ಗುಂಡಿಗೆ ಬಿದ್ದು ವಿದ್ಯಾರ್ಥಿ ಬಲಿ

7

ಗುಂಡಿಗೆ ಬಿದ್ದು ವಿದ್ಯಾರ್ಥಿ ಬಲಿ

Published:
Updated:
ಗುಂಡಿಗೆ ಬಿದ್ದು ವಿದ್ಯಾರ್ಥಿ ಬಲಿ

ವಿಜಾಪುರ: ಒಳಚರಂಡಿ ಕಾಮಗಾರಿಗಾಗಿ ಅಗೆದಿದ್ದ ಗುಂಡಿಯಲ್ಲಿ ಬಿದ್ದು  ಪ್ರಜ್ವಲ್ ಶ್ರೀಕಾಂತಸ್ವಾಮಿ ಎಂಬ  10 ವರ್ಷದ ವಿದ್ಯಾರ್ಥಿ ಮೃತಪಟ್ಟ ಘಟನೆ ಇಲ್ಲಿಯ ಅಥಣಿ ರಸ್ತೆಯ ಕಾಳಿದಾಸ ಶಾಲೆಯ ಬಳಿ ಗುರುವಾರ ಸಂಜೆ ಸಂಭವಿಸಿದೆ.  `ಇಲ್ಲಿ ಒಳಚರಂಡಿ ಕಾಮಗಾರಿಗಾಗಿ ಗುಂಡಿ ಅಗೆಯಲಾಗಿದೆ. ನೀರು ಪೂರೈಸುವ ಕೊಳವೆ ಒಡೆದು ಈ ಗುಂಡಿಯಲ್ಲಿ ನಾಲ್ಕು ಅಡಿಗಳಷ್ಟು ನೀರು ತುಂಬಿಕೊಂಡಿದೆ. ಗುಂಡಿ ದಾಟುವಾಗ ಬಾಲಕ ಆಕಸ್ಮಿಕವಾಗಿ ಅದರಲ್ಲಿ ಬಿದ್ದು ಮೃತಪಟ್ಟಿದ್ದಾನೆ~ ಎಂದು ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಫ್.ಎ. ಟ್ರಾಸ್ಗರ್ ತಿಳಿಸಿದ್ದಾರೆ.   ಬಾಲಕ ಗುಂಡಿಗೆ ಬಿದ್ದುದನ್ನು ಕಂಡ ವಿದ್ಯಾರ್ಥಿನಿಯರು ವಿಷಯವನ್ನು ತಕ್ಷಣ ಅಲ್ಲಿದ್ದ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಿರಣ್‌ಕುಮಾರ್ ರಾಠೋಡ ಮತ್ತು ಸುನೀಲ್‌ಕುಮಾರ ಒಕ್ಕಳಮಟ್ಟಿ ಎಂಬ ವಿದ್ಯಾರ್ಥಿಗಳು ಗುಂಡಿಗೆ ಧುಮುಕಿ ಪ್ರಜ್ವಲ್‌ನನ್ನು ಮೇಲಕ್ಕೆತ್ತಿದ್ದಾರೆ. ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.  ಇಲ್ಲಿಯ ಉಪ್ಪಾರ ಓಣಿಯ ನಿವಾಸಿ ಶ್ರೀಕಾಂತ ಸ್ವಾಮಿ- ಭಾರತಿ ಅವರ ಪುತ್ರ ಪ್ರಜ್ವಲ್, ಗ್ಯಾಂಗ್‌ಬಾವಡಿಯ ಮಹಾತ್ಮ ಗಾಂಧಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.   ಆತನ ತಾಯಿ ಭಾರತಿ ಅಥಣಿ ರಸ್ತೆಯಲ್ಲಿರುವ ಕಾಳಿದಾಸ ಶಿಕ್ಷಣ ಸಂಸ್ಥೆಯ ಉಚಿತ ಪ್ರಸಾದ ನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.  ತಾಯಿಯನ್ನು ಭೇಟಿಯಾಗಲು ಆತ ಆಗಾಗ ಇಲ್ಲಿಗೆ ಬರುತ್ತಿದ್ದನಂತೆ. ಗುರುವಾರ ಈತ ಆಗಮಿಸಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಒಳಚರಂಡಿಗಾಗಿ ಗುಂಡಿ ಅಗೆದು ಅದನ್ನು ತಕ್ಷಣ ಮುಚ್ಚದೆ ನಿರ್ಲಕ್ಷ್ಯ ವಹಿಸಿದ ಕಾರಣಕ್ಕಾಗಿ ಒಳಚರಂಡಿ ಕಾಮಗಾರಿಯ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry