ಗಿರಿಜೆಯ ಗಂಡ

7

ಗಿರಿಜೆಯ ಗಂಡ

Published:
Updated:
ಗಿರಿಜೆಯ ಗಂಡ

ಹರಿಹರ ಕವಿಯ `ಗಿರಿಜಾ ಕಲ್ಯಾಣ~ದ ಕಥೆ ಹಳೆಯದು. ಇದೇ ವಸ್ತುವಿನ ತನ್ನ ಕಾವ್ಯಕ್ಕೆ ಕಾಳಿದಾಸ `ಕುಮಾರ ಸಂಭವಂ~ ಎಂದು ಹೆಸರಿಟ್ಟರೆ, ಹರಿಹರ `ಗಿರಿಜಾಕಲ್ಯಾಣ~ ಎಂದು ಹೆಸರಿಟ್ಟಿದ್ದಾನೆ. ಕಥಾನಾಯಕರ ಹೆಸರನ್ನು ಹೊತ್ತ ಕಾವ್ಯಗಳು ಎಲ್ಲ ಭಾಷೆಗಳಲ್ಲೂ ಹೇರಳವಾಗಿವೆ. ಆದರೆ ಕಥಾನಾಯಕಿಯ ಹೆಸರನ್ನೇ ಕಾವ್ಯಕ್ಕೆ ಇಡುವುದು ಸಾಹಿತ್ಯ ಪರಂಪರೆಯಲ್ಲೇ ಅಪರೂಪ. ಅಲ್ಲದೆ ಇಲ್ಲಿ `ಕಾವ್ಯನಾಥಂ ಗಿರಿಜಾನಾಥಂ~- ಅಂದರೆ ಗಿರಿಜೆಯ ಗಂಡ. ಹರಿಹರ ಕಥೆ ಹೇಳುವುದೇ ಗಿರಿಜೆಯ ದೃಷ್ಟಿಯಿಂದ.ಹರಿಹರನ ಕಾವ್ಯದಲ್ಲಿ ಗಿರಿಜೆಯ ಪಾತ್ರ ಹುಟ್ಟಿನಿಂದಲೇ ವಿಶಿಷ್ಟ. ನಮ್ಮ  ಸಮಾಜದಲ್ಲಿ ಅರಮನೆಯಿರಲಿ, ಗುಡಿಸಲಿರಲಿ ಗಂಡು ಹುಟ್ಟಬೇಕೆಂಬುದೇ ಹರಕೆ. ಹೆಣ್ಣು ಹುಟ್ಟಲೆಂಬ ಬಯಕೆ ಕೊಟ್ಟಿಗೆಯಲ್ಲಿ ಮಾತ್ರ! ಈಗಂತೂ ಹೆಣ್ಣು ಹುಟ್ಟದಂತೆ ಭ್ರೂಣರೂಪದಲ್ಲೇ ಅವಳ ಹತ್ಯೆ ಆಗುತ್ತದೆ. ಆದರೆ ಈ ಕಾವ್ಯದಲ್ಲಿ ಗಿರಿರಾಜನೆಂಬ ಮಹಾರಾಜನ ಹೆಂಡತಿಯಾದ ರಾಣಿ ಮೇನಾದೇವಿ, ತನಗೆ ಹೆಣ್ಣುಮಗು ಬೇಕು ಎಂದು ತಪಸ್ಸು ಮಾಡುತ್ತಾಳೆ.ಅವಳಿಗೆ ಅದಾಗಲೇ ಮೈನಾಕ ಎಂಬ ಮಗ ಹುಟ್ಟಿದ್ದ. ಆದರೂ ಈಗ ಮಗಳು ಬೇಕು ಎಂದು ಮಹಾದೇವನ ಪತ್ನಿಯಾದ ಮಹಾದೇವಿಯನ್ನು ಪ್ರಾರ್ಥಿಸುತ್ತ ರಾಣಿ ಒಂಟಿಕಾಲಿನಲ್ಲಿ ನಿಂತು ಘೋರ ತಪಸ್ಸು ಮಾಡಿದಳು. ಆ ಸಮಯದಲ್ಲಿ ಮಹಾದೇವಿಯಾದ ಭವಾನಿ ತನ್ನ ತಂದೆಯಾದ ದಕ್ಷನು ಮಾಡುತ್ತಿದ್ದ ಯಜ್ಞಭೂಮಿಗೆ ಕರೆಯದಿದ್ದರೂ ಬಂದಳು. ಅಲ್ಲಿ ದಕ್ಷರಾಜ ತನ್ನ ಅಳಿಯನಾದ ಶಿವನ ನಿಂದನೆ ಮಾಡುತ್ತಿದ್ದ. ಅದನ್ನು ಕೇಳಿ ಸೈರಿಸಲಾರದೆ ಅಲ್ಲಿಂದ ಹೊರಟ ಭವಾನಿ, ತಪಸ್ಸು ಮಾಡುತ್ತಿದ್ದ ಮೇನೆಯ ಮುಂದೆ ಬಂದು ನಿಂತಳು. `ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ, ನಿನ್ನ ಹೊಟ್ಟೆಯಲ್ಲಿ ಹುಟ್ಟುತ್ತೇನೆ~ ಎಂದು ವರ ಕೊಟ್ಟಳು. ಹೀಗೆ ಬಯಸಿ ಬಂದ ಭಾಗ್ಯವಾದ ಮಗುವಿಗೆ ರಾಜರಾಣಿಯರು ಗಿರಿಜಾತೆ ಎಂದು ಹೆಸರಿಡುತ್ತಾರೆ. ಮಗನಿಗೆ ತಾಯಿಯಿಂದ ಬಂದ ಮೈನಾಕ ಎಂಬ ಹೆಸರಾದರೆ, ಮಗಳಿಗೆ ತಂದೆಯಿಂದ ಬಂದ ಗಿರಿಜಾತೆ- ಗಿರಿಜೆ ಎಂಬ ಹೆಸರು. ಗಿರಿಜೆಗೂ ಮದುವೆಯ ವಯಸ್ಸು ಬಂತು. ಆಗೊಂದು ದಿನ ಗಿರಿರಾಜನ ಅರಮನೆಗೆ ಬಂದ ನಾರದ ಮುನಿ ಗಿರಿಜೆಯ ಕಾಲಿಗೆ ಎರಗಿದ್ದು ಎಲ್ಲರಲ್ಲಿ ಅಚ್ಚರಿ ಮೂಡಿಸಿತು.`ಭವಾನಿಯೇ ನಿಮ್ಮ ಮಗಳಾಗಿ ಹುಟ್ಟಿದ್ದಾಳೆ. ಅಂದು ತಂದೆಯಿಂದ ಅವಮಾನಿತಳಾಗಿ ಅವಳು ನಿಜಯೋಗಾಗ್ನಿಗೆ ತನ್ನ ದೇಹವನ್ನು ಅರ್ಪಿಸಿದ್ದಳು. ಈಗ ಮತ್ತೆ ಇವಳು ಪರಶಿವನನ್ನೇ ಮದುವೆಯಾಗುತ್ತಾಳೆ. ಆದ್ದರಿಂದ ಇವಳನ್ನು ಶಿವನಲ್ಲಿಗೇ ಕಳುಹಿಸುವುದು ಉಚಿತ. ಅದನ್ನು ನಿಮಗೆ ಹೇಳಲೆಂದೇ ಬಂದೆ~ ಎಂದ.

ನಾರದನ ಮಾತನ್ನು ಗೌರವಿಸಿದ ಗಿರಿರಾಜ ಮಗಳನ್ನು ಶಿವನಿರುವ ಹೇಮಕೂಟಕ್ಕೆ ಬಿಟ್ಟುಬರಲು ನಿರ್ಧರಿಸಿದ. `ಸ್ವಯಂವರ~ದ ಹೆಸರಿನಲ್ಲಿ ಮಗಳ ಮದುವೆಯನ್ನೂ ತಮ್ಮ ರಾಜಕಾರಣಕ್ಕೆ ಬಳಸಿಕೊಳ್ಳುವ ರಾಜರೇ ನಮ್ಮ ಪರಂಪರೆಯಲ್ಲಿ ಹೆಚ್ಚು. ಆದರೆ ಈ ರಾಜನಾದರೋ ಮಗಳನ್ನು ಪುಷ್ಪಕ ವಿಮಾನದಲ್ಲಿ ಕೂರಿಸಿಕೊಂಡು ಅವಳ ಗಂಡನಾಗುವವ ತಪಸ್ಸು ಮಾಡುತ್ತಿದ್ದ ತಾಣಕ್ಕೆ ತಾನೇ ಬಿಟ್ಟುಬರುತ್ತಾನೆ. ಹೇಮಕೂಟದಲ್ಲಿ ಗಿರಿಜೆಯ ಭಕ್ತಿಗೆ ಶಿವ ಒಲಿಯಲಿಲ್ಲ, ಬದಲಿಗೆ ಮೂರನೇ ಕಣ್ಣು ತೆರೆದಾಗ ಕಂಡ ಮನ್ಮಥನನ್ನು ಸುಟ್ಟು ಬೂದಿ ಮಾಡಿ, ಕೈಲಾಸಕ್ಕೆ ಹೊರಟುಹೋದ. ಗಿರಿಜೆಯ ಸ್ವಾಭಿಮಾನಕ್ಕೆ ಪೆಟ್ಟುಬಿತ್ತು. ಅಳಲು ಶುರುಮಾಡದೆ, ಶಿವನನ್ನು `ನಿಕೃಷ್ಟಾತ್ಮ `ಎಂದು ಬೈದುಕೊಂಡಳು. ಗಂಡನನ್ನು ಕಳೆದುಕೊಂಡು ಅಳುತ್ತಿದ್ದ ರತೀದೇವಿಗೆ ಸಮಾಧಾನ ಹೇಳಿದಳು. `ಶಿವನಿರುವ ಕಡೆ ನಾನು ಬಂದು ಪೂಜಿಸಿದರೆ ಅವನು ನನ್ನನ್ನು ಮಾತೂ ಆಡಿಸಲಿಲ್ಲ, ಈಗ ನಾನಿರುವ ಕಡೆ ಅವನೇ ಬರುವಂತೆ ಮಾಡುತ್ತೇನೆ~ ಎಂದು ಶಪಥ ಮಾಡಿದಳು. ಮುಂದೆ ಗಿರಿಜೆಯ ಭಯಂಕರ ತಪಸ್ಸಿಗೆ ಸೂರ್ಯನೇ ಹೆದರಿಕೊಂಡ ಅಂದಮೇಲೆ ಹೇಳುವುದೇನಿದೆ? ಕೊನೆಗೂ ಶಿವ ಕರಗಿದ. ಎಂಥ ಗಟ್ಟಿ ಬೆಣ್ಣೆಯಾದರೂ ಶಾಖಕ್ಕೆ ಕರಗಲೇಬೇಕು.ಶಿವ ವಟುವೇಷದಲ್ಲಿ ಗಿರಿಜೆ ಇರುವ ಕಡೆಗೇ ಬಂದ. ಅವಳನ್ನು ಪರೀಕ್ಷೆ ಮಾಡಲು ಶಿವನಿಂದೆ ಮಾಡಿದಾಗ ಗಿರಿಜೆ ಕೋಪಗೊಂಡು ಪಕ್ಕದಲ್ಲಿದ್ದ ವಿಭೂತಿ ಉಂಡೆಯಿಂದ ಅವನಿಗೆ ಹೊಡೆಯುತ್ತಾಳೆ. ಆ ಕಾಲದ ಹುಡುಗಿ ಕೈಗೆ ಸಿಕ್ಕಿದ ಏನನ್ನಾದರೂ ತೆಗೆದುಕೊಂಡು ಹುಡುಗನಿಗೆ ಹೊಡೆಯುವುದಂತೂ ನಮಗೆ ಹೊಸದು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry