ಗಿಲಾನಿ ಭವಿಷ್ಯ ಇಂದು ನಿರ್ಧಾರ

7

ಗಿಲಾನಿ ಭವಿಷ್ಯ ಇಂದು ನಿರ್ಧಾರ

Published:
Updated:

ಇಸ್ಲಾಮಾಬಾದ್ (ಪಿಟಿಐ): ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಅಧ್ಯಕ್ಷರ ವಿರುದ್ಧ ಇರುವ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಲು ನಿರಾಕರಿಸಿ ನ್ಯಾಯಾಂಗ ನಿಂದನೆಗೆ ಗುರಿಯಾಗಿರುವ ಪ್ರಧಾನಿ ಯೂಸುಫ್ ರಜಾ ಗಿಲಾನಿ ಸೋಮವಾರ ಸುಪ್ರೀಂಕೋರ್ಟ್‌ಗೆ ಹಾಜರಾಗಲಿದ್ದು, ಈ ಸಂದರ್ಭದಲ್ಲಿ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.~ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ಅಕ್ರಮವಾಗಿ ಹಣ ಇಟ್ಟಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿದ್ದರೂ ಗಿಲಾನಿ ಇದಕ್ಕೆ ಮುಂದಾಗಿರಲಿಲ್ಲ. ಈ ಮೂಲಕ ಗಿಲಾನಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಕೋರ್ಟ್ ಪರಿಗಣಿಸಿತ್ತು.ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಗಿಲಾನಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಶುಕ್ರವಾರ ತಳ್ಳಿಹಾಕಿ, ಫೆಬ್ರುವರಿ 13ರಂದು ಅವರು ಕಡ್ಡಾಯವಾಗಿ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದ್ದರು.

ಶಿಕ್ಷೆಯಾದರೆ ರಾಜೀನಾಮೆ

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಮಗೆ ಸುಪ್ರೀಂಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿದರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯೂಸುಫ್ ರಜಾ ಗಿಲಾನಿ ಭಾನುವಾರ ಹೇಳಿದ್ದಾರೆ.ಅಧ್ಯಕ್ಷ ಜರ್ದಾರಿ ಅವರ ವಿರುದ್ಧದ ಪ್ರಕರಣಗಳು ರಾಜಕೀಯ ಪಿತೂರಿಯಿಂದ ಕೂಡಿವೆ ಮತ್ತು ಸಂವಿಧಾನದ ಪ್ರಕಾರ ಅಧ್ಯಕ್ಷರು ಪಾಕಿಸ್ತಾನ ಹಾಗೂ ವಿದೇಶಗಳಲ್ಲಿ ತನಿಖೆಯಿಂದ ಸಂಪೂರ್ಣ ವಿನಾಯಿತಿ ಹೊಂದಿರುತ್ತಾರೆ ಎಂದು ಅರಬ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಮರ್ಥಿಸಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry