ಸೋಮವಾರ, ಮಾರ್ಚ್ 1, 2021
31 °C

ಗಾಸಿಪಿಂಗ್ ಎಂಬ ಬಾಯ್ತುರಿಕೆ -2

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಸಿಪಿಂಗ್ ಎಂಬ ಬಾಯ್ತುರಿಕೆ -2

ಶತ್ರುಗಳು ಗುಸು ಗುಸು ಆರಂಭಿಸುತ್ತಾರೆ

ಅಜ್ಞಾನಿಗಳು ಎಲ್ಲೆಡೆ ಹರಡುತ್ತಾರೆ

ಮೂರ್ಖರು ನಂಬಿ ಸ್ವೀಕರಿಸುತ್ತಾರೆ 

 -ಡಾ. ಆಲ್ಟನ್
ಗಾಸಿಪ್‌ನಂತಹ ಹಾಳು ಹರಟೆಯಿಂದ ಸಮಯ ಹಾಳು, ಮನಃಶಾಂತಿ ನಷ್ಟ, ಇನ್ನೊಬ್ಬರ ಜೀವನವನ್ನೇ ಅದು ಹಾಳು ಮಾಡಿಬಿಡಬಹುದು ಎಂಬ ಟೀಕೆಗಳೇನೋ ಇವೆ. ಆದರೆ ಯಾರೇನೇ ಹೇಳಲಿ ಗಾಸಿಪ್ ಅಂದರೆ ಎಲ್ಲರಿಗೂ ಇಷ್ಟವೇ!ಸುಳ್ಳು ಸುದ್ದಿ ಹರಡುವ, ಇನ್ನೊಬ್ಬರ ಮನೆ-ಮನ ಮುರಿಯುವ ಗಾಸಿಪ್ ಕೆಟ್ಟದ್ದು ನಿಜ. ಸತ್ಯಾಂಶ ಹೊಂದಿರುವ, ಪರರಿಗೆ ಹಾನಿ ಉಂಟು ಮಾಡದ ಗಾಸಿಪ್‌ನಿಂದ ಲಾಭಗಳೂ ಇವೆ ಎಂಬುದು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತಾದ ಆಶ್ಚರ್ಯಕರ ಸತ್ಯ!ಗಾಸಿಪ್ ಮನುಕುಲಕ್ಕೆ ಹೊಸದೇನೂ ಅಲ್ಲ. ಈಜಿಪ್ಟ್‌ನಲ್ಲಿ ಸಿಕ್ಕಿದ ಐದು ಸಾವಿರ ವರ್ಷಗಳ ಹಿಂದಿನ ಹಸ್ತಪ್ರತಿಗಳಲ್ಲಿ ಇದರ ಬಗ್ಗೆ ಉಲ್ಲೇಖವಿದೆ. ರಾಣಿಯ ಸೌಂದರ್ಯದ ಗುಟ್ಟು, ರಾಜನ ಸಂಗಾತಿಗಳು, ಕೊಲೆಯ ಸಂಚು ಇವೆಲ್ಲದರ ಬಗ್ಗೆ ಜೋರಾಗಿಯೇ ಗಾಸಿಪಿಂಗ್ ನಡೆಯುತ್ತಿತ್ತಂತೆ! ಆಗ ಗಾಸಿಪ್ ಮಾಡುವವ ಎಂದರೆ `ಇಡೀ ಕುಟುಂಬದ ವಿದ್ಯಮಾನಗಳನ್ನು ಪರಸ್ಪರರಿಗೆ ತಿಳಿಸುವ ವ್ಯಕ್ತಿ~ ಎಂದಾಗಿತ್ತು.ಶೇಕ್ಸ್‌ಪಿಯರ್‌ನ ಕಾಲದಲ್ಲಿ, ಗಾಸಿಪ್ ಮಾಡುವವರು ಎಂದರೆ ಹೆರಿಗೆಯ ಹೊತ್ತಿಗೆ ಸಮಯ ಕಳೆಯಲು, ಧೈರ್ಯ ತುಂಬಲು ಗರ್ಭಿಣಿ ಪಕ್ಕ ಕುಳಿತು ಸುದ್ದಿ ಹೇಳುವ ವ್ಯಕ್ತಿ ಆಗಿದ್ದ! ಕಾಲ ಕಳೆದಂತೆ ಗಾಸಿಪ್ ಎಂದರೆ ಗುಸು-ಗುಸು ಮಾತನಾಡುವುದು ಎಂಬ ಅರ್ಥ ಜಾರಿಗೆ ಬಂತು.ಅಮೆರಿಕದ ಮನಃಶಾಸ್ತ್ರಜ್ಞ ಫ್ರಾಂಕ್‌ಮಾಕ್ ಆ್ಯಂಡ್ರೂ, ಗಾಸಿಪಿಂಗ್ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಿದ್ದಾರೆ. ಅವರ ಪ್ರಕಾರ, ಮಾನವ ಸಂಘಜೀವಿ.  ಸಹಜವಾಗಿಯೇ ಅವನಿಗೆ ಇತರರ ಒಡನಾಟ ಬೇಕು.ಅಂತೆಯೇ ಆತ ಇತರರ ಬಗ್ಗೆ ಕೇಳಲು, ಮಾತನಾಡಲು ಇಷ್ಟಪಡುತ್ತಾನೆ. ಮಾನವನ ಈ ಸ್ವಭಾವವೇ ಗಾಸಿಪ್‌ಗೆ ಮೂಲ ಕಾರಣ. ಗಾಸಿಪ್ ಮಾಡಲು ಹೆಂಗಸರಿಗಷ್ಟೇ ಅಲ್ಲ ಗಂಡಸರಿಗೂ ಇಷ್ಟವೇ. ಆದರೆ ಗಂಡಸರು ಚರ್ಚಿಸುವ ವಿಷಯಗಳು ಬೇರೆ ಅಷ್ಟೇ!ಅಮೆರಿಕದ ಮಿಚಿಗನ್ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನೆಗಳು ಗಾಸಿಪ್‌ನ ಪ್ರಯೋಜನಗಳನ್ನು ಹೀಗೆ ವಿವರಿಸುತ್ತವೆ.ಸ್ನೇಹ ವೃದ್ಧಿ: ಮಾತನಾಡುವುದು, ಆಲಿಸುವುದು, ಕತೆ-ಗುಟ್ಟುಗಳನ್ನು ಹಂಚಿಕೊಳ್ಳುವುದು ಇವೆಲ್ಲಾ ಗಾಸಿಪ್‌ನ ಅಂಗಗಳು. ಈ ರೀತಿ ಮಾಡುವುದರಿಂದ ಪರಸ್ಪರರಲ್ಲಿ ಆತ್ಮೀಯತೆ, ನಂಬಿಕೆ, ಸ್ನೇಹ ಹೆಚ್ಚುತ್ತದೆ.ಅನುಭವಗಳಿಂದ ಪಾಠ: ಇತರರ ಅನುಭವ/ ಕತೆ ಕೇಳುವುದರಿಂದ ನಿರ್ದಿಷ್ಟ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು, ವರ್ತಿಸಬಾರದು ಎಂಬ ಪಾಠ ಅರಿವಿಲ್ಲದೆಯೇ ಮನದಟ್ಟಾಗುತ್ತದೆ. (ಉದಾಹರಣೆಗೆ `ಶಂಕರ ವಯಸ್ಸಾದ ಅಜ್ಜಿ ಬಂದಾಗಲೂ ಹೇಗೆ ಕಾಲ್ ಮೇಲೆ ಕಾಲ್ ಹಾಕಿ ಕೂತಿದ್ದ ಗೊತ್ತಾ?~ ಎಂದು ಟೀಕಿಸುವವರಿಂದ ವಯಸ್ಸಾದವರಿಗೆ ಗೌರವ ಕೊಡಬೇಕು ಎಂಬ ಪ್ರಜ್ಞೆ ಮೂಡುತ್ತದೆ.`ಸೀಮಾ ಪೂಜೆ ದಿನಾನೂ ಜೀನ್ಸ್, ಸ್ಲೀವ್‌ಲೆಸ್ ಟಾಪ್ ಹಾಕಿದ್ಲು~- ಇದು ಸಭೆ-ಸಮಾರಂಭಗಳಿಗೆ ಹೊಂದುವ ಉಡುಪು ಧರಿಸಬೇಕು ಎಂಬ ಅರಿವು ಮೂಡಿಸುತ್ತದೆ.

ನಿಯಮ ಅನುಸರಣೆಗೆ ಪ್ರೇರಣೆ: ತಪ್ಪು ಮಾಡಿದರೆ ನಾಳೆ ತನ್ನ ಬಗ್ಗೆಯೂ ಇತರರು ಹೀಗೆಯೇ ಮಾತನಾಡುತ್ತಾರೆ ಎಂಬ ಎಚ್ಚರ ಮೂಡುವುದರಿಂದ ಸರಿಯಾಗಿ ವರ್ತಿಸಲು ಪ್ರೇರಣೆ ಸಿಗುತ್ತದೆ.ಒತ್ತಡ ನಿವಾರಣೆ: ತಾನು ಸರಿಯಿಲ್ಲ, ತನ್ನ ಜೀವನ ಸರಿಯಿಲ್ಲ, ಬೇರೆಯವರ ಜೀವನ ಪರಿಪೂರ್ಣವಾಗಿದೆ ಎಂದು ಭಾವಿಸಿ ಕೊರಗುವವರು ಬಹಳ ಜನ. ಹೀಗಿರುವಾಗ ಇತರರ ಕುಂದುಕೊರತೆಗಳ ಬಗ್ಗೆ ತಿಳಿದು ಬಂದಾಗ ಮನಸ್ಸಿಗೆ ನೆಮ್ಮದಿ. `ಎಲ್ಲರ ಮನೆಯ ದೋಸೆಯೂ ತೂತೇ~ ಎಂಬ ಭಾವನೆಯಿಂದ ಆಶಾವಾದಿಗಳಾಗುತ್ತಾರೆ.  ಹಾಗೆಯೇ ಮನಸ್ಸಿನಲ್ಲಿರುವ ಗುಟ್ಟನ್ನು ಇನ್ನೊಬ್ಬರಿಗೆ ಹೇಳಿ ಹಗುರವಾಗಲು ಸಹ ಗಾಸಿಪಿಂಗ್ ಒಂದು ಮಾರ್ಗ!ಪ್ರೊಜೆಸ್ಟೆರಾನ್ ಪ್ರಮಾಣದಲ್ಲಿ ಏರಿಕೆ: ಈ ಎಲ್ಲಾ ಅಧ್ಯಯನಗಳಿಂದ ಸಾಬೀತಾದ ಇನ್ನೊಂದು ಅಂಶವೆಂದರೆ ಹೆಂಗಸರಲ್ಲಿ ಉಪಯುಕ್ತ ಹಾರ್ಮೋನ್‌ಗಳ ಬಿಡುಗಡೆ ಆಗುತ್ತದೆ ಎಂಬುದು.ಈ ಹಾರ್ಮೋನ್ ಮಾನಸಿಕ ಒತ್ತಡ, ಆತಂಕವನ್ನು ಕಡಿಮೆ ಮಾಡುತ್ತದೆ. ಸುಖ ನಿದ್ರೆ ಬರುವಲ್ಲಿ, ಮೂಳೆಯ ಸಾಂದ್ರತೆ ಹೆಚ್ಚಿಸುವಲ್ಲಿ ಸಹಕಾರಿ.  ಸ್ವಾರಸ್ಯಕರ, ಕುತೂಹಲಕರ ವಿಷಯಗಳನ್ನು ಹೇಳುವಾಗ, ಕೇಳುವಾಗ ಮೆದುಳಿನಲ್ಲಿ ಡೋಪಮಿನ್ ಹಾರ್ಮೋನ್‌ನ ಉತ್ಪಾದನೆ ಹೆಚ್ಚುತ್ತದೆ.  ಇದರಿಂದ ಮಾತನಾಡುತ್ತಿರುವ ವ್ಯಕ್ತಿಯೊಂದಿಗೆ ಸ್ನೇಹ ಸಂಬಂಧ ವೃದ್ಧಿಸುತ್ತದೆ.ಒಟ್ಟಿನಲ್ಲಿ ಗಾಸಿಪ್ ಬಗ್ಗೆ ಸಂಶೋಧನೆ ನಡೆಸಿದವರೆಲ್ಲರ ಅಭಿಪ್ರಾಯ ಹೀಗಿದೆ- ಸಂತೋಷವಾಗಿರಲು, ದೀರ್ಘಕಾಲ ಆರೋಗ್ಯವಾಗಿ ಜೀವಿಸಲು ಭಾವನಾತ್ಮಕವಾಗಿ ಬೆಸೆಯುವ, ಹಂಚಿಕೊಳ್ಳುವ ಕ್ರಿಯೆಗಳಲ್ಲಿ ತೊಡಗಬೇಕು. ಅದರಲ್ಲಿ ಒಂದು, ಇತರರಿಗೆ ಹಾನಿಯುಂಟು ಮಾಡದ ಗಾಸಿಪ್!

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.