ಗಿರಿಜನರ ಅಭಿವೃದ್ಧಿಗೆ ವಿಶೇಷ ಸಭೆ: ಸೂಚನೆ

7

ಗಿರಿಜನರ ಅಭಿವೃದ್ಧಿಗೆ ವಿಶೇಷ ಸಭೆ: ಸೂಚನೆ

Published:
Updated:

ಮೈಸೂರು: ಗಿರಿಜನರ ಅಭಿವೃದ್ಧಿಗಾಗಿ ಇರುವ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಸಭೆ ನಡೆಸುವಂತೆ ಸಂಸದ ಎಚ್.ವಿಶ್ವನಾಥ್ ಬುಧವಾರ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಗಿರಿಜನರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಹರಿದು ಬರುತ್ತಿದೆ. ಆದರೆ ಅನುದಾನ ಸದ್ಬಳಕೆಯಾಗದೆ ಗಿರಿಜನರು ಅಭಿವೃದ್ಧಿ ಹೊಂದದೆ ಮತ್ತಷ್ಟು ಹಿಂದುಳಿಯುವಂತಾಗಿದೆ. ಆದ್ದರಿಂದ ಹೆಚ್ಚುವರಿ ಜಿಲ್ಲಾಧಿಕಾರಿ, ನಂಜನಗೂಡು, ಎಚ್.ಡಿ.ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿಗಳ ಇಓ ಹಾಗೂ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರು ಯಾವುದಾದರು ಒಂದು ಹಾಡಿಯಲ್ಲಿ ವಿಶೇಷ ಸಭೆಯನ್ನು ನಡೆಸಬೇಕು’ ಎಂದು ತಿಳಿಸಿದರು.‘ಗಿರಿಜನರಿಗೆ ಭೂಮಿಯ ಹಕ್ಕುಪತ್ರ ನೀಡುವುದರ ಜೊತೆಗೆ ವೈಯಕ್ತಿಕ ಹಕ್ಕುಪತ್ರವನ್ನೂ ನೀಡಬೇಕು. ಇದರಿಂದ ಅವರಿಗೆ ಮಾನಸಿಕವಾಗಿ ಸಮಾಧಾನ ಸಿಗುತ್ತದೆ.ಗಿರಿಜನರ ಭವಿಷ್ಯವನ್ನು ರೂಪಿಸಲು ತೋಟಗಾರಿಕೆ, ಕೃಷಿ ಸೇರಿದಂತೆ ಇತರ ಇಲಾಖೆಯ ನೆರವು ಪಡೆಯಬೇಕು. ಇದಕ್ಕಾಗಿ ಇತರೆ ಇಲಾಖೆಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡು ಸಭೆ ನಡೆಸಬೇಕು’ ಎಂದು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ‘ಸಮಗ್ರ ಗಿರಿಜನ ಯೋಜನೆಯಲ್ಲಿ 2009 ರಿಂದ ಹಣ ಸರಿಯಾಗಿ ಬಳಕೆಯಾಗದೆ ವಾಪಸ್ಸಾಗಿದೆ. ಹೀಗಾದರೆ ಬಡವರು ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ. ಮಾರ್ಚ್  ತಿಂಗಳು ಹತ್ತಿರ ಬಂದಿದೆ. ಆದರೂ ಗಿರಿಜನ ಆಶ್ರಮ ಶಾಲೆ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇನ್ನೂ ಸಮವಸ್ತ್ರಗಳ್ನು ವಿತರಿಸಿಲ್ಲ. ಜೂನ್ ಅಂತ್ಯದ ಒಳಗಾದರೂ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಬೇಕು’ ಎಂದು ಸೂಚಿಸಿದರು.ಉದ್ಯೋಗ ಖಾತ್ರಿ ಯೋಜನೆ:

‘ಮೈಸೂರು ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ತೃಪ್ತಿಕರವಾಗಿಲ್ಲ. 196 ಕೋಟಿ ರೂಪಾಯಿ ಬಂದಿದೆ. ಇದರಲ್ಲಿ ಕೇವಲ 19 ಕೋಟಿ ಮಾತ್ರ ಖರ್ಚಾಗಿದೆ. 22 ಸಾವಿರ ಕಾಮಗಾರಿಗಳಲ್ಲಿ 1 ಸಾವಿರ ಕಾಮಗಾರಿಗಳನ್ನು ಪೂರ್ಣಗೊಂಡಿವೆ. ಅಂದರೆ ಶೇ 10 ರಿಂದ 15 ಮಾತ್ರ ಕೆಲಸವಾಗಿದೆ. ಬಂದ ಹಣವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮೀಣಾಭಿವೃದ್ಧಿ ಮಾಡಬೇಕಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪ್ರಗತಿ ಕುಂಠಿತಗೊಂಡಿದೆ. ದೊಡ್ಡ ಸಂಖ್ಯೆಯಲ್ಲಿ ಕಾಮಗಾರಿಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಕೇವಲ 5 ಸಾವಿರ ಕಾಮಗಾರಿಗಳನ್ನು ತೆಗೆದುಕೊಂಡು ಪ್ರತಿ ಗ್ರಾಮದಲ್ಲಿ ಶಾಶ್ವತವಾಗಿ ಉಳಿಸುವ ಮತ್ತು ಕಣ್ಣಿಗೆ ಕಾಣಿಸುವಂತಹ ಕೆಲಸವನ್ನು ಮಾಡಬೇಕು. ಅಧಿಕಾರಿಗಳು ಮತ್ತು ನೌಕರರು ಕ್ರಿಯಾ ಯೋಜನೆಯನ್ನು ಕಡ್ಡಾಯವಾಗಿ ಗ್ರಾಮಸಭೆಯಲ್ಲಿಯೇ ತಯಾರಿಸಬೇಕು’ ಎಂದು ಹೇಳಿದರು.ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಸರಿಯಾಗಿ ಕೂಲಿ ಪಾವತಿಯಾಗದೇ  ಇರುವ ಕುರಿತು ಚರ್ಚೆ ನಡೆಯಿತು. ಸಂಸದರಾದ ಎಚ್.ವಿಶ್ವನಾಥ್ ಮತ್ತು ಆರ್.ಧ್ರುವನಾರಾಯಣ ತಾಲ್ಲೂಕು ಪಂಚಾಯಿತಿ ಇಓಗಳನ್ನು ತರಾಟೆಗೆ ತೆಗೆದುಕೊಂಡರು.ಜಿಲ್ಲಾಧಿಕಾರಿ ಹರ್ಷಗುಪ್ತ, ಜಿಪಂ ಯೋಜನಾ ನಿರ್ದೇಶಕ ಬಾಲಕೃಷ್ಣ ವಿರುದ್ಧ ಹರಿಹಾಯ್ದರು. ‘ನಮಗೆ ತಪ್ಪು ಮಾಹಿತಿ ಕೊಡುತ್ತೀರಿ, ನಾವು ಸಹಿಸಿಕೊಳ್ಳುತ್ತೇವೆ. ಆದರೆ ಸಂಸದರು ಕರೆದಿರುವ ಸಭೆಗೂ ತಪ್ಪು ಮಾಹಿತಿ ನೀಡಿದ್ದೀರಿ. ನಿಮ್ಮಂತಹ ಅನರ್ಹ, ಬೇಜವಾಬ್ದಾರಿ ಅಧಿಕಾರಿಯನ್ನು ಅಮಾನತುಗೊಳಿಸಬೇಕು’ ಎಂದರು.ಸಭೆಯಲ್ಲಿ ಶಾಸಕರಾದ ಎಂ.ಸತ್ಯನಾರಾಯಣ, ಚಿಕ್ಕಣ್ಣ, ಜಿಪಂ ಸಿಇಓ ಸತ್ಯವತಿ, ಎಸ್ಪಿ ಮನೀಶ್ ಕರ್ಬೀಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಿ.ಜೆ.ಬೆಟ್‌ಸೂರ್‌ಮಠ, ಸಮಿತಿ ಸದಸ್ಯರಾದ ಎಚ್.ಬಿ.ಬಸವರಾಜು, ಹರಿಹರ ಆನಂದ ಸ್ವಾಮಿ, ಎಂ.ಬಿ.ಪ್ರಭು, ಅಂಬುಜಾಬಾಯಿ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry