`ಗಿರಿಜನರ ಬೇಡಿಕೆಗೆ ಸ್ಪಂದಿಸಿ'

7

`ಗಿರಿಜನರ ಬೇಡಿಕೆಗೆ ಸ್ಪಂದಿಸಿ'

Published:
Updated:

ಹುಣಸೂರು: ಪ್ರಕೃತಿ ಸಂಪತ್ತು ಪೋಷಿಸಿ, ಭವಿಷ್ಯಕ್ಕೆ ಕೊಡುಗೆ ನೀಡಿದ ಗಿರಿಜನರ ಬದುಕಿನ ಬಗ್ಗೆ ಸರ್ಕಾರಗಳು ಆಲಸ್ಯ ತೋರಿಸುತ್ತಿರುವುದು ವಿಪರ್ಯಾಸ ಎಂದು ಹಂಪಿ ಕನ್ನಡ ವಿ.ವಿ. ಕುಲಪತಿ ಡಾ.ಎಚ್.ಬೆ.ಬೋರೆಲಿಂಗಯ್ಯ ಹೇಳಿದರು.ಪಟ್ಟಣದಲ್ಲಿ ಗಿರಿಜನಾಭಿವೃದ್ಧಿಗೆ ಹೋರಾಟ ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆ `ಡೀಡ್' ಇದರ 35ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗಿರಿಜನರ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಸರ್ಕಾರದ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಈ ವರ್ಗದವರಿಗೆ ಮೂಲಭೂತ ಸವಲತ್ತು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಗಿರಿಜನರು ನೆಮ್ಮದಿಯ ಜೀವನವನ್ನು ಕಾಡಿನಲ್ಲಿ ಕಳೆಯುತ್ತಿದ್ದ ಕಾಲವೊಂದಿತ್ತು. ಅವರು ಕಾಡನ್ನು ತಮ್ಮ ಆಸ್ತಿ ಎಂದು ಪರಿಗಣಿಸಿ ಪರಂಪರೆಯನ್ನಾಗಿ ಸಂರಕ್ಷಿಸಿಕೊಂಡು ಬಂದು ಇಂದಿನ ಜನರಿಗೂ ಕೊಡುಗೆ ನೀಡಿದ್ದಾರೆ. ಆದರೆ, ಆ ಜನರಿಗೆ ನಾವು ಏನು ಕೊಡುಗೆ ನೀಡಿದ್ದೇವೆ ಎಂದು ಪ್ರಶ್ನಿಸಿದರು.ಗಿರಿಜನ ಸಮುದಾಯವನ್ನು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿಪಡಿಸುವ ಹೊಣೆಗಾರಿಕೆ ಕೇವಲ ಸ್ವಯಂ ಸೇವಾ ಸಂಘಗಳಿಗೆ ಮೀಸಲಿಟ್ಟಿ ವಿಚಾರವಲ್ಲ. ಬದಲಿಗೆ ಪ್ರತಿಯೊಬ್ಬ ನಾಗರಿಕರನ ಹೊಣೆಯಾಗಿದೆ. ಈ ದಿಕ್ಕಿನಲ್ಲಿ ಪ್ರತಿಯೊಬ್ಬರೂ ಗಿರಿಜನರನ್ನು ಕೈ ಹಿಡಿದು ಸಮಾಜಮುಖಿಯನ್ನಾಗಿ ಕರೆತರಬೇಕಾಗಿದೆ ಎಂದರು.ಸಾಹಿತಿ ಕಾಳೇಗೌಡ ನಾಗವಾರ ಮಾತನಾಡಿ, ನಾಡಿನ ಸಾಹಿತ್ಯ ಮತ್ತು ಜಾನಪತ ಸಂಪತ್ತು ರಕ್ಷಿಸುವಲ್ಲಿ ಮುಂಚೂಣಿಯಲ್ಲಿದ್ದ ಗಿರಿಜನರ ಕುರಿತು ಪುಸ್ತಕ ಹೊರ ತರಬೇಕಾಗಿದೆ. ಪುಸ್ತಕದಲ್ಲಿ ಗಿರಿಜನ ಸಾಂಸ್ಕೃತಿಕ ಬದುಕು ಮತ್ತು ಆಹಾರ ಪದ್ಧತಿಗಳನ್ನು ವಿಶೇಷವಾಗಿ ಪರಿಗಣಿಸಿ ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ. ಗಿರಿಜನರ ಹೋರಾಟಗಾರ ಬಿರ್ಸಾ ಮುಂಡಾ ಅವರನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಸರ್ಕಾರ ಬಿರ್ಸಾ ಮುಂಡಾ ಅವರ ದಿನಾಚರಣೆಯನ್ನು ಆಚರಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರೊ.ಗೋವಿಂದಯ್ಯ ಡೀಡ್ ಸಂಸ್ಥೆ ಸ್ಥಾಪಕಾಧ್ಯಕ್ಷ ಡಾ.ಜೆರಿಪೈಯಾಸ್, ಕಾರ್ಯದರ್ಶಿ ಶ್ರೀಕಾಂತ್ ಮಾತನಾಡಿದರು. ಗಿರಿಜನ ಹೋರಾಟ ಪತ್ರಿಕೆ `ಬದುಕಿನ ಹಂಬಲ' ಮಾಸ ಪತ್ರಿಕೆ ಬಿಡುಗಡೆ ಮಾಡಲಾಯಿತು. ಗಿರಿಜನ ನಾಡಿ ವೈದ್ಯೆ ಮಾಸ್ತಮ್ಮ ಸೇರಿದಂತೆ ಸಮಾಜದ ಮುಖಂಡರಿಗೆ ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry