ್ಲಿ 33 ಕೆವಿ ಸದಾಶಿವ ನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವ ಸಲುವಾಗಿ ಈ ಕೇಂದ್ರದ ಮೇಲಿನ ಪೂರಕ ಪ್ರದೇಶಗಳಿಗೆ ಮೇ 22ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಹನುಮಾನ ನಗರ, ಸಹ್ಯಾದ್ರಿನಗರ, ವಾಟರ್ ಸಪ್ಲೈ, ಹಿಂಡಲಗಾ, ಕಂಗ್ರಾಳಿ ಪೀಡರ್ಗಳ ಪೂರಕ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.