ಗೀತಾ ಬುಕ್ ಹೌಸ್,ಡಾ. ಕೃಷ್ಣಪ್ಪಗೆ ಪ್ರಶಸ್ತಿ

7

ಗೀತಾ ಬುಕ್ ಹೌಸ್,ಡಾ. ಕೃಷ್ಣಪ್ಪಗೆ ಪ್ರಶಸ್ತಿ

Published:
Updated:

ಬೆಂಗಳೂರು: ಬೇಂದ್ರೆ ಸಾಹಿತ್ಯದ ಪರಿಚಾರಕ ಡಾ.ಜಿ. ಕೃಷ್ಣಪ್ಪ ಅವರು ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ 2011ನೇ ಸಾಲಿನ `ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ~ಗೆ ಪಾತ್ರರಾಗಿದ್ದಾರೆ. ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಮೈಸೂರಿನ ಗೀತಾ ಬುಕ್ ಹೌಸ್‌ಗೆ ಸಂದಿದೆ. ವೈದ್ಯಕೀಯ ವಿಜ್ಞಾನ ಕುರಿತು ಮೂವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿರುವ ಡಾ. ಲೀಲಾವತಿ ದೇವದಾಸ್ ಅವರಿಗೆ `ಡಾ. ಅನುಪಮಾ ನಿರಂಜನ ವೈದ್ಯಕೀಯ ವಿಜ್ಞಾನ ಸಾಹಿತ್ಯ ಪ್ರಶಸ್ತಿ~ ಲಭಿಸಿದೆ.ಸಾಹಿತ್ಯ ಪರಿಚಾರಕ ಪ್ರಶಸ್ತಿ 50 ಸಾವಿರ ರೂಪಾಯಿ, ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಒಂದು ಲಕ್ಷ ರೂಪಾಯಿ ಮತ್ತು ವೈದ್ಯಕೀಯ ವಿಜ್ಞಾನ ಪ್ರಶಸ್ತಿ 25 ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಅವರು ಇಲ್ಲಿನ `ಕನ್ನಡ ಭವನ~ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.`ಬೇಂದ್ರೆ ಸಾಹಿತ್ಯವನ್ನು ಜನಸಾಮಾನ್ಯರಿಗೆ ಪರಿಚಯಿಸುವಲ್ಲಿ ಡಾ. ಕೃಷ್ಣಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯದಾದ್ಯಂತ ಬೇಂದ್ರೆ ಕೂಟದ ಶಾಖೆಗಳನ್ನು ಆರಂಭಿಸಿದ್ದಾರೆ. ಬೇಂದ್ರೆ ಪದಕೋಶ ಎಂಬ ವಿಶೇಷ ಪುಸ್ತಕವನ್ನೂ ಸಿದ್ಧಪಡಿಸುತ್ತಿದ್ದಾರೆ. 1952ರಲ್ಲಿ ಆರಂಭವಾದ ಗೀತಾ ಬುಕ್ ಹೌಸ್ ಇದುವರೆಗೆ ಸುಮಾರು 600 ಪುಸ್ತಕಗಳನ್ನು ಪ್ರಕಟಿಸಿದೆ. ಎ.ಆರ್. ಕೃಷ್ಣಶಾಸ್ತ್ರಿ, ಎಸ್.ವಿ. ಪರಮೇಶ್ವರ ಭಟ್ಟ, ಬಿ.ಜಿ.ಎಲ್. ಸ್ವಾಮಿ ಅವರಂಥ ಖ್ಯಾತ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿದೆ~ ಎಂದು ಹೇಳಿದರು.ಡಾ. ಲೀಲಾವತಿ ಅವರು ಹಿಂದೆ ಮಹಾತ್ಮ ಗಾಂಧಿಯವರ ವಾರ್ಧಾ ಆಶ್ರಮದಲ್ಲಿ ಕುಷ್ಠರೋಗಿಗಳ ಸೇವೆ ಸಲ್ಲಿಸಿದ್ದಾರೆ. ಕನ್ನಡ ವೈದ್ಯಕೀಯ ವಿಜ್ಞಾನ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ. ಈ ಪ್ರಶಸ್ತಿಗಳನ್ನು ಮಾರ್ಚ್‌ನಲ್ಲಿ ಪ್ರದಾನ ಮಾಡಲಾಗುವುದು ಎಂದರು.ಅತ್ಯುತ್ತಮ ಪುಟ ವಿನ್ಯಾಸ ಹೊಂದಿರುವ ಆರು ಪುಸ್ತಕಗಳು `ಕನ್ನಡ ಪುಸ್ತಕ ಸೊಗಸು ಬಹುಮಾನ~ಕ್ಕೆ ಆಯ್ಕೆಯಾಗಿವೆ. ಜೂಮ್ ಪಬ್ಲಿಕೇಷನ್ಸ್‌ನ `ರಾಜ್‌ಕುಮಾರ್- ಒಂದು ಬೆಳಕು~ (ಲೇಖಕ: ಕೆ. ಪ್ರವೀಣ್ ನಾಯಕ್), ಅಭಿನವ ಪ್ರಕಾಶನದ `ಬೆಳಕು ನೆರಳು~ (ಲೇ: ಎಂ.ವೈ. ಘೋರ್ಪಡೆ), ಪ್ರಗತಿ ಗ್ರಾಫಿಕ್ಸ್‌ನವರ `ಕ್ಲಿಕ್ - (ಅ)ಸ್ಥಿರ ಚಿತ್ರಗಳು~ (ಲೇ: ಡಿ.ಜಿ. ಮಲ್ಲಿಕಾರ್ಜುನ), ಅವಿರತ ಪುಸ್ತಕದವರ `ಹುಟ್ಟಿದ ರೇಖೆ, ಕಟ್ಟಿದ ಹಾಡು~ (ಪಿ.ಎಸ್. ಕುಮಾರ್) ಮತ್ತು ರಂಗಚೇತನ ಟ್ರಸ್ಟ್‌ನವರ `ಮೂಜಿ ಮುಟ್ಟು ಮೂಜಿ ಲೋಕ~ (ಆನಂದಕೃಷ್ಣ). ಅನನ್ಯ ಪ್ರಕಾಶನದವರ `ಪದ್ಯ ಹೇಳುವ ಮರ~ (ಸಿ.ಎಂ. ಗೋವಿಂದ ರೆಡ್ಡಿ) ಕೃತಿಗೆ ಮಕ್ಕಳ ಪುಸ್ತಕ ವಿಶೇಷ ಪ್ರಶಸ್ತಿ ದೊರೆತಿದೆ ಎಂದು ತಿಳಿಸಿದರು.

