ಗುಂಜಿಗನೂರು: ಕೆರೆ ದುರಸ್ತಿಗೆ ಆದೇಶ

7

ಗುಂಜಿಗನೂರು: ಕೆರೆ ದುರಸ್ತಿಗೆ ಆದೇಶ

Published:
Updated:

ಚಿಕ್ಕಜಾಜೂರು: ಚಿಕ್ಕಜಾಜೂರು ಸಮೀಪದ ಗುಂಜಿಗನೂರು ಗ್ರಾಮದಲ್ಲಿ ಒಡೆದಿರುವ ಕೆರೆ ಏರಿ  ದುರಸ್ತಿ ಕಾರ್ಯವನ್ನು ಶುಕ್ರವಾರದಿಂದಲೇ ಆರಂಭಿಸುವಂತೆ ಜಿಲ್ಲಾಧಿಕಾರಿ ವಿ.ಬಿ. ಇಕ್ಕೇರಿ ಆದೇಶಿಸಿದ್ದಾರೆ.ಕಳೆದ ಸೋಮವಾರ ಭಾರಿ ಮಳೆಯಿಂದಾಗಿ ಗುಂಜಿಗನೂರು ಗ್ರಾಮದ ಹಳೆಯ ಕೆರೆಕೆರೆ ಏರಿ ಒಡೆದ ಪರಿಣಾಮ ಅಪಾರ ಹಾನಿ ಸಂಭವಿಸಿತ್ತು. ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು,  ಶುಕ್ರವಾರದಿಂದಲೇ ದುರಸ್ತಿ ಕಾಮಗಾರಿಯನ್ನು ಆರಂಭಿಸುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಟಿ. ಬಸವರಾಜಪ್ಪ ಅವರಿಗೆ ನಿರ್ದೇಶಿಸಿದರು. ಕೆರೆಯ ದುರಸ್ತಿಗೆ ` 20ಲಕ್ಷ ವೆಚ್ಚವಾಗಲಿದ್ದು, ತಕ್ಷಣವೇ ಮೊದಲ ಕಂತಿನ ಮೊತ್ತವಾಗಿ ` 15 ಲಕ್ಷವನ್ನು ಪ್ರಕೃತಿ ವಿಕೋಪ ನಿಧಿಯಿಂದ ಬಿಡುಗಡೆ ಮಾಡಲಾಗುವುದು. ಅಲ್ಲದೆ, ಹೊಳಲ್ಕೆರೆ ತಾಲ್ಲೂಕು ಅತಿವೃಷ್ಟಿ ಪ್ರದೇಶವೆಂದು ಪರಿಗಣಿಸಿ ತಾಲ್ಲೂಕಿನಲ್ಲಿ ಮಳೆಯಿಂದ ಆಗಿರುವ ನಷ್ಟಗಳ ಅಭಿವೃದ್ಧಿಗೆ ` 50ಲಕ್ಷಗಳನ್ನು ಪ್ರಕೃತಿ ವಿಕೋಪ ನಿಧಿಯಿಂದ ಬಿಡುಗಡೆ ಮಾಡ ಲಾಗುವುದು ಎಂದು ಜಿಲ್ಲಾಧಿಕಾರಿ  ತಿಳಿಸಿದರು.ಕೆರೆ ಏರಿ ಒಡೆದ ಪರಿಣಾಮ ಆಗಿರುವ ನಷ್ಟದ ವರದಿಯನ್ನು ತಕ್ಷಣ  ಕಳುಹಿಸಿಕೊಡುವಂತೆ ತಹಶೀಲ್ದಾರ್‌ ಅವರಿಗೆ ಸೂಚಿಸಿದರು.208 ಎಕರೆ ಪ್ರದೇಶ ನಷ್ಟ: ಕೆರೆ ಏರಿ ಒಡೆದ ಪರಿಣಾಮ ಗುಂಜಿಗನೂರು, ಹೊನ್ನಕಾಲುವೆ, ರಂಗವ್ವನಹಳ್ಳಿ ಹಾಗೂ ಚಿಕ್ಕಜಾಜೂರು ಗ್ರಾಮಗಳ 77 ರೈತ ಖಾತೆದಾರರ ಒಟ್ಟು 208 ಎಕರೆ ಪ್ರದೇಶದ ಜಮೀನಿನಲ್ಲಿ ಕೆರೆ ನೀರು ಹರಿದು ನಷ್ಟವಾಗಿರುವುದಾಗಿ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ, ಮೆಕ್ಕೆಜೋಳ, ಹತ್ತಿ, ರಾಗಿ, ಅಡಿಕೆ, ತೆಂಗು ಬೆಳೆದಿರುವ ಪ್ರದೇಶಗಳು ಸೇರಿದೆ. ತೋಟಗಾರಿಕಾ ಇಲಾಖೆಯ ವರದಿಯನ್ನು ಆದರಿಸಿ, ಇತರ ಬೆಳೆಗಳ ನಷ್ಟ ಪ್ರಮಾಣವನ್ನು ತಿಳಿಸಲಾಗುವುದು ಎಂದು ತಹಶೀಲ್ದಾರ್‌ ಚನ್ನಬಸಪ್ಪ ತಿಳಿಸಿದ್ದಾರೆ.ಕಾಮಗಾರಿ ಆರಂಭ: ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಶುಕ್ರವಾರದಿಂದಲೇ ಕೆರೆಯ ದುರಸ್ತಿ ಕಾಮಗಾರಿಯನ್ನು ಆರಂಭಿಸ ಲಾಗುವುದು. ದುರಸ್ತಿಗೆ ಇಲಾಖೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಪೂರ್ವ ಭಾವಿಯಾಗಿ ಸಿದ್ಧ ಪಡಿಸಿಕೊಂಡಿದ್ದು, ಜಿಲ್ಲಾ ಸಚಿವರಿಗೆ ಜಿಲ್ಲಾಧಿಕಾರಿಗಳ ಆದೇಶವನ್ನು ತಿಳಿಸಿ, ಕಾಮಗಾರಿಯನ್ನು ನಾಳೆಯಿಂದಲೇ ಆರಂಭಿಸಲಾಗುವುದು ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಟಿ. ಬಸವರಾಜಪ್ಪ ತಿಳಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಬಾಲಸ್ವಾಮಿ ದೇಸಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜ್‌, ಶಿವಣ್ಣ, ಸೋಮ ಶೇಖರ್‌  ಹಾಗೂ ಗ್ರಾಮಸ್ಥರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry