ಗೀಜಗ ಸಂಕಟ

7

ಗೀಜಗ ಸಂಕಟ

Published:
Updated:

ಅಲ್ಲೊಂದು ಗೀಜಗನ ಕಾಲೋನಿ, ಸುಮಾರು 20 ಮನೆಗಳಿರುವ ಸುಂದರವಾದ ಕಾಲೋನಿಯಲ್ಲಿ ತಮ್ಮ ಅರಮನೆಗಳನ್ನು ಮರದ ಟೊಂಗೆಯ ತುದಿಗೆ ಕಟ್ಟುತ್ತಿರುವ ಗೀಜಗ ಹಕ್ಕಿಯು ಗೂಡನ್ನು ಹೆಣೆಯುತ್ತಿತ್ತು, ಹೊಸ ಬದುಕನ್ನು ಆರಂಭಿಸಲು, ತನ್ನ ಪುಟ್ಟ ಸಂಸಾರವನ್ನು ಹೂಡಲು ಒಂದೇ ತರಹದ ಭತ್ತ ಹಾಗೂ ಮೆದೆಯ ಹಸಿರು ಹುಲ್ಲುಗಳ ಎಳೆಯನ್ನು ತಂದು ಗೂಡು ಕಟ್ಟುತ್ತಿತ್ತು. ಗಾಳಿ-ಮಳೆಗೆ ಜಗ್ಗದ ಎರಡಂತಸ್ತಿನ ಮಜಬೂತಾದ ಗೂಡನ್ನು ಕೊಕ್ಕೆಯಂಥ ತನ್ನ ಚುಂಚಿನಲ್ಲಿ ನೇಯುವುದನ್ನು ನೋಡಿದರೆ ಎಂಥ ಪ್ರಸಿದ್ಧ ಎಂಜಿನಿಯರ್‌ಗಳು ತಲೆಬಾಗಲೇಬೇಕು ಎನಿಸಿತು.ಇಂಥ ಅಪೂರ್ವ ಗೀಜಗದ ಜೀವನ ಚರಿತ್ರೆಯೂ ಕುತೂಹಲವೇ. ಈ ಗಂಡು ಗೀಜಗದ ಹಕ್ಕಿ ಕಟ್ಟಿದ ಗೂಡು ನೋಡಲು ವಧುಗಳ ದಂಡೇ ನೆರೆಯುತ್ತದೆ. ಮುಕ್ಕಾಲು ಭಾಗದಷ್ಟು ಗೂಡು ನೇಯ್ದ ಮೇಲೆ ಗಂಡಿನ ಕುಶಲತೆಗೆ ಮನಸೋತ ಹೆಣ್ಣು ಗೀಜಗವೊಂದು ಜೊತೆಯಾಗುತ್ತದೆ. ಮುಂದೆ ತನಗೆ ಬೇಕಾದ ಹಾಗೆ ಅನುಕೂಲವಾಗಿರುವ ರೀತಿಯಲ್ಲಿ ಗೂಡನ್ನು ಗಂಡಿನಿಂದ ರೂಪಿಸಿಕೊಳ್ಳುತ್ತದೆ. ಅಲ್ಲಿಯೇ ಅವುಗಳ ಸಂಸಾರದ ಆರಂಭ.

ಹೆಣ್ಣು ಗೀಜಗ ಗೂಡಿನಲ್ಲಿ ಮೊದಲ ತತ್ತಿ ಇಟ್ಟ ವಿಚಾರ ತಿಳಿಯುತ್ತಲೇ ಗಂಡು ಗೂಡಿನಿಂದ ಪರಾರಿ. ಕೆಲವೇ ತಾಸುಗಳಲ್ಲಿ ಮತ್ತೊಂದು ಕಡೆ ಹೊಸ ಗೂಡನ್ನು ನೇಯಲು ಪ್ರಾರಂಭ. ಇಲ್ಲಿಯು ಮುಕ್ಕಾಲು ಭಾಗ ಗೂಡಿನ ರಚನೆಯಾದ ನಂತರ ಹೊಸ ವಧುವಿನ ಆಗಮನ. ಮತ್ತೆ ಅದೇ ಕಥೆಯ ಪುನರಾವರ್ತನೆ. ಹೀಗೆ ಹತ್ತಾರು ಹೆಣ್ಣು ಗೀಜಗಗಳಿಗೆ ತನ್ನ ಹೊಸ ಹೊಸ ಮನೆಗಳನ್ನು ತೋರಿಸಿ ಮರಳು ಮಾಡಿ ಗರ್ಭಾವಸ್ಥೆಗೆ ಕಾರಣವಾಗುತ್ತದೆ ಗಂಡು ಗೀಜಗ!ಹೀಗಿದೆ ಇದರ ರೂಪ

ಗೀಜಗ, ಗುಬ್ಬಚ್ಚಿ ಗಾತ್ರದ ಹಳದಿ ಪಕ್ಷಿ, ಹೆಣ್ಣು ಪಕ್ಷಿ ಕಂದಾಗಿದ್ದು, ಗುಬ್ಬಚ್ಚಿಯನ್ನು ಹೋಲುತ್ತದೆ. ಇದರ ನೆತ್ತಿ ,ತಲೆ, ಎದೆಯ ಹಿಂಭಾಗ ಹಳದಿ ಬಣ್ಣದಿಂದ ಕೂಡಿರುತ್ತದೆ. ಇದರ ಹೊಟ್ಟೆ ಬಿಳಿ ಬಣ್ಣದ್ದಾಗಿದ್ದು, ಕೆನ್ನೆ ಹಾಗೂ ಕಾಲುಗಳು ಕಂದು ಬಣ್ಣದಿಂದ ಕೂಡಿರುತ್ತವೆ. ಹುಲ್ಲು ನಾರುಗಳಿಂದ ಗಿಡಗಳಲ್ಲಿ ನೇತಾಡುವ ಹೂಜಿಯಾಕಾರದ ಗೂಡನ್ನು ಕಾಣಬಹುದು. ಗೀಜಗಗಳ ಗೂಡಿನ ಒಂದೊಂದು ಎಳೆಯೂ ಕಲಾತ್ಮಕವಾಗಿ ಹೆಣೆದುಕೊಂಡಿವೆ. ಸಂತಾನೋತ್ಪತ್ತಿ ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳೊಳಗೆ ಸುಮಾರು 2 ರಿಂದ 4 ಬಿಳಿ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡುತ್ತದೆ.ಪಕ್ಷಿಲೋಕದ ಸಾಂಸಾರಿಕ ಜೀವನವೇ ವಿಸ್ಮಯಗಳ ಆಗರ. ಇವುಗಳ ಸ್ವಾರಸ್ಯಕರ ಚರಿತ್ರೆಯನ್ನು ಬೇಧಿಸುವುದು ಅಷ್ಟು ಸುಲಭದ ಮಾತಲ್ಲ. ಅವು ಗೂಡು ನೇಯಲು ಅನುಸರಿಸುವ  ತಂತ್ರ, ವಿಜ್ಞಾನಿಗಳ ಅರಿವಿಗೆ ಸಿಗದೆ ಸಂಶೋಧನೆಯನ್ನು ಮುಂದುವರಿಸುತ್ತಲೇ ಇದ್ದಾರೆ.

ಮಾನವನ ದುರಾಸೆ

ಗಣೇಶ ಹಬ್ಬದ ಸಂಭ್ರಮದಲ್ಲಿ ಮನುಜನ ದುರಾಸೆಗೆ ಗೀಜಗ ಬಲಿಯಾಗುತ್ತಿರುವುದು ಶೋಚನೀಯ. ಹಬ್ಬದ ಮುನ್ನಾದಿನ ಗಣಪನ ಮುಂದೆ ಅಲಂಕಾರಕ್ಕಾಗಿ ಗೀಜಗನ ಗೂಡುಗಳನ್ನು ಕಿತ್ತು ತಂದು ಒಂದಿಷ್ಟು ರೂಪಾಯಿಗೆ ಮಾರುತ್ತಾರೆ. ಗೂಡುಗಳಲ್ಲಿ ಮರಿ ಮೊಟ್ಟೆಗಳ ಸಮೇತ ಇದ್ದರೆ ಅದಕ್ಕೆ ಒಂದಿಷ್ಟು ಹಣ ಹೆಚ್ಚು. ಶ್ರೀಮಂತರು ಮನೆಯ ಅಲಂಕಾರಕ್ಕೆಂದು ಗೂಡುಗಳನ್ನು ಕೊಂಡುಕೊಳ್ಳುತ್ತಾರೆ. ಇನ್ನು ಕೆಲವರು ಮನೆಗಳಿಗೆ ಸೊಳ್ಳೆ ಬರಬಾರದೆಂದು ಗೂಡುಗಳಿಗೆ ಕ್ರಿಮಿನಾಶಕ ಔಷಧವನ್ನು ಸಿಂಪಡಿಸಿ ಮನೆಗಳಲ್ಲಿ ನೇತು ಹಾಕುತ್ತಾರೆ.ಹಲವು ದಿನಗಳಿಂದ ಕಷ್ಟ ಪಟ್ಟು ತನ್ನ ವಂಶಾಭಿವೃದ್ಧಿಗೋಸ್ಕರ ಸುಂದರವಾದ ಗೂಡುಗಳನ್ನು ನಿರ್ಮಿಸಿಕೊಂಡು ಬದುಕುವುದೇ ಕಷ್ಟವಾಗಿದೆ ಈ ಮುಗ್ಧ ಜೀವಿಗಳಿಗೆ. ಈ ಎರಡಂತಸ್ತಿನ ಅರಮನೆಯನ್ನು ಕಂಡು ಸಂತೋಷ ಪಡುವ ಬದಲು, ಹೊಟ್ಟೆ ಪಾಡಿಗೋಸ್ಕರ ಅವುಗಳನ್ನು ನಾಶ ಮಾಡುವುದು ಎಷ್ಟು ಸರಿ?ಗಣೇಶನ ಹಬ್ಬ ಬರುತ್ತಿದೆ ನಾವುಗಳು ಇಂತಹ ಸಮಯದಲ್ಲಿ ಅಂದ ಚೆಂದದ ಅರಮನೆಯ ಗೂಡು ಕಟ್ಟಬಾರದೆಂದು ಪಾಪ, ಗೀಜಗ ಹಕ್ಕಿಗಳಿಗೆ ಏನು ಗೊತ್ತು? ಮಾನವನಿಗೆ ಈ ವಿಕೃತ ಮನಸ್ಸು ಇದೆ ಎಂದು ಅವುಗಳಿಗೆ ತಿಳಿಸುವವರಾರು? ಪುಟ್ಟ ಹಕ್ಕಿಗಳ ಹತ್ಯೆ ಮಾಡಿ ವಿಜೃಂಭಣೆಯಿಂದ ಹಬ್ಬ ಆಚರಿಸುವುದು ಸರಿಯೇ? ಇವೆಲ್ಲ ಈಗ ಪ್ರಶ್ನೆಗಳಾಗಿಯೇ ಉಳಿದಿವೆ. ಮನುಷ್ಯ ಸ್ವಲ್ಪ ಯೋಚನೆ ಮಾಡಿದರೂ ಈ ಮುಗ್ಧ ಹಕ್ಕಿಗಳಿಗೆ ಬದುಕು ಕಟ್ಟಿಕೊಟ್ಟಂತಾಗುವುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry