ಗಿಡಗಳ ಸ್ಥಳಾಂತರ: ಟೂಡಾ ಸ್ಪಷ್ಟನೆ

7

ಗಿಡಗಳ ಸ್ಥಳಾಂತರ: ಟೂಡಾ ಸ್ಪಷ್ಟನೆ

Published:
Updated:

ತುಮಕೂರು: ಅಮಾನಿಕೆರೆ ಸಮೀಪ ರಸ್ತೆ ಬದಿ ನೆಡಲಾಗಿದ್ದ 118 ಗಿಡಗಳನ್ನು ಕಿತ್ತು, ಅಮಾನಿಕೆರೆ ತಂತಿ ಬೇಲಿ ಒಳಗೆ ನೆಡಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಧರಮೂರ್ತಿ ಸೋಮವಾರ ಸ್ಪಷ್ಟಪಡಿಸಿದರು.ಮಳೆ ಬಂದ ಸಮಯದಲ್ಲಿ ಅಮಾನಿಕೆರೆ ಸಮೀಪದ ರಸ್ತೆ ಬದಿಯಲ್ಲಿ ಮಳೆ ನೀರು ನಿಲ್ಲುತ್ತಿದೆ. ಹೀಗಾಗಿ ರಸ್ತೆಯನ್ನು 1.5ರಿಂದ 2 ಮೀಟರ್‌ನಷ್ಟು ವಿಸ್ತರಿಸಿ, ಚರಂಡಿ ನಿರ್ಮಿಸಲಾಗುವುದು. ರೂ.1.5 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಈ ಕಾಮಗಾರಿ ಕೈಗೆತ್ತಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ಪ್ರಸ್ತುತ ನೆಡಲಾಗಿದ್ದ ಗಿಡಗಳಿಗೆ ಈ ಕಾಮಗಾರಿಯಿಂದ ತೊಂದರೆಯಾಗಲಿದ್ದು, ಗಿಡ ಸ್ಥಳಾಂತರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಗುತ್ತಿಗೆದಾರರು ಇಳಿಸಂಜೆಯಲ್ಲಿ ಕಾಮಗಾರಿ ನಿರ್ವಹಿಸಿದ್ದರಿಂದ ಸಲ್ಲದ ಅನುಮಾನ ವ್ಯಕ್ತವಾಗಿವೆ. ಪರಿಸರಕ್ಕೆ ಹಾನಿ ಮಾಡುವ ಯಾವ ಉದ್ದೇಶವೂ ಟೂಡಾಗೆ ಇಲ್ಲ ಎಂದು ತಿಳಿಸಿದರು.ಗಿಡಗಳನ್ನು ಅಮಾನಿಕೆರೆ ತಂತಿಬೇಲಿಯ ಒಳಗೆ ಹಾಕುವುದರಿಂದ ಗಿಡಗಳಿಗೆ ರಕ್ಷಣೆಯೂ ಸಿಗುತ್ತದೆ. ಸೋಲಾರ್ ಲೈಟ್‌ಗಳಿಗೆ ಮುಂದಿನ ದಿನಗಳಲ್ಲಿ ಬಿಸಿಲಿನ ಕೊರತೆಯನ್ನೂ ತಪ್ಪಿಸಿದಂತೆ ಆಗುತ್ತದೆ. ಕೆರೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾದ ನಂತರ ವಾಹನ ನಿಲುಗಡೆಗೆ ಸ್ಥಳಾವಕಾಶ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಡಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಯಡಿ ಕೋತಿತೋಪು ಭಾಗದಲ್ಲಿ 12 ಎಕರೆ ಉದ್ಯಾನ, ಡಿಸಿ ಕಚೇರಿ ಹಿಂಭಾಗದಲ್ಲಿ 13 ಎಕರೆ ಉದ್ಯಾನವನ್ನು ರೂ.3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಉದ್ಯಾನದಲ್ಲಿ ವಿವಿಧ ಜಾತಿಯ ಸುಮಾರು 6 ಸಾವಿರ ಮರಗಳನ್ನು ಬೆಳೆಸುವ ಉದ್ದೇಶವಿದೆ ಎಂದು ನುಡಿದರು.ಅಮಾನಿಕೆರೆ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತದಲ್ಲಿವೆ. ಮುಖ್ಯದ್ವಾರದ ಕೆಲಸ ಪೂರ್ಣಗೊಳ್ಳುತ್ತಿದೆ. ಕೋತಿತೋಪಿನ ಬಳಿ ಶೌಚಾಲಯ, ಪಾದಚಾರಿ ಸ್ಥಳ, ತಿನಿಸು ಮಳಿಗೆ, ಮಾರಾಟ ಮಳಿಗೆ ಸೇರಿದಂತೆ ಹಲವು ಸಿವಿಲ್ ಕಾಮಗಾರಿಗಳು ನಡೆಯುತ್ತಿವೆ. ಮೇ ಅಂತ್ಯದಲ್ಲಿ ಕೆರೆಯನ್ನು ಸಾರ್ವಜನಿಕರಿಗೆ ಅರ್ಪಿಸಲಾಗುವುದು ಎಂದು ಹೇಳಿದರು.ಕೆರೆ ನಾಮಕರಣ: ಅಮಾನಿಕೆರೆಗೆ `ಬಸವ ಸಾಗರ~ ಎಂದು ನಾಮಕರಣ ಮಾಡುವಂತೆ ಕೋರಿ ತುಮಕೂರು ನಾಗರಿಕ ಸಮಿತಿ, ಸಾಹಿತ್ಯ ಪರಿಷತ್, ನಗರ ವೀರಶೈವ ಸಮಾಜ ಸಮಿತಿ, ಬಾಪೂಜಿ ವಿದ್ಯಾಸಂಸ್ಥೆ, ನಗರ ಛಾಯಾಗ್ರಾಹಕರ ಸಂಘ ನೀಡಿದ್ದ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸಾರ್ವಜನಿಕರ ಆಕ್ಷೇಪಣೆ, ಪೊಲೀಸ್ ಇಲಾಖೆ ನಿರಾಪೇಕ್ಷಣಾ ಪತ್ರ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಅದರಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶ್ರೀಧರಮೂರ್ತಿ ಮಾಹಿತಿ ನೀಡಿದರು.ಅಮಾನಿಕೆರೆಗೆ ನಿರ್ದಿಷ್ಟವಾಗಿ ಇಂಥದ್ದೇ ಹೆಸರು ಇಡಬೇಕೆಂಬ ಚಿಂತನೆ ಟೂಡಾಗೆ ಇಲ್ಲ. ಸಾರ್ವಜನಿಕರು ಸಲ್ಲಿಸುವ ಎಲ್ಲ ಆಕ್ಷೇಪಣೆ, ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರವೇ ಅಂತಿಮ ತೀರ್ಮಾನ ಪ್ರಕಟಿಸಲಿದೆ ಎಂದು ಸ್ಪಷ್ಟಪಡಿಸಿದರು. ಟೂಡಾ ಆಯುಕ್ತ ಆದರ್ಶ ಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry