ಶುಕ್ರವಾರ, ನವೆಂಬರ್ 22, 2019
22 °C
ಸಾಹಿತಿ ಡಾ.ವಸಂತಕುಮಾರ ತಾಳ್ತಜೆ ವಿಷಾದ

`ಗಿಳಿವಿಂಡು ಯೋಜನೆ ನೆನೆಗುದಿಗೆ-ಕನ್ನಡಿಗರ ಮೌನ'

Published:
Updated:

ದಿ.ಶಾಂತಾರಾಮ ಸುಧಾಕರ ವೇದಿಕೆ (ಕಾಸರಗೋಡು): `ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ `ಗಿಳಿವಿಂಡು' ಯೋಜನೆ ನೆನೆಗುದಿಗೆ ಬಿದ್ದಿದೆ. ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ-ತುಳು ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಅಧ್ಯಯನ ಸೌಲಭ್ಯಕ್ಕಾಗಿ ಇಲ್ಲಿನ ಕನ್ನಡಿಗರು ಇನ್ನೂ ಪ್ರಸ್ತಾವ ಸಲ್ಲಿಸದೆ ಗಾಢ ನಿದ್ದೆಯಲ್ಲಿದ್ದಾರೆ' ಎಂದು ಸಾಹಿತಿ ಡಾ.ವಸಂತಕುಮಾರ ತಾಳ್ತಜೆ ವಿಷಾದಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಶ್ರಯದಲ್ಲಿ ನಗರದ ಬಿಇಎಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಭಾನುವಾರ ರಾತ್ರಿ ಸಮಾರೋಪಗೊಂಡ ಕಾಸರಗೋಡು ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.ಬೆಳಗಾವಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಹುಭಾಷಾ ಸಂಸ್ಕೃತಿಯ ಅಧ್ಯಯನಕ್ಕೆ ಕರ್ನಾಟಕ ಪ್ರಾಶಸ್ತ್ಯ ಕಲ್ಪಿಸಿದೆ. ಆದರೆ ಕಾಸರಗೋಡಿನಲ್ಲಿರುವ ಕೇರಳದ ಕೇಂದ್ರೀಯ ವಿ.ವಿ.ಯಲ್ಲಿ ಗಡಿನಾಡಿನ ಬಹುಭಾಷಾ ಸಂಸ್ಕೃತಿಯ ತೌಲನಿಕ ವ್ಯಾಸಂಗದ ಸೌಲಭ್ಯ ಒದಗಿಸುವಂತೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು. ಈ ನೆಲದ ಸಂಸ್ಕೃತಿಗೆ ಪೂರಕವಾಗಿ ಯೋಜನೆ ರೂಪಿಸುವಂತೆ ಆಗ್ರಹಿಸಬೇಕು ಎಂದು ಅವರು ಹೇಳಿದರು.ಕನ್ನಡಿಗರು ದಾಕ್ಷಿಣ್ಯ ಪ್ರವೃತ್ತಿಯಿಂದ ಕಳೆದುಕೊಳ್ಳುತ್ತಲೇ ಇದ್ದಾರೆ. ರಾಜಬಲವಿಲ್ಲದ ಭಾಷೆಗೆ ಉಳಿಗಾಲವಿಲ್ಲ. ಬಹುಸಂಸ್ಕೃತಿಯ ಸಂಸ್ಕೃತಿಯ ನೆಲೆವೀಡಾದ ಈ ನೆಲ ಶಾಪಗ್ರಸ್ತವಾಗಿದೆ. ಆದರೆ ಅರಿವಿನ ಬೆಳಕು ಮೂಡಿಸುವಲ್ಲಿ ಸಮ್ಮೇಳನ ಯಶಸ್ವಿಯಾಗಿದೆ ಎಂದೂ ಅವರು ವಿಶ್ಲೇಷಿಸಿದರು.ಸಾಧಕರಿಗೆ ಸನ್ಮಾನ: ವಿವಿಧ ರಂಗಗಳಲ್ಲಿ ಗಮನಾರ್ಹ ಸಾಧನೆಗೈದ ಬಿ.ವಸಂತ ಪೈ (ಸಮಾಜ ಸೇವೆ), ಸ್ಟ್ಯಾನಿ ಕ್ರಾಸ್ತಾ (ಸಾಹಿತ್ಯ), ಡಾ.ಕುಞ್ಞಿಲಿ (ವೈದ್ಯಕೀಯ), ವೆಂಕಟಕೃಷ್ಣ ಮಧೂರು (ಯಕ್ಷಗಾನ), ಎಂ.ಜಯರಾಮ ರೈ (ಪತ್ರಿಕೋದ್ಯಮ), ಡಾ.ಮೋಹನ ಕುಮಾರ್ (ಪರಿಸರ ಪ್ರೇಮಿ), ಪ್ರೇಮ ಲೀಲಾ ಆಟಿಕುಕ್ಕೆ (ಸಂಗೀತ), ಬಿ.ಬಾಲಕೃಷ್ಣ ಮಂಜೇಶ್ವರ (ನೃತ್ಯ) ಅವರನ್ನು  ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಮಲೆಯಾಳ ಹೇರುವ ಹುನ್ನಾರ ಖಂಡನೀಯ:

ಸಮ್ಮೇಳನದ ಅಧ್ಯಕ್ಷ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಬಿ.ಗೋಪಾಲಕೃಷ್ಣ ಪೈ ಅವರು ಮಾತನಾಡಿ, ಕನ್ನಡಿಗರ ಮೇಲೆ ಹಿಂಬಾಗಿಲ ಮೂಲಕ ಮಲೆಯಾಳ ಹೇರುವ ಹುನ್ನಾರ ಖಂಡನೀಯ. ಕನ್ನಡಿಗರು ವಿವಿಧ ಭಾಷೆಗಳನ್ನು ಸ್ನೇಹ ಭಾವದಿಂದ ಕಂಡವರು, ಸಾಹಿತ್ಯದಲ್ಲಿಯೂ ದುಡಿಸಿಕೊಂಡವರು. ಮಂಜೇಶ್ವರ ಗೋವಿಂದ ಪೈ ಅವರು 17ಕ್ಕೂ ಅಧಿಕ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದವರು. ಇದನ್ನು ಕೇರಳೀಯ ಪ್ರಭುತ್ವ ಅರ್ಥಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.ಶಾಸಕ ಎನ್.ಎ.ನೆಲ್ಲಿಕುಂಜೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ಶ್ಯಾಮಲಾದೇವಿ, ಕಸಾಪ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಸುಬ್ಬಯ್ಯ ರೈ,  ನಗರಸಭೆಯ ಸದಸ್ಯೆ ಶ್ರೀಲತಾ ಎಂ, ಎಸ್‌ವಿ.ಭಟ್, ಐ.ವಿ.ಭಟ್, ಸಹಾಯಕ ಶಿಕ್ಷಣಾಧಿಕಾರಿ ರವೀಂದ್ರನಾಥ, ಬಿಇಎಂ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಜಿ.ರಾಜಗೋಪಾಲ, ಮಾತನಾಡಿದರು.ಕಸಾಪ ಕೇರಳ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಪಿ.ಸೀತಾರಾಮ ರಾವ್ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಕುಮಾರಿ ವಂದಿಸಿದರು. ಮಾಯಿಪ್ಪಾಡಿ ಡಯೆಟ್‌ನ ಯತೀಶ್ ಕುಮಾರ್ ರೈ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಕ್ರಿಯಿಸಿ (+)