ಗಾಸಿಪಿಂಗ್ ಎಂಬ ಬಾಯ್ತುರಿಕೆ

ಸೋಮವಾರ, ಜೂಲೈ 22, 2019
27 °C

ಗಾಸಿಪಿಂಗ್ ಎಂಬ ಬಾಯ್ತುರಿಕೆ

Published:
Updated:

 ಗಾಸಿಪಿಂಗ್ ಎಂದರೆ ಬರೀ ಹೆಣ್ಣು ಮಕ್ಕಳು ಮಾತ್ರ ಮಾಡುವಂತಾದ್ದು ಎಂದುಕೊಂಡು ಇದನ್ನು `ಭೂಮಿಕಾ~ದಲ್ಲಿ ಬರೆದಿದ್ದೀರೇನು ಎಂದು ಯಾರಾದರೂ ತರಲೆ ತೆಗೆದರೆ ನನ್ನ ಬಳಿ ಸ್ಪಷ್ಟ ಉತ್ತರವಿಲ್ಲ ಎಂದು ಮೊದಲೇ ಒಪ್ಪಿಕೊಂಡುಬಿಡುತ್ತೇನೆ!



ತಮಾಷೆ ಅಂದರೆ ಹೆಚ್ಚಿನ ಗಂಡಸರೂ ಇದನ್ನು ಮಾಡುತ್ತಾರಾದರೂ ಅದು ಗಾಸಿಪಿಂಗ್ ಎಂದು ಕರೆಸಿಕೊಳ್ಳುವುದೇ ಇಲ್ಲ. ಅದೂ ಅಲ್ಲದೆ ಹೆಂಗಸರೇ ಹೆಚ್ಚು ಗಾಸಿಪಿಂಗ್ ಮಾಡುತ್ತಾರೆ ಎಂದು ಅವರಲ್ಲೇ ಹೆಚ್ಚಿನವರು ಒಪ್ಪಿಕೊಂಡುಬಿಡುತ್ತಾರೆ! ಅದೇನೇ ಇರಲಿ ಸದ್ಯಕ್ಕೆ ನಾನು ಹೇಳುವುದಂತೂ ಸ್ತ್ರೀ ಪುರುಷರಿಬ್ಬರಿಗೂ ಸಮಾನವಾಗಿ ಅನ್ವಯಿಸುವಂತಾದ್ದು.



ನಾನು ಹೇಳಹೊರಟಿರುವುದು ಸಿನಿಮಾ, ಪತ್ರಿಕೆಗಳು, ಟಿ.ವಿಗಳಲ್ಲಿ ಬರುವ ನಟ/ ನಟಿಯರ ಬಗೆಗಿನ ಗಾಸಿಪಿಂಗ್ ಬಗೆಗಲ್ಲ. ನಾವು ದಿನನಿತ್ಯ ಬೆರೆಯುವ ಜನಗಳ ಬಗೆಗೆ ನಮ್ಮ ನಮ್ಮಲ್ಲೇ ನಡೆಸುವ ಗಾಸಿಪಿಂಗ್ ವಿಚಾರ.

 

ಮನಃಶಾಸ್ತ್ರದ ದೃಷ್ಟಿಯಿಂದ ನೋಡಿದರೆ ಎಲ್ಲಾ ತರಹದ ಗಾಸಿಪಿಂಗ್‌ಗಳೂ ಒಂದೇ ರೀತಿಯ ಮನೋಭಾವದ ದ್ಯೋತಕ. ಒಂದೇ ವ್ಯತ್ಯಾಸವೆಂದರೆ ದೊಡ್ಡವರ ಗಾಸಿಪ್‌ಗಳನ್ನು ಚಪ್ಪರಿಸುವುದರಿಂದ ನಮ್ಮ ವೈಯಕ್ತಿಕ ಸಂಬಂಧಗಳಂತೂ ಹಾಳಾಗಲಾರವು!



ಗಾಸಿಪಿಂಗ್ ಅಂದರೆ ಏನು?

ನಾಲ್ಕು ಜನ ಸೇರಿದೊಡನೆ ಅಲ್ಲಿ ಹಾಜರಿಲ್ಲದವರ ಬಗ್ಗೆ ಮಾತನಾಡುವುದೆಲ್ಲಾ ಗಾಸಿಪಿಂಗ್ ಅಲ್ಲ. ಎದುರಿಗೆ ಇಲ್ಲದವರ ಬಗ್ಗೆ ಮಾತನಾಡಿದ್ದನ್ನು ಅವರು ಇದ್ದಾಗಲೂ ಮಾತನಾಡಲು ಸಾಧ್ಯವಾದರೆ ಅದು ಗಾಸಿಪಿಂಗ್ ಯಾಕಾಗುತ್ತದೆ? ಹಾಗಿದ್ದರೆ ಸ್ಥಳದಲ್ಲಿ ಇಲ್ಲದವರ ಬಗ್ಗೆ ಅವರೆದುರು ಹೇಳಲಾರದ್ದನ್ನು ಮಾತನಾಡುವುದು ಗಾಸಿಪಿಂಗ್ ಎಂದಾಯಿತು ಅಲ್ಲವೇ? ಹಾಗಾಗಿ ಗಾಸಿಪಿಂಗ್ ವಿಚಾರಗಳು ಆ ವ್ಯಕ್ತಿಯ ಋಣಾತ್ಮಕ ಗುಣ, ನಡತೆಗಳ ಬಗ್ಗೆ ಮಾತ್ರ ಇರುತ್ತವೆ.



ಇದರ ಪರಿಣಾಮಗಳೇನು?

ಹೀಗೊಂದು ಘಟನೆಯನ್ನು ಊಹಿಸಿಕೊಳ್ಳಿ. ನಿಮ್ಮ ಹತ್ತಿರ ನಿಮ್ಮಬ್ಬ ಸ್ನೇಹಿತರು ಬಂದು ಯಾರ ಬಗ್ಗೆಯೋ ಗಾಸಿಪ್ ಮಾಡಿದ್ದಾರೆ. ತಕ್ಷಣಕ್ಕೆ ನಿಮಗೆ ಬಹಳ ಖುಶಿಯಾಗುತ್ತದೆ.



ಗಾಸಿಪ್ ನಿಮ್ಮ ಶತ್ರುಗಳ ಬಗೆಗಿದ್ದರಂತೂ ಹಾಲಿಗೆ ಜೇನು ಸೇರಿಸಿದಷ್ಟು ಸವಿಯಾಗಿರುತ್ತದೆ! ಆದರೆ ಸ್ವಲ್ಪ ಯೋಚಿಸಿ. ನಿಮ್ಮ ಹತ್ತಿರ ಬೇರೊಬ್ಬರ ಬಗ್ಗೆ ಮಾತನಾಡಿದ ವ್ಯಕ್ತಿ ನಿಮ್ಮ ಬಗ್ಗೆಯೂ ಇದೇ ರೀತಿ ಮೂರನೆಯವರ ಎದುರು ಮಾತನಾಡಿರಬಹುದಲ್ಲವೇ? ಅಂತಹವರು ನಿಮ್ಮ ನಂಬಿಕೆಗೆ ಹೇಗೆ ಅರ್ಹರಾಗುತ್ತಾರೆ?



ಈ ಗಾಸಿಪಿಂಗ್ ಉದ್ದೇಶ ಸಾಮಾನ್ಯವಾಗಿ ಇತರರನ್ನು ನಮಗಿಂತ ಕೀಳು ಎಂದು ಬಿಂಬಿಸುವ ಪ್ರಯತ್ನವಾಗಿರುತ್ತದೆ. ಹಾಗಾಗಿ ಪತಿ- ಪತ್ನಿ- ಮಕ್ಕಳ ಮಧ್ಯೆ ಇದರ ಹಾವಳಿ ಕಡಿಮೆ.



ಆದರೆ ಇತರ ಸಂಬಂಧಿಗಳು ಮತ್ತು ಸ್ನೇಹಿತರ ವಿಷಯಗಳಲ್ಲಿ ಗಾಸಿಪಿಂಗ್ ತೀರಾ ಸಾಮಾನ್ಯ. ಆತ್ಮೀಯ ಸ್ನೇಹಿತರನ್ನು ನಮ್ಮಿಂದ ದೂರ ಮಾಡುವುದರಲ್ಲಿ ಮತ್ತು ಪರಿಚಯ ಉತ್ತಮ ಸ್ನೇಹವಾಗುವುದನ್ನು ತಪ್ಪಿಸುವುದರಲ್ಲಿ ಗಾಸಿಪಿಂಗ್ ಮಹತ್ವದ ಪಾತ್ರ ವಹಿಸುತ್ತದೆ.



ನಮ್ಮ ಸುತ್ತಮುತ್ತ  ಇವುಗಳ ಉದಾಹರಣೆಗಳನ್ನು ನಾವು ಸಾಕಷ್ಟು ನೋಡುತ್ತೇವೆ; ಕತೆ, ಕಾದಂಬರಿ, ಸಿನಿಮಾಗಳಲ್ಲಿ ಗಾಸಿಪಿಂಗ್‌ನ ದುಷ್ಪರಿಣಾಮಗಳು ಹೇರಳವಾಗಿ ಬಿಂಬಿತವಾಗಿವೆ. ಆದರೂ ಇದರಿಂದ ನಾವು ಪಾಠವನ್ನು ಮಾತ್ರ ಕಲಿಯುವುದಿಲ್ಲ. ಯಾಕೆಂದರೆ ಈ ಗಾಸಿಪಿಂಗ್‌ನ ನಶೆಯೇ ಅಂತಾದ್ದು!



ಇದು ಕುರುಕಲು ತಿಂಡಿಯಂತೆ ಸ್ವಾದಿಷ್ಟ;  ಜೀವಹಾನಿ ಮಾಡದಿದ್ದರೂ ಆಗಾಗ ಗ್ಯಾಸ್ ಟ್ರಬಲ್, ಹುಳಿ ತೇಗಿನಂತಹ ಕಿರಿಕಿರಿಗಳನ್ನು ಮಾಡುತ್ತಲೇ ಇರುತ್ತದೆ!



ತಪ್ಪಿಸುವುದು ಹೇಗೆ?

ತಕ್ಷಣ ಹೀಗೊಂದು ನಿರ್ಧಾರ ಮಾಡೋಣ. ಸುತ್ತಲಿನ ಜನರ ನಡವಳಿಕೆಗೆ ನಾನೇನೂ ಕೊನೆಯ ತೀರ್ಮಾನ ನೀಡುವ ಸರ್ವೋಚ್ಚ ನ್ಯಾಯಲಯ ಆಗಬೇಕಿಲ್ಲ. ನನ್ನ ಪರಿಚಿತರು ಮತ್ತು ಆತ್ಮೀಯರ ನಡೆ ನುಡಿ ನನಗೆ ಸರಿ ಅನಿಸದಿದ್ದರೆ ಅದನ್ನು ಅವರಲ್ಲಿ ವೈಯಕ್ತಿಕವಾಗಿ, ಮನಸ್ಸಿಗೆ ನೋವಾಗದಂತೆ ಹೇಳುತ್ತೇನೆ; ಯಾವುದೇ ರೀತಿಯಿಂದ ಹಾನಿಕಾರಕವಲ್ಲದ ಅಂಶಗಳನ್ನು ವ್ಯಕ್ತಿತ್ವದ ವೈವಿಧ್ಯ ಎಂದುಕೊಂಡು ಸುಮ್ಮನಾಗಿಬಿಡುತ್ತೇನೆ. ಯಾರ ಬಗೆಗೂ ಅವರೆದುರು ಹೇಳಲಾರದ್ದನ್ನು ಅವರ ಗೈರುಹಾಜರಿಯಲ್ಲಿ ಹೇಳುವುದಿಲ್ಲ.



ಇಂತಹ ನಿರ್ಧಾರಗಳ ಕಾರ್ಯಾಚರಣೆಯಲ್ಲಿ ನಾವು ಪದೇಪದೇ ಎಡುವುವುದು ಸಹಜ. ಆದರೆ ಇದನ್ನು ಅಳವಡಿಸಿಕೊಂಡ ಸ್ವಲ್ಪ ದಿನಗಳಲ್ಲೇ ಈ ನಡವಳಿಕೆ ನಮ್ಮ ಸಹಜ ಸ್ವಭಾವದ ಒಂದು ಭಾಗವೇ ಆಗಿ ಬಿಡುತ್ತದೆ.

 

ಆರಂಭದಲ್ಲಿ ನಮ್ಮ ನೇರ ಮಾತುಗಳಿಂದ ಸಾಕಷ್ಟು ಸಂಬಂಧಗಳು ಬಿರುಕು ಬಿಡಬಹುದು. ಒಮ್ಮೆ ನಾವು ನಂಬಲರ್ಹ ವ್ಯಕ್ತಿ ಎಂದು ಸಾಬೀತಾದೊಡನೆ ಸುತ್ತಲಿನವರೆಲ್ಲಾ ಅವರಾಗಿಯೇ ನಮ್ಮ ಸ್ನೇಹಕ್ಕಾಗಿ ಹಾತೊರೆಯುತ್ತಾರೆ. ಆದರೆ ಕೆಲವರಾದರೂ ನಮ್ಮಿಂದ ದೂರ ಹೋಗುವ ಸಾಧ್ಯತೆ ಇರುತ್ತದೆ. ಅದನ್ನು ಒಪ್ಪಿಕೊಂಡುಬಿಟ್ಟರಾಯಿತು.

 

ಯಾಕೆಂದರೆ ಎಲ್ಲರನ್ನೂ ಖುಷಿಯಲ್ಲಿಡುವ ಭರದಲ್ಲಿ ನಮ್ಮ ಸ್ವಂತಿಕೆ, ಸಮಾಧಾನಗಳನ್ನು ನಾವು ಕಳೆದುಕೊಳ್ಳಲಾಗುವುದಿಲ್ಲ. ಎಲ್ಲರನ್ನೂ ಒಪ್ಪಿಸುವ ಉದ್ದೇಶದಿಂದ ಹೊರಟವರೆಲ್ಲಾ ತಮ್ಮತನವನ್ನೂ ಕಳೆದುಕೊಂಡು, ಇತರರನ್ನೂ ಮೆಚ್ಚಿಸಲಾರದ ಎಡಬಿಡಂಗಿತನದಲ್ಲಿ ಉಳಿದುಹೋಗುವುದೇ ಹೆಚ್ಚು.

 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry