ಶುಕ್ರವಾರ, ನವೆಂಬರ್ 15, 2019
21 °C

ಗಿರಿಜನರ ಹಕ್ಕು ಕಾಯ್ದೆ ಜಾರಿಗೆ ಸಲಹೆ

Published:
Updated:

ನವದೆಹಲಿ: ಕರ್ನಾಟಕ ಸೇರಿದಂತೆ ಗಿರಿಜನರ ಪ್ರಾಬಲ್ಯವಿರುವ ಅರಣ್ಯ ಪ್ರದೇಶಗಳಲ್ಲಿ ನಕ್ಸಲೀಯರ ಪ್ರಭಾವ ಹೆಚ್ಚುತ್ತಿರುವ ಕುರಿತು ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ.ನಕ್ಸಲೀಯರ ಪ್ರಭಾವ ತಗ್ಗಿಸುವ ನಿಟ್ಟಿನಲ್ಲಿ ಗಿರಿಜನ ಮತ್ತು ಅರಣ್ಯ ವಾಸಿಗಳ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಿದೆ.ಅರಣ್ಯ ವಾಸಿಗಳ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕೇಂದ್ರ ಗಿರಿಜನ ವ್ಯವಹಾರಗಳ ಸಚಿವ ಕಿಶೋರ್‌ಚಂದ್ರದೇವ್  ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಅರಣ್ಯ ವಾಸಿಗಳ ಕಾಯ್ದೆಯಲ್ಲಿ ಕೆಲವು ಹಕ್ಕುಗಳನ್ನು ಕೊಡಮಾಡಲಾಗಿದ್ದರೂ ಈ ಜನ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಡ ಹಾಗೂ ಒಡಿಶಾ ಮುಂತಾದ ರಾಜ್ಯಗಳ ಅರಣ್ಯಗಳಲ್ಲಿರುವ ಗಿರಿಜನರನ್ನು ಬಲವಂತವಾಗಿ ಒಕ್ಕಲೆಬ್ಬಿಸಲಾಗುತ್ತಿದೆ. ಇದರಿಂದ ಗಿರಿಜನರು ಅನಿವಾರ್ಯವಾಗಿ ನಕ್ಸಲೀಯ ಸಂಘಟನೆಗಳಿಗೆ ಸೇರುವಂತೆ ಮಾಡಿವೆ ಎಂದು ಗುಪ್ತದಳ ಕೇಂದ್ರ ಸರ್ಕಾರಕ್ಕೆ ನೀಡಿರುವ ಎಚ್ಚರಿಕೆಯನ್ನು ಸಚಿವರು ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ.ಗಿರಿಜನ ಹಾಗೂ ಅರಣ್ಯ ವಾಸಿಗಳಿಗೆ ಅನಗತ್ಯ ಕಿರುಕುಳ ಕೊಡಲಾಗುತ್ತಿದೆ. ಬಲವಂತವಾಗಿ ಅರಣ್ಯದಿಂದ ಹೊರ ಹಾಕಲಾಗುತ್ತಿದೆ. ಈ ಕ್ರಮಗಳು ಕಾಯ್ದೆ ಉಲ್ಲಂಘನೆ ಆಗಿದೆ. ಗಿರಿಜನರು ಅರಣ್ಯ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಬೇಕೆಂಬ ಬೇಡಿಕೆ ಮುಂದಿಟ್ಟರೂ ಪ್ರಯೋಜನವಾಗಿಲ್ಲ ಎಂದು ದೇವ್ ವಿವರಿಸಿದ್ದಾರೆ.ಕಾಯ್ದೆ ಜಾರಿಯಲ್ಲಿ ಆಗುತ್ತಿರುವ ಕೆಲವು ಲೋಪದೋಷಗಳನ್ನು ಕುರಿತು ಪ್ರಸ್ತಾಪಿಸಿರುವ ಕೇಂದ್ರ ಸಚಿವರು, ಸಾರ್ವಜನಿಕರಲ್ಲಿ ಗಿರಿಜನ- ಅರಣ್ಯ ವಾಸಿ ಕಾಯ್ದೆ ಬಗೆಗಿರುವ ತಿಳುವಳಿಕೆ ಕೊರತೆಯಿಂದಾಗಿ ಫಲಾನುಭವಿಗಳಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಅರಣ್ಯ ಕಾಯ್ದೆ ಮತ್ತು ಕಾನೂನುಗಳನ್ನು ಜಾರಿ ಮಾಡುವಾಗ ಗಿರಿಜನ ಮತ್ತು ಅರಣ್ಯ ವಾಸಿಗಳ ಹಕ್ಕುಗಳನ್ನು ಗೌರವಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಬರೆದಿದ್ದಾರೆ.ಗಿರಿಜನ ಸಂಘಟನೆಗಳು ಹಾಗೂ ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ ಒತ್ತಡದಿಂದಾಗಿ 2006ರಲ್ಲಿ ಅರಣ್ಯ ವಾಸಿಗಳ ಹಕ್ಕು ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿ 2008ರಲ್ಲಿ ಅಧಿಸೂಚನೆ ಹೊರಡಿಸಿದೆ. ಅಲ್ಲದೆ, ಗಿರಿಜನರಿಗೆ ಹೆಚ್ಚು ಹಕ್ಕುಗಳನ್ನು ಕೊಡುವ ಉದ್ದೇಶದಿಂದ ಅರಣ್ಯ ವಾಸಿ ಹಕ್ಕುಗಳ ಕಾಯ್ದೆಗೂ ತಿದ್ದುಪಡಿ ತರುವ ಕುರಿತು ಸರ್ಕಾರ ಪರಿಶೀಲಿಸುತ್ತಿದೆ.ಈಗಿನ ಕಾಯ್ದೆಯಲ್ಲಿ ಗಿರಿಜನರಿಗೆ ಅರಣ್ಯ ಉಪ ಉತ್ಪನ್ನಗಳನ್ನು ಅನುಭವಿಸುವ ಹಕ್ಕು ನೀಡಲಾಗಿದೆ. ಆದರೆ, ಈ ಉಪ ಉತ್ಪನ್ನಗಳನ್ನು ಸಾಗಣೆ ಮಾಡಲು ಅವಕಾಶ ನೀಡಲಾಗಿಲ್ಲ. ಇದಕ್ಕಾಗಿ ಅವರು ಅರಣ್ಯ ಅಧಿಕಾರಿಗಳ ಮರ್ಜಿಗೆ ಕಾಯಬೇಕಾಗಿದೆ. ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಮೂಲಕ ಕಾಯ್ದೆಯಲ್ಲಿರುವ ಮಿತಿಗಳನ್ನು ನಿವಾರಣೆ ಮಾಡಲಾಗುವುದು  ಎಂದು ವಿಶ್ವಸನೀಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

 

ಪ್ರತಿಕ್ರಿಯಿಸಿ (+)