ಗಿನ್ನೆಸ್ ಗುರಿಯ ‘ನಮಸ್ತೆ ಇಂಡಿಯಾ’

7

ಗಿನ್ನೆಸ್ ಗುರಿಯ ‘ನಮಸ್ತೆ ಇಂಡಿಯಾ’

Published:
Updated:

ಒಂದೇ ದಿನ, ಒಂದೇ ಪ್ರದೇಶ, ಎರಡು ಗಂಟೆ ಐದು ನಿಮಿಷದ ಕಥೆ, ಮಾತು- ಹಾಡು- ಹೊಡೆದಾಟ,- ಪ್ರೀತಿ- -– ದೇಶಭಕ್ತಿ-, ಹಾಸ್ಯ... ಎಲ್ಲವೂ ಒಂದೇ ಶಾಟ್‌ನಲ್ಲಿ... ಕನ್ನಡದ ಉತ್ಸಾಹಿ ಯುವಕರ ತಂಡವೊಂದು ಗಿನ್ನೆಸ್ ದಾಖಲೆ ನಿರ್ಮಿಸುವ ಉಮೇದಿನಲ್ಲಿ ಹೊರಟಿದೆ. ಇದರ ರೂವಾರಿ ನಿರ್ದೇಶಕ ಗುಣವಂತ ಮಂಜು.ಆರ್. ಚಂದ್ರು, ಎ.ಆರ್. ಬಾಬು ಮುಂತಾದ ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವ ಗಿಟ್ಟಿಸಿಕೊಂಡಿರುವ ಮಂಜು ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ‘ನಮಸ್ತೆ ಇಂಡಿಯಾ’ ಎಂಬ ಪ್ರೇಮ–-ದೇಶಪ್ರೇಮದ ಕಥನವನ್ನು ಹೇಳ ಹೊರಟಿರುವ ಅವರು, ಒಂದೇ ಶಾಟ್‌ನಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.

ಅಂದಹಾಗೆ, ಒಂದೇ ಶಾಟ್‌ನಲ್ಲಿ ಇಡೀ ಸಿನಿಮಾವನ್ನು ಸೆರೆಹಿಡಿದ ಗಿನ್ನೆಸ್ ದಾಖಲೆ ಇರುವುದು ತೆಲುಗಿನ ‘ಅಗಾಧಂ’ ಹೆಸರಿನಲ್ಲಿ. 2 ಗಂಟೆ 1 ನಿಮಿಷ ಅವಧಿಯ ಆ ಸಿನಿಮಾ ದಾಖಲೆಯನ್ನು 2 ಗಂಟೆ 5 ನಿಮಿಷ ಅವಧಿ ಚಿತ್ರಿಸುವ ಮೂಲಕ ಮುರಿಯುವುದು ಮಂಜು ಅವರ ಗುರಿ. ಮಂಜು ಚಿತ್ರೀಕರಣ ನಡೆಸಲು ಉದ್ದೇಶಿಸಿರುವುದು ಹಂಪಿಯ ವಿಜಯ ವಿಠ್ಠಲ ದೇವಾಲಯದ ಸುತ್ತಮುತ್ತ. ‘ಸೈಕೋ’ ಚಿತ್ರದ ನಾಯಕ ಧನುಷ್ ‘ನಮಸ್ತೆ ಇಂಡಿಯಾ’ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ಮೈತ್ರೇಯಿ ಮತ್ತು ತನುಷಾ ಚಿತ್ರದ ನಾಯಕಿಯರು. ಕಥೆಯ ಬೇರು ಹಂಪಿಯಲ್ಲಿಯೇ ಇರುವುದರಿಂದ ಆ ಪ್ರದೇಶದಲ್ಲಿಯೇ ಚಿತ್ರವನ್ನು ಸೆರೆಹಿಡಿಯುತ್ತಿದ್ದಾರೆ. ಒಂದೇ ಶಾಟ್‌ನಲ್ಲಿ ಇಡೀ ಸಿನಿಮಾವನ್ನು ಸೆರೆಹಿಡಿಯುವುದು ಸುಲಭದ ಮಾತಲ್ಲ. ಅದಕ್ಕಾಗಿ ಸುಮಾರು 30 ದಿನಗಳಿಂದ ತಾಲೀಮು ನಡೆಸಲಾ ಗುತ್ತಿದೆ. ಚಿತ್ರೀಕರಣ ನಡೆಸುವ ಮೂರು ದಿನ ಮೊದಲೇ ಹಂಪಿಗೆ ತೆರಳುವ ಚಿತ್ರತಂಡ ಅಲ್ಲಿಯೂ ತಾಲೀಮು ನಡೆಸಲಿದೆ.

ಚಿತ್ರದಲ್ಲಿ ಹಂಪಿಯ ಮಹತ್ವವನ್ನು ತಿಳಿಸುವ, ದೇಶಭಕ್ತಿಯ ಸಂದೇಶ ಸಾರುವ ಅಂಶಗಳಿವೆ. ಆದರೆ ಇದು ಪರಿಪೂರ್ಣ ಮನರಂಜನಾತ್ಮಕ ವ್ಯಾಪಾರೀ ಚಿತ್ರ ಎನ್ನುತ್ತಾರೆ ಮಂಜು. ನಂದಕುಮಾರ್ ಛಾಯಾಗ್ರಹಣ, ಕ್ಷೇಮೇಂದ್ರ ಸಂಗೀತ ಮತ್ತು ಹ್ಯಾರಿಸ್ ಜಾನಿ ಸಾಹಸ ಚಿತ್ರಕ್ಕಿದೆ. ಕೃತಕ ಬೆಳಕುಗಳಿಲ್ಲದ ಸೂರ್ಯನ ಬೆಳಕಿನಲ್ಲಿಯೇ ಚಿತ್ರೀಕರಣ ನಡೆಸಲಾಗುತ್ತದೆ.ಮಂಜುನಾಥ್ ಮೂಲತಃ ಕೋಲಾರದವರು. ಮೊದಲಿನಿಂದಲೂ ಸಾಹಿತ್ಯದ ಒಲವು. ಭಯೋತ್ಪಾದನೆಯ ಎಳೆಯನ್ನಿಟ್ಟುಕೊಂಡು ‘ಮತ್ತೊಂದು ಸ್ವಾತಂತ್ರ್ಯ’ ಎಂಬ ಕೃತಿ ಬರೆದಿದ್ದ ಅವರು, ಈಗ ‘ಸ್ನೇಹಿತೆ’ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ‘ಗುಣವಂತ’ ಚಿತ್ರದಲ್ಲಿ ಸಂಭಾಷಣೆಕಾರನಾಗಿ ಪರಿಚಿತರಾದ ಅವರ ಹೆಸರಿನೊಂದಿಗೆ ಸಿನಿಮಾ ಶೀರ್ಷಿಕೆಯೂ ಅಂಟಿಕೊಂಡಿತು.

ಒಂದೇ ಶಾಟ್‌ನಲ್ಲಿ ಸಿನಿಮಾ ಮಾಡುವ ಮಂಜು ಅವರ ಉದ್ದೇಶ ಕೇಳಿ ಅನೇಕ ನಟರು, ನಿರ್ಮಾಪಕರು ಹಿಂದೆ ಸರಿದಿದ್ದರಂತೆ. ವೃತ್ತಿಯಲ್ಲಿ ಲ್ಯಾಂಡ್ ಡೆವಲಪರ್ ಆದ ಶಿವಕುಮಾರ್ ಎನ್ನುವವರು ‘ನಮಸ್ತೆ ಇಂಡಿಯಾ’ಕ್ಕೆ ಹಣ ಹೂಡಲು ಮುಂದೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಅ. 20ರಂದು ಮುಹೂರ್ತ ನಡೆಸಿ, ಬಳಿಕ ಹಂಪಿಗೆ ಚಿತ್ರತಂಡ ತೆರಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry