ಮಂಗಳವಾರ, ನವೆಂಬರ್ 12, 2019
28 °C
ಕಥೆ

ಗಿರಿ ಶಿಖರ ಝರಿ ನೀರು

Published:
Updated:

ಮಳೆ ಹನಿಕಡಿಯದಂತೆ ಒಮ್ಮೆ ಜೋರು ಒಮ್ಮೆ ನಿಧಾನವಾಗಿ ತನ್ನದೇ ಲಯದಲ್ಲಿ ಸುರಿಯುತ್ತಿತ್ತು. ಬಸ್ ಸ್ಟ್ಯಾಂಡ್‌ನ ಜಂಗುಳಿಯ ನಡುವೆ ಕಲ್ಲುಬೆಂಚಿನ ಮೇಲೆ ಕುಳಿತಿದ್ದ ಕೃಷ್ಣಪ್ಪ ತರಕಾರಿ ತುಂಬಿದ್ದ ಬ್ಯಾಗ್ ಅನ್ನು ಒದ್ದೆ ನೆಲದ ಮೇಲಿಟ್ಟು ಶೂನ್ಯದಲ್ಲಿ ದೃಷ್ಟಿ ನೆಟ್ಟು ಕುಳಿತಿದ್ದ. ಪಕ್ಕದಲ್ಲೇ ಮಳೆಯಲ್ಲಿ ನೆನೆದು ಸಿನುಗು ವಾಸನೆ ಬೀರುತ್ತಾ ಮೂಸಂಬಿ ಸಿಪ್ಪೆ ತಿನ್ನುತ್ತಾ ಅವನ ತರಕಾರಿ ಚೀಲದ ಕಡೆ ನೋಡುತ್ತಿದ್ದ ದನದ ಪರಿವೆಯೂ ಅವನಿಗಿರಲಿಲ್ಲ.ಪರಿಚಿತರ ಉಭಯ ಕುಶಲೋಪರಿಗೂ ಹೌದು ಅಥವಾ ಇಲ್ಲ ಎರಡೇ ಪದಗಳು. ಚಾವಣಿಂದ ಬೀಳುತ್ತಿದ್ದ ನೀರಿನ ಸದ್ದಾಗಲೀ ಬಸ್‌ಗಳ ಹಾರ್ನ್ ಆಗಲೀ ಅವನ ಕಿವಿ ಒಳಗೇ ಹೋಗುತ್ತಿಲ್ಲ. ಸಂತೆಯ ಜನ ಎಲ್ಲಾ ಕಡೆ ತುಂಬಿದ್ದರು. ಬಸ್‌ನಲ್ಲಿ ಜಾಗ ಇರುತ್ತೋ ಇಲ್ವೋ ಎಂದು ಚಿಂತೆಯಾಯಿತು. ವಿಪರೀತ ಮಳೆಯಿಂದ ಮನೆಯಿಂದ ಮುಖ್ಯರಸ್ತೆಗೆ ಬರುವ ದಾರಿ ಕೆಸರಾಗಿದೆ ಎಂದು ಜೀಪ್ ಹೊರತೆಗೆಯದೇ ಬಸ್‌ನಲ್ಲಿ ಬರಬಾರದಿತ್ತು.ಸುಣ್ಣ, ಮೈಲುತುತ್ತದ ಮೂಟೆಗಳನ್ನು ಗೂಡ್ಸ್‌ನಲ್ಲಿ ಹಾಕಿದ್ದು ಒಳ್ಳೆಯದೇ ಆಯ್ತು. ಯೋಚಿಸುತ್ತಾ ಪೇಪರ್ ಸ್ಟಾಲ್‌ನಿಂದ ಪತ್ರಿಕೆಯೊಂದನ್ನು ಕೊಂಡು ಅದರಲ್ಲಿ ಮುಖ ಹುದುಗಿಸಿ ಕೂತ ಅವನು ಏನೂ ಓದುತ್ತಿರಲಿಲ್ಲ. ಅವನ ಪಕ್ಕದಲ್ಲಿ ಕೂತವರು ಮಂಡಗದ್ದೆಯಲ್ಲಿ ಮರಳು ಲಾರಿ ಡಿಕ್ಕಿ ಎಂಬ ಸುದ್ದಿ ಓದಿ, `ಮಳೆಗಾಲಕ್ಕೆ ಮೊದಲೇ ತೆಗೆದಿಟ್ಟುಕೊಂಡ ಮರಳನ್ನು ಈಗ ಸಾಗಿಸುತ್ತಿದ್ದಾರೆ ಹೀಗೆ ತೆಗೆದರೆ ನದೀದಂಡೆ ಕುಸಿದು ಹೋಗುತ್ತೆ' ಅಂದರು.ಅವರ ಮಾತಿಗೆ ಪ್ರತಿಕ್ರಿಯಿಸದೆ ಸುಮ್ಮನಿದ್ದುದನ್ನು ನೋಡಿ ಇವನ ಕೈಯಿಂದ ಪತ್ರಿಕೆ ತೆಗೆದುಕೊಂಡು ಓದತೊಡಗಿದರು. ಮತ್ತೆ ಮಳೆಯನ್ನೇ ದಿಟ್ಟಿಸುತ್ತಿದ್ದ ಕೃಷ್ಣಪ್ಪನಿಗೆ ಇಬ್ಬರು ಹುಡುಗಿಯರು ಇವನತ್ತಲೇ ಬರುವುದು ಕಂಡಿತು. ಎದುರಿಗೇ ಬಂದು ನಿಂತ ಅವರ ಜೀನ್ಸ್, ಬಿಗಿಯಾದ ಟಾಪ್ ನೋಡಿ ಮುಖ ತಿರುಗಿಸಿಕೊಂಡ ಅವನನ್ನು `ಅಂಕಲ್' ಎಂದು ಕರೆದಾಗ ಕಸಿವಿಸಿಯಾಯಿತು. ಏನೋ ಮಾತಿಗೆ ಪೀಠಿಕೆ ಹಾಕುವಂತೆ ಅವನ ಮುಖವನ್ನೇ ನೋಡಿದರು. ಒಬ್ಬಳು ಹುಬ್ಬಿನ ಕೂದಲನ್ನೆಲ್ಲ ಕಿತ್ತುಕೊಂಡು ಮುಖದ ಲಕ್ಷಣವೇ ಹೊರಟು ಹೋಗಿತ್ತು.ಅವರಲ್ಲೊಬ್ಬಳು ಕೇಳಿದಳು `ಅಂಕಲ್ ಸೀಮಾಳ ಫೋನ್ ನಂಬರ್ ಬೇಕಿತ್ತು'. ಕೃಷ್ಣಪ್ಪ ಕಂಗಾಲಾದ. ಯಾವುದರಿಂದ ದೂರ ಇರಲು ಬಯಸುತ್ತಿದ್ದನೋ ಅದು ಎದುರಿಗೇ ಬಂದಿತ್ತು. ಒಂದು ಕ್ಷಣ ಯೋಚಿಸಿ `ಇ್ಲ್ಲಲಿಲ್ಲ ಮನೇಲಿದೆ, ಯಾಕೆ ಬೇಕಿತ್ತು' ಅಂದ. `ಅವಳಿಗೆ ಸೀರಿಯಲ್‌ನಲ್ಲಿ ಚಾನ್ಸ್ ಸಿಕ್ಕಿದೆಯಲ್ಲ ನಾವೂ ಟ್ರೈ ಮಾಡಾಣ ಅಂತ'. ಮೌನವಾಗಿದ್ದ ಕೃಷ್ಣಪ್ಪನ ಮುಖ ನೋಡುತ್ತ `ನಮ್ಮ ಬಸ್ ಬಂತು' ಎಂದು ಹೋದರು. ಇವರಿಗೆ ಸೀಮಾ ತನ್ನ ಮಗಳು ಅಂತ ಹೇಗೆ ಗೊತ್ತಾಯಿತು ಎಂದು ಯೋಚಿಸಿದ.***

ಊಟದ ಮೇಜಿನ ಮುಂದೆ ತಟ್ಟೆಯಲ್ಲಿದ್ದ ಅನ್ನದಲ್ಲಿ ಕೈಯಿಟ್ಟು ಸುಮ್ಮನೆ ಕುಳಿತವನನ್ನು ನೋಡಿ ರುಕ್ಮಿಣಿ ಕಣ್ಣೊರೆಸಿಕೊಳ್ಳುತ್ತ `ಆದದ್ದು ಆಗಿ ಹೋಯಿತು. ಈಗ ಊಟ ಮಾಡಿ, ಏನು ಮಾಡದು ಅಂತ ಯೋಚ್ನೆ ಮಾಡಣ' ಅನ್ನುತ್ತ ಬಿಸಿ ಸಾರು ಬಡಿಸಿದಳು. `ನಾನು ಮಂಗ್ಳೂರ್ನಲ್ಲಿ ಹಾಸ್ಟೆಲ್‌ನಲ್ಲಿ ಬಿಡಣ ಅಂದೆ, ನೀನೇ ಮನೆ ಹತ್ರ ಇರಲಿ, ಇಲ್ಲಿಂದನೆ ಕಾಲೇಜ್‌ಗೆ ಹೋಗಲಿ ಅಂದಿದ್ದು'. ರುಕ್ಮಿಣಿ ಮೌನವಾದಳು.

ಒಂದು ವಾರದಿಂದ ಮನೆಯಲ್ಲಿ ಸೂತಕ ಕವಿದಂತೆ ಕೆಲಸಗಳು ಯಾಂತ್ರಿಕವಾಗಿ ನಡೆಯುತ್ತಿದ್ದವು. ಇಬ್ಬರ ಮುಖದಲ್ಲೂ ನಗುವಿಲ್ಲ. ಹೈಸ್ಕೂಲ್‌ವರೆಗೂ ಚೆನ್ನಾಗಿಯೆ ಓದುತ್ತಿದ್ದ ಮಗಳು ಕಾಲೇಜಿಗೆ ಹೋದ ಮೇಲೆ ಬದಲಾಗಿದ್ದಳು. ಪಿ.ಯುನಲ್ಲಿ ಸೈನ್ಸ್ ತೆಗೆದುಕೊಂಡವಳು ಮುಂದೆ ಬಿ.ಸಿ.ಎಗೆ ಸೇರಿದಾಗ ಮನಸ್ಸಿನಲ್ಲೇ ನಿರಾಶೆ ಅನುಭವಿಸಿದರೂ ಅವಳೆದುರು ನಿನಗೆ ಇಷ್ಟವಾದುದನ್ನೇ ಓದು ಅಂದಿದ್ದರು.ಒಂದು ಸೆಮಿಸ್ಟರ್ ಮುಗಿಯುವುದರೊಳಗೆ ಅವಳ ಆಸಕ್ತಿಗಳು ಬದಲಾದವು. ಒಂದು ದಿನ ನಾನು ಡ್ಯಾನ್ಸ್ ಕ್ಲಾಸ್‌ಗೆ ಸೇರುತ್ತೇನೆ ಅಂದಳು. ಆಯ್ತು ಎಂದು ಫೀಸ್ ಕೊಟ್ಟು ಕಳುಹಿಸಿದರು. ಮತ್ತೊಂದು ದಿನ, `ಕ್ಲಾಸ್ ಮುಗಿಸಿ ಡ್ಯಾನ್ಸ್ ಕ್ಲಾಸ್‌ಗೆ ಹೋಗಿ ಬರುವಷ್ಟರಲ್ಲಿ ಬಸ್ ತಪ್ಪುತ್ತದೆ. ನನ್ನ ಫ್ರೆಂಡ್ಸ್ ಕೆಲವರು ಹಾಸ್ಟೆಲ್ನಲ್ಲಿದ್ದಾರೆ ನಾನೂ ಅಲ್ಲೆ ಇರ್ತೀನಿ' ಅಂದಾಗ ಇಲ್ಲವೆನ್ನಲಾಗಲಿಲ್ಲ.ಅಂಗಳದಲ್ಲಿ ಕರಿಯ ಮತ್ತು ಟೈಗರ್ ಎರಡೂ ಒಟ್ಟಿಗೆ ಬೊಗಳುವ ಶಬ್ದ ಕೇಳಿ ಹೊರಬಂದು ನೋಡಿದರೆ ಇಬ್ಬರು ಹುಡುಗಿಯರು. ಕಾಲೇಜು ವಿದ್ಯಾರ್ಥಿನಿಯರಂತೆ ಕಾಣುತ್ತಿದ್ದರು.`ಕೃಷ್ಣಪ್ಪನವರ ಮನೆ ಇದೇನಾ?'

`ಹೌದು ಬನ್ನಿ'. ಅವರಿಬ್ಬರೂ ನಿಧಾನವಾಗಿ ಅಂಗಳದ ಅಂತೂರಿಯಮ್ ಹೂಗಳನ್ನು ನೋಡುತ್ತ ಮೆಟ್ಟಿಲು ಹತ್ತಿ ಬಂದು, `ಕುಳಿತುಕೊಳ್ಳಿ' ಅಂದ ಮೇಲೆ ಸಂಕೋಚದಿಂದ ಕೆಳ ಜಗುಲಿಯ ಮರದ ಕುರ್ಚಿಗಳಲ್ಲಿ ಕುಳಿತರು. ರುಕ್ಮಿಣಿ ಅವರ ಸಮೀಪದಲ್ಲಿ ನಿಂತಳು. ಒಂದು ಕ್ಷಣ ಮೌನದ ನಂತರ ಅವರಲ್ಲೊಬ್ಬಳು ಹೇಳಿದಳು. `ನಾವು ಸೀಮಾಳ ಕ್ಲಾಸ್ ಮೇಟ್ಸ್. ಅವಳ ಫೋನ್ ನಂಬರ್ ಬೇಕಿತ್ತು'.ರುಕ್ಮಿಣಿ `ಮೊನ್ನೆ ಅವಳು ಮೊನ್ನೆ ಕಾಯಿನ್ ಬೂತ್‌ನಿಂದ ಮಾಡಿದ್ದಳು. ಮೊಬೈಲ್ ಬಸ್‌ನಲ್ಲಿ ಕಳೆದುಹೋಯಿತಂತೆ. ಹೊಸತು ತೆಗೆದುಕೊಂಡ ಮೇಲೆ ತಿಳಿಸ್‌ತೀನಿ ಅಂದಿದ್ದಾಳೆ. ಕೂತಿರಿ ಕಾಫಿ ಕೊಡ್ತೀನಿ' ಅಂತ ಒಳಗೆ ಹೋಗಿ ಕಾಫಿ ಮತ್ತು ಚಿಪ್ಸ್ ತಂದು ಅವರೆದುರಿಗೆ ಮೇಜಿನ ಮೇಲೆ ಇಟ್ಟಳು. ಕಾಫಿ ಕುಡಿದು `ಬರ್ತೀವಿ ಆಂಟಿ' ಎಂದು ಆ ಹುಡುಗಿಯರು ಹೋದ ಮೇಲೆ ಹೊರಬಂದ ಕೃಷ್ಣಪ್ಪ, `ಫೋನ್ ನಂಬರ್ ಹುಡುಕಿ ಇಲ್ಲಿಗೆ ಬಂದಿದ್ದಾರೆಂದರೆ ಇವರಿಗೆ ಸೀರಿಯಲ್ ಹುಚ್ಚು ಹಿಡಿದಿದೆ ಅಷ್ಟೆ' ಎಂದರು.`ಇವಳು ಆ ದಿನ ಫೋನ್ ಮಾಡಿದ ಮೇಲೆ ಮತ್ತೆ ಫೋನ್ ಕೂಡ ಇಲ್ಲ' ಎಂದು ರುಕ್ಮಿಣಿ ಹನಿಗಣ್ಣಾದಳು. `ನಾವು ಮಾಡಣ ಅಂದ್ರೆ ನಂಬರ್ ಸಹಾ ಕೊಟ್ಟಿಲ್ಲ'

***

ಆ ದಿನ ಅಂತರ ಕಾಲೇಜು ನೃತ್ಯ ಸ್ಪರ್ಧೆಗಳು. ಆಡಿಟೋರಿಯಮ್ ತುಂಬಿ ತುಳುಕುತ್ತಿತ್ತು. ಸೀಮಾ ಗುಂಪು ನೃತ್ಯವೊಂದರಲ್ಲಿದ್ದಳು. ಅವರ ಸರದಿ ಬಂದಾಗ ತಮ್ಮ ಕಾಲೇಜು ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲು ಹುಡುಗರು ವಿಷಲ್ ಹಾಕಿದರು... ಸ್ಟೇಜ್ ಮೇಲೆ ಬಣ್ಣದ ದೀಪಗಳು ಮಿನುಗತೊಡಗಿದಾಗ ನರ್ತಿಸುತ್ತಿದ್ದ ಸೀಮಾ ಮಾಯಾಲೋಕವೊಂದನ್ನು ಪ್ರವೇಶಿಸಿದಳು.ಮುದ್ರಿತ ಸಿನಿಮಾ ಹಾಡಿನ ಧ್ವನಿ ಜಾಸ್ತಿಯಾದಂತೆ ಕುಣಿತ ವೇಗ ಪಡೆದುಕೊಂಡಿತು. “ಡೋಲಾರೆ, ಡೋಲಾರೆ ಡೋಲಾರೆ ದೋ...”. ವೃತ್ತಾಕಾರದಲ್ಲಿ ವೇಗವಾಗಿ ನರ್ತಿಸುತ್ತಿದ್ದ ಆ ಕ್ಷಣದಲ್ಲಿ ಅವಳಲ್ಲಿ ಪರಿವರ್ತನೆಯಾಗಿತ್ತು. ಗ್ರೀನ್ ರೂಮ್‌ನಿಂದ ಹೊರಬಂದ ಅವಳನ್ನು ಸಹಪಾಠಿಗಳು ಅಭಿನಂದಿಸಿದರು. “ನೀನು ಖಂಡಿತಾ ಒಳ್ಳೆ ಡ್ಯಾನ್ಸರ್ ಆಗ್ತೀಯ, ಎಷ್ಟು ಚೆನ್ನಾಗಿ ಕಾಣ್ತಿದ್ದೆ”. ಹೊಗಳಿಕೆಗಳು, ಅಸೂಯೆಯ ಮಾತುಗಳು. ಸೀಮಾಗೆ ತಾನು ಈಗಿರುವುದಕ್ಕಿಂತ ಹೆಚ್ಚಿನದೇನನ್ನೋ ಪಡೆಯಬೇಕಾದವಳು ಎಲ್ಲೋ ತಪ್ಪಿ ಈ ಹಳ್ಳಿಯಲ್ಲಿ ಅಪ್ಪ ಅಮ್ಮನ ಜತೆ ಇರುವಂತಾಗಿದೆ ಎಂದು ಕೊರಗು ಕಾಣಿಸಿಕೊಂಡಿತು.ಮನೆಗೆ ಬಂದಾಗ ಮನೆ ನೀರಸವಾಗಿ ಕಾಣತೊಡಗಿತು. ಅವಳು ಟೈಟ್ ಫಿಟ್ಟಿಂಗ್ ಬಟ್ಟೆಗಳನ್ನು ಕೊಂಡಾಗೆಲ್ಲ ರುಕ್ಮಿಣಿ ಆಕ್ಷೇಪಿಸುತ್ತಿದ್ದಳು. ಆಗೆಲ್ಲ ಸೀಮಾ, `ನೀನು ಬಂದು ನೋಡು, ಎಲ್ಲರೂ ಈ ತರಹದ್ದೇ ಹಾಕ್ತಾರೆ' ಎಂದು ಒರಟಾಗಿ ಹೇಳುತ್ತಿದ್ದಳು. ಡ್ಯಾನ್ಸ್ ಮತ್ತು ಕಂಪ್ಯೂಟರ್ ಕ್ಲಾಸ್‌ಗೆ ಹೋಗಿ ಬರಲು ತಡವಾಗುತ್ತದೆಯೆಂದು ಹಾಸ್ಟೆಲ್‌ನಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಂಡಿದ್ದಳು. ಶನಿವಾರ ಭಾನುವಾರಗಳಲ್ಲೂ ಏನಾದರೂ ನೆಪ ಹೇಳಿ ಮನೆಗೆ ಬರುವುದನ್ನು ತಪ್ಪಿಸುತ್ತಿದ್ದಳು. ಕಾಲೇಜ್‌ನಲ್ಲಿ ನಡೆಯುವ ಸೀರಿಯಲ್‌ನ ಚಿತ್ರೀಕರಣ ನೊಡಲು ಹೋದವಳಿಗೆ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು.ಅದಾದ ಕೆಲವೇ ದಿನಗಳಲ್ಲಿ ಅವಳು ಮನೆಯಿಂದ ಹಾಸ್ಟೆಲ್‌ಗೆ ಹೋದವಳು ಕಾಲೇಜ್‌ಗೆ ಹೋಗಲಿಲ್ಲವೆಂದು ತಿಳಿದದ್ದು ಒಂದು ದಿನ ತಡವಾಗಿ. ದಿನವೂ ಸಂಜೆ ಫೋನ್ ಮಾಡುತ್ತಿದ್ದ ಮಗಳು ನಿನ್ನೆ ಮಾತಾಡಲೇ ಇಲ್ಲವಲ್ಲ ಎಂದು ರುಕ್ಮಿಣಿ ಅವಳ ಮೊಬೈಲ್ಗೆ ಕಾಲ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಸಂಜೆ ಸೀಮಾ ಕರೆ ಮಾಡಿ `ನಾನು ಬೆಂಗಳೂರ್‌ಗೆ ಬಂದಿದ್ದೇನೆ. ಸೀರಿಯಲ್‌ನಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ.ನಿಮ್ಗೆ ಹೇಳಿದರೆ ಬೇಡ ಅನ್ತೀರಿ ಅಂತ ಹೇಳದೆ ಬಂದೆ. ಏನೂ ಯೋಚಿಸಬೇಡಿ ಇಲ್ಲಿ ಎಲ್ಲ ವ್ಯವಸ್ಥೆಯಿದೆ' ಅಂದಾಗ ರುಕ್ಮಿಣಿಗೆ ಮಾತು ಹೊರಡಲಿಲ್ಲ. ತೋಟದಲ್ಲಿದ್ದ ಗಂಡನನ್ನು ಕರೆಯುವಂತೆ ಅಂಗಳದಲ್ಲಿದ್ದ ಚೆನ್ನಿಗೆ ಹೇಳಿದಳು.ಕೃಷ್ಣಪ್ಪ ಬರುವಾಗಲೇ ದುಗುಡ ತುಂಬಿದ ಅವಳ ಮುಖ ನೋಡಿ ಗಾಬರಿಯಾದ. ಮಗಳಿಗೇನಾದರೂ ಆಯಿತಾ ಎಂಬ ಆತಂಕ ಅವನ ಮುಖದಲ್ಲೂ ಮೂಡಿತು. ಒಳಗೆ ಬಂದ ಮೇಲೆ ವಿಷಯ ತಿಳಿಸಿದ ಅವಳು ಕಣ್ಣಿನಲ್ಲಿ ನೀರು ತುಂಬಿಕೊಂಡೇ, `ಅವಳು ನಮಗೆ ಹೇಳಿದ್ದರೆ ನಾವೇ ಕಳಿಸುವ ವ್ಯವಸ್ಥೆ ಮಾಡಬಹುದಿತ್ತು. ಈಗ ಕೇಳಿದವರಿಗೆ ಏನು ಹೇಳುವುದು' ಎಂದು ತಲೆ ಮೇಲೆ ಕೈಹೊತ್ತು ಕುಳಿತಳು. ಇವರು ಏನಾದರೂ ಹೇಳುವ ಮೊದಲೇ ಊರಿನವರಿಗೆಲ್ಲಾ ತಿಳಿದಿತ್ತು.

***ಕೃಷ್ಣಪ್ಪ ಅಳಲೆಕಾಯಿ ತೇಯ್ತಾ ಕೂತಿದ್ದ. ಮಳೆಗಾಲದ ತೇವದಲ್ಲಿ ಗದ್ದೆ ತೋಟ ತಿರುಗಿ ಕಾಲ ಬೆರಳ ನಡುವೆ ಚರ್ಮ ಕರಗಿ ಬೆಳ್ಳಗಾಗಿತ್ತು. ಯಾವ ಆಯಿಂಟ್‌ಮೆಂಟ್ಗೂ ವಾಸಿಯಾಗದೇ ಇದ್ದಾಗ ಅಳಲೆಕಾಯಿಗೆ ಶರಣಾಗಿದ್ದ. ಐದು ಗಂಟೆಗೇ ಕತ್ತಲೆ ಕವಿದಂತೆ ಕಾಣುತ್ತಿತ್ತು. ಜೀರುಂಡೆಗಳು ಜಿರ‌್ರೋ ಅಂತ ಕೂಗ್ತಿದ್ದವು. ಇನ್ನೇನು ಮೋಡವೇ ಹರಿದುಕೊಂಡು ಬೀಳುತ್ತೇನೋ ಅನ್ನುವಂತೆ ಆಗಲೋ ಈಗಲೋ ಮಳೆ ಬರುವಂತೆ ಕಾಣುತ್ತಿತ್ತು.ದನ ಮೇಯಿಸಲು ಹೋಗಿದ್ದ ಜಬ್ಬ ಕೊಟ್ಟಿಗೆಯಲ್ಲಿ ಎಲ್ಲ ದನ ಕಟ್ಟಿ ಬಂದು, `ಆ ಗಬ್ಬದ ಎಮ್ಮೆ ತಪ್ಪಿಸಿಕೊಂಡಿದೆ ಮಾರಾಯಿರ' ಅಂದ. ಅಲ್ಲಿ ವಾಟೆಸರಲಿನ ಹಕ್ಕಲಲ್ಲಿ ಮೇಯಲು ಬಿಟ್ಟು ಅರಮರಲು ಕಾಯಿ ಕುಯ್ಯಲು ಹೋಗಿದ್ದೆ. ಬಂದು ನೋಡಿದರೆ ಇರಲಿಲ್ಲ. ಒಂದು ಚಣದಲ್ಲಿ ಮಾಯ ಆಗ್ಯದೆ. ನಾನು ಎಲ್ಲ ಹುಡುಕ್ದೆ. ಎಲ್ಲೂ ಕಾಣ್ಲ. ಕತ್ತಲಾತದೆ ಅಂತ ದನ ಹೊಡಕೂ ಬಂದೆ' ಎಂದು ತನ್ನದೇನೂ ತಪ್ಪಿಲ್ಲ ಎಂದು ಕೊಡವಿಕೊಂಡ.`ಈ ಮಳೇಲಿ ಆ ಗಬ್ಬದ ಎಮ್ಮೆ ಕಥೆ ಏನಾಗ್ತದೊ ಏನೊ? ನೀನು ಬೆಳಿಗ್ಗೆ ಯಾಕೆ ಅದನ್ನ ಬಿಟ್ಟುಕೊಂಡು ಹೋಗಿದ್ದೆ' ಎಂದು ಕೃಷ್ಣಪ್ಪ ಸಿಡುಕಿದ.`ಕರ ಹಾಕಾಕೆ ವಾರನಾದ್ರೂ ಬೇಕು, ಸ್ವಲ್ಪ ಕೈಕಾಲಾಡಿಸಲಿ ಅಂತ ಬಿಟ್ಟೆ'.

`ಅದಕ್ಕೆ ಈಗಾಯ್ತಲ್ಲ. ಈ ಮಳೇಲ್ ಕತ್ತಲಲ್ಲಿ ಎಲ್ಲಿ ಅಂತ ಹುಡುಕದು'.ತಲೆ ಮೇಲೆ ಕೈ ಹೊತ್ತವನನ್ನು ಅಲ್ಲೇ ಬಿಟ್ಟು ಜಬ್ಬ ಹಿತ್ತಲ ಕಡೆ ಹೋಗಿ ಕಾಫಿ ಕುಡಿದು ಮನೆಗೆ ಹೋದ. ಕೃಷ್ಣಪ್ಪ ಕಾಲಿನ ಬೆರಳ ಸಂದಿಗೆ ಅಳಲೆಕಾಯಿ ಲೇಪಿಸಿ ಕೈ ತೊಳೆಯಲು ಬಚ್ಚಲು ಮನೆಗೆ ಹೋದ.ಆಕಾಶವೇ ಹರಿದುಬಿದ್ದಂತೆ ಮಳೆ ಸುರಿಯುತ್ತಿತ್ತು. ಬೀಸುಗಾಳಿಗೆ ಇರಿಚಲು ಕಿಟಕಿ, ಬಾಗಿಲು, ತಳಿಕಂಡಿಗಳಿಂದ ಒಳನುಗ್ಗಿತು. ಕೃಷ್ಣಪ್ಪ ಎದ್ದು ಕಿಟಕಿ, ಬಾಗಿಲು ಹಾಕಿದ. ಮಳೆಗಾಳಿಯ ಸದ್ದಿನಲ್ಲಿ ಅವನು `ಒಂದು ಲೋಟ ಕಾಫಿ ಕೊಡು' ಅಂದಿದ್ದು ಅವನಿಗೆ ಮಾತ್ರ ಕೇಳಿಸಿತು. ಕೈಲಿದ್ದ ಪೇಪರ್ ಅನ್ನು ಮೇಜಿನ ಮೇಲಿರಿಸಿ ಜಗುಲಿಯ ಸೋಲಾರ್ ದೀಪ ಆನ್ ಮಾಡಿ ಅಡಿಗೆ ಮನೆಗೆ ಹೋಗಿ `ಸ್ವಲ್ಪ ಕಾಫಿ ಕೊಡು' ಅಂದು ಡೈನಿಂಗ್ ಕುರ್ಚಿಯ ಮೇಲೆ ಕುಳಿತ.ಇವತ್ತಿನ ಮಳೆಗೆ ಮೊನ್ನೆ ನೆಟ್ಟ ಸಸಿಗಳೆಲ್ಲ ಕೊಚ್ಚಿ ಹೋಗಿರಬಹುದು ಅನ್ನಿಸಿತು. ಮೂರು ದಿನದಿಂದ ಕವುಚಿಕೊಂಡ ಮಳೆಮೋಡದ ಪರಿಣಾಮವಾಗಿಯೋ ಏನೋ ಸೋಲಾರ್ ಲೈಟ್ ಆರಿಹೋಯಿತು. ರುಕ್ಮಿಣಿ ಹಾಲು ಕರೆಯಲು ಹೋಗಬೇಕೆಂದು ಮಳೆ ನಿಲ್ಲುವುದನ್ನೇ ಕಾಯುತ್ತಿದ್ದವಳು ಕಾಫಿ ಕುಡಿಯುತ್ತಾ ಪೇಪರ್ ಓದುತ್ತಿದ್ದವನ ಬಳಿ ನಿಂತು, `ಅವಳಿಗೆ ಸಿಟೀಲಿ ಇರಬೇಕು ಅಂತ ತುಂಬ ಇಷ್ಟ ಇತ್ತು..' ಎಂದಳು.`ಅದಕ್ಕೇ ಈಗ ಹೋಗಿದಾಳಲ್ಲ'

`ನನಗೆ ಒಂದೊಂದು ಸಲ ಅನ್ನಿಸುತ್ತೆ, ಇದೆಲ್ಲ ಮಾರಿ ನಾವು ಅಲ್ಲೇ ಹೋದರೆ ಹೇಗೆ?'

`ಇದೆಲ್ಲ ಬಿಟ್ಟು ನೀನು ನೀನು ಬೇಕಾದರೆ ಹೋಗು. ನಾನಿಲ್ಲೆ ಇರುವವನು'.ಕೃಷ್ಣಪ್ಪನಿಗೆ ಸಿಟ್ಟು, ದುಗುಡ ಏನೇನೋ ಭಾವಗಳು ನುಗ್ಗಿಬಂದವು. ಹಳೆಯದೆಲ್ಲ ನೆನಪಾಯಿತು. ಮುಂದೆ ಓದಿ ಸರ್ಕಾರಿ ಕೆಲಸಕ್ಕೆ ಸೇರಬೇಕೆಂಬ ಆಸೆಯಿದ್ದರೂ ಅವನು ಕೃಷಿಗೆ ಮರಳಿದ್ದ. ಇಪ್ಪತ್ತೈದು ವರ್ಷಗಳ ಮಳೆಗಾಲಗಳು ಅವನ ವ್ಯಕ್ತಿತ್ವವನ್ನು ಮಾಗಿಸಿವೆ. ಮನಸ್ಸು ಹಳೆಯದನ್ನೆಲ್ಲ ಮೆಲುಕು ಹಾಕಿತು. ತಾನು ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗ ಇದ್ದ ಹಲವಾರು ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸಿಕೊಳ್ಳಲು ವರ್ಷಗಳೇ ಕಳೆದಿದ್ದವು.

***

ಅದೆಲ್ಲ ನಿನ್ನೆ ನಡೆದಂತಿದೆ. ಪೋಸ್ಟ್ ಆಫೀಸ್ ಕಡೆಗೆ ಹೋದವರ್ಯಾರೋ ತನಗೆ ಎಂ.ಎಸ್ಸಿಗೆ ಸೀಟ್ ಸಿಕ್ಕಿದೆ ಎಂಬ ಪತ್ರವನ್ನು ತಂದುಕೊಟ್ಟಿದ್ದರು. ಮನೆಯಲ್ಲಿ ಎಲ್ಲರೂ ಮೈಸೂರಿಗೆ ಹೋಗುವುದು ಬೇಡವೆಂದರೇ ಹೊರತು ಹೋಗು ಎಂದು ಯಾರೂ ಹೇಳಲಿಲ್ಲ. ತಾನು ಹೋಗದಿದ್ದುದರಿಂದ ತನಗಿಂತ ಕಡಿಮೆ ಮಾರ್ಕ್ಸ್ ತೆಗೆದ ತನ್ನ ಸಹಪಾಠಿ ಸುನೀಲನಿಗೆ ಆ ಸೀಟ್ ಸಿಕ್ಕಿತ್ತು. ಯಾವಾಗಲಾದರೂ ಅಪರೂಪಕ್ಕೆ ಅವನು ಭೇಟಿಯಾದಾಗ ಅದನ್ನು ನೆನೆಸಿಕೊಂಡು, `ನೀನು ಬಿಟ್ಟಿದ್ದರಿಂದ ನಾನು ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆದೆ ನೋಡು' ಎಂದು ನೆನಪಿಸಿದಾಗ ತನಗೆ ಸ್ವಾನುಕಂಪ ಮೂಡುತ್ತಿತ್ತು.ಆದರೆ ವರ್ಷಗಳು ಕಳೆದಂತೆ ಹುಟ್ಟಿ ಬೆಳೆದ ಪರಿಸರದಲ್ಲಾದ ಬದಲಾವಣೆ ಅವನ ಯೋಚನೆಗಳ ಜಾಡನ್ನು ಬದಲಿಸಿತ್ತು. ವ್ಯವಸಾಯದ ಕೆಲಸಗಳಲ್ಲಿ ಸಮಯ ಕಳೆಯುತ್ತಿತ್ತು. ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡ ಮೇಲೆ ಮುಂಭಾಗದ ಜಗುಲಿಯಲ್ಲಿ ಗೆದ್ದಲು ಹಿಡಿದಿದ್ದ ಮರದ ಕಂಬಗಳನ್ನು ತೆಗೆಸಿ ಸಿಮೆಂಟಿನ ಕಂಬಗಳನ್ನು ಮಾಡಿಸಿದ್ದ. ಅವುಗಳನ್ನು ನೋಡಿದಾಗೆಲ್ಲ ಅವನಿಗೆ ಬೇಸರವಾಗುತ್ತಿತ್ತು.ಪ್ರತಿವರ್ಷವೂ ಒಂದೊಂದು ತೋಟ ಗದ್ದೆಗಳಿಗೆ ಐಬೆಕ್ಸ್, ಬೇಲಿ ಮಾಡಿಸುವುದು, ಹೊಸ ತೋಟ ಮಾಡಿಸುವುದು ಎಂದು ಏನಾದರೊಂದು ಕೆಲಸ ಹಚ್ಚಿಕೊಳ್ಳುತ್ತಿದ್ದ. ಕೃಷಿಗೆ ಸಂಬಂಧಿಸಿದ ಪುಸ್ತಕಗಳು, ಪತ್ರಿಕೆಗಳ ಜತೆಗೆ ಒಳ್ಳೆಯ ಸಾಹಿತ್ಯ ಕೃತಿಗಳ ಸಂಗ್ರಹವೂ ಇತ್ತು. ಬ್ರಾಡ್‌ಬ್ಯಾಂಡ್ ಸಂಪರ್ಕ ಬಂದ ಮೇಲೆ ಇಬ್ಬರಿಗೂ ರಾತ್ರಿಯ ಊಟದ ನಂತರದ ಸಮಯ ಕಂಪ್ಯೂಟರ್ ಜತೆ ಕಳೆಯುತ್ತಿತ್ತು. ಕೃಷ್ಣಪ್ಪನಿಗೆ ಏನೋ ನೆನಪಾಗಿ ತಕ್ಷಣ ಹೋಗಿ ಕಂಪ್ಯೂಟರ್ ಆನ್ ಮಾಡಿದ. ಅದು ಇಂಟರ್‌ನೆಟ್‌ಗೆ ಕನೆಕ್ಟ್ ಆಗಲು ಬೇಕಾದ ಒಂದು ನಿಮಿಷ ಒಂದು ಯುಗದಂತೆ ಭಾಸವಾಯಿತು. ಸೀಮಾ ಫೇಸ್‌ಬುಕ್‌ನಲ್ಲಿ ಏನಾದರೂ ಬರೆದಿರಬಹುದೆಂದು ನೋಡಿದ. ಅಕೌಂಟ್ ಡಿಆಕ್ಟಿವೇಟ್ ಆಗಿತ್ತು.

***

ಎರಡು ದಿನದಿಂದ ಕರೆಂಟ್ ಇರಲಿಲ್ಲ. ಕಿರಣ ಚಾರ್ಜಬಲ್ ಬ್ಯಾಟರಿ ಇಟ್ಟುಕೊಂಡು ಓದುತ್ತಿದ್ದ.

ಅಲ್ಲಿ ಬನ ಬನದಲ್ಲಿ ಕಾಡ ಗಿಡಗಿಡದಲ್ಲಿ

ಕೊಂಬೆ ಕೊಂಬೆಗು ಹೂವು ಸಾವಿರಾರು.

ಗಿರಿ ಶಿಖರ ಝರಿ ನೀರು ಸ್ವಚ್ಚಂದ ಆಕಾಶ

“ಯಾಕ್ ಹಂಗೆ ಕೂಗ್ತೀಯ ನಿಧಾನ ಓದಕೊಳ್ಳೊ” ಕೃಷ್ಣಪ್ಪ ಸಿಡುಕಿದ. ಕಿರಣ ದೂರದ ಸಂಬಂಧಿಕರ ಮಗ. ಮನೆಯಲ್ಲಿ ಮಕ್ಕಳು ಇಲ್ಲದೆ ಬೇಸರ ಅಂತ ರುಕ್ಮಿಣಿ ಸಂಬಂಧಿಕರ ಮಗ ರಮೇಶನನ್ನು ಇಲ್ಲಿಂದಾನೆ ಸ್ಕೂಲ್‌ಗೆ ಹೋಗು ಎಂದು ಇರಿಸಿಕೊಂಡಿದ್ದಳು.

***

ಮರುದಿನ ಸಂಜೆ ದನ ಹೊಡೆದುಕೊಂಡು ಬಂದ ಜಬ್ಬ ಗಬ್ಬದ ಎಮ್ಮೆ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿ ಹೊರಬರಲಾರದೆ ನಿಂತಲ್ಲೇ ಜೀವಬಿಟ್ಟಿದೆ, ಹದ್ದುಗಳು ಹಾರಾಡುತ್ತಿವೆ ಎಂದು ಹೇಳಿದಾಗ ಕೃಷ್ಣಪ್ಪ ತಲೆ ಮೇಲೆ ಕೈಹೊತ್ತು ಕುಳಿತ. ರುಕ್ಮಿಣಿ ಮೌನವಾದಳು.

