ಸೋಮವಾರ, ಜೂನ್ 14, 2021
26 °C

ಗಿಲಾನಿಗೆ ಸುಪ್ರೀಂಕೋರ್ಟ್ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಅಧ್ಯಕ್ಷರ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ಪುನರಾರಂಭಿಸುವಂತೆ ಸ್ವಿಟ್ಜರ್‌ಲೆಂಡ್ ಸರ್ಕಾರಕ್ಕೆ ಪತ್ರ ಬರೆಯಬೇಕು ಮತ್ತು ಈ ವಿಚಾರದಲ್ಲಿ ಕಾನೂನು ಸಲಹೆ ಪಡೆಯುವ ಅಗತ್ಯವಿಲ್ಲ ಎಂದು ಪಾಕ್ ಸುಪ್ರೀಂಕೋರ್ಟ್ ಪ್ರಧಾನಿ ಯುಸೂಫ್ ರಾಜಾ ಗಿಲಾನಿ ಅವರಿಗೆ ಗುರುವಾರ ಆದೇಶಿಸಿರುವುದರಿಂದ ಸರ್ಕಾರ ಮತ್ತು ನ್ಯಾಯಾಂಗದ ಮಧ್ಯೆಯ ಸಂಘರ್ಷ ತಾರಕಕ್ಕೇರಿದೆ.ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ವಿವರವಾದ ವರದಿಯನ್ನು ಮಾರ್ಚ್ 21ಕ್ಕೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ನಸಿರ್-ಉಲ್-ಮುಲ್ಕ ಅವರ ನೇತೃತ್ವದ ಏಳು ಮಂದಿ ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಆದೇಶಿಸಿದೆ.ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಇತರ 800 ಜನರ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ರದ್ದುಪಡಿಸಿದ್ದಕ್ಕೆ ಸಂಬಂಧಿಸಿದಂತೆ ತನ್ನ ಮೊದಲಿನ ಆದೇಶದ ಜಾರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠವು ಕಾನೂನು ತಜ್ಞರ ಸಲಹೆಗೆ ಕಾಯದೆ ಸ್ವಿಟ್ಜರ್‌ಲೆಂಡ್ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಗಿಲಾನಿ ಅವರಿಗೆ ಆದೇಶಿಸಿದೆ.ಸಂವಿಧಾನದ ಪ್ರಕಾರ ಅಧ್ಯಕ್ಷರ ವಿರುದ್ಧ ಕಾನೂನು ಕ್ರಮ ಜರುಗಿಸಲು ಬರುವುದಿಲ್ಲ ಎಂದು ಕಾನೂನು ತಜ್ಞರು ಸಲಹೆ ಮಾಡಿದ್ದಾರೆ ಎಂದು ಗಿಲಾನಿ ಕೋರ್ಟ್‌ಗೆ ಈ ಮೊದಲು ತಿಳಿಸಿದ್ದರು.ನ್ಯಾಯಾಲಯದ ಆದೇಶ ಪಾಲಿಸದ ಕಾರಣ ಗಿಲಾನಿ ವಿರುದ್ಧದ ನ್ಯಾಯಾಲಯ ನಿಂದನೆ ಪ್ರಕರಣವನ್ನು ಇದೇ ಏಳು ನ್ಯಾಯಮೂರ್ತಿಗಳ ನ್ಯಾಯಪೀಠವು ವಿಚಾರಣೆ ನಡೆಸುತ್ತಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ 21ರಂದು ವಿವರವಾದ ವರದಿಯನ್ನು ಗಿಲಾನಿ ಅವರು ಸಲ್ಲಿಸಬೇಕು. ಇಲ್ಲದಿದ್ದರೆ ಅಂತಿಮ ವಾದ ಆರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ. ತನ್ನ ಆದೇಶವನ್ನು ಕೂಡಲೇ ಪ್ರಧಾನಿ ಅವರಿಗೆ ತಿಳಿಸುವಂತೆ ನ್ಯಾಯಪೀಠವು ಅಟಾರ್ನಿ ಜನರಲ್ ಅವರಿಗೆ ಸೂಚಿಸಿದೆ.ಪ್ರಕರಣದ ವಿಚಾರಣೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಗಿಲಾನಿ ಅವರ ವಕೀಲ ಐತಾಜ್ ಅವರು, ` ಈ ತಿಂಗಳ 19ರ ಒಳಗೆ ವಿವರವಾದ ಹೇಳಿಕೆ ಸಲ್ಲಿಸಬೇಕು. ಇಲ್ಲವೇ ಈ ತಿಂಗಳ 21ರಂದು ಖುದ್ದು ಹಾಜರಾಗಿ ಹೇಳಿಕೆಯನ್ನು ದಾಖಲಿಸಬೇಕು~ ಎಂದು ಪ್ರಧಾನಿ ಅವರಿಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.