ಮಂಗಳವಾರ, ಏಪ್ರಿಲ್ 20, 2021
29 °C

ಗೀತಾರಾಧನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೀತಾರಾಧನೆ!

`ಕನ್ನಡದ ನಾಯಕಿಯರು ಕನ್ನಡದಲ್ಲಿಯೇ ಮಾತನಾಡುತ್ತಿರುವುದನ್ನು ನೋಡಿ ಸಂತೋಷವಾಯಿತು'- ಹೀಗೆಂದು ಅರೆಕ್ಷಣ ನಕ್ಕರು ನಟಿ ಗೀತಾ. ಪತಿ ಮತ್ತು ಮಗನೊಂದಿಗೆ ಅಮೆರಿಕದಲ್ಲಿ ನೆಲೆಸಿರುವ ಗೀತಾ ಅಪರೂಪಕ್ಕೆಂಬಂತೆ ಕನ್ನಡ ಚಿತ್ರದಲ್ಲಿ ನಟಿಸಲು ಬಂದಿದ್ದರು. ಶ್ರೀಧರ್ ಹೆಗಡೆ ನಿರ್ದೇಶನದ `ಮೀನಾಕ್ಷಿ' ಚಿತ್ರದಲ್ಲಿ ಅವರದು ನ್ಯಾಯಾಧೀಶೆಯ ಪಾತ್ರ. ಆ ಸುದ್ದಿಗೋಷ್ಠಿಯ ಪ್ರಧಾನ ಆಕರ್ಷಣೆ ಅವರು.

ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಮುಂತಾದ ದಿಗ್ಗಜರಿಗೆ ನಾಯಕಿಯಾಗಿ ನಟಿಸಿದ್ದ ಗೀತಾ ಮಾತು ಕನ್ನಡ ಚಿತ್ರರಂಗದಲ್ಲಿ ಪರಭಾಷಾ ನಟಿಯರ ಹಾವಳಿಯನ್ನು ಕುರಿತಾಗಿತ್ತು. ಬಾಂಬೆ ಮೂಲದ ನಟಿಯರೇ ಹೆಚ್ಚಾಗಿರುವಾಗ ಇಲ್ಲಿ ನಾಯಕಿಯರ ಬಾಯಲ್ಲಿ ಕನ್ನಡ ಬರುವುದು ಅಪರೂಪ ಎಂದಾಗ ಸನಿಹದಲ್ಲಿ ಕುಳಿತಿದ್ದ ನಟಿ ಶುಭಾ ಪೂಂಜಾ ಮುಖದಲ್ಲಿ ಮಂದಹಾಸ.

ಕನ್ನಡದಲ್ಲಿ ಅವಕಾಶಗಳು ಕಡಿಮೆ ಎನ್ನುವ ಗೀತಾ ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಿರಂತರವಾಗಿ ನಟಿಸುತ್ತಿದ್ದಾರೆ. ಅಮೆರಿಕದಲ್ಲಿ ವಾಸವಾಗಿದ್ದರೂ, ಅವರ ಹೆಚ್ಚಿನ ಸಮಯ ಭಾರತದಲ್ಲಿಯೇ ಕಳೆದುಹೋಗುತ್ತದೆ. `ವಿಷ್ಣು' ಅವರು ಅಭಿನಯಿಸಿದ ಕೊನೆಯ ಕನ್ನಡ ಚಿತ್ರ. `ಮೀನಾಕ್ಷಿ'ಯಲ್ಲಿ ಅವರದು ಪುಟ್ಟ ಪಾತ್ರವಾದರೂ ಕಥೆಗೆ ಮಹತ್ವದ ತಿರುವು ನೀಡುವಂಥದ್ದು.

ನಾಯಕ ರಘು ಮುಖರ್ಜಿ ಪಾತ್ರದಲ್ಲಿ ಎರಡು ಛಾಯೆಗಳಿವೆ. ರಿಯಲ್ ಎಸ್ಟೇಟ್ ಮಾಫಿಯಾದ ಸುತ್ತ ಸುತ್ತುವ ಈ ಚಿತ್ರದಂತೆಯೇ ಅನೇಕ ಕಥೆಗಳು ಬಂದಿದ್ದರೂ ಇದು ವಿಭಿನ್ನ ಎನ್ನುವುದು ಅವರ ಮಾತು.

ಕೊಲೆ ಮಾಡಿ ಜೈಲು ಸೇರುವ ಪಾತ್ರದಲ್ಲಿ ಶುಭಾ ಪೂಂಜಾ ನಟಿಸಿದ್ದಾರೆ. ಈ ಬಗೆಯ ಪಾತ್ರ ಅವರಿಗೆ ರೋಮಾಂಚನ ಉಂಟುಮಾಡಿದೆಯಂತೆ.

ಅತ್ತ ಒಳ್ಳೆಯವನೂ ಅಲ್ಲದ, ಇತ್ತ ಕೆಟ್ಟವನೂ ಅಲ್ಲದ ಕ್ರಿಮಿನಲ್ ಲಾಯರ್ ಪಾತ್ರದಲ್ಲಿ ಯತಿರಾಜ್ ಕಾಣಿಸಿಕೊಂಡಿದ್ದಾರೆ.

ಶೇಕಡ 50ರಷ್ಟು ಚಿತ್ರೀಕರಣ ಮುಗಿದಿದೆ. ಇನ್ನು 25-30 ದಿನಗಳಷ್ಟು ಬಾಕಿ ಇದೆ ಎಂಬ ಮಾಹಿತಿ ನೀಡಿದರು ನಿರ್ದೇಶಕ ಶ್ರೀಧರ್ ಹೆಗಡೆ. ತಮ್ಮ ಚಿತ್ರದ ಮೂಲಕ ಗೀತಾ ಮತ್ತೆ ಕನ್ನಡದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಖುಷಿ ಅವರಲ್ಲಿತ್ತು. ನಾಯಕಿ ಜೀವನದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುವ ಸನ್ನಿವೇಶದಲ್ಲಿ ಗೀತಾ ಕಾಣಿಸಿಕೊಳ್ಳುತ್ತಿದ್ದಾರೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.