***

`ಇವತ್ತೇ ನೈಟ್ ಬಸ್‌ನಲ್ಲಿ ಬೆಂಗಳೂರಿಗೆ ಹೋಗಣ. ಅವಳೇನು ಹೇಳ್ತಾಳೊ ಕೇಳನ'.

`ಶೃಂಗೇರಿಯಿಂದ ಹೊರಡುವ ಬಸ್‌ಗೆ ಇಲ್ಲಿಂದಾನೆ ಹತ್ತಬಹುದಂತೆ'. ರುಕ್ಮಿಣಿಯ ಮಾತಿಗೆ ತಲೆಯಾಡಿಸಿದ. ಫೋನ್ ಮಾಡಿ ಟಿಕೆಟ್ ರಿಸರ್ವ್ ಮಾಡಿಸಿದ.ಪಕ್ಕದ ಮನೆಯ ಕಿಟ್ಟಿಗೆ ರಾತ್ರಿ ಇಲ್ಲೇ ಕಿರಣನ ಜತೆಗಿರುವಂತೆ ಹೇಳಿ, ಮರುದಿನದ ಊಟ ತಿಂಡಿ ಅವನಿಗೆ ಮಾಡಿಕೊಡಲು ಹೇಳಿ `ನಾಳೆ ರಾತ್ರೀನೆ ವಾಪಸ್ ಹೊರಟು ನಾಡಿದ್ದು ಬೆಳಿಗ್ಗೆ ಇಲ್ಲಿರ್ತೇವೆ' ಅಂತ ಹೇಳಿ ಹೊರಟರು.ಬೆಳಿಗ್ಗೆ ಹೋಟೇಲ್ ರೂಮ್‌ನಲ್ಲಿ ಬ್ಯಾಗ್ ಇಟ್ಟು ಸ್ನಾನ ತಿಂಡಿ ಮುಗಿಸಿ ಮಗಳು ಇದ್ದ ಪಿ.ಜಿ. ಹುಡುಕಿಕೊಂಡು ಹೋದರು. ಅದೊಂದು ಮನೆಯಂತೆ ಕಾಣುತ್ತಿತ್ತು. ಪ್ಲಾಸ್ಟಿಕ್ ಕುರ್ಚಿಗಳಲ್ಲಿ ಕುಳಿತು ಕಾಯುತ್ತಿದ್ದ ಆರೇಳು ನಿಮಿಷಗಳು ಮುಳ್ಳಿನ ಮೇಲೆ ಕುಳಿತಂತೆನಿಸುತ್ತಿತ್ತು. ಇವರಿಬ್ಬರನ್ನು ನೋಡಿ ಅವಳಿಗೆ ಅಳು ಬರಬಹುದೆಂದು ರುಕ್ಮಿಣಿ ನಿರೀಕ್ಷಿಸಿದ್ದಳು. ಆದರೆ ಬಹಳ ಸಮಾಧಾನಿಯಾಗಿ ಸೀಮಾ, “ನೀವೇಕೆ ಬಂದಿರಿ... ನಾನು ಹೇಳಿರಲಿಲ್ವ... ಟಿ.ಸಿ.ನ ಪೋಸ್ಟ್ ಮಾಡಿ ಅಂತ” ಅಂದಾಗ ಇಬ್ಬರಿಗೂ ಆಶ್ಚರ್ಯ ಆಯಿತು.

***

ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದಾಗ ಮೌನ ಮುರಿದು “ನೀವು ಚಿಂತೆ ಮಾಡಬೇಡಿ. ನಾನು ಇಲ್ಲೇ ಅಭಿನಯ ಹೇಳಿಕೊಡುವ ಕಾಲೇಜ್‌ಗೂ ಸೇರಬಹುದು. ಈಗ ಅವರು ಕೊಡುವ ಹಣ ನನ್ನ ಖರ್ಚಿಗೆ ಸಾಕು”. ಸೀಮಾ ಒಂದು ಬಗೆಯ ನಿರಾಳತೆಯಲ್ಲಿದ್ದಳು.ರುಕ್ಮಿಣಿಗೆ ಏನು ಹೇಳಬೇಕೋ ತಿಳೀಲಿಲ್ಲ. ತನಗೆ ಮುಂದೆ ಓದಬೇಕು ಎಂದು ಎಷ್ಟು ಆಸೆಯಿತ್ತು. 25 ವರ್ಷಗಳ ಹಿಂದೆ ತಾನು ಎಂ.ಎ. ಓದಬೇಕೆಂದಾಗ, ಅಪ್ಪ- `ಸಾಧ್ಯವಿಲ್ಲ. ಹೆಚ್ಚು ಓದಿದರೆ ಗಂಡು ಹುಡುಕುವುದು ಕಷ್ಟ, ಮದುವೆಯಾಗು' ಅಂದಾಗ ಎರಡು ಮಾತಿಲ್ಲದೆ ಮದುವೆಗೆ ಒಪ್ಪಿದ್ದಳು. ಆದರೆ ಇವಳಿಗೆ ಓದುವುದಕ್ಕಿಂತ ಸಿನಿಮಾದಲ್ಲಿ, ಟೀವಿ ಸೀರಿಯಲ್‌ನಲ್ಲಿ ಅಭಿನಯಿಸುವುದು ಮುಖ್ಯವಾಗಿದೆ. ಅಪ್ಪ ಅಮ್ಮನ ಜತೆ ಬರಲ್ಲ ಅಂತಿದಾಳೆ. ತಾವು ಅವಳನ್ನು ಬೆಳಸಿದ ರೀತಿ ಸರಿಯಿಲ್ಲವೋ ಅಥವ ತನ್ನ ಯೋಚನೆಯ ಧಾಟಿಯೇ ತಪ್ಪೋ... ಚಿಂತಿಸಿದಳು. 

ಹೋಟೆಲ್‌ನಲ್ಲಿ ಊಟ ಮಾಡುವಾಗ ಮೂವರ ನಡುವೆ ಮೌನವೇ ಇತ್ತು.ಅವಳು ಬೇಡ ಅಂದರೂ ಮಗಳ ಕೈಗೆ ಸ್ವಲ್ಪ ಹಣವನ್ನು ಕೊಟ್ಟು ಎಚ್ಚರಿಕೆಯಿಂದಿರುವಂತೆ ಹೇಳಿದ ಮೇಲೆ ತನ್ನ ಮಾತಿಗೇನು ಅರ್ಥವಿದೆ ಅನ್ನಿಸಿ ಬೇಸರವಾಯಿತು. ಬಹುಶಃ ಈಗ ಮಕ್ಕಳು ತಮ್ಮ ಇಚ್ಛೆಯಂತೆ ಇರಬೇಕು ಎಂದು ತಾವು ಬಯಸುವುದೇ ತಪ್ಪೇನೋ ಅನಿಸಿತು. ಬಸ್‌ಸ್ಟ್ಯಾಂಡ್‌ನ ಜನ ಜಂಗುಳಿಯಲ್ಲಿ ತಮ್ಮ ಬಸ್ ಹುಡುಕಿ ಕುಳಿತು ನಿಟ್ಟುಸಿರುಬಿಟ್ಟರು. ಇವರಿಗಿಂತ ಮೊದಲೇ ಬಂದು ಕುಳಿತಿದ್ದ ಮೇಲಿನ ಮನೆಯ ಸೋಮಯ್ಯ `ಏನು ಇಲ್ಲಿ' ಅಂದಾಗ, ರುಕ್ಮಿಣಿ ಮಗಳನ್ನು ಇಲ್ಲೇ ಕಾಲೇಜ್‌ಗೆ ಸೇರಿಸಿದ್ದೀವೆಂದಳು. ಸೋಮಯ್ಯ ತನ್ನ ಮಗಳಿಗೆ ವಿಪ್ರೊ ಕಂಪೆನಿಯಲ್ಲಿ ಕೆಲಸ ಸಿಕ್ಕಿದೆಯೆಂದು ಅವಳಿಗೆ ಇರಲು ವ್ಯವಸ್ಥೆ ಮಾಡಲು ಬಂದಿದ್ದಾಗಿ ಹೇಳಿದ. ಮಾತಿನಲ್ಲಿ ಹೆಮ್ಮೆ ತುಂಬಿ ತುಳುಕುತ್ತಿತ್ತು.

***

ಬೆಳಿಗ್ಗೆ ಮನೆಗೆ ಬಂದು ಸ್ನಾನ ಮಾಡಿ ಕಾಫಿ ಕುಡಿಯುತ್ತಾ ಕುಳಿತಿದ್ದಾಗ ರುಕ್ಮಿಣಿ, `ನಮ್ಮದೇನು ದೊಡ್ಡ ಸಾಮ್ರಾಜ್ಯವೇನಲ್ಲವಲ್ಲ. ಬೇಡವೆನ್ನಿಸಿದಾಗ ಮಾರಿದರಾಯಿತು' ಎಂದು ತನಗೆ ತಾನೆ ಎಂಬಂತೆ ಅಂದುಕೊಂಡಳು. ಇವನಿಗೆ ತುಂಬ ಸಿಟ್ಟು ಬಂದು `ನನ್ನ ಜೀವ ಇರುವವರೆಗೆ ಮಾರುವ ಮಾತಾಡಬೇಡ' ಎಂದು ಸಿಟ್ಟು ಮಾಡಿದ. ಅವಳು ಪೆಚ್ಚಾಗಿ ಒಳಗೆ ಹೋದಳು. ಕೊಟ್ಟಿಗೆಯಲ್ಲಿ ಕಾಳಿ ದನ ಕೆಚ್ಚಲುಬಿಗಿತ ತಾಳಲಾರದೆ ಕೂಗುತ್ತಿತ್ತು.ಮನೆಗೆಲಸದ ಲಕ್ಷ್ಮೀ ಹತ್ತು ಗಂಟೆಗೆ ಬಂದವಳು ಅಡಿಗೆ ಮನೆಯಲ್ಲಿ ತಲೆ ಮೇಲೆ ಕೈಹೊತ್ತು ಕುಳಿತವಳನ್ನು ನೋಡಿ ತಾನೇ ತೊಳೆದ ಪಾತ್ರೆ ಹಿಡಿದು ಹಾಲು ಕರೆಯಲು ಹೋದಳು. ಎಷ್ಟು ಹೊತ್ತಾದರೂ ತಿಂಡಿ ತಿನ್ನಲು ಕರೆಯದೇ ಇದ್ದಾಗ ತಾನೇ ಹೊರಟ ಕೃಷ್ಣಪ್ಪನಿಗೆ ಜಗುಲಿಯ ಕಂಬದ ಬುಡದಿಂದ ಹೊರಟ ಗೆದ್ದಲು ಮುಚ್ಚಿಗೆಯ ತೊಲೆಯವರೆಗೂ ಹಬ್ಬಿದ್ದು ಕಾಣಿಸಿತು.ಕಂಬದ ಮೇಲೆ ಗೆದ್ದಲಿನ ಮರ ಹುಟ್ಟಿದಂತೆ ಕಾಣುತ್ತಿತ್ತು. ಗೊಡೆಯ ಮೆಲಿದ್ದ ಅಜ್ಜ ಅಜ್ಜಿಯರ ಹಳೇ ಫೋಟೊದ ಫ್ರೇಮ್‌ಗೆ ಪೂರ್ತಿ ಗೆದ್ದಲು ಆವರಿಸಿ ಪಕ್ಕದಲ್ಲೇ ಇದ್ದ ಶತಮಾನದಷ್ಟು ಹಳೆಯ ರೋಮನ್ ಅಂಕೆಯ ಗಡಿಯಾರದ ಬೀಟೆಯ ಚೌಕಟ್ಟನ್ನೂ ತಿಂದು ಹಾಕಿತ್ತು. ಜಿಗುಪ್ಸೆಯೆನಿಸಿತು. ಪ್ರತಿಸಲ ಗೆದ್ದಲು ಕಂಡಾಗ ತಾನೇ ಶುಚಿಮಾಡಿ ವುಡ್ ಪಾಲಿಷ್ ಹಚ್ಚುತ್ತಿದ್ದ. ಈಗ್ಯಾಕೋ ಏನಾದರೂ ಆಗಲಿ ಬಿದ್ದು ಹೋಗುವ ಮನೆಯನ್ನು ನಿಲ್ಲಿಸುವುದು ಕಷ್ಟ ಅಂದು ಗೊಣಗಿ ಸುಮ್ಮನಾದ.ಕಿರಣ ಟೆಸ್ಟ್ ಇದೆ ಎಂದು ದೊಡ್ಡ ದನಿಯಲ್ಲಿ ಪದ್ಯ ಓದುತ್ತಿದ್ದ:

ಅಲ್ಲಿ ಬನಬನದಲ್ಲಿ ಕಾಡ ಗಿಡಗಿಡದಲ್ಲಿ

ಕೊಂಬೆ ಕೊಂಬೆಗೂ ಹೂವು ಸಾವಿರಾರು 

ಗಿರಿ ಶಿಖರ ಝರಿ ನೀರು ಸ್ವಚ್ಛಂದ ಆಕಾಶ...

ಯಾರ ಪ್ರೀತಿಯ ನಂಬಿ ಜೀವ ಹಿಡಿಯಲಿ ನಾನು...ಈಗ್ಯಾಕೋ ಕಿರಣನಿಗೆ ಬೈಯುವಷ್ಟು ಶಕ್ತಿಯೂ ಇಲ್ಲವಾಗಿ ಸುಮ್ಮನೆ ಕುಳಿತ.

ಪ್ರತಿಕ್ರಿಯಿಸಿ (+)