ಗಿರಿಜನರಿಗೆ ಮನೆ: ಸಮೀಕ್ಷೆಗೆ ಸೂಚನೆ

7
ಜ. 9ಕ್ಕೆ ಜಿಲ್ಲೆಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭೇಟಿ

ಗಿರಿಜನರಿಗೆ ಮನೆ: ಸಮೀಕ್ಷೆಗೆ ಸೂಚನೆ

Published:
Updated:
ಗಿರಿಜನರಿಗೆ ಮನೆ: ಸಮೀಕ್ಷೆಗೆ ಸೂಚನೆ

ಚಾಮರಾಜನಗರ: `ಜಿಲ್ಲೆಯ ಎಲ್ಲ ಗಿರಿಜನ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಸಂಬಂಧ ಸರ್ವ ಕುಟುಂಬಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ   ವಿ. ಸೋಮಣ್ಣ ಸೂಚಿಸಿದರು.ನಗರದಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯಿತಿಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. `1,300 ಗಿರಿಜನ ಕುಟುಂಬಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಬಗ್ಗೆ ಈ ಹಿಂದೆ ವರದಿ ಸಲ್ಲಿಸಲಾಗಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಬೇಕು.

ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಜಿಲ್ಲಾ ಗಿರಿಜನ ಕಲ್ಯಾಣಾಧಿಕಾರಿ ಅರ್ಹರ ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು. ಜ. 9ರಂದು ಜಿಲ್ಲೆಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭೇಟಿ ನೀಡಲಿದ್ದಾರೆ. ಅಂದೇ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು' ಎಂದು ಅವರು  ಹೇಳಿದರು.ಒಂದು ಮನೆ ನಿರ್ಮಾಣದ ಘಟಕ ವೆಚ್ಚ 1.80 ಲಕ್ಷ ರೂ. ಪ್ರಸ್ತುತ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಪ್ರತಿ ಮನೆಗೆ 75 ಸಾವಿರ ರೂ ಸಹಾಯಧನ ಸೌಲಭ್ಯ ನೀಡಲಾಗುವುದು. ಉಳಿದ ಹಣವನ್ನು ಜಿಲ್ಲಾಡಳಿತ, ಗಿರಿಜನ ಕಲ್ಯಾಣ ಇಲಾಖೆಯಿಂದ ಭರಿಸಬೇಕು. ಹೆಚ್ಚುವರಿ ಅನುದಾನ ಕಲ್ಪಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.ಶಾಸಕ ಆರ್. ನರೇಂದ್ರ ಮಾತನಾಡಿ, `ಹನೂರು ವಿಧಾನಸಭಾ ಕ್ಷೇತ್ರದಲ್ಲಿ 80 ಗಿರಿಜನರ ಪೋಡುಗಳಿವೆ. ಹಲವು ಮಂದಿಗೆ ಸೂರು ಇಲ್ಲ. ಅರ್ಹರನ್ನು ಗುರುತಿಸಿ ಮನೆ ಮಂಜೂರು ಮಾಡಬೇಕು' ಎಂದು ಕೋರಿದರು.`ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಗಿರಿಜನರಿಗೆ ಮನೆ ನಿರ್ಮಿಸಿಕೊಡುವ ಸಂಬಂಧ ಈ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ತ್ವರಿತವಾಗಿ ಮನೆ ಮಂಜೂರು ಮಾಡಬೇಕು' ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಸಭೆಯ ಗಮನ ಸೆಳೆದರು.ಶಾಸಕ ಎಚ್.ಎಸ್. ಮಹದೇವಪ್ರಸಾದ್ ಮಾತನಾಡಿ, `ಮೂರ‌್ನಾಲ್ಕು ವರ್ಷದ ಹಿಂದೆ ಸರ್ಕಾರದ ವಸತಿ ಯೋಜನೆಯಡಿ ಬಿಡುಗಡೆಯಾಗಿದ್ದ ಕಡಿಮೆ ಅನುದಾನದಡಿ ಗಿರಿಜನರು ಮನೆ ನಿರ್ಮಿಸಿಕೊಂಡಿದ್ದಾರೆ. ಪ್ರಸ್ತುತ ಆ ಮನೆಗಳು ಶಿಥಿಲಗೊಂಡಿವೆ. ಗುಣಮಟ್ಟದ ಮನೆ ನಿರ್ಮಿಸಿಕೊಡಲು ಒತ್ತು ನೀಡಬೇಕು' ಎಂದು ಸಲಹೆ ಮುಂದಿಟ್ಟರು.ಏಡ್ಸ್ ರೋಗಿಗಳಿಗೆ ಮನೆ

ಜಿಲ್ಲಾಧಿಕಾರಿ ಎನ್. ಜಯರಾಂ ಮಾತನಾಡಿ, `ಜಿಲ್ಲೆಯಲ್ಲಿ 120 ಮಂದಿ ಏಡ್ಸ್ ರೋಗಿಗಳಿದ್ದಾರೆ. ಅವರಿಗೆ ಮನೆ ನಿರ್ಮಿಸಿಕೊಡಬೇಕು' ಎಂದು ಸಭೆಗೆ ಮಂಡಿಸಿದರು.

ಸಚಿವ ಸೋಮಣ್ಣ ಮಾತನಾಡಿ, `ಎಲ್ಲರಿಗೂ 1.50 ಲಕ್ಷ ರೂ ವೆಚ್ಚದಡಿ ಮನೆ ನಿರ್ಮಿಸಿ ಕೊಡಲಾಗುವುದು' ಎಂದು ಭರವಸೆ ನೀಡಿದರು.

ಸಭೆಯಲ್ಲಿ ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪಿ. ಮಹದೇವಪ್ಪ, ಜಿಲ್ಲಾಧಿಕಾರಿ ಎನ್. ಜಯರಾಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ಸೋಮಶೇಖರಪ್ಪ ಹಾಜರಿದ್ದರು.ಹಾಸ್ಟೆಲ್‌ಗೆ ವಿದ್ಯಾರ್ಥಿಗಳೇ ಬರಲ್ಲ!

ಚಾಮರಾಜನಗರ:
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಮೆಟ್ರಿಕ್‌ಪೂರ್ವ ಹಾಸ್ಟೆಲ್‌ಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ!

ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್. ಪ್ರತಿಭಾ ನೀಡಿದ ಈ ಮಾಹಿತಿ ಸಚಿವರು ಹಾಗೂ ಶಾಸಕರಲ್ಲಿ ಅಚ್ಚರಿ ಮೂಡಿಸಿತು. ಈ ಹಾಸ್ಟೆಲ್‌ಗಳಲ್ಲಿ ಒಟ್ಟು 3,300 ಸೀಟುಗಳಿದ್ದರೂ, ಪ್ರಸಕ್ತ ವರ್ಷ 1,800 ವಿದ್ಯಾರ್ಥಿಗಳು ಮಾತ್ರವೇ ದಾಖಲಾಗಿದ್ದಾರೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಸರ್ಕಾರದಿಂದ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ. ಆದರೂ, ಮಕ್ಕಳ ದಾಖಲಾತಿ ಕೊರತೆಗೆ ಅಧಿಕಾರಿಗಳೇ ಕಾರಣ. ನೀವು ಸೌಲಭ್ಯದ ಬಗ್ಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಅರಿವು ಮೂಡಿಸಬೇಕು. ಆ ಮೂಲಕ ಮಕ್ಕಳನ್ನು ಹಾಸ್ಟೆಲ್‌ಗೆ ದಾಖಲಿಸಲು ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.ಪ್ರಾಧಿಕಾರ ರಚನೆಗೆ ಕ್ರಮ

ಚಾಮರಾಜನಗರ:
`ಮಲೆಮಹದೇಶ್ವರ ಬೆಟ್ಟದ ಮಹದೇಶ್ವರ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಶೀಘ್ರವೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು' ಎಂದು ಸಚಿವ ಸೋಮಣ್ಣ ಹೇಳಿದರು.ಸಭೆಯಲ್ಲಿ ಮಾತನಾಡಿದ ಅವರು, `ಪ್ರಾಧಿಕಾರ ರಚನೆಗೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇನೆ. ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. 120 ವಿದ್ಯುತ್ ಕಂಬ ಅಳವಡಿಕೆಗೆ ಬಾಕಿಯಿದೆ.ಕೂಡಲೇ, ಕಾಮಗಾರಿ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯವಹಿಸಿದರೆ ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು' ಎಂದು ಎಚ್ಚರಿಸಿದರು.ಜಿಲ್ಲೆಯ 1,034 ಮಕ್ಕಳಿಗೆ ಅಪೌಷ್ಟಿಕತೆ

ಚಾಮರಾಜನಗರ:
`ಜಿಲ್ಲೆಯಲ್ಲಿ 2010-11ನೇ ಸಾಲಿನಡಿ 844 ಹಾಗೂ 2011-12ನೇ ಸಾಲಿನಲ್ಲಿ 4,025 ಭಾಗ್ಯಲಕ್ಷ್ಮೀ ಬಾಂಡ್ ವಿತರಣೆಯಾಗಿಲ್ಲ. ಇನ್ನೂ ಎಲ್‌ಐಸಿಯಿಂದ ಬಾಂಡ್‌ಗಳು ಬಂದಿಲ್ಲ' ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶೇಹೆರ್‌ಬಾನು ಸಭೆಗೆ ತಿಳಿಸಿದರು.ಜಿಲ್ಲಾ ವ್ಯಾಪ್ತಿ 1,034 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ 130 ಮಕ್ಕಳು ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿದ್ದಾರೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. 3ರಿಂದ 6ವರ್ಷದ ಮಕ್ಕಳಿಗೆ ಹಾಲು ವಿತರಿಸುವಂತೆ ಸರ್ಕಾರ ಸೂಚಿಸಿದೆ ಎಂದು ವಿವರಿಸಿದರು.ಸಚಿವರ ಕೈಗೆ ಸಿಗದ ಗಿರಾಕಿ!

ಚಾಮರಾಜನಗರ:
ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯ ಪಾಲಕ ಎಂಜಿನಿಯರ್ ಹಾಗೂ ನಗರಸಭೆ ಪೌರಾಯುಕ್ತರು ವಿಫಲರಾ ಗಿದ್ದಾರೆ. ಅವರನ್ನು ಜಿಲ್ಲೆಯಿಂದ ಬೇರೆಡೆಗೆ ವರ್ಗಾವಣೆ ಮಾಡುವ ಸಂಬಂಧ ವರದಿ ಸಲ್ಲಿಸುವಂತೆ ಸಚಿವ ಸೋಮಣ್ಣ ಸೂಚಿಸಿದರು.`ಪಂಚಾಯತ್‌ರಾಜ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಮೇಶ್‌ಗೆ ಫೋನ್ ಮಾಡಿದರೂ ಸಿಗುವುದಿಲ್ಲ. ಈತ ಕೈಗೆ ಸಿಗದ ಗಿರಾಕಿ. ಇಂತಹ ಅಧಿಕಾರಿಯ ಸೇವೆ ಜಿಲ್ಲೆಗೆ ಅಗತ್ಯವಿಲ್ಲ. ಈ ಕುರಿತು ವರದಿ ಸಿದ್ಧಪಡಿಸಿ ಸಲ್ಲಿಸಲು ಜಿಲ್ಲಾ ಪಂಚಾಯಿತಿ ಸಿಇಒ ಕ್ರಮವಹಿಸಬೇಕು' ಎಂದರು.ಜಿಲ್ಲಾ ಕೇಂದ್ರದಲ್ಲಿ ಕಸ ವಿಲೇವಾರಿಯಲ್ಲಿ ಪೌರಾಯುಕ್ತ ವಿ.ಎಚ್. ಕೃಷ್ಣಮೂರ್ತಿ ನಿರ್ಲಕ್ಷ್ಯವಹಿಸಿದ್ದಾರೆ. ಅವರನ್ನು ಇಲ್ಲಿಂದ ಬೇರೆಡೆ ವರ್ಗಾಯಿಸುವುದು ಸೂಕ್ತ. ಈ ಬಗ್ಗೆಯೂ ಜಿಲ್ಲಾಧಿಕಾರಿ ಅವರು ವರದಿ ಸಿದ್ಧಪಡಿಸಿ ಸಲ್ಲಿಸಬೇಕು. ವರದಿ ಪರಿ ಶೀಲನೆ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry