ಶುಕ್ರವಾರ, ಏಪ್ರಿಲ್ 23, 2021
31 °C

ಗಿರಿಯಮ್ಮನ ಭಕ್ತಿಗೆ ಸಾಕ್ಷಿ ರಂಗನಾಥ ಕ್ಷೇತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಬ್ಯಾರನ್ಯಾತಕೆ ನೀರೆ ನೀ ಕರೆತಾರೆ

ಸುಗುಣ ಗಂಭೀರನ ಮೂರುಲೋಕ ಸಂಚಾರ

ಕರುಣಾ ಸಾಗರ ತೇಜಿಯನೇರಿ ಮೆರೆವನ...~

ಎಂದು ಹಾಡಿ ರಂಗನಾಥನನ್ನು ಒಲಿಸಿಕೊಂಡಾಕೆ ಗಿರಿಯಮ್ಮ.ಕೊಮಾರನಹಳ್ಳಿಯಲ್ಲಿ ಗೋರಕ್ಷಣೆ ಮಾಡುತ್ತಿದ್ದ ಹೆಳವನೊಬ್ಬ ತನ್ನ ಸ್ನೇಹಿತನ ಹಸುಗಳ ದಾಹ ತೀರಿಸಲು ಇಲ್ಲಿ ಒಂದು ಕಟ್ಟೆ ಕಟ್ಟಿಸಿದ. ಅದು ಹೆಳವನಕಟ್ಟೆ ಎಂದೇ ಪ್ರಸಿದ್ಧಿಯಾಯಿತು. ಅಲ್ಲೇ ಪಕ್ಕದಲ್ಲೇ ಒಂದು ಬೃಹದಾಕಾರವಾಗಿ ಬೆಳೆದ ಹುತ್ತವಿತ್ತು. ಹಿಂಡಿನಿಂದ ತಪ್ಪಿಸಿಕೊಂಡು ತುಂಬಿದ ಕೆಚ್ಚಲಿನ ದನವೊಂದು ಹೋಗಿ ದಿನವೂ ಆ ಹುತ್ತದ ಬಾಯಿಗೆ ಹಾಲು ಬಿಡುತ್ತಿತ್ತು.  ಹುತ್ತದೊಳಗೆ ಉಸಿರುಗಟ್ಟಿಸುವ  ವಾತಾವರಣದಿಂದ ಸ್ವಾಮಿಗೆ ಹೊರಗೆ  ಬರಬೇಕಾಗಿತ್ತು. ಒಂದು ದಿನ ಆ ಹೆಳವನ  ಕನಸಿನಲ್ಲಿ ಬಂದು ನಾನು ಇಲ್ಲಿ  ಹುತ್ತದಲ್ಲಿದ್ದೇನೆ, ನನ್ನನ್ನು ಹೊರತೆಗೆ  ಎಂದಂತಾಯಿತು.ಮರುದಿನ ಹುತ್ತವನ್ನು ಒಡೆದು  ನೋಡಿದಾಗ ಅಲ್ಲಿ ದೇವ  ಮೂರ್ತಿಗಳಿದ್ದವು. ಆ ಮೂರ್ತಿಗಳನ್ನು  ಅಲ್ಲೇ ಪ್ರತಿಷ್ಠಾಪಿಸಲಾಯಿತು. ಮುಂದೆ  ಹೆಳವನಕಟ್ಟೆ ರಂಗನಾಥ ಸ್ವಾಮಿ ಎಂದು ಕ್ಷೇತ್ರವು ಪ್ರಸಿದ್ಧಿ ಪಡೆಯಿತು. ಮತ್ತೆ 17ನೇ ಶತಮಾನದಲ್ಲಿ ಗಿರಿಯಮ್ಮನ ಕಾಲದಲ್ಲಿ ಪುಂಗನೂರು ಅರಸರ ನೆರವಿನಿಂದ ಜೀರ್ಣೋದ್ಧಾರವನ್ನು ಕಂಡಿತು.ಭಕ್ತಿಪಂಥಕ್ಕೆ ಸೇರಿದ ಗಿರಿಯಮ್ಮನ ಹುಟ್ಟೂರು ಹಾವೇರಿ ಜಿಲ್ಲೆಯ ರಾಣೇಬೆನ್ನೂರು. ತಂದೆ ಭಿಷ್ಟಪ್ಪ ಜೋಯಿಸರು. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಗ್ರಾಮದ ಶ್ಯಾನುಭೋಗ ತಿಪ್ಪರಸನೊಡನೆ ಮದುವೆಯಾಯಿತು. ಗಿರಿಯಮ್ಮ ಸಂಸಾರ ಸುಖವನ್ನು ಬಯಸದೇ ಭಕ್ತಿ ಮತ್ತು ತಪಸ್ಸಿನಿಂದ ದೇವರನಾಮ, ಕೀರ್ತನೆ ಇತ್ಯಾದಿಗಳನ್ನು ರಚಿಸುತ್ತಾ ಜೀವನವನ್ನು ಸಾರ್ಥಕಗೊಳಿಸಿದಳು.ವಿವಾಹ ನಂತರ ಮಲೇಬೆನ್ನೂರಿಗೆ ಬಂದು ನೆಲೆಸಿದ ಗಿರಿಯಮ್ಮ ಮನೆಯ ಹತ್ತಿರವಿದ್ದ ರಂಗನಾಥ ಸ್ವಾಮಿಯನ್ನು ನಂಬಿ ನಡೆದುಕೊಂಡಳಲ್ಲದೆ ರಂಗನಾಥ ಸ್ವಾಮಿಯ ಪರಮಭಕ್ತೆಯಾದಳು. ರಂಗನಾಥನಿಗೆ ತನ್ನ ಭಕ್ತಿಯನ್ನು ಸೀಮಿತಗೊಳಿಸಿದ ಆಕೆ ಮೈಲಾರಲಿಂಗನ ಮೇಲೂ ಭಕ್ತಿ ಇಟ್ಟು ಅನೇಕ ಕೀರ್ತನೆಗಳನ್ನು ರಚಿಸಿದ್ದಾಳೆ.ಮಲೇಬೆನ್ನೂರಿಂದ ಕೇವಲ ಎರಡು ಕಿ.ಮೀ. ದೂರದಲ್ಲಿರುವ ಹೆಳವನಕಟ್ಟೆ ರಂಗನಾಥ ಸ್ವಾಮಿ ದೇವಸ್ಥಾನ ಆಕೆಯ ಭಕ್ತಿಗೆ ಸಾಕ್ಷಿಯಾಗಿ ನಿಂತಿದೆ.  ದೇವಸ್ಥಾನ  ಗಿರಿಯಮ್ಮನ ಭಕ್ತಿಯಿಂದಲೇ ಪ್ರಸಿದ್ಧವಾದದು ಎಂದು ಸಾಧ್ವೀಮಣಿ ಹೆಳವನಕಟ್ಟೆ ಗಿರಿಯಮ್ಮ ದೇವಸ್ಥಾನ ಪುಸ್ತಕದಲ್ಲಿ ಲೇಖಕಿ ಪ್ರೇಮಾಭಟ್ ಉಲ್ಲೇಖಿಸಿದ್ದಾರೆ.ನಾಗರಪಂಚಮಿಯಂದು ಸಮೀಪದ ಹೊನ್ನಾಳಿ ತಾಲ್ಲೂಕಿನ ಕಮ್ಮಾರಗಟ್ಟೆ ಬಳಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ದೇಹತ್ಯಾಗ ಮಾಡಿದಳು. ಇದಕ್ಕೆ ಸಾಕ್ಷಿಯಂಬಂತೆ ನದಿತಟದಲ್ಲಿ ವಿಚಿತ್ರ ಆಕಾರದ ಹುಣಸೆ ಮರವೊಂದಿದೆ, ಎರಡು ಸ್ಥಳದಲ್ಲಿ ಪ್ರತಿವರ್ಷ ಅಂದು ಕಾರ್ಣೀಕೋತ್ಸವ ನಡೆಯುತ್ತದೆ. 17ನೇ ಶತಮಾನದಲ್ಲಿ ಕಟ್ಟಿದ ದೇವಸ್ಥಾನ ಶಿಥಿಲಾವಸ್ಥೆಯನ್ನು ತಲುಪಿದ್ದರಿಂದ ಈಚೆಗೆ ಹೊಸ ದೇವಸ್ಥಾನವೊಂದನ್ನು ನಿರ್ಮಾಣ ಮಾಡಲಾಗಿದೆ.ರಂಗನಾಥ ಸ್ವಾಮಿ ಮೂರ್ತಿಯನ್ನು ಒಳಗೊಂಡಂತೆ, ಪರಮಭಕ್ತೆ ಗಿರಿಯಮ್ಮ, ಹನುಮಂತ ದೇವರ ಮೂರ್ತಿಗಳಿವೆ. ದೇವಸ್ಥಾನದ ಪಕ್ಕದಲ್ಲಿ ಹೆಳವನಟ್ಟೆ ಗಿರಿಯಮ್ಮನ ಕೆರೆಯಿದೆ. ಪಕ್ಕದಲ್ಲಿ ರಂಗನಾಥಸ್ವಾಮಿ ಆಶ್ರಮ ಕೂಡಾ ಇದೆ. ಐಕ್ಯಸ್ಥಳ ಹೊನ್ನಾಳಿ ತಾಲ್ಲೂಕಿನ ತುಂಗಭದ್ರಾ ನದಿತಟದ ಕಮ್ಮೋರಗಟ್ಟೆಯಲ್ಲಿ ಒಂದು ದೇವಾಲಯ ನಿರ್ಮಿಸಲಾಗಿದೆ.   ಆಕೆ ಪೂಜಿಸುತ್ತಿದ್ದ ಬೃಂದಾವನ, ಸ್ತಂಭದೇವತೆ ದೇವಾಲಯ ಮಾತ್ರ ಕುರುಹಾಗಿ ಉಳಿದಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.