ಶನಿವಾರ, ನವೆಂಬರ್ 23, 2019
17 °C

ಗಿರಿಜನರ ವೋಟು ಎಷ್ಟರಮಟ್ಟಿಗೆ ಭದ್ರ?

Published:
Updated:

ಮೈಸೂರು: ಹೆಗ್ಗಡದೇವನ ಕೋಟೆ ಮೀಸಲು ಮತಕ್ಷೇತ್ರದ  ಹುಣಸೆಕುಪ್ಪೆ ಹಾಡಿಯ ಕೂಗಳತೆ ದೂರದಲ್ಲಿನ ಮೀಸಲು ಅರಣ್ಯದ ಕಾಡು ಪ್ರಾಣಿಗಳು ಅರಣ್ಯದಿಂದ ಹೊರ ಬರುವುದನ್ನು, ಜನರು ಕಾಡಿನ ಒಳಗೆ ನುಗ್ಗುವುದನ್ನು ತಡೆಯಲು ಸೌರಶಕ್ತಿ ಬೇಲಿ ಹಾಕಲಾಗಿದೆ. ಸಮೀಪದ ಹಾಡಿಗಳಲ್ಲಿ ನೆಲೆಸಿರುವ, ಕಾಡಿನಿಂದ ಒಕ್ಕಲೆಬ್ಬಿಸಿದ ಅರಣ್ಯವಾಸಿಗಳು ಹೆಣ ಹೂಳಲೂ ಈ ಕಾಡಿನ ಒಳಗೆ ಹೋಗಬೇಕು. ಅದಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ವಿದ್ಯುತ್ ಪೂರೈಕೆ ನಿಲ್ಲಿಸಿದ ಕಡೆ ಸೋಲಾರ್ ಬೇಲಿಯ  ಒಳಗೆ ತೂರಿಕೊಂಡು  ಹೆಣ ದಾಟಿಸಿ  ಕಂದಕ ಇಳಿದು ಮತ್ತೆ ಮೇಲೆ ಹೆಣ ಎತ್ತಿ ಕಾಡೊಳಗೆ ಹೊತ್ತುಕೊಂಡು ಹೋಗಿ ನಿರ್ದಿಷ್ಟ ಜಾಗದಲ್ಲಿಯೇ  ಮಣ್ಣು ಮಾಡಬೇಕು.-ಇದು ಕಾಡಿನ ಸಂತ್ರಸ್ತ ಮಕ್ಕಳ ಅಂತ್ಯಸಂಸ್ಕಾರದ ದಾರುಣ ಕತೆಯ ಚಿತ್ರಣ. ಕಾಡೇ ಸರ್ವಸ್ವವಾಗಿದ್ದ ಗಿರಿಜನರಿಗೆ ಈಗ ಅರಣ್ಯದ ಮೇಲೆ ಯಾವುದೇ ಹಕ್ಕು ಇಲ್ಲ. ಬದುಕಿನ ಉದ್ದಕ್ಕೂ ಅತಂತ್ರ ಜೀವನ ಸಾಗಿಸುವ ಆದಿವಾಸಿಗಳು ಸತ್ತ ಮೇಲೂ ಪ್ರಯಾಸ ಪಟ್ಟೇ ಮಣ್ಣಾಗಬೇಕು.ಇದು ಒಂದು ಹಾಡಿನ ಕತೆಯಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆ ನೆಪದಲ್ಲಿ, ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಿರುವ ಗಿರಿಜನರಿಗೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೆಲೆ ಕಲ್ಪಿಸಿರುವ  ಬಹುತೇಕ ಹಾಡಿಗಳ ಅರಣ್ಯ ರೋದನ ಒಂದೇ ತೆರನಾಗಿದೆ. ಕಾಡಂಚಿನಲ್ಲಿ ವಾಸಿಸುವ ಈ ಜನರು ಪ್ರಾಣಿಗಿಂತ ಕಡೆಯಾಗಿ ಜೀವನ ಸಾಗಿಸುತ್ತಿದ್ದಾರೆ.  ಈ ಹಾಡಿಗಳಲ್ಲಿ ಮೂಲ ಸೌಕರ್ಯ ಶಬ್ದಕ್ಕೆ ಕಿಂಚಿತ್ತೂ ಅರ್ಥವೇ ಇಲ್ಲ.  ಬಹುತೇಕರು ಗುಡಿಸಲುಗಳಲ್ಲಿಯೇ ವಾಸಿಸುತ್ತಿದ್ದಾರೆ.ಜೇನುಕುರುಬ, ಕಾಡು ಕುರುಬ, ಸೋಲಿಗ, ಹೆರವ, ಹಕ್ಕಿಪಿಕ್ಕಿ ಮತ್ತಿತರ ಆದಿವಾಸಿ ಜನರ ಹಕ್ಕುಗಳ ದಮನ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಎಚ್. ಡಿ. ಕೋಟೆ ವಿಧಾನ ಸಭಾ ಕ್ಷೇತ್ರವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲು ಇರಿಸಿದ್ದರೂ ಅವರಿಗೆ ಅವರದ್ದೇ ಆದ ಜನಪ್ರತಿನಿಧಿ ಇಲ್ಲ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ನಾಯಕ ಜನಾಂಗವೇ ಈ ಮೀಸಲು ಸೌಲಭ್ಯವನ್ನು ನಿರಂತರವಾಗಿ ಕಬಳಿಸುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷಕ್ಕೂ ಗಿರಿಜನರಿಗೆ ಟಿಕೆಟ್ ನೀಡಿ ಅವರನ್ನು ಗೆಲ್ಲಿಸಿ ತರುವ ಕಕ್ಕುಲಾತಿಯೇ ಇಲ್ಲ.ಈ ಬಾರಿ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಜೆ. ಕೆ. ಗೋಪಾಲ (ಪೂಜಾರಿ) ಅವರನ್ನು ಕಣಕ್ಕೆ ಇಳಿಸಿರುವುದೇ ಇವರ ಪಾಲಿನ  ದೊಡ್ಡ ಸಾಧನೆಯಾಗಿದೆ.`ನಮಗೆ ಸಿಗಬೇಕಾದ ಸೌಲತ್ತು ಸಿಗ್ತಾ ಇಲ್ಲ. ನಮಗಾಗಿಯೇ ಮೀಸಲಾದ ವಿಶೇಷ ನಿಧಿ ಮತ್ತು ಮೀಸಲು ಸೌಲಭ್ಯವೂ ಅನ್ಯರಿಗೆ ಬಳಕೆಯಾಗುತ್ತಿದೆ. ನಮ್ಮವರು ಹಾಡಿಗಳಲ್ಲಿ ಪ್ರಾಣಿಗಿಂತ ಕಡೆಯಾದ ಜೀವನ ನಡೆಸುತ್ತಿದ್ದಾರೆ' ಎಂದು ಎಚ್. ಡಿ. ಕೋಟೆ ಬಸ್‌ಸ್ಟ್ಯಾಂಡ್‌ನಲ್ಲಿ ನಮಗೆ ಎದುರಾದ, ಭೀಮನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಮಾದೇವ ನೋವು ತೋಡಿಕೊಂಡರು.`ಗೋಪಾಲ ಪೂಜಾರಿ ಅವರನ್ನು ಗಿರಿಜನರೆಲ್ಲ ಒಗ್ಗಟ್ಟಾಗಿ ಗೆಲ್ಲಿಸಿ ತರುವ ಶತ ಪ್ರಯತ್ನ ಮಾಡುತ್ತೇವೆ' ಎಂದು ಆತ್ಮವಿಶ್ವಾಸದಿಂದ ಹೇಳುವ ವಡ್ಡರಗುಡಿಯ ಚಿಕ್ಕಣ್ಣ, `ನಮ್ಮ ವೋಟುಗಳನ್ನು ಭದ್ರಪಡಿಸಿಕೊಳ್ಳುವ ಯತ್ನಕ್ಕೆ ಚಾಲನೆ ನೀಡಿದ್ದೇವೆ' ಎಂದು ಹೆಮ್ಮೆಯಿಂದ ಹೇಳುತ್ತಾರೆ.ಕೆಂಚಮ್ಮಳ ಕ್ರೋಧ: `ನನ್ನ ಮಕ್ಕಳು, ಮೊಮ್ಮಕ್ಕಳ ಕಾಲಕ್ಕೆ ಸಹಾಯ ಮಾಡ್ತಾರ ಅಂದ್ರೆ ವೋಟ್ ಹಾಕ್ತೀನಿ. ಅರ್ಧದಲ್ಲಿಯೇ ಕೈಬಿಡ್ತಾರೆ ಅಂದ್ರೆ ಬರ‌್ಲೆ (ಪೊರಕೆ) ತಗೊಂಡು ಹೊಡಿತೇನೆ'- ಹೀಗೆಂದು  ಅಜ್ಜಿ ಕೆಂಚಮ್ಮ ಪೊರಕೆ ಹಿಡಿದುಕೊಂಡೆ ಜೇನುನುಡಿ ಭಾಷೆಯಲ್ಲಿ ಹೇಳುವಾಗ, ಆ ಮಾತಿನಲ್ಲಿ ನಾಗರಿಕ ಸಮಾಜದ ಕೃತ್ರಿಮತೆ ಕಿಂಚಿತ್ತೂ ಕಾಣದೆ, ಕಾಡಿನ ಸಹಜತೆಯೇ ಮನಸ್ಸಿಗೆ ನಾಟುತ್ತದೆ.`ದುಡ್ಡು ದೊಡ್ಡದಲ್ಲ. ಹಣ ಹೆಣ ಆಗುತ್ತದೆ. ಇಲ್ಲಿ ಸ್ಮಶಾನ ಇಲ್ಲ. ಸತ್ತವರನ್ನು ಮಣ್ಣು ಮಾಡಲೂ ಅರಣ್ಯ  ಇಲಾಖೆಯ ಅನುಮತಿ ಬೇಕು' ಎಂದು  ಕೆಂಪಮ್ಮ ನಿರ್ಭಾವುಕರಾಗಿ ಹೇಳುತ್ತಿದ್ದರೆ, ಕಾಡಿನ ಜನರ ಬದುಕು  ಮತ್ತು ಸಾವಿನ  ಸಂಕಟ ಊಹಿಸಬಹುದು.ಭೀಮಸೇನನ ಕತೆ: ಮೀಸಲು ಕಾಡಿನಲ್ಲಿನ ತಾರಕಾ ಡ್ಯಾಂನ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ  ಕೆಂಚಮ್ಮನ  ಮಗ ಭೀಮಸೇನನಿಗೆ ಅರಣ್ಯ ಸಿಬ್ಬಂದಿ ಕಾಲಿಗೆ ಗುಂಡೇಟು ಹೊಡೆದು ಎರಡೂ ವರ್ಷವಾಗಿದೆ. ಇದುವರೆಗೂ  ಪರಿಹಾರ ಸಿಕ್ಕಿಲ್ಲ. ಪ್ರಕರಣ ಇನ್ನೂ ಕೋರ್ಟ್‌ನಲ್ಲಿ ಇದೆ. ಭೀಮಸೇನ ಕುಂಟುತ್ತಲೇ ನಡೆಯುತ್ತಾನೆ. ಆತ ದುಡಿಯುವ ಸಾಮರ್ಥ್ಯ ಕಳೆದುಕೊಂಡಿದ್ದಾನೆ.ಮನೆಯಲ್ಲಿ ವಯಸ್ಸಿಗೆ ಬಂದಿರುವ ಮಗಳು ಇದ್ದಾಳೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡಿದ ಸಣ್ಣ ತಪ್ಪಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಅಕ್ರಮವಾಗಿ ಕಾಡು ಹೊಕ್ಕವರನ್ನು ಅರಣ್ಯ ಇಲಾಖೆ ಯಾವ ರೀತಿಯಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳುತ್ತದೆ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ. ಗೌಡಮಾಚನಾಯಕ ಹಳ್ಳಿಯ ರಾಜ್ ಎಂಬಾತ 2010ರಲ್ಲಿ ಕೊಲೆಯಾದ.  ಈ ಎರಡೂ ಪ್ರಕರಣಗಳ ತನಿಖೆ ಇನ್ನೂ ನಡೆಯುತ್ತಿದೆ.ಗುಂಡು ಹಾರಿಸಿದ 18 ಪ್ರಕರಣಗಳು: `ಮೀಸಲು ಕಾಡನ್ನು ಅಕ್ರಮವಾಗಿ ಪ್ರವೇಶಿಸಿದವರ ಮೇಲೆ ಗುಂಡು ಹಾರಿಸಿದ 18 ಪ್ರಕರಣಗಳು ನಡೆದಿವೆ. 17ನೆಯದು ರಾಜು ಕೊಲೆ ಪ್ರಕರಣ. ಈ ಪ್ರಕರಣದಲ್ಲಿ ಆತನ ಹೆಣವೂ ಸಿಗದಂತೆ ಮಾಡಿದರು. ಭೀಮಸೇನ ಪ್ರಕರಣ 18ನೇಯದು. ಈ ಎರಡೂ ಪ್ರಕರಣಗಳಲ್ಲಿ ಹೋರಾಟ ನಡೆಯುತ್ತಿದೆ. ಇನ್ನೂ ನಮಗೆ ನ್ಯಾಯ ಸಿಕ್ಕಿಲ್ಲ' ಎಂದು ಚಿಕ್ಕಣ್ಣ ನೋವಿನಿಂದ ನುಡಿಯುತ್ತಾರೆ.`ಕಾಡಿನ ಅಂಚಿನಲ್ಲಿ ಅಲ್ಲಲ್ಲಿ ಚದುರಿದಂತಿರುವ  ಹಾಡಿಗಳು ಮತ್ತು ಪುನರ್ವಸತಿ ಕೇಂದ್ರಗಳಲ್ಲಿನ ನಿವಾಸಿಗಳಿಗೆ ಚುನಾವಣೆ ಬಂದಿರುವುದೂ ಗೊತ್ತಿಲ್ಲ. ಇವರ ದಾರುಣ ಬದುಕಿನಲ್ಲಿಯೇ ಬೇಳೆ ಬೇಯಿಸಿಕೊಳ್ಳುವ ಕೆಲ ಆಸಕ್ತ ಹಿತಾಸಕ್ತಿಯ ವ್ಯಕ್ತಿಗಳು ಹೇಳಿದ ಪಕ್ಷಕ್ಕೆ  ವೋಟು ಹಾಕುವ ಪ್ರವೃತ್ತಿಯೇ ಅನೇಕ ಕಡೆ ಇದೆ. ರಾಜಕಾರಣಿಗಳು, ಸ್ವಯಂ ಸೇವಾ ಸಂಘಟನೆಗಳು (ಎನ್‌ಜಿಒ) ಈ  ಮುಗ್ಧ, ರಾಜಕೀಯ ಪ್ರಜ್ಞೆ ಶೂನ್ಯ ಇರುವ ಜನರನ್ನು ಹರಿದು ಮುಕ್ಕಿ ತಿನ್ನಲು ಪೈಪೋಟಿ ನಡೆಸುತ್ತಿದ್ದಾರೆ' ಎಂದು ಮಾನವ ಹಕ್ಕುಗಳ ಹೋರಾಟಗಾರ `ಸಿಕ್ರಂ' ಪ್ರಸನ್ನ  ದೂರುತ್ತಾರೆ.`ಆದಿವಾಸಿಗಳು ಮತ್ತು ಅರಣ್ಯ ಭೂಮಿ ಇರುವ ಕಡೆಗಳಲ್ಲಿ ಮದ್ಯದ ಅಂಗಡಿ ಇರಬಾರದು ಎನ್ನುವ ಕಾನೂನು  ಇದ್ದರೂ ಹಾಡಿಗಳ ಅಕ್ಕಪಕ್ಕದ ಅಂಗಡಿಗಳಲ್ಲಿಯೇ ಮದ್ಯ ದೊರೆಯುತ್ತದೆ. ಆದಿವಾಸಿಗಳ ಅರಣ್ಯ ಹಕ್ಕಿನ ಕಾಯ್ದೆ -2006' ಕೂಡ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದೂ ಅವರು ದೂರುತ್ತಾರೆ.ಪುನರ್ವಸತಿ ಕೇಂದ್ರಗಳಾದ ಸೊಳ್ಳೆಪುರ, ನಾಗಾಪುರ ಮತ್ತು ಶೆಟ್ಟಿಹಳ್ಳಿ ಹಾಡಿಗಳಲ್ಲಿ ಮಾತ್ರ ಕೊಂಚ ಮಟ್ಟಿಗೆ   ಬದಲಾವಣೆಯ ಗಾಳಿ ಬೀಸುತ್ತಿರುವುದು ಕಂಡು ಬರುತ್ತದೆ. ಗಟ್ಟಿ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರೂ ಬಹುತೇಕ ಮನೆಗಳ ಗೋಡೆಗಳೆಲ್ಲ ಬಿರುಕು ಬಿಟ್ಟಿರುವುದೂ ಕಣ್ಣಿಗೆ ರಾಚುತ್ತದೆ.ಪುನರ್ವಸತಿ ಕೇಂದ್ರಗಳಲ್ಲಿನ ಬದಲಾವಣೆಯ ಗಾಳಿ ಕಾಡಿನ ಜನರ ಸಂಸ್ಕೃತಿಯನ್ನೇ ನಾಶಗೊಳಿಸುತ್ತಿರುವಂತೆ ಭಾಸವಾಗುತ್ತದೆ. ಹಾಡಿಗಳಲ್ಲಿ ಸಿಕ್ಕ ಹೊಸ ತಲೆಮಾರಿನವರನ್ನು ಪ್ರಶ್ನಿಸಿದರೆ  ಸಾಕ್ಷರತೆ ಪ್ರಮಾಣ ತುಂಬ ಕಡಿಮೆ ಇರುವುದು  ಅನುಭವಕ್ಕೆ ಬರುತ್ತದೆ. 18 ದಾಟಿದ ಅನೇಕರಿಗೆ ಮತದಾನದ ಹಕ್ಕು ಏನೆಂಬುದೇ ಗೊತ್ತಿಲ್ಲ.ಪ್ರತಿಕ್ರಿಯಿಸಿ (+)