ವಚನ ಸಾಹಿತ್ಯ ಸಂಪುಟಕ್ಕೆ ಮುಕ್ತಿ

ಇಲ್ಲಿನ ಲಕ್ಷ್ಮೀ ಮುದ್ರಣಾಲಯದಲ್ಲಿ 11 ವರ್ಷಗಳಿಂದ ಬೈಂಡ್ ಹಾಕದೆ ಉಳಿದುಕೊಂಡಿದ್ದ `ಸಮಗ್ರ ವಚನ ಸಾಹಿತ್ಯ~ದ ವಿವಿಧ ಸಂಪುಟಗಳ ಒಟ್ಟು 30 ಸಾವಿರ ಪ್ರತಿಗಳಿಗೆ ಅಂತೂ ಮುಕ್ತಿ ದೊರೆತಿದೆ. ಈ ಪ್ರತಿಗಳಿಗೆ ಬೈಂಡ್ ಹಾಕುವ ಕಾರ್ಯ 15 ದಿನಗಳ ಹಿಂದೆ ಲಕ್ಷ್ಮೀ ಮುದ್ರಣಾಲಯದಲ್ಲೇ ಆರಂಭವಾಗಿದೆ.ಈ ಕುರಿತು ಮಾಹಿತಿ ನೀಡಿದ ಸಿದ್ಧಲಿಂಗಯ್ಯ ಅವರು, `ಮುದ್ರಣಾಲಯದ ಮಾಲೀಕರ ಜೊತೆ ಮಾತುಕತೆ ನಡೆಸಿದ್ದೇವೆ. 11 ವರ್ಷ ಅವರ ಬಳಿ ಈ ಸಂಪುಟಗಳನ್ನು ಇಟ್ಟಿದ್ದ ಕಾರಣ ನಾವು 12 ಲಕ್ಷ ರೂಪಾಯಿ ಶುಲ್ಕ ಪಾವತಿಸಬೇಕಾದ ಪರಿಸ್ಥಿತಿ ಇತ್ತು. ಆದರೆ ಅದನ್ನು ಮಾತುಕತೆಯ ಮೂಲಕ 2 ಲಕ್ಷ ರೂಪಾಯಿಗೆ ಇಳಿಸಿದ್ದೇವೆ~ ಎಂದರು.ಬೈಂಡಿಂಗ್ ಕಾರ್ಯಕ್ಕೆ 5.77 ಲಕ್ಷ ರೂಪಾಯಿ ನೀಡಲಾಗಿದೆ. ಪುನಃ ಟೆಂಡರ್ ಕರೆದೇ ಬೈಂಡಿಂಗ್ ಕಾರ್ಯವನ್ನು ಲಕ್ಷ್ಮೀ ಮುದ್ರಣಾಲಯಕ್ಕೆ ವಹಿಸಲಾಗಿದೆ. ಸಂಪುಟಗಳು 15 ದಿನಗಳಲ್ಲಿ ಪ್ರಾಧಿಕಾರಕ್ಕೆ ದೊರೆಯಲಿವೆ. ತಕ್ಷಣ ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ವಚನ ಸಾಹಿತ್ಯ ಸಂಪುಟಗಳನ್ನು ಪುನಃ ಮುದ್ರಿಸಬೇಕು ಎಂಬ ಸೂಚನೆಯೂ ಸರ್ಕಾರದಿಂದ ಬಂದಿದೆ. ಈ ಯೋಜನೆಗೆ ಸರ್ಕಾರ 60 ಲಕ್ಷ ರೂಪಾಯಿ ನೀಡಲಿದೆ ಎಂದು ತಿಳಿಸಿದರು.2001ರಲ್ಲಿ ಈ ಸಂಪುಟಗಳನ್ನು ಮರು ಮುದ್ರಿಸುವಾಗ ಪ್ರಾಧಿಕಾರದ ಅಂದಿನ ಅಧ್ಯಕ್ಷರು ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಿದ್ದರು. ಹಾಗಾಗಿ ಈ ಸಮಸ್ಯೆ ಎದುರಾಗಿತ್ತು. ಕಾಯ್ದೆ ಉಲ್ಲಂಘನೆ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ವಿಚಾರಣಾ ಪ್ರಕ್ರಿಯೆಯೂ ಆರಂಭವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry